ಮಹಿಷ ದಸರಾ ಆಚರಣೆ ವಿಚಾರದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ವಿರುದ್ಧ ‘ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ’ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಪ್ರತಾಪ್ ಸಿಂಹ ಮಾದ್ಯಮಗಳ ಜೊತೆ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ಮಾಡಲು ಬಿಡುವುದಿಲ್ಲ. ಅಲ್ಲಿ ಯಾವುದೇ ಕಾರಣಕ್ಕೂ ಬಿಡಲ್ಲ. ಅನಾಚಾರಕ್ಕೆ ಬಂದರೆ ನಾನು ಕೂಡ ಅಲ್ಲಿ ಇರುತ್ತೇನೆ. ನಾನು ಸಂಘರ್ಷಕ್ಕೆ ಸಿದ್ದನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಇದಲ್ಲದೆ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಮಾತನಾಡಿ, ಮಹಿಷ ದಸರಾ ಆಚರಣೆಯನ್ನು ತಡೆಯಲು ಈಗಾಗಲೇ ರೂಪುರೇಷ ತಯಾರು ಮಾಡಿರುತ್ತೇವೆ. ಯಾವ ರೀತಿಯಲ್ಲಿ ಮಹಿಷ ದಸರಾ ಮಾಡುತ್ತಾರೊ ನೋಡೋಣ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಶ್ರೀವತ್ಸ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಪಿತೂರಿಯಿಂದ ಈ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಚಾರ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ಉಂಟಾಗಿ ಸೌಹಾರ್ದತೆ ಹಾಳಾಗುತ್ತಿರುವುದು ಕಂಡು ಬಂದಿರುತ್ತದೆ. ಧರ್ಮ ಧರ್ಮಗಳ ವಿರುದ್ಧ ಮತ್ತು ಜಾತಿ ಜಾತಿಗಳ ವಿರುದ್ಧ ಸಾರ್ವಜನಿಕರನ್ನು ಎತ್ತಿಕಟ್ಟುವ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿರುವ ಸಂಸದ ಪ್ರತಾಪ್ ಸಂಹ ಹಾಗೂ ಶಾಸಕ ಶ್ರೀವತ್ಸ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಿಗೆ ಭೇಟಿ ಮಾಡಿ ದೂರು ನೀಡಲಾಗಿದೆ.
ಇದನ್ನು ಓದಿ: ಎಪಿಜೆ ಅಬ್ದುಲ್ ಕಲಾಂ ಕುರಿತು ಅವಹೇಳನಕಾರಿ ಹೇಳಿಕೆ: ಯತಿ ನರಸಿಂಹನಾಡ್ ವಿರುದ್ಧ FIR ದಾಖಲು


