ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಜಸಂಪ (ಜನಾಧಿಕಾರ ಸಂಘರ್ಷ ಪರಿಷತ್) ಸಲ್ಲಿಸಿದ್ದ ದೂರನ್ನು ಪೊಲೀಸರು ವಜಾಗೊಳಿಸಿದ್ದಾರೆ. ಹಾಗಾಗಿ ಜಸಂಪ ಪದಾಧಿಕಾರಿಗಳು ಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.
ಬಿ.ವೈ ವಿಜಯೇಂದ್ರ ಮತ್ತು ಶಶಿಧರ ಮರಡಿಯವರು ರಾಮಲಿಂಗಂ ಕನ್ಸ್‌ಸ್ಟ್ರಕ್ಸನ್‌ನ ಚಂದ್ರಕಾಂತ್ ಎಂಬುವವರಿಂದ ಹಣ ನೀಡದಿದ್ದರೆ ನಿಮ್ಮ ಬಿಡಿಎ ಪ್ರಾಜೆಕ್ಟ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ ಆರ್‌ಟಿಜಿಎಸ್ ಮೂಲಕ ಅಪಾರ ಪ್ರಮಾಣದ (7 ಕೋಟಿ ರೂಗಳು) ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಪದಾಧಿಕಾರಿಗಳಾದ ಆದರ್ಶ್ ಆರ್ ಅಯ್ಯರ್, ಪ್ರಕಾಶ್ ಬಾಬು ಬಿ.ಕೆ, ವಿಶ್ವನಾಥ್ ಬಿ.ವಿಯವರು ಸೆಪ್ಟಂಬರ್ 25 ರಂದು ದೂರು ನೀಡಿದ್ದರು.
ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!
1860 ರ ಭಾರತೀಯ ದಂಡ ಸಂಹಿತೆಯ 120 ಬಿ, ಸುಲಿಗೆ u/ss 384 r / w 34ರ ಅನ್ವಯ ಸುಲಿಗೆ ಮಾಡುವ ಗಂಭೀರ ಅಪರಾಧವಾಗಿದೆ. ಹಾಗಾಗಿ 1973 ರ ಕ್ರಿಮಿನಲ್ ಅಪರಾಧಗಳ ಆಧಾರದಲ್ಲಿ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸಹ ದೂರು ನೀಡಲಾಗಿತ್ತು. ಅಲ್ಲದೇ ತಮ್ಮ ದೂರನ್ನಾಧರಿಸಿ FIR ದಾಖಲಿಸದ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಮತ್ತು ಕೇಂದ್ರ ವಿಭಾಗದ DCP ಎಂ. ಎನ್. ಅನುಚೇತ್ ವಿರುದ್ದ ಅಕ್ಟೋಬರ್ 3 ರಂದು ಮತ್ತೊಂದು ದೂರು ದಾಖಲಿಸಿದ್ದರು.
ಶೇಷಾದ್ರಿಪುರಂ ಪೊಲೀಸರು ಈ ಭ್ರಷ್ಟಾಚಾರದ ಪ್ರಕರಣದಲ್ಲಿ ಲಂಚ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಕಾಂತ್ ಎಂಬುವವರೆ ದೂರುದಾರರು ನನಗೆ ಪರಿಚಯವಿಲ್ಲ. ಹಾಗಾಗಿ ದೂರು ವಜಾಗೊಳಿಸಬೇಕೆಂದು ಮನವಿ ಮಾಡಿದ ಆಧಾರದಲ್ಲಿ ದೂರನ್ನು ಮುಕ್ತಾಯಗೊಳಿಸುತ್ತೇವೆ ಎಂದು ಜಸಂಪ ಪದಾಧಿಕಾರಿಗಳಿಗೆ ನೀಡಿದ ಹಿಂಬರಹದಲ್ಲಿ ತಿಳಿಸಿದ್ದಾರೆ.
“ಚಂದ್ರಕಾಂತ ರಾಮಲಿಂಗಂ ಅವರನ್ನು ವಿಚಾರಣೆ ಮಾಡಿ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದು ಜನಾಧಿಕಾರ ಸಂಘರ್ಷ ಪರಿಷತ್ ಬಗ್ಗೆ ಚಂದ್ರಕಾಂತ ರಾಮಲಿಂಗಂ ರವರಿಗೆ ಪರಿಚಯವಿಲ್ಲ. ಆದರ್ಶ ಐಯ್ಯರ್, ಪ್ರಕಾಶ್‌ಬಾಬು, ವಿಶ್ವನಾಥ್ ಅವರು ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ಸಂಘರ್ಷ ಪರಿಷತ್‌ರವರು ಕೊಟ್ಟಿರುವ ಅರ್ಜಿ, ಪವರ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಆಧಾರದ ಮೇಲೆ ನೀಡಿರುತ್ತಾರೆ. ಆದರೆ ಅವರು ದೂರಿನಲ್ಲಿ ತಿಳಿಸುವ ಅಂಶಗಳು ಸತ್ಯಕ್ಕೆ ದೂರವಾಗಿರುತ್ತದೆ ಎಂದು ನುಡಿದಿರುತ್ತಾರೆ. ಹಾಗೂ ನನಗೆ ಆದ ತೊಂದರೆ, ಸುಲಿಗೆ ಬಗ್ಗೆ, ಕೆ ಪಿ ಅಗ್ರಹಾರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ. ನನಗೆ ಗೊತ್ತಿಲ್ಲದ ಜನಾಧಿಕಾರ ಸಂಘರ್ಷ ಪರಿಷತ್/ರಾಕೇಶ್ ಶೆಟ್ಟಿ ಅವರ ಬೆಂಬಲಿಗರಿಂದ ನನ್ನ ಪರವಾಗಿ ನೀಡಿರುವ ದೂರು ಅರ್ಜಿಯನ್ನು ಮುಕ್ತಾಯ ಮಾಡಬೇಕೆಂದು ಕೋರಿ ಹೇಳಿಕೆಯನ್ನು ನೀಡಿರುತ್ತಾರೆ. ಅಲ್ಲದ ಎಚ್‌ಡಿಎಫ್‌ಸಿ ಬ್ಯಾಂಕ್ ಅಕೌಂಟ್‌ನ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದ್ದು ತಾವು ಆರೋಪಿಸಿರುವ ಅಲ್ಲಿ ವಹಿವಾಟು ಇಲ್ಲದೇ ಇದ್ದು, ಹಾಗೂ ನೊಂದ ಚಂದ್ರಕಾಂತ ರಾಮಲಿಂಗಂ ಅವರು ನೀಡಿರುವ ಹೇಳಿಕೆ ಆಧಾರದ ಮೇರೆಗೆ ನೀವು ನೀಡಿರುವ ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಮಾಡುತ್ತೇವೆ” ಎಂದು ಹಿಂಬರಹದಲ್ಲಿ ವಿವರಿಸಲಾಗಿದೆ.

ಈ ಕುರಿತು ನಾನುಗೌರಿ.ಕಾಂ ದೂರದಾರರಲ್ಲಿ ಒಬ್ಬರಾದ ಆದರ್ಶ್ ಆರ್ ಅಯ್ಯರ್‌ರವರನ್ನು ಸಂಪರ್ಕಿಸಿತು. ಅವರು “ನಾವು ನೀಡಿದ ದೂರಿನ ಮೇರೆಗೆ FIR ಇರಲಿ, ಸಣ್ಣ ಪಿಟಿಷನ್ ಕೂಡ ಹಾಕದೇ ದೂರನ್ನು ಮುಕ್ತಾಯಗೊಳಿಸಿದ್ದಾರೆ. ಇದು ಲಿಖಿನ ಕಾನೂನಿನ ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧವಾಗಿದೆ. ಇದು ಬಲಾಢ್ಯರನ್ನು ರಕ್ಷಿಸಲು ಪೊಲೀಸರು ಮಾಡುತ್ತಿರುವ ಪ್ರಯತ್ನವಾಗಿದೆ” ಎಂದರು.
ಈ ಕುರಿತು ನಾವು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ “ಬಿ.ವೈ ವಿಜಯೇಂದ್ರರವರ ಭ್ರಷ್ಟಾಚಾರದ ತನಿಖೆ ನಡೆಸಲು ಮತ್ತು ನಮ್ಮ ದೂರನ್ನು ಸಮರ್ಪಕವಾಗಿ ತನಿಖೆ ನಡೆಸದೇ ಮುಕ್ತಾಯಗೊಳಿಸಿರುವ ಶೇಷಾದ್ರಿಪುರಂ ಪೊಲೀಸರ ವಿರುದ್ಧ” ಅರ್ಜಿ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ DCP ವಿರುದ್ದ ದೂರು ದಾಖಲು!


