ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಿ ಜನರು ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದು, ಮದ್ಯದ ಅಂಗಡಿಗಳಿಗೆ ಮಾರಾಟ ಸ್ಥಗಿತಗೊಳಿಸಲು ಶನಿವಾರದವರೆಗೆ ಗಡುವು ವಿಧಿಸಿದ್ದಾರೆ.
ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಾಮಾಜಿಕ ಸಾಮರಸ್ಯ ಹಾಗೂ ಮಹಿಳೆಯರ ಸುರಕ್ಷತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ಣಯಕ್ಕೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಈ ನಿರ್ಣಯವನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹಿರಿಯರು-ಕಿರಿಯರು ಸೇರಿದಂತೆ ಗ್ರಾಮದ ಎಲ್ಲಾ ಜನರು ಸಭೆ ಸೇರಿ, ಮದ್ಯಪಾನದಿಂದ ಉಂಟಾಗುತ್ತಿರುವ ಕುಟುಂಬ ಕಲಹ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಸಂಕಷ್ಟ ಹಾಗೂ ಯುವಜನರ ಭವಿಷ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಸಂಪೂರ್ಣ ಮದ್ಯ ನಿಷೇಧದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಮಹಿಳೆಯರು, ಮಕ್ಕಳು ಕೂಡ ಪಾಲ್ಗೊಂಡಿದ್ದರು.


