ನಮ್ಮ ದೇಶದಲ್ಲಿ ಯಾವ ಕಾಯಿಲೆಗೆ ಮದ್ದು ಸಿಕ್ಕರೂ ಜಾತಿ ಕಾಯಿಲೆಗೆ ಮಾತ್ರ ಮದ್ದ ಸಿಗಲಾರದು. ಜಾತಿಯ ಕಾರಣಕ್ಕೆ ಜೀವನದ ಪ್ರತಿ ಕ್ಷಣವು ಅವಮಾನಿತರಾಗುವ ದಲಿತರು ಇಂದು ತಮ್ಮ ಪ್ರಾಣಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಅನ್ಯಾಯವಾಗಿ ಮೃತಪಟ್ಟ 17 ಜನ ದಲಿತರ ಉದಾಹರಣೆ ಭಾರತಕ್ಕಂಟಿರುವ ಜಾತಿಜಾಢ್ಯವನ್ನು ಎತ್ತಿ ಎತ್ತಿ ತೋರಿಸುತ್ತಿದೆ.
ತಮಿಳುನಾಡಿನ ಮೆಟ್ಟುಪಳ್ಳಾಯಂನಲ್ಲಿ ಮೇಲ್ಜಾತಿಯ ಜನ ದಲಿತರು ತಮ್ಮ ಮನೆ ಪ್ರವೇಶಿಸಬಾರದೆಂಬ ಕಾರಣಕ್ಕೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆ ಕುಸಿದು ಹದಿನೇಳು ಜನ ದಲಿತರು ದುರ್ಮರಣ ಹೊಂದಿದ್ದಾರೆ. ಇಲ್ಲಿನ ಕಣ್ಣಪ್ಪನ್ ನಗರದಲ್ಲಿ 300 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಬಡವರ ಮನೆಗಳು ಪ್ರತಿ ಮಳೆಗಲಾದಲ್ಲೂ ಭೀಕರ ಸಮಸ್ಯೆಗಳನ್ನ ಎದುರಿಸುತ್ತಿವೆ.
ಇಂಥ ಸಂದರ್ಭದಲ್ಲಿ ಆ ಊರಿನ ಶಿವ ಸುಬ್ರಮಣ್ಯಂ ಎಂಬ ಟೆಕ್ಸ್ ಟೈಲ್ಸ್ ಅಂಗಡಿಯ ಮಾಲೀಕ ತನ್ನ ಮನೆಯ ಹಿಂದೆ ಇರುವ ದಲಿತರು ಮನೆಯ ಹತ್ತಿರ ಬರಬಾರದೆಂದು ತಡೆಗೋಡೆ ನಿರ್ಮಿಸಿದ್ದಾನೆ. ದಲಿತ ಕುಟುಂಬಗಳು ಎಂಟುವರ್ಷಗಳಿಂದಲೂ ಈ ಗೋಡೆಯ ಬಗ್ಗೆ ಭಯಭೀತರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಹಿಂದೆ 12 ಅಡಿ ಇದ್ದ ಗೋಡೆಯನ್ನು ದಲಿತ ಸಂಘಟನೆಗಳ ಸತತ ಪ್ರತಿಭಟನೆಯ ಹೊರತಾಗಿಯೂ ಆತ 20ಅಡಿಗೆ ಎತ್ತರಿಸಿದ್ದಾನೆ.

ಶಿವಸುಬ್ರಮಣ್ಯಂ ಮನೆಯ ಗೋಡೆಯೂ ಸಹ ಅಷ್ಟು ಎತ್ತರಕ್ಕೆ ಇಲ್ಲ ಆದರೆ ದಲಿತರ ಓಡಾಡುವ ಮನೆಯ ಹಿಂದೆ ಮಾತ್ರ ಅಷ್ಟು ದೊಡ್ಡ ಗೋಡೆ ಕಟ್ಟಿದ್ದಾನೆ. ಈ ಗೋಡೆಯನ್ನು ಅತ್ಯಂತ ಕಳಪೆಯಾಗಿ ಬರೀ ಮಣ್ಣು ಮತ್ತು ಕಲ್ಲಿನಿಂದ ನಿರ್ಮಸಿದ್ದು ಸೋಮವಾರ ಬಂದ ಮಳೆಗೆ ಇಡೀ ಗೋಡೆ ದಲಿತರ ಮನೆಗಳ ಮೇಲೆ ಕುಸಿದುಬಿದ್ದಿದೆ. ಒಂದೇ ಕುಟುಂಬದ ಐವರು ಸೇರಿದಂತೆ ಬೇರೆ ಕುಟುಂಬಗಳ 17 ಜನ ಸಾವನ್ನಪ್ಪಿದ್ದಾರೆ. ತಮ್ಮದಲ್ಲದ ತಪ್ಪಿಗೆ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳಲು ಬಹಿರಂತ ಅಸ್ಪೃಶ್ಯತೆಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಬೃಹತ್ ಪ್ರತಿಭಟನೆ ಮಾಡಿದ ದಲಿತ ಸಂಘಟನೆಗಳು ಇದನ್ನು ‘ಜಾತಿ ಗೋಡೆ’ ಎಂದು ಕರೆದಿದ್ದಾರೆ. ಈ ಮನುಷ್ಯರನ್ನು ಮನುಷ್ಯರಂತೆ ನೋಡದ ಜಾತಿ ವ್ಯವಸ್ಥೆ ಭಾರತ ದೇಶಕ್ಕೆ ಅಂಟಿದ ಅತಿ ದೊಡ್ಡ ಕಾಯಿಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯನ್ನು ಕಾಲ ಸಿನೆಮಾದ ನಿರ್ದೇಶಕ ಪ.ರಂಜಿತ್ ತೀವ್ರವಾಗಿ ಖಂಡಿಸಿದ್ದಾರೆ. ಸಂಸದ ಡಿ.ರವಿಕುಮಾರ್ ಕೇಂದ್ರದ ಸಾಮಾಜಿಕ ನ್ಯಾಯ ಮತ್ತ ಸಬಲೀಕರಣ ಸಚಿವರಿಗೆ ಪತ್ರ ಬರೆದು ಈ ಅಸ್ಪೃಶ್ಯತೆಯ ಕುರಿತು ಸಮಗ್ರ ತನಿಖೆಯಾಗಬೇಕು, ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಾಮಾಜಿಕ ತಾಲತಾಣದಲ್ಲಿ ಯುವಜನಾಂಗದ ಆಕ್ರೋಶಕ್ಕೆ ಜಾತಿಗೋಡೆ ತುತ್ತಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪಳನಿಸ್ವಾಮಿ ಸಂತ್ರಸ್ಥರಿಗೆ ಸಾಂತ್ವನ ಹೇಳಿ ಈ ಘಟನೆಯ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಘಟನೆಗೆ ಕಾರಣನಾದ ಆರೋಪಿ ಮಾತ್ರ ಕಾಣೆಯಾಗಿದ್ದು ಇನ್ನು ಬಂಧನವಾಗಿಲ್ಲ. ಅಲ್ಲದೇ ಪೊಲೀಸರು ಆರಂಭದಲ್ಲಿ ಕೇವಲ 304 ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಎಂಬ ಕೇಸು ಮಾತ್ರ ಹಾಕಿದ್ದಕ್ಕೆ ದಲಿತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಈ ಗೋಡೆಯ ವಿರುದ್ಧ ದೂರು ನೀಡಿದ್ದರು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿವೆ. ಆದರೆ ಪೊಲೀಸರು ಪ್ರತಿಭಟನಕಾರರ ಮೇಲೆಯ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಡಿಎಮ್‌ಕೆ ಪಕ್ಷದ ಸ್ಟಾಲಿನ್ ಮಾತನಾಡಿ, ಕೂಡಲೇ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಹೆಚ್ಚಿನ ಪರಿಹಾರದ ಜೊತೆಗೆ ಹೊಸ ಮನೆ ಕಟ್ಟಿಸಿಕೊಡಬೇಕು. ದಲಿತ ಹೋರಾಟಗಾರರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.



ಜಾತಿ ಎಂಬ ದೊಡ್ಡ ಮೌಢ್ಯತೆಯ ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯ
What is going on India, shame on this nonsense caste system in India. there is no human beings