ಬಿಜೆಪಿಯ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ಪೀಕರಿಸಿದ ಮೂರು ದಿನಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಕಾಂಗ್ರೆಸ್ ಅವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದು ಬಿಜೆಪಿಗೆ ಎಂಟು ಪ್ರಶ್ನೆಗಳನ್ನು ಹಾಕಿದೆ.
ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆ ಪ್ರಶ್ನೆಗಳನ್ನು ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಚಾಣುಕ್ಯ ನೀತಿ ಎಂದರೆ ಪ್ರಜಾಪ್ರಭುತ್ವದ ಅಪಹರಣ ಎಂಬುದು ಈಗ ಸ್ಪಷ್ಟವಾಗಿದೆ. ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸಬೇಕು. ಅವರ ಸರ್ಕಾರವು ಸುಳ್ಳು ಮತ್ತು ಪಕ್ಷಾಂತರವನ್ನು ಆಧರಿಸಿದೆ ಎಂದು ಸುರ್ಜೆವಾಲಾ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ರಾಜಿನಾಮೆ…
“ಈಗ ಆಗಿರುವ ಅನಾಹುತಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಹೊಣೆಯಾಗಿದ್ದು ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಪಟ್ಟು ಹಿಡಿದಿದ್ದರೆ. ಆ ಪ್ರಶ್ನೆಗಳು ಕೆಳಗಿನಂತಿವೆ.
1. ಮಹಾರಾಷ್ಟ್ರದಲ್ಲಿ ನೀವು ಪ್ರಜಾಪ್ರಭುತ್ವದ ಅಣಕವನ್ನು ಏಕೆ ಮಾಡಿದಿರಿ?
2. ನೀವು ರಾಜ್ಯಪಾಲರನ್ನು ಕೈಗೊಂಬೆಯಾಗಿ ಏಕೆ ಬಳಸಿಕೊಂಡಿರಿ?
3. ರಾಷ್ಟ್ರಪತಿಗಳ ಘನತೆಗೆ ನೀವು ನೋವುಂಟು ಮಾಡಿದ್ದು ಏಕೆ?
4. ನೀವು ದೇಶದ ಕ್ಯಾಬಿನೆಟ್ ಅನ್ನು ಪಾರ್ಶ್ವವಾಯುವಿಗೆ ತಳ್ಳಿದ್ದಾದರೂ ಏಕೆ?
5. ಪಕ್ಷಾಂತರ, ಖರೀದಿ ಮತ್ತು ಮಾರಾಟದ ಮೇಲೆ ನಿಮ್ಮ ಬೆತ್ತಲೆ ಉತ್ಸಾಹ ಏಕೆ?
6. ಅಲ್ಪಸಂಖ್ಯಾತ ಬಲದ ಸರ್ಕಾರವಿದ್ದರೂ ಬಹುಮತದ ಸರ್ಕಾರದಂತೆ ನಾಟಕವಾಡಿದ್ದು ಏಕೆ?
7. ಭ್ರಷ್ಟಾಚಾರದ ಪ್ರಕರಣಗಳನ್ನು ನೀವು ಏಕೆ ಹಿಂತೆಗೆದುಕೊಂಡಿರಿ?
8. ನೀವು ಸಂವಿಧಾನವನ್ನು ಏಕೆ ಕಿತ್ತುಹಾಕುತ್ತಿದ್ದೀರಿ? ”
ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಕೂಡ ಬಿಜೆಪಿ ಮೇಲೆ ದಾಳಿ ನಡೆಸಿದ್ದಾರೆ.
“ಇದು ಸಾಂವಿಧಾನಿಕ ಪ್ರಜಾಪ್ರಭುತ್ವದ ವಿಜಯ. ಕುದುರೆ ವ್ಯಾಪಾರದ ಮೂಲಕ ಸರ್ಕಾರ ಮಾಡಬಹುದೆಂದು ಅವರು ಯೋಚಿಸಿದ್ದರು. ಇದು ದೇವೇಂದ್ರ ಫಡ್ನವೀಸ್ ಅವರ ವೈಫಲ್ಯ ಮಾತ್ರವಲ್ಲದೆ ದೆಹಲಿಯಲ್ಲಿ ಕುಳಿತಿರುವ ಅವರ ಯಜಮಾನರ ಮುಖಕ್ಕೆ ಕಪಾಳಮೋಕ್ಷವಾಗಿದೆ ”ಎಂದು ಕೆ.ಸಿ ವೇಣುಗೋಪಾಲ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿದ್ದಾರೆ.


