ದೇಶದಲ್ಲಿ ಜಾತಿ ಸಮೀಕ್ಷೆ ಅಥವಾ ಜಾತಿ ಜನಗಣತಿ ನಡೆಸಬೇಕು ಎಂಬುವುದು ಕಾಂಗ್ರೆಸ್‌ನ ಬಹುಕಾಲದ ಬೇಡಿಕೆಯಾಗಿತ್ತು. ತೆಲಂಗಾಣ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಈಗಾಗಲೇ ಜಾತಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಜಾತಿ ಜನಗಣತಿ ನಡೆಸುತ್ತೇವೆ ಎಂದೂ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಹೇಳಿಕೊಂಡು ಬಂದಿದೆ. ಜಾತಿ ಗಣತಿಯ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತೂ ದೃಢವಾಗಿ ನಿಂತಿದ್ದರು.
ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ, ಮುಂದಿನ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸುತ್ತೇವೆ ಎಂದು ಬುಧವಾರ (ಏ.29) ಘೋಷಣೆ ಮಾಡಿದೆ. ಈ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಕೇಂದ್ರ ಸರ್ಕಾರ ಜಾತಿ ಗಣತಿಯ ಬಗ್ಗೆ ಘೋಷಣೆ ಮಾಡಿದ ಹಿನ್ನೆಲೆ, ಮುಂದಿನ ನಡೆಯ ಬಗ್ಗೆ ಚರ್ಚಿಸಲು ನಾಳೆ (ಮೇ.2 ಶುಕ್ರವಾರ) ಕಾಂಗ್ರೆಸ್ ಕಾರ್ಯಕಾರಿಣಿ (ಸಿಡಬ್ಲ್ಯುಸಿ) ಸಭೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನಾಳೆ ಸಂಜೆ 4 ಗಂಟೆಗೆ ಸಿಡಬ್ಲ್ಯುಸಿ ಸಭೆ ನಡೆಸಲಿದ್ದೇವೆ. ಸರ್ಕಾರ ಜಾತಿ ಗಣತಿ ಬಗ್ಗೆ ಘೋಷಣೆ ಮಾಡಿದೆ. ಈ ವಿಚಾರದಲ್ಲಿ ನಮ್ಮ ನಿಲುವೇನು, ಮುಂದಿನ ನಡೆಯೇನು ಎಂಬುವುದರ ಬಗ್ಗೆ ಚರ್ಚಿಸಬೇಕಿದೆ. ಜಾತಿ ಗಣತಿಯ ಬಜೆಟ್, ಅವಧಿ, ಶೇ,50 ಮೀಸಲಾತಿ ಮಿತಿ ತೆರವು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ನಮಗೆ ಸರ್ಕಾರದಿಂದ ಉತ್ತರ ಬೇಕಿದೆ. ಈ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜಾತಿ ಗಣತಿಯ ಕುರಿತು ಕೇಂದ್ರದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ನಿರ್ಧಾರದ ನಂತರ, ಜಾತಿ ಜನಗಣತಿಯ ಅತ್ಯಂತ ಗಟ್ಟಿ ಪ್ರತಿಪಾದಕರಲ್ಲಿ ಒಬ್ಬರಾಗಿರುವ ಲೋಕಸಭಾ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ, “ಇದು ನಮ್ಮ ದೃಷ್ಟಿಕೋನ ಮತ್ತು ಹೊಸ ಅಭಿವೃದ್ಧಿ ಮಾದರಿಯತ್ತ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ. ಮುಂದಿನ ಹಂತಗಳಲ್ಲಿ ಮೀಸಲಾತಿಯ ಮೇಲಿನ ಶೇ.50 ಮಿತಿಯನ್ನು ತೆಗೆದುಹಾಕುವುದು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತರುವುದು ಸೇರಿದೆ ಎಂದಿದ್ದಾರೆ.
ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಾವು ಸಂಸತ್ತಿನಲ್ಲಿ ಜಾತಿ ಜನಗಣತಿಯನ್ನು ಮಾಡುತ್ತೇವೆ ಎಂದು ಹೇಳಿದ್ದೆವು ಮತ್ತು ಮೀಸಲಾತಿಯ ಮೇಲಿನ ಶೇ.50 ಮಿತಿ ತೆರವುಗೊಳಿಸುತ್ತೇವೆ ಎಂದಿದ್ದೆವು. ಕೇವಲ ನಾಲ್ಕು ಜಾತಿಗಳಿವೆ ಎಂದು ಹೇಳುತ್ತಿದ್ದ ನರೇಂದ್ರ ಮೋದಿ ಇದ್ದಕ್ಕಿದ್ದಂತೆ ಜಾತಿ ಜನಗಣತಿಯನ್ನು ಘೋಷಿಸಿದ್ದಾರೆ. ನಾವು ಇದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ, ನಮಗೆ ಜಾತಿ ಗಣತಿಯ ಅವಧಿ ಗೊತ್ತಾಗಬೇಕು. ಅದನ್ನು ಯಾವಾಗ ಮಾಡಲಾಗುತ್ತದೆ ಎಂಬ ಮಾಹಿತಿ ಬೇಕು.ಇದು ನಮ್ಮ ಮೊದಲ ಹೆಜ್ಜೆ. ತೆಲಂಗಾಣ ಜಾತಿ ಜನಗಣತಿ ಮಾದರಿಯಾಗಿದೆ” ಎಂದು ಹೇಳಿದ್ದಾರೆ.
“ತೆಲಂಗಾಣ ಜಾತಿಗಣತಿಯನ್ನು ‘ವಿವರವಾದ ಮತ್ತು ಸೂಕ್ಷ್ಮ’ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ಅದನ್ನು ‘ಮುಕ್ತ ಪ್ರಕ್ರಿಯೆಯ ಮೂಲಕ ಕೈಗೊಳ್ಳಲಾಗಿದೆ’ ಎಂದಿದ್ದಾರೆ. ರಾಷ್ಟ್ರೀಯ ಜನಗಣತಿಯ ವೇಳೆ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ನಡೆದ ಕೆಲವು ವಿಚಾರಗಳನ್ನು ಅನುಸರಿಸಬೇಕು. ಅದಕ್ಕೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ” ಎಂದಿದ್ದಾರೆ.
ಜಾತಿ ಗಣತಿ ವಿಚಾರದಲ್ಲಿ ಕ್ರೆಡಿಟ್ ವಾರ್ ಶುರುವಾಗಿದೆ. ಜಾತಿ ಗಣತಿಯನ್ನು ಬಲವಾಗಿ ಪ್ರತಿಪಾದಿಸಿದ್ದು ನಾವು. ನಮ್ಮ ಬೇಡಿಕೆಗೆ ಸರ್ಕಾರ ಮಣಿದಿದೆ ಎಂದು ಜನವರಿಗೆ ಮನವರಿಗೆ ಮಾಡುವ ಸವಾಲು ಮತ್ತು ನರೇಂದ್ರ ಮೋದಿ ಹಠಾತ್ ಜಾತಿ ಗಣತಿ ಘೋಷಣೆ ಮಾಡಿ, ಅದರ ಕ್ರೆಡಿಟ್ ಅನ್ನು ಚುನಾವಣೆಯ ಅಸ್ತ್ರವಾಗಿ ಬಳಸುವ ಆತಂಕ ಕಾಂಗ್ರೆಸ್ ನಾಯಕರಲ್ಲಿದೆ.
ಪಹಲ್ಗಾಮ್ ದಾಳಿ ಗಮನ ಬೇರೆಡೆ ಸೆಳೆಯಲು ಮೋದಿ ಸರ್ಕಾರದಿಂದ ಜಾತಿ ಜನಗಣತಿ ಮುನ್ನೆಲೆಗೆ: ಸಂಜಯ್ ಸಿಂಗ್


