ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಎನ್‌ಡಿಎಗೆ ಕರೆತರಲು ‘ಬ್ಲ್ಯಾಕ್ ಮೇಲ್’ ಮತ್ತು ‘ದಬ್ಬಾಳಿಕೆ’ ನಡೆಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ತನಿಖೆಗೆ ಒತ್ತಾಯಿಸಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಅಜಿತ್ ಪವಾರ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಇದು ಕೇವಲ ದಬ್ಬಾಳಿಕೆ ಮಾತ್ರವಲ್ಲದೆ ಗೌಪ್ಯತೆ ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆಯೂ ಆಗಿದೆ” ಎಂದು ಹೇಳಿದ್ದಾರೆ.
“2014ಕ್ಕೂ ಮೊದಲು ಅಜಿತ್ ಪವಾರ್ ಅವರು ರಾಜ್ಯದ ನೀರಾವರಿ ಸಚಿವರಾಗಿದ್ದಾಗ 70 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಆರೋಪವನ್ನು ಮುಂದಿಟ್ಟುಕೊಂಡು ಅವರನ್ನು ಎನ್‌ಡಿಎಗೆ ಸೇರಲು ಒತ್ತಾಯಿಸಲಾಗಿದೆ ಎಂದು ಸ್ವತಃ ಅಜಿತ್ ಅವರೇ ಹೇಳಿದ್ದಾರೆ. ಜೈವಿಕವಲ್ಲದ ಪ್ರಧಾನಿ ಮುಂಚೂಣಿಯಲ್ಲಿ ನಿಂತು ಈ ತಂತ್ರ ಹೆಣೆದಿದ್ದಾರೆ. ಭ್ರಷ್ಟ ಪಕ್ಷ ಈಗ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಅವರ ಆಪ್ತ ಮಿತ್ರ ಆಗಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಆಪಾದಿತ ನೀರಾವರಿ ಹಗರಣದ ಬಗ್ಗೆ ಬಹಿರಂಗ ತನಿಖೆಗೆ ಶಿಫಾರಸು ಮಾಡುವ ಫೈಲ್ ಅನ್ನು ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತೋರಿಸಿದ್ದಾರೆ ಎಂದು ಅಜಿತ್ ಪವಾರ್ ಆರೋಪಿಸಿದ್ದರು.
ಅದೇ ಹಗರಣದ ತನಿಖೆಗೆ ಆದೇಶಿಸಿದ ಸಹೋದ್ಯೋಗಿ ಮತ್ತು ಆಗಿನ ಗೃಹ ಸಚಿವ ಆರ್.ಆರ್.ಪಾಟೀಲ್ ಅವರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳಿದ್ದರು. ಸಾಂಗ್ಲಿ ಜಿಲ್ಲೆಯಲ್ಲಿ ಎನ್‌ಸಿಪಿ ಅಭ್ಯರ್ಥಿ ಸಂಜಯ್ ಕಾಕಾ ಪಾಟೀಲ್ ಪರ ನಡೆದ ರ್‍ಯಾಲಿಯಲ್ಲಿ ಪವಾರ್ ಈ ಹೇಳಿಕೆ ನೀಡಿದ್ದರು. ಇದು ಬೆದರಿಕೆ ಅಥವಾ ಬ್ಲ್ಯಾಕ್ ಮೇಲ್ ಅನ್ನು ಸೂಚಿಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕರಾಗಿದ್ದ ಅಜಿತ್ ಪವಾರ್ ಅವರು ಕೆಲ ಶಾಸಕರೊಂದಿಗೆ ಪಕ್ಷದ ವಿರುದ್ದ ಬಂಡೆದ್ದು, ಶಿವಸೇನೆ (ಶಿಂಧೆ ಬಣ) ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಬೆಂಬಲಿಸಿದ್ದರು. ಆ ಬಳಿಕ ಶರದ್ ಪವಾರ್ ಅವರ ಮೂಲ ಎನ್‌ಸಿಪಿ ಅಜಿತ್ ಬಣದ ಪಾಲಾಗಿದೆ.
ಇದನ್ನೂ ಓದಿ : ಚುನಾವಣಾ ಆಯೋಗದ ಹೇಳಿಕೆಗೆ ಅಸಮಾಧಾನ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಕಾಂಗ್ರೆಸ್


