ಪೆಗಾಸಸ್ ಸ್ಪೈವೇರ್ ಬಳಸಿ ವಾಟ್ಸಾಪ್ ಬಳಕೆದಾರರ ಮೇಲೆ ಕಣ್ಗಾವಲಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಯುಎಸ್‌ನ ನ್ಯಾಯಾಲಯ ನೀಡಿರುವ ತೀರ್ಪು, 2019ರಲ್ಲಿ 300 ಜನ ಭಾರತೀಯರ ವಾಟ್ಸಾಪ್ ಹ್ಯಾಕ್ ಮಾಡಿರುವುದನ್ನು ರುಜುವಾತು ಮಾಡಿದೆ. ಹಾಗಾಗಿ, ಈ ಕುರಿತು ಹೆಚ್ಚಿನ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಸ್ಪೈವೇರ್ ಪೆಗಾಸಸ್ ಬಳಸಿಕೊಂಡು 2019ರಲ್ಲಿ 1,400 ವಾಟ್ಸಾಪ್ ಬಳಕೆದಾರರ ಮೇಲೆ ಅನಧಿಕೃತವಾಗಿ ಕಣ್ಗಾವಲು ಇಟ್ಟಿರುವುದಕ್ಕೆ ಯುಎಸ್‌ನ ಜಿಲ್ಲಾ ನ್ಯಾಯಾಲಯವೊಂದು ಇಸ್ರೇಲಿ ಸೈಬರ್ ಗುಪ್ತಚರ ಕಂಪನಿ ಎನ್‌ಎಸ್‌ಒ ಗ್ರೂಪ್ ಅನ್ನು ಹೊಣೆ ಮಾಡಿದೆ.
ಯುಎಸ್ ಮೂಲದ ತಂತ್ರಜ್ಞಾನ ಕಂಪನಿ ಮೆಟಾ ಒಡೆತನದ ವಾಟ್ಸಾಪ್ 2019ರಿಂದ ಇಸ್ರೇಲಿ ಸಂಸ್ಥೆಯೊಂದಿಗೆ ಕಾನೂನು ಹೋರಾಟದಲ್ಲಿ ತೊಡಗಿದೆ. ಏಪ್ರಿಲ್ ಮತ್ತು ಮೇ 2019ರಲ್ಲಿ ಎರಡು ವಾರಗಳ ಅವಧಿಯಲ್ಲಿ ತನ್ನ 1,400 ಬಳಕೆದಾರರ ವಿರುದ್ಧ ಎನ್‌ಎಸ್‌ಒ ಗ್ರೂಪ್‌ನ ಸ್ಪೈವೇರ್ ಅನ್ನು ಬಳಸಲಾಗಿದೆ ಎಂದು ವಾಟ್ಸಾಪ್ ಆರೋಪಿಸಿದೆ.
ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಭಾರತದ ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಸರ್ಕಾರದ ವಿರುದ್ದ ಇರುವವರ ಮೊಬೈಲ್ ಫೋನ್‌ಗಳನ್ನು (ವಾಟ್ಸಾಪ್) ಹ್ಯಾಕ್ ಮಾಡಲಾಗಿದೆ ಎಂಬ ಆರೋಪ 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೇಳಿ ಬಂದಿತ್ತು. ಸುಮಾರು 300 ಜನರ ಮೊಬೈಲ್ ಹ್ಯಾಕ್ ಮಾಡಿ ಸರ್ಕಾರ ಅವರ ಚಟುವಟಿಕೆ, ಚಲನವಲನಗಳ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಲಾಗಿತ್ತು. ಆದರೆ, ಸರ್ಕಾರ ಅದನ್ನು ತಳ್ಳಿ ಹಾಕಿತ್ತು.
ಎಕ್ಸ್ ಪೋಸ್ಟ್ ಮೂಲಕ ತನಿಖೆಗೆ ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು ” ಯುಎಸ್ ನ್ಯಾಯಾಲಯ ಪೆಗಾಸಸ್ ಕುರಿತು ತೀರ್ಪು ನೀಡಿರುವ ಹಿನ್ನೆಲೆ, 2019ರಲ್ಲಿ ಮೊಬೈಲ್ ಹ್ಯಾಕ್ ಮಾಡಿ ಕಣ್ಗಾವಲಿಟ್ಟಿದ್ದ 300 ಜನ ಭಾರತೀಯರ ಮಾಹಿತಿಯನ್ನು ಬಹಿರಂಗಪಡಿಸುವ ಸಮಯ ನರೇಂದ್ರ ಮೋದಿ ಸರ್ಕಾರಕ್ಕೆ ಬಂದಿದೆ” ಎಂದಿದ್ದಾರೆ.
“ಬಿಜೆಪಿ ಮತ್ತು ಸರ್ಕಾರದ ಸಂಸ್ಥೆಗಳು ಮೊಬೈಲ್ ಹ್ಯಾಕ್ ಮಾಡಿ ಯಾವೆಲ್ಲ ಮಾಹಿತಿಗಳನ್ನು ಪಡೆದುಕೊಂಡಿವೆ? ಅದನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗಿದೆ? ಯಾವುದಕ್ಕೆಲ್ಲ ಬಳಸಲಾಗಿದೆ? “ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
The #PegasusSpyware case verdict proves how 300 what’sapp numbers of Indians were targeted in the illegal spyware racket.
Time for Modi Govt to answer :
👉 Who are the 300 names targeted ! Who are the two Union Ministers? Who are the three Opposition leaders? Who is the…— Randeep Singh Surjewala (@rssurjewala) December 22, 2024
ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಬಿಜೆಪಿ ಸರ್ಕಾರದ ಪ್ರಮುಖರು, ಅಧಿಕಾರಿಗಳು ಮತ್ತು ಎನ್‌ಎಸ್‌ಒ ಗ್ರೂಪ್ ವಿರುದ್ಧ ಸೂಕ್ತ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬಹುದೇ? ಎಂದು ಸುರ್ಜೇವಾಲಾ ಕೇಳಿದ್ದಾರೆ.
ಯುಎಸ್ ಕೋರ್ಟ್ ಪೆಗಾಸಸ್ ಕುರಿತು ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಗಮನಿಸಿದೆಯಾ? ಪೆಗಾಸಸ್ ಬಳಸಿ ಹ್ಯಾಕ್ ಸಂಬಂಧ 2021-22ರಲ್ಲಿ ತಾಂತ್ರಿಕ ತಜ್ಞರ ಸಮಿತಿ ನೀಡಿದ ವರದಿಯನ್ನು ಬಹಿರಂಗಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮುಂದುವರಿಯುತ್ತದಾ? ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
ಭಾರತದ 300 ಸೇರಿದಂತೆ ಒಟ್ಟು 1,400 ವಾಟ್ಸಾಪ್ ಬಳಕೆದಾರರ ಮೇಲೆ ಪೆಗಾಸಸ್ ಬಳಸಿ ಕಣ್ಗಾವಲಿಟ್ಟ ಬಗ್ಗೆ ಹೆಚ್ಚಿನ ತನಿಖೆಗೆ ಸುಪ್ರೀಂ ಕೋರ್ಟ್ ಮುಂದಾಗಲಿದೆಯಾ? ಎಂದು ಸುರ್ಜೇವಾಲ ಕೇಳಿದ್ದಾರೆ.
ಇದನ್ನೂ ಓದಿ : ಪೆಗಾಸಸ್ ಬಳಸಿ ವಾಟ್ಸಾಪ್ ಹ್ಯಾಕ್ ಮಾಡಿದ್ದಕ್ಕೆ ಇಸ್ರೇಲ್‌ನ ಎನ್‌ಎಸ್‌ಒ ಹೊಣೆ : ಯುಎಸ್ ನ್ಯಾಯಾಲಯ


