“ಕಾಂಗ್ರೆಸ್ ಪಕ್ಷ ಎಂದಿಗೂ ಅತ್ಯಾಚಾರಿಗಳನ್ನು ಬೆಂಬಲಿಸುವುವುದಿಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ” ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.
ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಶರಣರನ್ನು ಜೈಲಿಗೆ ಕಳುಹಿಸುವಂತೆ ಆಗ್ರಹಿಸಿ, ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳಿಂದ ನಡೆದ ಪ್ರತಿಭಟನೆಯ ವೇಳೆ ಅವರು ಮಾತನಾಡಿದರು.
“ಇಂದು ನಮ್ಮ ದೇಶದ ನ್ಯಾಯಾಂಗ ಸತ್ತು ಹೋಗಿದೆಯಾ ಎಂಬ ಭಾವನೆ ಮೂಡಿದೆ. ಬಿಜೆಪಿ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಬಿಲ್ಕಿಸ್ ಬಾನೋ ಪ್ರಕರಣದ ಬೆಳವಣಿಗೆಯನ್ನು ನೋಡಿದರೆ ಕೇಂದ್ರದಲ್ಲಿರುವ ಬಿಜೆಪಿಯನ್ನು ಪ್ರಶ್ನಿಸಬೇಕಾಗುತ್ತದೆ. ಹಾಗೆಯೇ ರಾಜ್ಯದಲ್ಲಿ ದಲಿತ ವಿದ್ಯಾರ್ಥಿನಿಯರ ಮೇಲೆ ಆಗಿರುವ ದೌರ್ಜನ್ಯವನ್ನು ಇಲ್ಲಿನ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಬೇಕಾಗುತ್ತದೆ” ಎಂದರು.
“ಇಂದು ನ್ಯಾಯಾಂಗ ತನಿಖೆಗಳು ಇಷ್ಟೊಂದು ಬೇಜವಾಬ್ದಾರಿಯಿಂದ ನಡೆಯುತ್ತಿರುವುದಕ್ಕೆ ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರ ಹಾಗೂ ಅದರ ನಾಯಕರೇ ಕಾರಣ. ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ” ಎಂದು ಅವರು ದೂರಿದರು.
“ಯಾವುದೇ ಜಾತಿ, ಯಾವುದೇ ಜನಾಂಗ, ಯಾವುದೇ ಧರ್ಮ, ಯಾವುದೇ ಪಕ್ಷದಲ್ಲಿರುವ ಹೆಣ್ಣುಮಗಳಿಗೆ ಅನ್ಯಾಯವಾದಾಗ ಎಲ್ಲ ಮಹಿಳೆಯರು ಒಟ್ಟಾಗಿ ಅದರ ವಿರುದ್ಧ ದನಿ ಎತ್ತಬೇಕು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಆಗಸ್ಟ್ 15ರಂದು ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವ ಮೂಲಕ ಶಾಕಿಂಗ್ ಸುದ್ದಿಯನ್ನು ಗುಜರಾತ್ ಸರ್ಕಾರ ನೀಡಿದೆ. ಹಾಗೆಯೇ ರಾಜ್ಯದಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ನ್ಯಾಯ ಸಿಗಬೇಕು. ತಕ್ಷಣ ಕ್ರಮ ಜರುಗಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ತೆಗೆದುಕೊಂಡು ಶಿಕ್ಷೆ ನೀಡಬೇಕು ಎಂದು ಒಬ್ಬ ಮಹಿಳೆಯಾಗಿ ಆಗ್ರಹಿಸುತ್ತೇನೆ ಎಂದು ಹೇಳಿದರು.
ಮುರುಘಾ ಮಠದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಈವರೆಗೆ ಮೌನ ತಾಳಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, “ಮಠ ಇರಬಹುದು, ರಾಜಕಾರಣಿಗಳು ಇರಬಹುದು, ಶ್ರೀಮಂತರಿರಬಹುದು, ಯಾವತ್ತೂ ಕೂಡ ಅತ್ಯಾಚಾರಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು ಮಾಡುವುದಿಲ್ಲ. ನಿರ್ಭಯಾ ಕಾನೂನನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಯುಪಿಎ ಅವಧಿಯಲ್ಲಿ ಪೋಕ್ಸೋ ಕಾಯ್ದೆ ಜಾರಿಯಾಯಿತು. ಇದು ಕಾಂಗ್ರೆಸ್ ಪಕ್ಷದ ಕೊಡುಗೆ. ಅತ್ಯಾಚಾರಗಳನ್ನು ರಕ್ಷಣೆ ಮಾಡುವ ಎಂಬ ಕೆಲಸವನ್ನು ನಾವು ಯಾವತ್ತೂ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಸತ್ಯ ಮತ್ತು ಪ್ರಜಾಪ್ರಭುತ್ವದ ತಿಥಿ ಮಾಡುತ್ತಿದ್ದೇವೆ: ಡಾ.ವಸುಂಧರಾ ಭೂಪತಿ
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಮಾತನಾಡಿ, “ಮಕ್ಕಳು ದೂರು ನೀಡಿದ ನಂತರ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮಠಾಧೀಶರ ಪರವಾಗಿ ಈ ವ್ಯವಸ್ಥೆ ಇದೆ ಅನಿಸತೊಡಗಿದೆ. ಪೋಕ್ಸೋ ಕಾಯ್ದೆ ಪ್ರಕಾರ ತಕ್ಷಣವೇ ಆರೋಪಿಯನ್ನು ಬಂಧಿಸಬೇಕು. ಆರೋಪಿಗಳು ಜನಸಾಮಾನ್ಯರಾಗಿದ್ದರೆ ತಕ್ಷಣ ಅರೆಸ್ಟ್ ಆಗುತ್ತಿದ್ದರು. ಪ್ರಭಾವಿಗಳ ಕೇಸ್ ಆಗಿದ್ದರಿಂದ ಹೀಗೆ ವಿಳಂಬ ಮಾಡಲಾಗಿದೆ. ಆರೋಪಿ ಮಠದಲ್ಲಿರುವಾಗಲೇ ಸ್ಥಳ ಮಹಜರು ಮಾಡಲಾಗಿದೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಅನಿಸುತ್ತಿದೆ. ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣ ನಡೆಯಬೇಕು” ಎಂದು ಆಗ್ರಹಿಸಿದರು.

“ದೈಹಿಕ, ಮಾನಸಿಕ ಆಘಾತದ ನಡುವೆಯೇ ಬಂದು ಸಂತ್ರಸ್ತ ಮಕ್ಕಳು ದೂರು ಕೊಟ್ಟಿದ್ದಾರೆ. ಅವರ ಧೈರ್ಯಕ್ಕೆ ಅಭಿನಂದನೆಗಳು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಅತ್ಯಾಚಾರವಲ್ಲ; ವೀರ್ಯದಾನ ಎಂದು ಅಪರಾಧಿಗಳ ಪರ ಕಿಡಿಗೇಡಿಗಳು ಹೇಳಿರುವುದು ಭಾರತೀಯರೇ ತಲೆತಗ್ಗಿಸಬೇಕಾದ ಸಂಗತಿ. ಬೇರೆಯವರು ಮಾಡಿದರೆ ಅತ್ಯಾಚಾರ, ಇವರು ಮಾಡಿದರೆ ವೀರ್ಯದಾನ ಎಂದು ಹೇಳಿ, ಹಾರ ಹಾಕಿ ಸನ್ಮಾನ ಮಾಡಿ ಮನೆಯೊಳಗೆ ಕರೆದುಕೊಳ್ಳಲಾಗಿದೆ. ಭಾರತ ಎತ್ತ ಸಾಗುತ್ತಿದೆ ಎಂಬುದರ ಸೂಚನೆ ಇದು. ಸತ್ಯ ಮತ್ತು ಪ್ರಜಾಪ್ರಭುತ್ವವನ್ನು ತಿಥಿ ಮಾಡಿ, ಬಾಳೆಎಲೆ ಹಾಕಿಕೊಂಡು ಊಟ ಮಾಡುತ್ತಿದ್ದೇವೆ ಅನಿಸುತ್ತಿದೆ” ಎಂದು ವಿಷಾದಿಸಿದರು.
ಇಲ್ಲಿ ಸಂವಿಧಾನವಿದೆಯೋ ಸರ್ವಾಧಿಕಾರವಿದೆಯೋ: ಮಲ್ಲು ಕುಂಬಾರ್
ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಮಲ್ಲು ಕುಂಬಾರ್ ಮಾತನಾಡಿ, “ಮುರುಘಾ ಶರಣರ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ನಾಚಿಕೆಯಾಗುತ್ತಿದೆ. ಇದು ಸಂವಿಧಾನವಿರುವ ರಾಜ್ಯವಾ ಅಥವಾ ಸರ್ವಾಧಿಕಾರಿ ರಾಜ್ಯವಾ ಎಂಬ ಅನುಮಾನ ಬರುತ್ತದೆ. ಈ ಸರ್ಕಾರಕ್ಕೆ ಮಕ್ಕಳು ಮತ್ತು ಮಹಿಳೆಯರ ಮೇಲೆ ಯಾವುದೇ ಕಾಳಜಿ ಇಲ್ಲ ಅನಿಸುತ್ತದೆ. ರಾಜಕಾರಣಿಗಳೇ ಕುದ್ದಾಗಿ ಬೆಂಬಲವನ್ನು ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಇದು ಗೂಂಡಾರಾಜ್ಯವ ಅಥವಾ ಸಂವಿಧಾನದ ರಾಜ್ಯವಾ ಎಂಬ ಅನುಮಾನ ಮೂಡುತ್ತಿದೆ” ಎಂದರು.



