Homeಮುಖಪುಟಸುಳ್ಳು ಮಾಹಿತಿ ನೀಡಿದ ಆರೋಪ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್,...

ಸುಳ್ಳು ಮಾಹಿತಿ ನೀಡಿದ ಆರೋಪ: ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ಧ ದೂರು ನೀಡಿದ ಕಾಂಗ್ರೆಸ್, ಎಫ್‌ಐಆರ್ ದಾಖಲು

- Advertisement -
- Advertisement -

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷ ಟರ್ಕಿಯಲ್ಲಿ ನೋಂದಾಯಿತ ಕಚೇರಿ ಹೊಂದಿದೆ ಎಂದು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಹಾಗೂ ಸುದ್ದಿ ನಿರೂಪಕ ಅರ್ನಬ್ ಗೋಸ್ವಾಮಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಯುವ ಕಾಂಗ್ರೆಸ್ ಘಟಕ ಕ್ರಿಮಿನಲ್ ಮೊಕದ್ದಮೆ ಹೂಡಿದೆ.

ಭಾರತೀಯ ಯುವ ಕಾಂಗ್ರೆಸ್‌ನ ಕಾನೂನು ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಸ್ವರೂಪ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಉಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು) ಮತ್ತು 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವುದು) ಅಡಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಆರ್ನಬ್ ಗೋಸ್ವಾಮಿ ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಕಾಂಗ್ರೆಸ್‌ ಸೆಂಟರ್‌ ಅನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಚೇರಿ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಅದನ್ನು ಅಮಿತ್ ಮಾಳವೀಯ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಕೆಣಕುವ, ಅಶಾಂತಿಯನ್ನು ಪ್ರಚೋದಿಸುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ಈ ದುರುದ್ದೇಶಪೂರಿತ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ನಾವು ಮೌನವಾಗಿರುವುದಿಲ್ಲ, ನಮ್ಮ ಪಕ್ಷ ಅಥವಾ ಅದರ ನಾಯಕತ್ವದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಯಾವುದೇ ಪ್ರಯತ್ನಕ್ಕೆ ನಾವು ಶಕ್ತವಾದ ಕಾನೂನು ಮತ್ತು ರಾಜಕೀಯ ಪ್ರತಿಕ್ರಿಯೆಯನ್ನು ನೀಡುತ್ತೇವೆ. ಇದು ನಮ್ಮ ಸ್ಪಷ್ಟ ಸಂದೇಶ” ಎಂದು ಭಾರತೀಯ ಯುವ ಕಾಂಗ್ರೆಸ್‌ ಲೀಗಲ್ ಸೆಲ್ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದೆ.

ಮೇ 15ರಂದು ರಿಪಬ್ಲಿಕ್ ಟಿವಿಯಲ್ಲಿ ನಡೆದ ‘ಡಿಬೇಟ್ ವಿತ್ ಅರ್ನಬ್’ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಅವರು ಇಸ್ತಾಂಬುಲ್ ಕಾಂಗ್ರೆಸ್ ಸೆಂಟರ್ ಕಟ್ಟಡದ ದೃಶ್ಯಗಳನ್ನು ತೋರಿಸಿದ್ದರು. ಆ ಕಟ್ಟಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಭಾರತದ ಶತ್ರು ರಾಷ್ಟ್ರದಲ್ಲಿ ಕಚೇರಿ ತೆರೆಯುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದರು.

ತಮ್ಮ ಚರ್ಚೆಯಲ್ಲಿ, ಅರ್ನಬ್ ಕಾಂಗ್ರೆಸ್ ಪಕ್ಷವು ‘ಶತ್ರು ರಾಷ್ಟ್ರ ಟರ್ಕಿಯ ಪರವಾಗಿ ನಿಂತಿದೆ’ ಎಂದು ಆರೋಪಿಸಿದ್ದರು.

“ನಿಮ್ಮ ಪಕ್ಷ ಟರ್ಕಿಯಲ್ಲಿ ಯಾವ ರೀತಿಯ ವ್ಯವಹಾರವನ್ನು ಹೊಂದಿದೆ?” ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದ ಅರ್ನಬ್, “ವೀಕ್ಷಕರೇ, ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂಬುವುದು ನಿಮಗೆ ಗೊತ್ತಿದೆಯಾ? 2019 ರಲ್ಲಿ ರಾಹುಲ್ ಗಾಂಧಿ ಅವರು ‘ಟರ್ಕಿಯಲ್ಲಿ ನಮಗೆ ದೊಡ್ಡ ಕಚೇರಿ ಇರಬೇಕು’ ಎಂದು ಹೇಳಿದ್ದರು” ಎಂದಿದ್ದರು.

ಟರ್ಕಿಯ ಇಸ್ತಾಂಬುಲ್‌ನಲ್ಲಿ ಕಾಂಗ್ರೆಸ್ ಪಕ್ಷದ ‘ಕಾರ್ಯಾಚರಣೆಗಳನ್ನು ಮುನ್ನಡೆಸಲು’ ಮೊಹಮ್ಮದ್ ಯೂಸುಫ್ ಖಾನ್ ಎಂಬ ವ್ಯಕ್ತಿಯನ್ನು ನೇಮಿಸಲಾಗಿದೆ ಎಂದು ಅವರು ಹೇಳಿದ್ದರು.

ವರದಿಗಳ ಪ್ರಕಾರ, ರಿಪಬ್ಲಿಕ್ ಟಿವಿಯ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿರುವ ವಿಡಿಯೋದಿಂದ ಆರ್ನಬ್ ಕಾಂಗ್ರೆಸ್ ಕಚೇರಿಯ ಕುರಿತು ಸುಳ್ಳು ಮಾಹಿತಿ ನೀಡಿದ ತುಣುಕನ್ನು ಪ್ರಸ್ತುತ ತೆಗೆದು ಹಾಕಲಾಗಿದೆ.

ಆರ್ನಬ್ ಚರ್ಚೆಯ ವಿಡಿಯೋ ತುಣುಕನ್ನು ಅಮಿತ್ ಮಾಳವೀಯ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂಬುವುದು ನಿಮಗೆ ಗೊತ್ತಿದೆಯಾ? ಇದರ ಅಗತ್ಯ ಏನೆಂದು ರಾಹುಲ್ ಗಾಂಧಿ ವಿವರಿಸಬಹುದೇ? ಇದು ವಿಲಕ್ಷಣ ಮತ್ತು ಬಹು ಹಂತಗಳಲ್ಲಿ ವಿವರಿಸಲಾಗದಂತಿದೆ. ಭಾರತವು ತಿಳಿದುಕೊಳ್ಳಲು ಅರ್ಹವಾಗಿದೆ. ನೆನಪಿಡಿ: ಶತ್ರುವಿನ ಮಿತ್ರ ಶತ್ರು ಎಂದು ಬರೆದುಕೊಂಡಿದ್ದರು.

ಮೇ 19 ರಂದು ನಡೆದ ಟಿವಿ ಚರ್ಚೆಯಲ್ಲೂ ಅರ್ನಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದರು. ಕಾಂಗ್ರೆಸ್ ಪಕ್ಷ ಟರ್ಕಿಯಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿದೆ ಎಂದು ಅವರು ಪುನರುಚ್ಚರಿಸಿದ್ದರು.

‘ಆಪರೇಶನ್‌ ಸಿಂಧೂರ’ ಕುರಿತು ಪೋಸ್ಟ್:‌ ಅಶೋಕ ವಿವಿ ಪ್ರಾಧ್ಯಾಪಕಗೆ 14 ದಿನಗಳ ನ್ಯಾಯಾಂಗ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -