‘ಕೇಂದ್ರ ಸರ್ಕಾರ ಜಾರಿ ಮಾಡಿದ್ದ ರೈತ ವಿರೋಧಿ ಕೃಷಿ ಕಾನೂನುಗಳನ್ನು ಅಧಿಕಾರಕ್ಕೆ ಬಂದ ಆರು ತಿಂಗಳ ಒಳಗಾಗಿ ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಈಗ ಮಾತು ತಪ್ಪಿದೆ’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಬಜೆಟ್ ಅಧಿವೇಶನ ಕೇವಲ ಆಯವ್ಯಯದ ಮಂಡನೆಗೆ ಮಾತ್ರ ಸೀಮಿತವಾಗದೆ ಸರ್ಕಾರದ ದಿಕ್ಸೂಚಿಯಾಗಲಿ, ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಿ, ಜನಪರ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಡಲಿ” ಎಂದು ಆಗ್ರಹಿಸಿದರು.
“ಕೋವಿಡ್ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ‘ಸಂಯುಕ್ತ ಹೋರಾಟ’ ಹುಟ್ಟಿಕೊಂಡಿತು. ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯವಾಗಿದೆ” ಎಂದರು.
“ಮುಕ್ತ ಮಾರುಕಟ್ಟೆ ನೀತಿ ಬಂದ ಬಳಿಕ ದೇಶದ ದುಡಿಯುವ ವರ್ಗದ ಮೇಲೆ ಗಂಭೀರ ಪರಿಣಾಮ ಬೀರಿದೆ, ದೇಶದ ಸಾರ್ವಭೌಮತ್ವ ಹಾಗೂ ಒಕ್ಕೂಟ ವ್ವವಸ್ಥೆಗೆ ಧಕ್ಕೆಯಾಗಿದೆ. ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಮನಸ್ಥಿತಿ ಎಲ್ಲವನ್ನೂ ಕೇಂದ್ರೀಕರಣ ಮಾಡುತ್ತಿದೆ. ನಾವು ಇದರ ವಿರುದ್ಧ ನಿರಂತರ ಹೋರಾಟ ನಡೆಸಿದ್ದೇವೆ” ಎಂದು ವಿವರಿಸಿದರು.
“ಕೇಂದ್ರ ಸರ್ಕಾರ ಕೃಷಿ ವಿರೋಧಿ ಮಸೂದೆಗಳನ್ನು ಜಾರಿ ಮಾಡಿದಾಗ ಕೋವಿಡ್ ಅನ್ನೂ ಲೆಕ್ಕಿಸದೆ ರೈತರು ಹೋರಾಟ ಮಾಡಿದರು. ಕರ್ನಾಟಕದಲ್ಲೂ ಸಂಯುಕ್ತ ಹೋರಾಟ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ. ಕಾಂಗ್ರೆಸ್ ಪಕ್ಷ ಕೂಡ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿತ್ತು; ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ’ಗೆ ತಿದ್ದುಪಡಿ ತಂದಿತ್ತು. ಜಾನುವಾರು ಹತ್ಯೆ ಸಂರಕ್ಷಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತು. ಈ ಸಂದರ್ಭದಲ್ಲಿ ನಡೆದ ಹೋರಾಟದ ವೇದಿಕೆಗೆ ಬಂದು ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಚುನಾವಣೆಗೂ ಮೊದಲು ಗಾಂಧೀ ಭವನದಲ್ಲಿ ನಡೆದ ಸಭೆಗೆ ಬಂದಿದ್ದ ಕಾಂಗ್ರೆಸ್ ನಾಯಕರು ನಮ್ಮ ಪ್ರಮಾಣ ಪತ್ರಕ್ಕೆ ಸಹಿಮಾಡಿದ್ದರು. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಯಡಿಯೂರಪ್ಪ ಅವಧಿಯ ರೈತ ವಿರೋಧಿ ಕಾನೂನು ವಾಪಸ್ ಪಡೆಯುವುದಾಗಿ ಹೇಳಿದ್ದರು” ಎಂದು ವಿವರಿಸಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ, ಈವರೆಗೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿಲ್ಲ. ದೇವರಾಜ ಅರಸು ಜಾರಿಗೆ ತಂದ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಗೆ ಬಿಜೆಪಿ ತಿದ್ದುಪಡಿ ಮಾಡಿತ್ತು. ಈ ಬಜೆಟ್ಟಿನಲ್ಲಾದರೂ ಬಿಜೆಪಿ ಜಾರಿ ಮಾಡಿದ್ದ ಕಾನೂನುಗಳನ್ನು ರದ್ದು ಮಾಡಬೇಕು. ಎಪಿಎಂಸಿ ಕಾಯ್ದೆ ಮೇಲ್ಮನೆಯಲ್ಲಿ ಬಾಕಿ ಇದೆ, ಅದನ್ನು ರೈತ ಸ್ನೇಹಿಯಾಗಿ ಪರಿವರ್ತಿಸಬೇಕು. ಜಾನುವಾರು ರಕ್ಷಣಾ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಕೇಂದ್ರ ಸರ್ಕಾರ ತಾನು ರದ್ದು ಮಾಡಿದ್ದ ರೈತ ವಿರೋಧಿ ಕಾಯ್ದೆಗಳನ್ನು ‘ರಾಷ್ಟ್ರೀಯ ಕೃಷಿ ಚೌಕಟ್ಟು’ ಹೆಸರಿನಲ್ಲಿ ಜಾರಿ ಮಾಡಲು ಮುಂದಾಗಿದೆ. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ವಿರೋಧಿಸಿದ್ದು, ಅದನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪಬಾರದು; ರಾಜ್ಯಪಾಲರ ಭಾಷಣದಲ್ಲೇ ವಿರೋಧಿಸಬೇಕು” ಎಂದು ಆಗ್ರಹಿಸಿದರು.
ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, “1948 ರ ಕನಿಷ್ಠ ವೇತನ ಕಾಯ್ದೆ ಪ್ರಾಕಾರ ಕಾರ್ಮಿಕರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು. ರಾಜ್ಯ ಸರ್ಕಾರದ ನೌಕರರಿಗೆ ಕೊಡುವಂತೆ ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಆದರೆ, ಕಾರ್ಮಿಕ ಇಲಾಖೆ ಕಾರ್ಮಿಕರ ವಿರೋಧಿ ನಿಲುವು ತೆಗೆದುಕೊಂಡಿದೆ. ಎರಡು ವರ್ಷವಾದರೂ ಇನ್ನೂ ವೇತನ ಪರಿಷ್ಕರಣೆ ಆಗಿಲ್ಲ, ಶೇ.10 ಮಾತ್ರ ಹೆಚ್ಚಳ ಮಾಡುತ್ತೇವೆ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆ; ಇದನ್ನು ನಾವು ಪ್ರಶ್ನಿಸಿ ಹೈಕೋರ್ಟ್ ಹೋರೆ ಹೋಗಿದ್ದೇವೆ. ಇದನ್ನು ಪ್ರಶ್ನಿಸಿ ಕಾರ್ಖಾನೆ ಮಾಲೀಕರು ದ್ವಿಸದಸ್ಯ ಪೀಠಕ್ಕೆ ಹೋಗಿದ್ದರು, ಅವರ ಬೇಡಿಯನ್ನು ಹೈಕೋರ್ಟ್ ತಿರಸ್ಕರಿಸಿ ಏಕ ಸದಸ್ಯ ಪೀಠಕ್ಕೆ ವಾಪಸ್ ಕಳಿಸಿದೆ. ಮುಂಬರುವ ಬಜೆಟ್‌ನಲ್ಲಿ ಸರ್ಕಾರ ಈ ಗೊಂದಲ ನಿವಾರಿಸಬೇಕು” ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ದಲಿತ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಜಾರಿ ಮಾಡಿದೆ. ಇದನ್ನು ಏಕಾಏಕಿ ಮಾಡಿದ್ದಲ್ಲ; ದಲಿತ ಸಂಘರ್ಷ ಸಮಿತಿಯ ಹಲವಾರು ವರ್ಷಗಳ ಬೇಡಿಕೆ ಇದಾಗಿದೆ. ನಮ್ಮ ಬೇಡಿಕೆ ಪರಿಗಣಿಸಿ 2014 ರಲ್ಲಿ ಸಿದ್ದರಾಮಯ್ಯ ಕಾಯ್ದೆ ರೂಪಿಸಿದ್ದಾರೆ” ಎಂದರು.
“ಮಧ್ಯಪ್ರದೇಶದಲ್ಲಿ ಅಂದಿನ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಡೆಸಿ ‘ಭೋಪಾಲ್ ಘೋಷಣೆ’ ಮಾಡಿದ್ದರು. ಆಗ ನಾವು ಅಲ್ಲಿಗೆ ತೆರಳಿ ಅಧ್ಯಯನ ನಡೆಸಿದ್ದೆವು, ದಿಗ್ವಿಜಯ್ ಸಿಂಗ್ ಅವರನ್ನು ಕೂಡ ಬೇಟಿಯಾಗಿ ಸರ್ಕಾರಕ್ಕೆ ವರದಿ ನೀಡಿದ್ದೆವು. 2005ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ನಿರ್ಧಾರ ಮಾಡಿದ್ದರು. ಆದರೆ, ಸರ್ಕಾರ ಬದಲಾವಣೆ ಆಗಿದ್ದರಿಂದ ಅದು ಸಾಧ್ಯವಾಗಲಿಲ್ಲ. 2014 ರಲ್ಲಿ ಸಿದ್ದರಾಮಯ್ಯ ಕಾಯ್ದೆ ಜಾರಿ ಮಾಡಿದರು” ಎಂದು ವಿವರಿಸಿದರು.
“ಕಾಯ್ದೆ ಜಾರಿಗೆ ತಂದ ಸಿದ್ದರಾಮಯ್ಯ ಅವರೇ ಕಾಯ್ದೆಯನ್ನು ದುರುಪಯೋಗಿಸಿಕೊಂಡಿದ್ದಾರೆ. ಹಲವು ಜನರಿಗೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಯಾಕೆ ಬಳಸಿಕೊಳ್ಳಬಾರದು ಎಂಬ ಪ್ರಶ್ನೆ ಇದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ- 2015ರ ಪ್ರಕಾರ, ಇತರೆ ಸಮುದಾಯಗಳಿಗೆ ಹೋಲಿಸಿಕೊ೦ಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅಭಿವೃದ್ಧಿ ವರದಿಯಲ್ಲಿ ದಲಿತರ ನಡುವೆ ಅಂತರ ಬಹಳ ಇದೆ; ಇದು ಬಡತನ ನಿರ್ಮೂಲನೆ ಯೋಜನೆ ಅಲ್ಲ. ದಲಿತರಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ದ್ರೋಹದ ಕೆಲದ, ದಲಿತರನ್ನು ಈ ಸರ್ಕಾರ ವಂಚಿಸುತ್ತಿದೆ. ನಮ್ಮ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು. ಈವರೆಗೆ ₹40 ಸಾವಿರ ಕೋಟಿ ಹಣ ದುರುಪಯೋಗ ಆಗಿದೆ; ಅದನ್ನು ವಾಪಸ್ ಮಾಡಬೇಕು. ದಲಿತರ ಅಭಿವೃದ್ದಿ ಬಗ್ಗೆ 2.5 ವರ್ಷಕ್ಕೊಮ್ಮೆ ವಿಶೇಷ ಅಧಿವೇಶನ ಕರೆದು ಮೌಲ್ಯಮಾಪನ ಮಾಡಬೇಕು. ಆದರೆ ಬಜೆಟ್‌ಪೂರ್ವ ಸಭೆಯಲ್ಲಿ ನಾವು ನೀಡಿದ ಸಲಹೆಯನ್ನು ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಜನಶಕ್ತಿ ಸಂಘಟನೆ ಮುಖಂಡರಾದ ನೂರ್ ಶ್ರೀಧರ್ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿಲುವು ಏನು ಎಂಬುದನ್ನು ಈ ಬಜೆಟ್‌ನಲ್ಲಿ ಹೇಳಬೇಕಿದೆ. ಬಿಜೆಪಿ ಸರ್ಕಾರಕ್ಕಿಂತ ನೀವು ಹೇಗೆ ಭಿನ್ನ ಎಂಬುದನ್ನು ಸ್ಪಷ್ಟಪಡಿಸಬೇಕು. ಮಾತಲ್ಲಿ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಕೃತಿಯಲ್ಲಿ ಏನೂ ಜಾರಿಯಾಗುತ್ತಿಲ್ಲ. ಈ ಬಜೆಟ್‌ನಲ್ಲಿ ಬಿಜೆಪಿಯ 11 ನಿರ್ಧಾರಗಳನ್ನು ಹಿಂತೆಗೆದುಕೊಂಡು, ಎಂಟು ದಿಟ್ಟ ನಿರ್ಧಾರ ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.
“ಜಿಎಸ್‌ಟಿ ಪದ್ಧತಿ ಹಾಗೂ ಎನ್‌ಇಪಿ ರದ್ದಾಗಬೇಕು. ಇಲ್ಲದಿದ್ದರೆ, ಬಿಜೆಪಿ ಹಾದಿಯೇ ಕಾಂಗ್ರೆಸ್ ಎನ್ನುವಂತಾಗುತ್ತದೆ. ಬಗರ್ ಹುಕುಂ 15 ಲಕ್ಷ ಅರ್ಜಿಗಳು ಬಾಕಿ ಇವೆ, ಒಂದು ಬೃಹತ್ ವಸತಿ ಯೋಜನೆ ಜಾರಿ ಘೋಷಣೆ ಆಗಬೇಕು. ಕಾರ್ಮಿಕರು ಹಾಗೂ ಮಹಿಳೆಯರಿಗಾಗಿ ಹೊಸ ಸಾಲ ನೀತಿ ಜಾರಿಯಾಗಬೇಕು. ಕಾರ್ಮಿಕರ ಭದ್ರತೆಗೆ ತೀರ್ಮಾನ ಮಾಡಬೇಕು, ಯುವಜನರಿಗೆ ಉದ್ಯೋಗ ಖಾತ್ರಿ ನೀಡಬೇಕು, ಮಹಿಳಾ-ದಲಿತ ದೌರ್ಜನ್ಯ ನಿಯಂತ್ರಿಸಿ, ಖಾಸಗಿ ಶಿಕ್ಷಣಕ್ಕೆ ಕಡಿವಾಣ ಹಾಕಬೇಕು” ಎಂದರು.
“ಈ ಬಗ್ಗೆ ನಾವು ಬಜೆಟ್ ಮಂಡನೆವರೆಗೂ ಕಾದು ನೋಡುತ್ತೇವೆ, ‘ಮಾರ್ಚ್ 12 ಮತ್ತು 13ಕ್ಕೆ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ ನಡೆಸಿ ನಮ್ಮ ನಡೆ ನಿರ್ಧರಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸತ್ವ ಪರೀಕ್ಷೆಯಲ್ಲಿ ಏನಾಗುತ್ತಾರೆ ಕಾದು ನೋಡೋಣ” ಎಂದು ಹೇಳಿದರು.
‘ಸಂಯುಕ್ತ ಹೋರಾಟ’ದ ಪ್ರಮುಖ 15 ಹಕ್ಕೊತ್ತಾಯಗಳು
1. ಈ ಹಿಂದಿನ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
2. ಕೇಂದ್ರ ಸರ್ಕಾರವು ಜಾರಿ ಮಾಡಿರುವ “ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟಿ” ನ ಕರಡನ್ನು [The National Policy Framework on Agricultural Marketing] ರಾಜ್ಯ ಸರ್ಕಾರವು ಸಾರಾಸಗಟು ತಿರಸ್ಕರಿಸಬೇಕು. ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಕೃಷಿ ಬೆಳೆ ಆಯೋಗಕ್ಕೆ ಹೊಸ ಮಾರ್ಗಸೂಚಿಯನ್ನು ನೀಡಬೇಕು.
3. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು. ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಆರ್ಥಿಕ ಹೊರೆಯನ್ನು ರೈತರು ಹಾಗೂ ಜನಸಾಮಾನ್ಯರ ಮೇಲೆ ಹೊರೆಸಬಾರದು.
4. ಬಗರ್ ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನಿನ ತೊಡಕನ್ನು ಕಾರಣವಾಗಿ ನೀಡಿ, ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು.
5. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ ನಾಲ್ಕು ಕೋಡ್ ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅಂತರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು.
6. ಖಾಯಂ ಸ್ವರೂಪದ ಉದ್ಯೋಗಗಳಲ್ಲಿನ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಶಾಸನ ರೂಪಿಸಬೇಕು. ವಿವಿಧ ಅಸಂಘಟಿತ ಕಾರ್ಮಿಕರ ಮಂಡಳಿಗಳಿಗೆ ಅಗತ್ಯ ಅನುದಾನ ಮೀಸಲಿಡಬೇಕು. ಕಾರ್ಮಿಕ ಸಮ್ಮೇಳನ [KL¬C] ಏರ್ಪಡಿಸಿ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ವೇತನ ಶ್ರಮಿಕ ನೀತಿಯನ್ನು ರೂಪಿಸುವ ಪರಿಪಾಠವನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕು.
7. ದೀರ್ಘಕಾಲದಿಂದ ಏರದೇ ನಿಂತಿರುವ ಕನಿಷ್ಟ ವೇತನವನ್ನು ಪರಿಷ್ಕರಿಸಿ ಮಾಸಿಕ 36 ಸಾವಿರ ಮಾಡಬೇಕು ಮತ್ತು ಎಲ್ಲಾ ಸೆಕ್ಟರ್ ನ ಕೂಲಿ ದರವನ್ನು ಒಮ್ಮೆಗೆ ಘೋಷಿಸಬೇಕು. ಕೊಟ್ಟ ಆಶ್ವಾಸನೆಯಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಮುಂತಾದ ಕ್ಷೇತ್ರಗಳ ದುಡಿಯುವ ಜನರಿಗೆ ವೇತನ ಹೆಚ್ಚಿಸಬೇಕು.
8. SCSP/TSP ನಿಧಿಯ ದುರುಪಯೋಗವನ್ನು ತಡೆಯಬೇಕು. ಗ್ಯಾರಂಟಿ ಯೋಜನೆಗಳಿಗೂ ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು. ಎಲ್ಲಾ ಹಣ ಸೂಚಿತ ಉದ್ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಸಮುದಾಯದ ಯುವಜನರ ಉದ್ಯೋಗ ಸೃಷ್ಟಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಮೀಸಲಾಗಬೇಕು.
9. ಮೈಕ್ರೋಫೈನಾನ್ಸ್ ಹಾವಳಿಯಿಂದ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪಾರುಮಾಡಲು ಸಮಗ್ರ ನೀತಿ ರೂಪಿಸಬೇಕು. ರೈತರು ಹಾಗೂ ಎಲ್ಲಾ ದುಡಿಯುವ ಜನರನ್ನು ಋಣಮುಕ್ತರನ್ನಾಗಿಸಲು ಹಾಗೂ ಅವರಿಗೆ ಸರಳ ಸಾಲಸೌಲಭ್ಯ ದೊರಕುವಂತೆ ಮಾಡಲು ಸೂಕ್ತ ನೀತಿಯನ್ನು ರೂಪಿಸಬೇಕು. ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರೈತ ಋಣ ಆಯೋಗವನ್ನು ರಚಿಸಬೇಕು. ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ದೀರ್ಘಕಾಲಿನ ಬಡ್ಡಿ ರಹಿತ ಸಾಲ ಒದಗಿಸಬೇಕು.
10. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಮರ್ಯಾದೆಗೇಡು ಹತ್ಯೆ ಮುಂತಾದ ಹಿಂಸೆಗಳಿಂದ ಮಹಿಳೆಯರನ್ನು ಪಾರುಮಾಡಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು.
11. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ [NEP] ಯನ್ನು ತಿರಸ್ಕರಿಸಬೇಕು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಸಂರಕ್ಷಿಸಲು, ಕರ್ನಾಟಕದಲ್ಲಿ ತನ್ನದೇ ಆದ ಜೀವಪರ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಬೇಕು.
12. ಉದ್ಯೋಗ ಸೃಷ್ಟಿಗೆ ಮತ್ತು ಉದ್ಯೋಗ ಖಾತ್ರಿಗೆ ವಿಶೇಷ ಆಯೋಗ ರಚಿಸಿ, ಸಮಗ್ರ ನೀತಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಬೇಕು.
13. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ [MNREGA] ಯೋಜನೆಯನ್ನು ಬಲಪಡಿಸಿ, 200 ದಿನಕ್ಕೆ ವಿಸ್ತರಿಸಿ, ನಗರ ಪ್ರದೇಶಗಳಿಗೂ ಅನ್ವಯಿಸಿ, ದಿನಕ್ಕೆ 600 ರೂಪಾಯಿಗಳಿಗೆ ಹೆಚ್ಚಿಸಿ ಬಲಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿದಾನಸಭಾ ಅಧಿವೇಶನ ತೀರ್ಮಾನ ತೆಗೆದುಕೊಳ್ಳಬೇಕು.
14. ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು.
15. ರಾಜ್ಯದ ಆರ್ಥಿಕ ಸ್ವಾವಲಂಬನೆಯನ್ನು ನಾಶಗೊಳಿಸುತ್ತಿರುವ ಮತ್ತು ಜನಸಾಮಾನ್ಯರನ್ನು ಸುಲಿಯುತ್ತಿರುವ ಜಿಎಸ್‌ಟಿ ಪದ್ದತಿಯನ್ನು ರದ್ದುಗೊಳಿಸುಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದ ನ್ಯಾಯಸಮ್ಮತ ಪಾಲನ್ನು ನೀಡುವಂತೆ ಬಲವಾಗಿ ಆಗ್ರಹಿಸಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಬೀದಿ ಹೋರಾಟಕ್ಕೂ ಸಜ್ಜಾಗಬೇಕು.
ಗ್ಯಾರಂಟಿಗೆ ಬಳಸಿರುವ ದಲಿತರ ಹಣ ಕೂಡಲೇ ಹಿಂದಿರುಗಿಸಬೇಕೆಂದು ದಸಂಸ ಒಕ್ಕೂಟ ಆಗ್ರಹ


