Homeಕರ್ನಾಟಕಗೆಲ್ಲುವ ಛಾನ್ಸ್ ಇದ್ದರೂ ಮೈತ್ರಿಯಿಂದಾಗಿ ಸೋತ ಆ 13 ಕ್ಷೇತ್ರಗಳು

ಗೆಲ್ಲುವ ಛಾನ್ಸ್ ಇದ್ದರೂ ಮೈತ್ರಿಯಿಂದಾಗಿ ಸೋತ ಆ 13 ಕ್ಷೇತ್ರಗಳು

ಈ ಮೈತ್ರಿ ಸರಿಯಾಗಿ ಕೆಲಸ ಮಾಡಿದ್ದರೆ, ಈಗಿನ 2 ಕ್ಷೇತ್ರಗಳ ಜೊತೆಗೆ ಇನ್ನೂ 13 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇತ್ತೆಂದರೆ ಆಶ್ಚರ್ಯವಾಗಬಹುದು. ಕ್ಷೇತ್ರವಾರು ಫಲಿತಾಂಶವನ್ನು ನೋಡಿದರೆ ಅದು ವೇದ್ಯವಾಗುತ್ತದೆ.

- Advertisement -
- Advertisement -

| ನೀಲಗಾರ |

ದೇಶದಲ್ಲಿ ನರೇಂದ್ರ ಮೋದಿಯವರ ಜೈತ್ಯಯಾತ್ರೆಯನ್ನು ತಡೆಯಲು, ಜಾತ್ಯತೀತ ಪಕ್ಷಗಳೆಲ್ಲರೂ ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಹೇಳುತ್ತಿದ್ದವು. ಕರ್ನಾಟಕದಲ್ಲೂ ತಾನು ನಖಶಿಖಾಂತ ವಿರೋಧಿಸಿದ್ದ ಜೆಡಿಎಸ್ ಪಕ್ಷಕ್ಕೆ 37 ಸೀಟುಗಳು ಬಂದಾಗ, ಅದರ ಎರಡು ಪಟ್ಟು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಜೆಡಿಎಸ್‍ಗೇ ಸಿಎಂ ಸ್ಥಾನ ಬಿಟ್ಟುಕೊಟ್ಟಿತ್ತು. ಅದಕ್ಕೆ ಬಿಜೆಪಿಯನ್ನು ತಡೆಯುವುದೇ ಏಕಮೇವ ಕಾರಣ ಎಂದು ಎರಡೂ ಪಕ್ಷಗಳ ನಾಯಕರು ಹೇಳಿದ್ದರು. ಈ ಮೈತ್ರಿಯು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯಲಿದೆ ಎಂತಲೂ ಅವರು ಪದೇ ಪದೇ ಹೇಳಿದ್ದರು.

ಆದರೆ, ಈ ಮೈತ್ರಿ ಸರಿಯಾಗಿ ಕೆಲಸ ಮಾಡಿದ್ದರೆ, ಈಗಿನ 2 ಕ್ಷೇತ್ರಗಳ ಜೊತೆಗೆ ಇನ್ನೂ 13 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇತ್ತೆಂದರೆ ಆಶ್ಚರ್ಯವಾಗಬಹುದು. ಕ್ಷೇತ್ರವಾರು ಫಲಿತಾಂಶವನ್ನು ನೋಡಿದರೆ ಅದು ವೇದ್ಯವಾಗುತ್ತದೆ.

ಇದರರ್ಥ, ದೇಶವ್ಯಾಪಿ ಸೃಷ್ಟಿಸಲಾದ ನರೇಂದ್ರ ಮೋದಿ ಅಲೆ ಸ್ವಲ್ಪವೂ ಕೆಲಸ ಮಾಡದಂತೆ ತಡೆಯಬಹುದಿತ್ತೆಂದು ಅರ್ಥವಲ್ಲ. ಹಾಗೆ ನೋಡಿದರೆ, ಇಡೀ ದೇಶದಲ್ಲಿ ಮೋದಿ ಪರವಾದ ಅಲೆ ಅತೀ ಹೆಚ್ಚು ಇದ್ದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಚುನಾವಣಾಪೂರ್ವದಲ್ಲೇ ಅನುಭವಕ್ಕೆ ಬಂದಿದ್ದ ಸಂಗತಿಯಾಗಿತ್ತು. ಆದರೆ, ಅದನ್ನು ದಾಟಿ ಮೈತ್ರಿ ಪಕ್ಷಗಳ ಎಲ್ಲಾ ಧುರೀಣರು ಮಾಡು ಇಲ್ಲವೇ ಮಡಿ ಎಂಬಂತೆ ಧುಮುಕಿದ್ದರೆ 13 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇರಲಿಲ್ಲ ಎಂದು ಹೇಳಲಾಗದು. ಕೆಲವೊಮ್ಮೆ ಇದು ಮೈತ್ರಿ ಮಾಡಿಕೊಂಡ ಇನ್ನೊಂದು ಪಕ್ಷದ ಸಮಸ್ಯೆ ಎನ್ನುವುದಕ್ಕಿಂತ, ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಆದಂತೆ ಕಾಂಗ್ರೆಸ್ ಪಕ್ಷದೊಳಗೇ ಇದ್ದ ಸಮಸ್ಯೆಯೂ ಕಾರಣವಾಗಿದೆ. ಅಂದರೆ ಮೈತ್ರಿಯ ಉದ್ದೇಶವಾದ ಬಿಜೆಪಿಯನ್ನು ದೂರವಿಡುವುದೇ ಗುರಿಯಾಗಿದ್ದರೆ ಅದನ್ನು ಸರಿಮಾಡಿಕೊಳ್ಳುವ ಎಲ್ಲಾ ಸಾಧ್ಯತೆ ಇತ್ತು. ಅದಕ್ಕೂ ಕೋಲಾರ ಮತ್ತು ಚಿಕ್ಕಬಳ್ಳಾಪುರಗಳೇ ಸಾಕ್ಷಿ.

ಸರ್ಕಾರ ಬಂದಾಗಿನಿಂದಲೂ ಎಡವಟ್ಟುಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಲೇ ಹೋದವು. ರೈತರ ಸಾಲಮನ್ನಾ ಜೆಡಿಎಸ್ ಘೋಷಣೆಯಾಗಿದ್ದು, ಅದನ್ನು ಕಾಂಗ್ರೆಸ್ ಸರ್ಕಾರ ರಚನೆ ಆದ ನಂತರವೂ ಹೃತ್ಪೂರ್ವಕವಾಗಿ ಬೆಂಬಲಿಸಲಿಲ್ಲ. ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿದ್ದ ಸಂಪೂರ್ಣ ಸಾಲಮನ್ನಾವನ್ನು ರಾಜ್ಯದಲ್ಲಿ ಪ್ರಚಾರ ಮಾಡುವುದು ಸಾಧ್ಯವೇ ಇರಲಿಲ್ಲ. ಏಕೆಂದರೆ, ಸಾಲಮನ್ನಾ ಮಾಡುವುದಾಗಿ ಹೇಳಿದರೆ, ರಾಜ್ಯ ಸರ್ಕಾರ ಮಾಡಿಲ್ಲ ಎಂಬ ಪ್ರಶ್ನೆ ಸಹಜವಾಗಿ ಏಳುತ್ತಿತ್ತು. ರಾಜ್ಯ ಸರ್ಕಾರದಿಂದ ಸಂಪೂರ್ಣ ಸಾಲಮನ್ನಾ ಆಗಿದೆಯೋ ಇಲ್ಲವೋ ಇದುವರೆಗೆ ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಅವರ ಬೆಂಬಲಿಗ ಶಾಸಕರು ಪದೇ ಪದೇ ಹೇಳುವುದಕ್ಕೆ ಕಡಿವಾಣ ಹಾಕದೇ ಇರುವುದಕ್ಕೆ ಸ್ವತಃ ಸಿದ್ದರಾಮಯ್ಯನವರೇ ಕಾರಣ ಎಂದು ಈಗಲಾದರೂ ನಂಬಲೇಬೇಕು.

ಆದರೆ, ಸಂಪೂರ್ಣ ಮೈತ್ರಿಯಾಗುವುದು ಅಷ್ಟು ಸುಲಭವೇನಿರಲಿಲ್ಲ. ಏಕೆಂದರೆ ಕಾಂಗ್ರೆಸ್‍ಗೆ 2014ರಲ್ಲಿ ದಕ್ಕಿದ್ದ ಹೆಚ್ಚಿನ ಎಂಪಿ (9ರಲ್ಲಿ 6) ಸೀಟುಗಳು ದಕ್ಷಿಣ ಕರ್ನಾಟಕದಲ್ಲೇ ಸಿಕ್ಕಿದ್ದವು ಮತ್ತು ಅವುಗಳ ಪೈಕಿ ಕೋಲಾರ, ಬೆಂಗಳೂರು ಗ್ರಾಮಾಂತರಗಳಲ್ಲಿ ಕಾಂಗ್ರೆಸ್‍ನ ಎದುರಾಳಿ ಜೆಡಿಎಸ್ ಆಗಿತ್ತು. ಇನ್ನು ಜೆಡಿಎಸ್ ಗೆದ್ದಿದ್ದ ಎರಡೂ ಕ್ಷೇತ್ರಗಳಲ್ಲಿ ಪ್ರಮುಖ ಎದುರಾಳಿ ಕಾಂಗ್ರೆಸ್ ಪಕ್ಷವೇ ಆಗಿತ್ತು. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೂ, ಆ ಕ್ಷೇತ್ರಗಳಲ್ಲಿ ಜೆಡಿಎಸ್ ಲಕ್ಷಗಟ್ಟಲೆ ಮತಗಳನ್ನು ಗಳಿಸಿತ್ತು. ಹಾಗಾಗಿ ತನ್ನ ಸಾಮಥ್ರ್ಯಕ್ಕೆ ತಕ್ಕ ಸೀಟುಗಳನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್ ಕೇಳಿದಾಗ ಎರಡು ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಟ್ಟರೆ ಜೆಡಿಎಸ್‍ನವರು ಒಪ್ಪುವುದು ಸಾಧ್ಯವಿರಲಿಲ್ಲ. ಜೆಡಿಎಸ್‍ನವರು ಎಲ್ಲಿ ಪ್ರಬಲರಿದ್ದಾರೋ ಅಲ್ಲಿ ಬಿಟ್ಟುಕೊಟ್ಟರೆ, ಕಾಂಗ್ರೆಸ್‍ನ ಅಲ್ಲಿನ ನಾಯಕರುಗಳಿಗೆ ತಮ್ಮ ದೀರ್ಘಕಾಲಿಕ ಬೇಸ್ ಹೋಗಿಬಿಡುತ್ತದೆಂಬ ಚಿಂತೆ. ಇದಕ್ಕೆ ಮೇಲ್ಪಂಕ್ತಿ ಹಾಕಬೇಕಿದ್ದವರು ದೊಡ್ಡ ನಾಯಕರು. ಆದರೆ, ದೊಡ್ಡ ನಾಯಕ ಸಿದ್ದರಾಮಯ್ಯನವರು, 2018ರ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದ ಜೆಡಿಎಸ್‍ಗೆ ಮೈಸೂರನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಮೊಟ್ಟ ಮೊದಲ ರಾಂಗ್‍ಸಿಗ್ನಲ್ ಅಲ್ಲಿಂದಲೇ ಹೊರಟಿತು.

ಇವೆಲ್ಲದರ ಪರಿಣಾಮವಾಗಿ 8 ಕ್ಷೇತ್ರಗಳಿಗೆ ಸೀಮಿತಗೊಂಡ ಜೆಡಿಎಸ್ ತನ್ನ ಪ್ರಾಬಲ್ಯವಿರದಿದ್ದ ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಪಡೆದುಕೊಂಡಿತು. ವಿಜಯಪುರದಲ್ಲಿ ಇಬ್ಬರು ಜೆಡಿಎಸ್ ಶಾಸಕರಿರದ್ದರಾದರೂ, ಅಲ್ಲಿಯೂ ಅಭ್ಯರ್ಥಿಯಿರಲಿಲ್ಲ. ಅಂತಿಮವಾಗಿ ಅಭ್ಯರ್ಥಿಯ ಕೊರತೆಯಿಂದ ಬೆಂಗಳೂರು ಉತ್ತರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್‍ನ ಅಭ್ಯರ್ಥಿಯನ್ನು ಎರವಲು ಪಡೆದುಕೊಂಡಿತು. ಇಲ್ಲಿಂದಲೇ ಪತನ ಆರಂಭವಾಗಿತ್ತು.
ಮೂರನೆಯದಾಗಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಎರಡೂ ಪಕ್ಷಗಳು ಎಡವಿದವು. ಮಂಡ್ಯ, ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರಗಳೂ ಸೇರಿದಂತೆ ಹಲವು ಕ್ಷೇತ್ರಗಳು ಅಂಥವಿದ್ದವು. ಉತ್ತರ ಪ್ರದೇಶದಲ್ಲಿ ಉಪಚುನಾವಣೆಯಲ್ಲಿ ಎಸ್‍ಪಿ-ಬಿಎಸ್‍ಪಿ-ಆರ್‍ಎಲ್‍ಡಿ ಮೈತ್ರಿಕೂಟ ತೋರಿದ ಚಾಕಚಕ್ಯತೆಯನ್ನು ಈ ಪಕ್ಷಗಳು ತೋರುವ ಅಗತ್ಯವಿತ್ತು. ಕೈರಾನಾ ಎಂಬುದು ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿದ್ದ, ಆದರೆ ಜಾಟರು ಮತ್ತು ಮುಸ್ಲಿಮರು ಮಧ್ಯೆ 2014ಕ್ಕೆ ಮುಂಚೆ ತೀವ್ರ ಕೋಮು ಸಂಘರ್ಷ ಉಂಟಾದ ಕ್ಷೇತ್ರವಾಗಿತ್ತು.

ಅಲ್ಲಿ ಉಪಚುನಾವಣೆ ಏರ್ಪಟ್ಟಾಗ, ಮೈತ್ರಿ ಕೂಟವು ಏನು ಮಾಡಿತು ಗೊತ್ತೇ? ಸಮಾಜವಾದಿ ಪಕ್ಷದಿಂದ ಈ ಹಿಂದೆ ಗೆದ್ದಿದ್ದ ಮುಸ್ಲಿಂ ಅಭ್ಯರ್ಥಿಯ ಪತ್ನಿಯನ್ನು ಆರ್‍ಎಲ್‍ಡಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಹೇಳಲಾಯಿತು! ಅಂದರೆ ಜಾಟರ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿ. ಅದಕ್ಕೆ ಸ್ವಲ್ಪ ಮುಂಚೆ ಜಿನ್ನಾ ಅವರ ಫೋಟೋ ವಿಚಾರ ಇಟ್ಟುಕೊಂಡು ಬಿಜೆಪಿ ಗಲಭೆಯೆಬ್ಬಿಸಿತ್ತು. ಚುನಾವಣೆ ನಡೆಯುವ ಹೊತ್ತಿನಲ್ಲಿ ಗನ್ನಾ (ಕಬ್ಬು) ಬೆಲೆ ರೈತರನ್ನು ಕಾಡುತ್ತಿತ್ತು. ಮುಸ್ಲಿಂ ಅಭ್ಯರ್ಥಿಯ ಪತಿ ಈ ಹಿಂದೆ ಕಬ್ಬಿನ ಬೆಲೆಗಾಗಿ ರೈತರ ಪರವಾಗಿ ಹೋರಾಡಿದ್ದವರು. ಎಲ್ಲವೂ ಕೂಡಿಬಂದು ಜಿನ್ನಾ ಅಲ್ಲ, ಗನ್ನಾ ಮುಖ್ಯ ಎಂಬ ಘೋಷಣೆ ಅಲ್ಲಿ ಮೊಳಗಿತು! ಹಿಂದೂ-ಮುಸ್ಲಿಂ ಧ್ರುವೀಕರಣದ ಪ್ರದೇಶದಲ್ಲಿ ಮುಸ್ಲಿಂ ಮಹಿಳೆ ಗೆದ್ದರು.

ಈ ಚುನಾವಣೆಯಲ್ಲಿ ಇಂತಹ ಚಾಕಚಕ್ಯತೆಯನ್ನು ಪ್ರದರ್ಶಿಸುವ ಅಗತ್ಯ ಬಹಳವೇ ಇತ್ತು. ಆದರೆ, ಅದನ್ನು ರಿವರ್ಸ್ ಮಾಡಿದ್ದು ಕರ್ನಾಟಕದಲ್ಲಿ. ಅಂದರೆ, ಒಕ್ಕಲಿಗ ಅಭ್ಯರ್ಥಿಯನ್ನು ಕಾಂಗ್ರೆಸ್‍ನಿಂದ ಇಳಿಸುವ ಅಗತ್ಯ ಉಡುಪಿ-ಚಿಕ್ಕಮಗಳೂರು ಮತ್ತು ಮೈಸೂರು ಎರಡೂ ಕಡೆ ಇತ್ತು. ಜೆಡಿಎಸ್ ನಾಯಕ ಮಧು ಬಂಗಾರಪ್ಪನವರನ್ನು ಕಾಂಗ್ರೆಸ್‍ನಿಂದ ಇಳಿಸಿದ್ದೇ ಆಗಿದ್ದರೆ, ಶಿವಮೊಗ್ಗದಲ್ಲೂ ಭಾರೀ ಫೈಟ್ ಕೊಡುವ ಸಾಧ್ಯತೆ ಇತ್ತು. ಇದರ ಸೂಚನೆ ಶಿವಮೊಗ್ಗ ಉಪಚುನಾವಣೆಯಲ್ಲೇ ಸಿಕ್ಕಿತ್ತು. ಕಾಂಗ್ರೆಸ್‍ನ ಹಸ್ತ ಇಲ್ಲವೆಂದು ಹಲವರು ಮತಗಟ್ಟೆಯಿಂದ ವಾಪಸ್ ಹೋಗಿದ್ದರು!

ಈ ರೀತಿಯ ಆಲೋಚನೆ ಮಾಡಬೇಕಿದ್ದ ಮೈತ್ರಿಯ ನಾಯಕರು ಒಬ್ಬರ ಕಾಲು ಇನ್ನೊಬ್ಬರು ಎಳೆಯಲು ಈ ಚುನಾವಣೆಯ ಸಂದರ್ಭವನ್ನು ಬಳಸಿಕೊಂಡರು. ಕೆ.ಎಚ್.ಮುನಿಯಪ್ಪ ಮತ್ತು ಮೊಯ್ಲಿಯವರಿಗಿದ್ದ ವಿರೋಧವನ್ನು ಯಾವ ರೀತಿಯಲ್ಲಿ ತಣಿಸಬೇಕು ಅಥವಾ ಅಭ್ಯರ್ಥಿಯನ್ನು ಬದಲಿಸಬೇಕು ಎಂಬ ಕುರಿತು ಆಲೋಚಿಸುವುದಕ್ಕಿಂತ, ಯಾರ್ಯಾರನ್ನು ಸೋಲಿಸಬೇಕು ಎಂಬುದಕ್ಕೆ ಕಾಂಗ್ರೆಸ್ ನಾಯಕರು ಹೆಚ್ಚಿನ ಗಮನ ಕೊಟ್ಟರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸುಮಲತಾ ಅವರು ಪಕ್ಷೇತರರಾಗಿ ನಿಲ್ಲುವಂತೆ ಹುರಿದುಂಬಿಸುವುದರಲ್ಲಿ ಸಿದ್ದರಾಮಯ್ಯನವರ ಪಾತ್ರ ಎಷ್ಟಿದೆಯೋ ಗೊತ್ತಿಲ್ಲ. ಆದರೆ, ಅವರ ಬೆಂಬಲಿಗರಿಗೆ ಹೊರಟ ಸಂದೇಶವಂತೂ ನಿಖಿಲ್‍ರನ್ನು ಸೋಲಿಸಬೇಕೆಂದೇ ಆಗಿತ್ತು.

ಆರಂಭದ ಘಟ್ಟದಲ್ಲಾದರೂ ಸಿದ್ದರಾಮಯ್ಯನವರ ಬೆಂಬಲ ಇದ್ದೇ ಇತ್ತು ಎಂಬುದು ಈಗ ಸಂಶಯಾತೀತ. ಅದರ ಪೆಟ್ಟು ಮೈಸೂರಿನಲ್ಲಿ ಬೀಳಲಿದೆ ಎಂಬ ಸಂದೇಶವನ್ನು ಜೆಡಿಎಸ್ ಸಚಿವ ಸಾರಾ ಮಹೇಶ್ ಬಹಿರಂಗವಾಗಿಯೇ ನೀಡಿದರು. ಅಲ್ಲಿಗೆ ಎರಡು ಸೀಟು ಮಕಾಡೆ ಮಲಗಿಕೊಂಡಂತಾಯಿತು. ಈ ಹೊತ್ತಿಗೆ ಕೆ.ಎಚ್.ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿ ದೇವೇಗೌಡರನ್ನು ಭೇಟಿ ಮಾಡಿ ಬಂದರು. ತಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್‍ನ ಸಂಪೂರ್ಣ ಬೆಂಬಲದ ಖಾತರಿ ಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು.

ಆ ನಿಟ್ಟಿನಲ್ಲಿ ನಡೆಯಬಹುದಾದ ಪ್ರಯತ್ನಕ್ಕೆ ತುಮಕೂರು ಕತ್ತರಿ ಹಾಕಿತು. ತುಮಕೂರಿನಲ್ಲಿ ಮೊದಲು ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿಕೊಂಡು ನಾಮಪತ್ರ ಸಲ್ಲಿಸಿದರು. ಅವರು ಹಿಂತೆಗೆದರಾದರೂ, ಅವರಾಗಲೀ, ಕೆ.ಎನ್.ರಾಜಣ್ಣರಾಗಲೀ ಎಷ್ಟರಮಟ್ಟಿಗೆ ಬೆಂಬಲಿಸುತ್ತಾರೆಂಬುದು ಪ್ರಶ್ನೆಯೇ ಆಗಿತ್ತು. ಅಂತಿಮವಾಗಿ ಕೆ.ಎನ್.ರಾಜಣ್ಣರ ಬೆಂಬಲಿಗರು ದೇವೇಗೌಡರ ವಿರುದ್ಧ ಪ್ರಚಾರ ಮಾಡಿದರು. ಅಲ್ಲಿಂದಾಚೆಗೆ ಗೌಡರು ಕೋಲಾರ-ಚಿಕ್ಕಬಳ್ಳಾಪುರದೆಡೆಗೆ ಗಮನ ಹರಿಸುವ ಪ್ರಶ್ನೆಯೇ ಇರಲಿಲ್ಲ. ಕೋಲಾರದ ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡರು, ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಮತ ಹಾಕಲು ಕರೆ ನೀಡಿದರು!

ಅಂತಿಮವಾಗಿ ತುಮಕೂರು ಕ್ಷೇತ್ರದ ಪೈಕಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಾತ್ರ ಅಸ್ತಿತ್ವದಲ್ಲಿದ್ದ ಮಧುಗಿರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣನವರ ದೆಸೆಯಿಂದ ಬಿಜೆಪಿಗೇ 10,584 ಮತಗಳ ಲೀಡ್ ಸಿಕ್ಕಿತ್ತು. ಉಪಮುಖ್ಯಮಂತ್ರಿ ಪರಮೇಶ್ವರ್ ಕ್ಷೇತ್ರ ಕೊರಟಗೆರೆಯಲ್ಲೂ ಬಿಜೆಪಿ ಇಲ್ಲ. ಅಲ್ಲಿ ದೇವೇಗೌಡರಿಗೆ ಕೇವಲ 4,263 ಮತಗಳ ಲೀಡ್.

ಇನ್ನು ಚಿಕ್ಕಬಳ್ಳಾಪುರಕ್ಕೆ ಬಂದರೆ, ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಲೀಡ್ ಬಂದುದರಿಂದ ಬಚ್ಚೇಗೌಡರು ಮೊಯ್ಲಿ ವಿರುದ್ಧ 1,82,110 ಮತಗಳ ಅಂತರದಿಂದ ಗೆದ್ದರು ಎನ್ನುವುದೇನೋ ನಿಜ. ಆದರೆ, ಇಲ್ಲೂ ಕೆಲವು ಅಂಕಿ-ಅಂಶಗಳು ಕುತೂಹಲಕಾರಿಯಾಗಿವೆ. ಕಾಂಗ್ರೆಸ್‍ನ ಸುಧಾಕರ್ ಎದುರಿಗೆ ಜೆಡಿಎಸ್ ಎದುರಾಳಿಯಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೊಯ್ಲಿಯವರಿಗೆ ಕನಿಷ್ಠ 75 ಸಾವಿರ ಲೀಡ್ ಬರಬೇಕಿತ್ತು. ಆದರೆ, ಇಲ್ಲಿ ಬಿಜೆಪಿಗೆ 34,967 ಮತಗಳ ಲೀಡ್ ಬಂದಿತು! ನೆಲಮಂಗಲ ಮತ್ತು ದೇವನಹಳ್ಳಿಯಲ್ಲಿ ಜೆಡಿಎಸ್ ಶಾಸಕರಿಗೆ ಎದುರಾಳಿಗಳೆಂದರೆ ಕಾಂಗ್ರೆಸ್‍ನವರು. ಅಲ್ಲಿ ಕ್ರಮವಾಗಿ 19,546 ಮತ್ತು 10,584 ಮತಗಳ ಲೀಡ್ ಬಿಜೆಪಿಗೆ ದಕ್ಕಿತು. ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಬಹುಮತ ಸಿಗುತ್ತದೆಂಬುದು ಎಲ್ಲರಿಗೂ ಗೊತ್ತಿತ್ತು. ಅದನ್ನು ಮಣಿಸಬೇಕೆಂದರೆ, ಉಳಿದೆಲ್ಲಾ ಕ್ಷೇತ್ರಗಳಲ್ಲಿ (ಇಲ್ಲೆಲ್ಲೂ ಬಿಜೆಪಿ ಶಾಸಕರಿಲ್ಲ) ಜೆಡಿಎಸ್-ಕಾಂಗ್ರೆಸ್ ಒಂದಾಗಿ ಕೆಲಸ ಮಾಡಬೇಕಿತ್ತು. ಅದಾಗಲಿಲ್ಲ.

ಇನ್ನು ಬೆಂಗಳೂರು ಉತ್ತರದಲ್ಲಿ 8 ಶಾಸಕರ ಪೈಕಿ 5 ಕಾಂಗ್ರೆಸ್ ಮತ್ತು 2 ಜೆಡಿಎಸ್ ಶಾಸಕರಿದ್ದರು. ಹೀಗಿದ್ದೂ ಮೊದಲಿಗೆ ದೇವೇಗೌಡರು ಅಲ್ಲಿಂದ ಸ್ಪರ್ಧಿಸಲಿ ಎಂಬ ಆಲೋಚನೆ ಬರಲು ಅಲ್ಲಿ ಒಕ್ಕಲಿಗ ಮತದಾರರು ಹೆಚ್ಚಿದ್ದಾರೆ ಮತ್ತು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ 2ನೇ ಸ್ಥಾನದಲ್ಲಿದೆ ಎಂಬುದೂ ಕಾರಣವಾಗಿತ್ತು. ಇಲ್ಲಿ ಕೃಷ್ಣ ಭೈರೇಗೌಡರು ಜೆಡಿಎಸ್ ಅಭ್ಯರ್ಥಿಯಾಗುವುದು ಸುಲಭದ ಸಂಗತಿಯಾಗಿರಲಿಲ್ಲ. ಸ್ವತಃ ದೇವೇಗೌಡರೇ ಸ್ಪರ್ಧಿಸಿದರೂ, ಅವರನ್ನು ಕಾಂಗ್ರೆಸ್‍ನವರು ಸೋಲಿಸಬಹುದು ಎನ್ನುವ ಕಾರಣಕ್ಕೆ ಅವರೇ ಹಿಂಜರಿದರು. ಇನ್ನು ಮೈತ್ರಿ ಚೆನ್ನಾಗಿ ಕೆಲಸ ಮಾಡುವ ಸಾಧ್ಯತೆ ಇರಲೇ ಇಲ್ಲ.

ಉತ್ತರ ಕನ್ನಡದಲ್ಲಿ ದೇಶಪಾಂಡೆ ಕಡೆಯವರೆಗೂ ಫೀಲ್ಡಿಗಿಳಿಯಲೇ ಇಲ್ಲ. ಕಾಟಾಚಾರದ ಪ್ರಚಾರ ಮುಗಿಸಿದ್ದಲ್ಲದೇ, ಪ್ರತಿಕೂಲವಾದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆಯವರ ವಿರುದ್ಧ ಇದ್ದ ಸ್ಥಳೀಯ ಅಸಮಾಧಾನವನ್ನು ಎನ್‍ಕ್ಯಾಷ್ ಮಾಡಿಕೊಳ್ಳುವಂತೆ ವಿಶ್ವಾಸ ಹುಟ್ಟಿಸುವ ಕೆಲಸ ಮೈತ್ರಿ ಪಕ್ಷಗಳಿಂದ ನಡೆಯಲೇ ಇಲ್ಲ.

ಇವುಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಮತಗಳು ಒಂದಾಗಿಬಿಡುವ ಸಲೀಸು ಸಮೀಕರಣ ತನ್ನಂತೆ ತಾನೇ ಸಾಧ್ಯವಿರಲಿಲ್ಲ. ಅದರಲ್ಲೂ ಎಲ್ಲಾ ಕ್ಷೇತ್ರಗಳಲ್ಲೂ ಮೋದಿಯೇ ಅಭ್ಯರ್ಥಿ ಎಂದಾಗಿರುವಾಗ ಅದನ್ನು ರಾಷ್ಟ್ರಮಟ್ಟದಲ್ಲಿ ಮೈತ್ರಿಯೊಂದು ದೃಢವಾಗಿ ಎದುರಿಸುವ ಛಾತಿ ತೋರದಿದ್ದಾಗ, ಸುಲಭವಿರಲಿಲ್ಲ. ಆದರೆ, ರಾಜ್ಯದೆಲ್ಲೆಡೆ ಎರಡೂ ಪಕ್ಷಗಳು ಸೈದ್ಧಾಂತಿಕವಾಗಿ ಒಂದಾಗಿ, ತಮ್ಮ ಜಗಳಗಳನ್ನು ಬಹಿರಂಗಗೊಳಿಸದೇ, ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಒಳ್ಳೆಯ ಆಡಳಿತದ ಭರವಸೆಯನ್ನೂ ಮೂಡಿಸಿದ್ದರೆ ಅದರ ಪರಿಣಾಮ ಬೇರೆಯದೇ ಆಗಿರುತ್ತಿತ್ತು. ಕಲಬುರಗಿಯಂತಹ ಕ್ಷೇತ್ರಗಳ ಮೇಲೂ ಬೇರೆ ರೀತಿಯ ಪರಿಣಾಮ ಇರುತ್ತಿತ್ತು. ಚಾಮರಾಜನಗರದಲ್ಲಿ ಕಡಿಮೆ ಅಂತರದಲ್ಲಿ ಸೋಲುವ ಸಾಧ್ಯತೆ ಇರುತ್ತಿರಲಿಲ್ಲ. ಸರಿಯಾದ ಮಾಸ್ಟರ್‍ಪ್ಲಾನ್ ಹೆಣೆದಿದ್ದರೆ, ಕಾಂಗ್ರೆಸ್‍ನೊಳಗೂ ಎಲ್ಲವೂ ಸರಿಯಿದ್ದಿದ್ದರೆ ಬಳ್ಳಾರಿ, ಚಿತ್ರದುರ್ಗಗಳನ್ನೂ ಗೆಲ್ಲಬಹುದಿತ್ತು.

ಕಡೆಯ ದಿನದವರೆಗೂ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸದ ಸ್ಥಿತಿಯಲ್ಲಿ ಈ ಮೈತ್ರಿ ಪಕ್ಷಗಳಿದ್ದವು. ಇಂತಹ ಪಕ್ಷಗಳು ಮುಂದೆಯೂ ಬಿಜೆಪಿಯನ್ನು ದೂರವಿಡಲು ಕ್ರಿಯಾಶೀಲರಾಗುತ್ತಾರೆಂದು ನಂಬಿದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಈಗ ಸರ್ಕಾರವನ್ನು ಉಳಿಸಿಕೊಳ್ಳುವ ತಂತ್ರಗಳನ್ನು ಮತ್ತು ಆಸಕ್ತಿಯನ್ನು ಚುನಾವಣೆಗೆ ಮುಂಚೆ ಮಾಡಿದ್ದರೆ ಇಂತಹ ಹೀನಾಯವಾದ ಸೋಲು ಕರ್ನಾಟಕದಲ್ಲಿ ಉಂಟಾಗುತ್ತಿರಲಿಲ್ಲ. ಕನಿಷ್ಠ ಕಾಂಗ್ರೆಸ್‍ಗೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗುವಷ್ಟಾದರೂ ಸ್ಥಾನ ಲಭಿಸಲು ಕರ್ನಾಟಕವು ಕೊಡುಗೆ ನೀಡಬಹುದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...