ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ 2024ರ ಲೋಕಸಭೆ ಚುನಾವಣೆಯ ‘ಮತಗಳ್ಳತನ’ ಆರೋಪ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಅಖಿಲ ಭಾರತ ಕಾಂಗ್ರೆಸ್ ‘ವೋಟ್ ಚೋರಿ’ (ಮತಗಳ್ಳತನ) ಎಂಬ ಹೆಸರಿನಲ್ಲಿ ವೆಬ್ ಪೋರ್ಟಲ್ ತೆರೆದಿದೆ. ಈ ಮೂಲಕ ಮತಗಳ್ಳತನದ ವಿರುದ್ದ ಅಭಿಯಾನ ಆರಂಭಿಸಿದೆ.
‘ಮತಗಳ್ಳತನದ ಆಧಾರ’, ‘ಚುನಾವಣಾ ಆಯೋಗದ ಪಾರದರ್ಶಕತೆಗೆ ಆಗ್ರಹ’ ಮತ್ತು ‘ಮತಗಳ್ಳತನದ ಬಗ್ಗೆ ವರದಿ’ ಎಂಬ ಮೂರು ಆಯ್ಕೆಗಳು ವೆಬ್ ಪೋರ್ಟಲ್‌ನಲ್ಲಿದ್ದು, ಜನರು ಪೋರ್ಟಲ್‌ಗೆ ಭೇಟಿ ನೀಡಿ ಮತಗಳ್ಳನದ ಆಧಾರಗಳನ್ನು ಪರಿಶೀಲಿಸಿ, ಆ ಬಗ್ಗೆ ವರದಿ ಮಾಡಿ, ಚುನಾವಣಾ ಪಾರದರ್ಶಕತೆಗೆ ಆಯೋಗವನ್ನು ಆಗ್ರಹಿಸಬಹುದು.
ಬಿಜೆಪಿ ಮತ್ತು ಚುನಾವಣಾ ಆಯೋಗ ಪರಸ್ಪರ ಒಪ್ಪಂದ ಮಾಡಿಕೊಂಡು ಕಳೆದ ಲೋಕಸಭೆ ಚುನಾವಣೆಯಲ್ಲಿ “ದೊಡ್ಡ ಕ್ರಿಮಿನಲ್ ವಂಚನೆ” ಎಸಗಿದೆ ಎಂಬ ಆರೋಪವನ್ನು ರಾಹುಲ್ ಗಾಂಧಿಯ ಪುನರುಚ್ಚರಿಸುವ ವೀಡಿಯೊ ಕೂಡ ವೆಬ್ ಪೋರ್ಟನಲ್ಲಿದೆ. ವಿಡಿಯೋದಲ್ಲಿ ಕರ್ನಾಟಕದ ಒಂದು ಕ್ಷೇತ್ರದ ವಿಶ್ಲೇಷಣೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು “ಸಂವಿಧಾನದ ವಿರುದ್ಧದ ಅಪರಾಧ” ಎಂದು ಹೇಳಿದ್ದಾರೆ.
ಈ ಪೋರ್ಟಲ್‌ನಲ್ಲಿ ಮತದಾನವು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಆದರೆ, ಅದು ‘ಚುನಾವಣಾ ಆಯೋಗದ ಶಾಮೀಲಿನೊಂದಿಗೆ ಬಿಜೆಪಿಯಿಂದ ವ್ಯವಸ್ಥಿತ ದಾಳಿಗೆ ಒಳಗಾಗಿದೆ’ ಎಂಬ ಸಂದೇಶವಿದೆ.
“ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಲೋಕಸಭಾ ಚುನಾವಣೆ ಗೆಲ್ಲಲು ಸಹಾಯಕ ಮಾಡಿದ 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ನಾವು ಕಂಡುಕೊಂಡಿದ್ದೇವೆ. ಸುಮಾರು 70-100 ಸ್ಥಾನಗಳಲ್ಲಿ ಇದು ಸಂಭವಿಸಿದೆ. ಹಾಗಾದರೆ ಊಹಿಸಿ, ಇದು ಮುಕ್ತ ಚುನಾವಣೆಗಳನ್ನು ನಾಶಪಡಿಸುತ್ತದೆ ಎಂದು ಪೋರ್ಟಲ್‌ನಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕುರಿತು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಈ ಹಿಂದೆಯೂ ಎಚ್ಚರಿಕೆ ನೀಡಿವೆ. ಈಗ ನಮ್ಮ ಬಳಿ ಪುರಾವೆಗಳಿವೆ. ನಾವು ಈ ಮತಗಳ್ಳತನದ ವಿರುದ್ಧ ನಮ್ಮೆಲ್ಲ ಶಕ್ತಿಯಿಂದ ಹೋರಾಡುತ್ತೇವೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮೊಂದಿಗೆ ನೀವು ಕೈಜೋಡಿಸಿ ಎಂದು ಪೋರ್ಟಲ್‌ನಲ್ಲಿ ಮನವಿ ಮಾಡಲಾಗಿದೆ.
ಒಬ್ಬರು ವ್ಯಕ್ತಿ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ, ಅವರ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಮೂಲಕ ಅವರು ಮತಗಳ್ಳತನವನ್ನು ವಿರೋಧಿಸುತ್ತಾರೆ ಎಂದು ಹೇಳಲಾಗುತ್ತದೆ.
“ಚುನಾವಣಾ ಆಯೋಗ ಡಿಜಿಟಲ್ ಮತದಾರರ ಪಟ್ಟಿಯನ್ನು ಒದಗಿಸಬೇಕು ಎಂಬ ರಾಹುಲ್ ಗಾಂಧಿಯವರ ಬೇಡಿಕೆಯನ್ನು ನಾನೂ ಬೆಂಬಲಿಸುತ್ತೇನೆ” ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಜನರು ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳುವ ಮತ್ತು ಎಸ್‌ಎಂಎಸ್‌ನಲ್ಲಿರುವ ಲಿಂಕ್ ಅನ್ನು ಭರ್ತಿ ಮಾಡುವ ಆಯ್ಕೆಯನ್ನು ಕೂಡ ಪೋರ್ಟಲ್ ನೀಡುತ್ತದೆ.
ಪ್ರಮಾಣಪತ್ರವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಖಜಾಂಚಿ ಅಜಯ್ ಮಾಕನ್ ಅವರ ಸಹಿಗಳನ್ನು ಹೊಂದಿದೆ.
ಹಲವಾರು ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮಾಣಪತ್ರಗಳನ್ನು ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರ ‘ಮತಗಳ್ಳತನ’ ಆರೋಪವನ್ನು ಕಾಂಗ್ರೆಸ್ ನಾಯಕರು ಪ್ರತಿಧ್ವನಿಸುತ್ತಿದ್ದಂತೆ, ಚುನಾವಣಾ ಆಯೋಗದ ಅಧಿಕಾರಿಗಳು ಶನಿವಾರ ಮತ್ತೊಮ್ಮೆ ರಾಹುಲ್ ಗಾಂಧಿ ತನ್ನ ಆರೋಪವನ್ನು ದೃಢೀಕರಿಸುವ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು ಅಥವಾ ಸುಳ್ಳಾರೋಪ ಮಾಡಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನಿಷ್ಠ ಮೂರು ರಾಜ್ಯಗಳಲ್ಲಿ ನಡೆದ ಮತ ಕಳ್ಳತನದ ಆರೋಪದ ಕುರಿತು ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗದ ನಡುವೆ ಜಟಾಪಟಿ ಏರ್ಪಟ್ಟಿದೆ.


