ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ಪರಿಸ್ಥಿತಿಯನ್ನು ಒಗ್ಗಟ್ಟಿನಿಂದ ನಿಭಾಯಿಸುವ ಸಲುವಾಗಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಬೇಕೆಂದು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೋಮವಾರ (ಏ.28) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, “ಭಯೋತ್ಪಾದಕ ದಾಳಿಯು ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ” ಎಂದು ಹೇಳಿದ್ದಾರೆ.
“ಈ ನಿರ್ಣಾಯಕ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಭಾರತ ತೋರಿಸಬೇಕು. ಅದಕ್ಕಾಗಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಬೇಕು.ಅಧಿವೇಶನದಲ್ಲಿ ಜನರ ಪ್ರತಿನಿಧಿಗಳು ತಮ್ಮ ಏಕತೆ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಬಹುದು. ಹಾಗಾಗಿ, ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯಬೇಕೆಂದು ನಾವು ವಿನಂತಿಸುತ್ತೇವೆ” ಎಂದಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪತ್ರದಲ್ಲೂ ರಾಹುಲ್ ಗಾಂಧಿ ಹೇಳಿದ್ದನ್ನೇ ಉಲ್ಲೇಖಿಸಿದ್ದು, “ಏಕತೆ ಮತ್ತು ಒಗ್ಗಟ್ಟು ಅತ್ಯಗತ್ಯವಾದ ಈ ಸಂದರ್ಭದಲ್ಲಿ, ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯುವುದು ಮುಖ್ಯ ಎಂದು ವಿರೋಧ ಪಕ್ಷ ನಂಬುತ್ತದೆ” ಎಂದು ಬರೆದಿದ್ದಾರೆ.
“ಇದು ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸುವ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಪ್ರಬಲ ಪ್ರದರ್ಶನವಾಗಲಿದೆ.ಹಾಗಾಗಿ,ಅಧಿವೇಶನ ಕರೆಯಬೇಕು ಎಂಬುದು ನಮ್ಮ ಆಶಯ” ಎಂದು ಖರ್ಗೆ ಹೇಳಿದ್ದಾರೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಝಾ ಮತ್ತು ಸಿಪಿಐ ಸಂಸದ ಪಿ. ಸಂದೋಷ್ ಕುಮಾರ್ ಸೇರಿದಂತೆ ಹಲವಾರು ವಿರೋಧ ಪಕ್ಷದ ಸದಸ್ಯರು ರಾಷ್ಟ್ರದ ಇಚ್ಛೆಯನ್ನು ವ್ಯಕ್ತಪಡಿಸಲು ಮತ್ತು ಏಕತೆಯ ಸಂದೇಶವನ್ನು ಕಳುಹಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಮಧ್ಯೆ ಕಾಂಗ್ರೆಸ್ ನಾಯಕರೂ ಪತ್ರ ಬರೆದಿದ್ದಾರೆ.
ರಾಜ್ಯಸಭೆಯ ಸದಸ್ಯರಾಗಿರುವ ಸಂದೋಷ್ ಕುಮಾರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಬರೆದ ಪತ್ರದಲ್ಲಿ, ವಿಶೇಷ ಅಧಿವೇಶನವು ಪಕ್ಷಾತೀತವಾಗಿ ಸದಸ್ಯರು ಒಟ್ಟಾಗಿ ಸೇರಿ ನಷ್ಟಕ್ಕೆ ಶೋಕ ವ್ಯಕ್ತಪಡಿಸಲು ಮತ್ತು ರಾಷ್ಟ್ರದ ಇಚ್ಛೆಯನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಭಯೋತ್ಪಾದಕ ದಾಳಿಯು ಪ್ರಾಣ ಕಳೆದುಕೊಂಡವರ ಸಂಬಂಧಿಕರನ್ನು ದುಃಖದಲ್ಲಿ ಮುಳುಗಿಸಿದೆ. ಮಾತ್ರವಲ್ಲದೆ ನಮ್ಮ ರಾಷ್ಟ್ರದ ಸಾಮೂಹಿಕ ಆತ್ಮಸಾಕ್ಷಿಯನ್ನು ನಡುಗಿಸಿದೆ ಎಂದು ಅವರು ಹೇಳಿದ್ದಾರೆ.
“ಈ ಕಷ್ಟದ ಸಮಯದಲ್ಲಿ, ಜನರ ಸರ್ವೋಚ್ಚ ಧ್ವನಿಯಾದ ನಮ್ಮ ಸಂಸತ್ತು ನಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಲು, ಬಲಿಪಶುಗಳಿಗೆ ಗೌರವ ಸಲ್ಲಿಸಲು ಮತ್ತು ಭಯೋತ್ಪಾದನೆಯ ವಿರುದ್ಧ ನಮ್ಮ ರಾಷ್ಟ್ರದ ದೃಢ ಸಂಕಲ್ಪವನ್ನು ಪುನರುಚ್ಚರಿಸಲು ಒಗ್ಗಟ್ಟಿನಿಂದ ಒಟ್ಟಾಗಿ ಬರುವುದು ಅತ್ಯಗತ್ಯ” ಎಂದಿದ್ದಾರೆ.
ಸ್ವತಂತ್ರ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರೂ ರಾಜಕೀಯ ಪಕ್ಷಗಳು ಮೇ ತಿಂಗಳಲ್ಲಿ ಸಾಧ್ಯವಾದಷ್ಟು ಬೇಗ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ವಿನಂತಿಸಿದ್ದರು.
1990ರ ಕಸ್ಟಡಿ ಸಾವು ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ಜಾಮೀನು ನಿರಾಕರಣೆ



Session karitare.Pakistange udis madidamele.