ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಸಂಸತ್‌ನಲ್ಲಿ ‘ಸುಳ್ಳು ಮತ್ತು ದಾರಿ ತಪ್ಪಿಸುವ’ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಈ ವಿಷಯದಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
ನಿರ್ದೇಶನ 115(1)ರ ನಿಬಂಧನೆಗಳನ್ನು ಅನ್ವಯಿಸುವಂತೆ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿರುವ ಮಾಣಿಕ್ಕಂ ಠಾಗೋರ್ ಅವರು, ಅಗತ್ಯ ಪ್ರಕ್ರಿಯೆಯನ್ನು ಆರಂಭಿಸುವಂತೆ ಆಗ್ರಹಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದಲ್ಲಿ ಪ್ರಧಾನಿ ಮೋದಿಯವರು “ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ತಿಂಗಳಿಗೆ 8,500 ರೂ.ಗಳ “ಸುಳ್ಳು ಭರವಸೆ” ನೀಡಿತ್ತು ಎಂದು ಹೇಳಿದ್ದಾರೆ. ಆದರೆ, ಅದು ಗೆಲುವು ಮತ್ತು ಸರ್ಕಾರ ರಚನೆಯನ್ನು ಆಧರಿಸಿ ನೀಡಿದ್ದ ಭರವಸೆಯಾಗಿತ್ತು ಎಂದು ಠಾಗೋರ್ ಪತ್ರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ತಾನು ಏಕಾಂಗಿಯಾಗಿ ಸ್ಪರ್ಧಿಸಿದ್ದ 16 ರಾಜ್ಯಗಳಲ್ಲಿ ಅದರ ಮತಗಳಿಕೆ ಪ್ರಮಾಣ ಕಡಿಮೆಯಾಗಿತ್ತು ಎಂಬ ಮೋದಿಯವರ ಹೇಳಿಕೆಯು ಸತ್ಯಕ್ಕೆ ದೂರವಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಕರ್ನಾಟಕ, ತೆಲಂಗಾಣ ಇತ್ಯಾದಿ ರಾಜ್ಯಗಳಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರವಧಿಯಲ್ಲಿ ಸೇನೆಗೆ ಯಾವುದೇ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಒದಗಿಸಿರಲಿಲ್ಲ ಎಂಬ ಮೋದಿಯವರ ಟೀಕೆಗಳನ್ನು ‘ತೀರಾ ತಪ್ಪುದಾರಿಗೆಳೆಯುವಂತದ್ದು’ ಎಂದಿರುವ ಠಾಗೋರ್, “ಜಾಕೆಟ್‌ಗಳ ಕೊರತೆ ಇತ್ತು ನಿಜ. ಆದರೆ, ಜಾಕೆಟ್‌ಗಳೇ ಇರಲಿಲ್ಲ ಎಂಬುವುದು ಸುಳ್ಳು. ಮುಂಬೈ ದಾಳಿಯ ಸಮಯದಲ್ಲಿ ಪೊಲೀಸರು ಕೂಡ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಧರಿಸಿದ್ದರು ಎಂದು ಠಾಗೋರ್ ಹೇಳಿದ್ದಾರೆ.
ಸೇನೆಗೆ ಫೈಟರ್ ಜೆಟ್‌ಗಳನ್ನು ಕಾಂಗ್ರೆಸ್ ನೀಡಿರಲಿಲ್ಲ ಎಂಬ ಪ್ರಧಾನಿಯ ಹೇಳಿಕೆಯನ್ನು ಠಾಗೋರ್ ಖಂಡಿಸಿದ್ದು, “ನಮ್ಮಲ್ಲಿ ಜಾಗ್ವಾರ್, ಮಿಗ್ 29, ಎಸ್‌ಯು-30, ಮಿರಾಜ್ 2000 ಫೈಟರ್ ಜೆಟ್‌ಗಳು ಇತ್ತು” ಎಂದು ಪತ್ರದಲ್ಲಿ ಬರೆದಿದ್ದಾರೆ.
ಲೋಕಸಭೆಯಲ್ಲಿ ಜುಲೈ 1 ರಂದು ಸಂಸದ ಅನುರಾಗ್ ಠಾಕೂರ್ ಮಾಡಿದ್ದ ಭಾಷಣದ ದೋಷಗಳನ್ನು ಠಾಗೋರ್ ಎತ್ತಿ ತೋರಿಸಿದ್ದು, “ಕಾಂಗ್ರೆಸ್ ಅವಧಿಯಲ್ಲಿ ಸೇನೆಗೆ ಶಸ್ತ್ರಾಸ್ತ್ರ ಮತ್ತು ಯುದ್ಧ ವಿಮಾನಗಳನ್ನು ನೀಡಿರಲಿಲ್ಲ ಎಂದು ಠಾಕೂರ್ ಹೇಳಿದ್ದಾರೆ. “ನಮ್ಮಲ್ಲಿ ಜಾಗ್ವಾರ್, ಮಿಗ್ 29, ಎಸ್‌ಯು-30, ಮಿರಾಜ್ 2000 ಫೈಟರ್ ಜೆಟ್‌ಗಳು, ಪರಮಾಣು ಬಾಂಬ್‌ಗಳು, ಅಗ್ನಿ, ಪೃಥ್ವಿ, ಆಕಾಶ್, ನಾಗ್, ತ್ರಿಶೂಲ್, ಬ್ರಹ್ಮೋಸ್‌ನಂತಹ ಕ್ಷಿಪಣಿಗಳು ಇದ್ದವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸನಾತನ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ತನಿಖೆಗೆ ಕೋರಿ ಎಟಿಎಸ್‌ಗೆ ಪತ್ರ ಬರೆದ ಗೋವಿಂದ್ ಪನ್ಸಾರೆ ಕುಟುಂಬ


