ರಾಜ್ಯಸಭೆಯಲ್ಲಿ ಮಾತನಾಡುವಾಗ ಅಂಬೇಡ್ಕರ್ ಅವರನ್ನು ಅಪಮಾನಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ಕಾಂಗ್ರೆಸ್ ಶಾಸಕರು, ಸಚಿವರು ಸುವರ್ಣಸೌಧದಲ್ಲಿ ಅಂಬೇಡ್ಕರ್ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಅಂಬೇಡ್ಕರ್ ಚಿತ್ರವನ್ನು ವಿಧಾನಸಭೆಯ ತಮ್ಮ ಟೇಬಲ್‌ಗಳಲ್ಲಿ ಇರಿಸಲಾಗಿದ್ದು, ಸದನದ ತುಂಬ ಅಂಬೇಡ್ಕರ್ ಚಿತ್ರಗಳು ಕಂಗೊಳಿಸಿವೆ. ಅಂಬೇಡ್ಕರ್ ಅವರನ್ನು ಅಪಮಾನಿಸಿದ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿದ್ದಾರೆ. ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ಸಿಗರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರೆ, ಅಮಿತ್ ಶಾ ಅವರನ್ನು ಸಮರ್ಥಿಸಿಕೊಂಡ ಬಿಜೆಪಿ-ಜೆಡಿಎಸ್ ಶಾಸಕರು ಸದನದಿಂದ ಹೊರ ಹೋಗಿದ್ದಾರೆ. ಅಂಬೇಡ್ಕರ್ ವಿರುದ್ಧದ ಬಿಜೆಪಿ ನಿಲುವನ್ನು ಜೆಡಿಎಸ್ ಕೂಡ ಬೆಂಬಲಿಸಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.
ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ ಶಾಸಕರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಟೇಬಲ್ ಮುಂದೆ ಅಂಬೇಡ್ಕರ್ ಅವರ ಫೋಟೋ ಇಟ್ಟು ಪ್ರತಿಭಟಿಸಿದರು. pic.twitter.com/v2o7wWsPzj
— Naanu Gauri (@naanugauri) December 19, 2024
ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ: ಡಿ ಕೆ ಶಿವಕುಮಾರ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುವ ಬದಲು ದೇವರ ನಾಮ ಜಪ ಮಾಡಿದ್ದರೆ ಮುಕ್ತಿ ದೊರೆಯುತ್ತಿತ್ತು ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
“ಅಂಬೇಡ್ಕರ್ ಹಾಗೂ ಸಂವಿಧಾನವನ್ನು ನಾವುಗಳು ಪ್ರತಿಪಾದನೆ ಮಾಡದೆ ಮತ್ತಿನ್ಯಾರು ಮಾಡಲು ಸಾಧ್ಯ? ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟವರು, ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಬಸವಣ್ಣ ಅವರ ಕಾಯಕವೇ ಕೈಲಾಸ ತತ್ವದಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿರುವವರು” ಎಂದರು.
ಇದನ್ನೂ ಓದಿ; ಕಿಚ್ಚು ಹಚ್ಚಿದ ಅಮಿತ್ ಶಾ ಹೇಳಿಕೆ | ಸಂಸತ್ ಬಳಿ ಭಾರೀ ಪ್ರತಿಭಟನೆ ; ಇಂಡಿಯಾ-ಬಿಜೆಪಿ ಮುಖಾಮುಖಿ


