ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೊಟ್ಟಿದ್ದ ದೂರಿಗೆ ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ನೀಡಿದ್ದ ದೂರಿಗೆ ಮಂಗಳವಾರ (ಅ.29) ಉತ್ತರಿಸಿದ್ದ ಚುನಾವಣಾ ಆಯೋಗ, “ಪಕ್ಷವು ಚುನಾವಣಾ ಫಲಿತಾಂಶ ತನ್ನ ವಿರುದ್ಧ ಇರುವ ಕಾರಣಕ್ಕೆ ಆಧಾರರಹಿತ ಆರೋಪಗಳನ್ನು ಮಾಡಿದೆ” ಎಂದು ಟೀಕಿಸಿತ್ತು. ಅಲ್ಲದೆ, ಆಧಾರರಹಿತ ಆರೋಪಗಳನ್ನು ಮಾಡದಂತೆ ಎಚ್ಚರಿಕೆ ನೀಡಿತ್ತು.
“ಕಾಂಗ್ರೆಸ್ ಮಾಡಿದ್ದ ಆರೋಪಗಳನ್ನು ಬೇಜವಾಬ್ದಾರಿ ಎಂದಿತ್ತು. ಹರಿಯಾಣದಲ್ಲಿ ಚುನಾವಣಾ ಪ್ರಕ್ರಿಯೆಯು ದೋಷರಹಿತವಾಗಿ ನಡೆದಿದೆ. ಕ್ಷುಲ್ಲಕ ದೂರುಗಳ ಪ್ರವೃತ್ತಿಯನ್ನು ನಿಲ್ಲಿಸಿ” ಎಂದು ಹೇಳಿತ್ತು.
ಈ ಪ್ರತಿಕ್ರಿಯೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, “ಪಕ್ಷವು ಚುನಾವಣಾ ಆಯೋಗವನ್ನು ಗೌರವಿಸುತ್ತದೆ. ಪತ್ರ ಸಂವಹನವು ವಿಧಾನಸಭಾ ಚುನಾವಣೆಯಲ್ಲಿನ ಸಮಸ್ಯೆಗಳಿಗೆ ಸೀಮಿತವಾಗಿ ಮಾಡಲಾಗಿತ್ತು. ಪ್ರಸಕ್ತ ಚುನಾವಣಾ ಆಯೋಗದ ಹೇಳಿಕೆಗಳು, ಆಯೋಗವು ತನ್ನ ತಟಸ್ಥ ನಿಲುವಿನಿಂದ ದೂರ ಉಳಿದಿರುವಂತೆ ಕಂಡು ಬರುತ್ತಿದೆ. ಆ ಮೂಲಕ ತನ್ನ ಕರ್ತವ್ಯವನ್ನು ಆಯೋಗವು ಮರೆತಿದೆ” ಎಂದಿದೆ.
The ECI gave a non-reply to @INCIndia's specific complaints in 20 Vidhan Sabha constituencies in Haryana. Here is the INC's response to this non-reply. pic.twitter.com/dX98FkbEvU
— Jairam Ramesh (@Jairam_Ramesh) November 1, 2024
ಚುನಾವಣಾ ಆಯೋಗವು ನೀಡಿರುವ ಪ್ರತಿಕ್ರಿಯೆಯಲ್ಲಿ ಬಳಸಿರುವ ಭಾಷೆ ಮತ್ತು ಪಕ್ಷದ ವಿರುದ್ಧ ಮಾಡಿದ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, “ಈ ವಿಚಾರದಲ್ಲಿ ಚುನಾವಣಾ ಆಯೋಗ ತನಗೇ ತಾನೇ ಕ್ಲೀನ್ ಚಿಟ್ ನೀಡಿದರೂ ಆಶ್ಚರ್ಯವಿಲ್ಲ” ಎಂದು ವ್ಯಂಗ್ಯವಾಡಿದೆ. ಚುನಾವಣಾ ಆಯೋಗವು ಕಾನೂನಿನ ಮೂಲಕ ಸ್ಥಾಪಿತವಾದ ಒಂದು ಸ್ವತಂತ್ರ ಸಂಸ್ಥೆ ಎಂಬುವುದನ್ನು ಮರೆಯಬಾರದು. ಆಯೋಗಕ್ಕೆ ಯಾರು ನಿರ್ದೇಶನ ನೀಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಇತ್ತೀಚೆಗೆ ಪಕ್ಷದೊಂದಿಗೆ ಅದರ ಸಂವಹನ ಸರಿಯಾಗಿ ಇಲ್ಲ. ನಮಗೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಸಿಪಿಐ(ಎಂ) ಸಂಸದರಿಗೆ ‘ಫ್ಯಾಸಿಸಂ ವಿರೋಧಿ’ ಸಭೆಗೆ ತೆರಳಲು ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ!


