ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿರುವ ಹಿನ್ನೆಲೆ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ ಎಂದು ಸೋಮವಾರ (ಆ.25) ವರದಿಯಾಗಿದೆ.
ತ್ರಿಶೂರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ. ಮುರಳೀಧರನ್ ರಾಹುಲ್ ವಿರುದ್ದ ಶಿಸ್ತು ಕ್ರಮ ಕೈಗೊಂಡಿರುವುದನ್ನು ದೃಢಪಡಿಸಿದ್ದಾರೆ.
ಆದಾಗ್ಯೂ, ರಾಹುಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದನ್ನು ಖಚಿತಪಡಿಸುವ ಯಾವುದೇ ಅಧಿಕೃತ ಪ್ರಕಟಣೆಯನ್ನು ಕೆಪಿಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ, ಶಾಸಕ ಸನ್ನಿ ಜೋಸೆಫ್ ಅವರು ಮಧ್ಯಾಹ್ನ ಕಣ್ಣೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.
“ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾದ ರಾಹುಲ್ ಅವರು, ಶಾಸಕ ಸ್ಥಾನದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುವುದನ್ನು ಅವರೇ ನಿರ್ಧರಿಸಬೇಕು” ಎಂದು ಮುರಳೀಧರನ್ ಹೇಳಿದ್ದಾರೆ.
“ರಾಹುಲ್ ಅವರು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವುದು ಅವರ ವಿರುದ್ದ ಪಕ್ಷ ಕೈಗೊಂಡಿರುವ ಮೊದಲ ಕ್ರಮ, ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದು ಎರಡನೇ ಕ್ರಮ, ಮುಂದೆ ಇನ್ನೂ ಹೆಚ್ಚಿನ ಆರೋಪಗಳು ಕೇಳಿ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೇರಿದಂತೆ ಮೂರನೇ ಕ್ರಮವೂ ಪಕ್ಷ ತೆಗೆದುಕೊಳ್ಳಲಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅನ್ನು ದೂಷಿಸಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಯಾವುದೇ ಪಕ್ಷವೂ ಈ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ” ಎಂದು ಮುರಳೀಧರನ್ ತಿಳಿಸಿದ್ದಾರೆ.
“ರಾಹುಲ್ ವಿರುದ್ಧದ ಆರೋಪಗಳ ಬಗ್ಗೆ ಪಕ್ಷವು ಆಂತರಿಕ ಪರಿಶೀಲನೆ ನಡೆಸಲಿದೆ. ರಾಹುಲ್ ಅವರಿಗೂ ಉತ್ತರ ನೀಡಲು ಅವಕಾಶ ನೀಡಲಿದೆ” ಎಂದು ಮುರಳೀಧರನ್ ಹೇಳಿದ್ದಾರೆ.
ಪಾಲಕ್ಕಾಡ್‌ನ ಉಪಚುನಾವಣೆಯ ಬಗ್ಗೆ ಕಾಂಗ್ರೆಸ್‌ಗೆ ಚಿಂತೆಯಿಲ್ಲ. ಅಲ್ಲಿ ಬಿಜೆಪಿ ಮತ್ತು ಯುಡಿಎಫ್ ನಡುವೇ ಸ್ಪರ್ಧೆಯಿದೆ ಎಂದು ಮುರಳೀಧರನ್ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಅಷ್ಟೇನು ಪ್ರಬಲವಾಗಿಲ್ಲ. ಚುನಾವಣೆ ನಡೆದರೆ ಯುಡಿಎಫ್ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಕ್ಕಾಗಿ ಶಾಸಕಿ ಉಮಾ ಥಾಮಸ್ ಅವರ ವಿರುದ್ಧದ ಸೈಬರ್ ದಾಳಿಯನ್ನು ಮುರಳೀಧರನ್ ಖಂಡಿಸಿದ್ದು, “ಉಮಾ ಥಾಮಸ್ ಕೇರಳದ ಮಹಿಳೆಯರ ಪರ ಮಾತನಾಡಿದ್ದಾರೆ” ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ: “ಮೂರು ವರ್ಷಗಳ ಹಿಂದೆ ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್ ಕೋಣೆಗೆ ಆಹ್ವಾನಿಸಿದ್ದರು” ಎಂದು ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಅವರು ಆಗಸ್ಟ್ 20ರಂದು ಆರೋಪಿಸಿದ್ದರು.
ರಿನಿ ಆರೋಪ ಮಾಡುವಾಗ ಯುವ ರಾಜಕಾರಣಿ ರಾಹುಲ್ ಮಾಂಕೂಟತ್ತಿಲ್ ಎಂದು ಹೇಳಿರಲಿಲ್ಲ. ಆದರೆ, ಪಾಲಕ್ಕಾಡ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಯುವ ಘಟಕದ ನಾಯಕರು ರಿನಿ ಆರೋಪ ಮಾಡಿರುವುದು ರಾಹುಲ್ ವಿರುದ್ದವೇ ಎಂದಿದ್ದರು.
ರಿನಿ ಆರೋಪ ಬೆನ್ನಲ್ಲೇ ಮಲಯಾಳಂ ಬರಗಾರ್ತಿ ಹನಿ ಭಾಸ್ಕರನ್ ಕೂಡ ರಾಹುಲ್ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. “ತಾನು ಶ್ರೀಲಂಕಾದಲ್ಲಿದ್ದಾಗ ರಾಹುಲ್ ಇನ್‌ಸ್ಟಾಗ್ರಾಮ್ ಮೂಲಕ ಸಂಭಾಷಣೆ ಆರಂಭಿಸಿದ್ದರು. ನಂತರ, ಖಾಸಗಿ ವಿಷಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದರು. ಈ ಬಗ್ಗೆ ಅವರ ಗೆಳೆಯರಲ್ಲಿ ಹೇಳಿಕೊಂಡು ತನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಹನಿ ಭಾಸ್ಕರನ್ ಸಾರ್ವಜನಿಕವಾಗಿ ಆರೋಪಿಸಿದ್ದರು.
ರಾಹುಲ್ ವಿರುದ್ದದ ಈ ಗಂಭೀರ ಆರೋಪಗಳು ಯುವ ಕಾಂಗ್ರೆಸ್‌ನೊಳಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ವಿ ಸ್ನೇಹಾ ಮತ್ತು ಉಪಾಧ್ಯಕ್ಷ ವಿಷ್ಣು ಸುನಿಲ್ ಪಂದಲಂ ಸೇರಿದಂತೆ ಹಲವಾರು ನಾಯಕರು ರಾಹುಲ್ ರಾಜೀನಾಮೆಗೆ ಒತ್ತಾಯಿಸಿದ್ದರು. ಶಾಸಕ ಚಾಂಡಿ ಉಮ್ಮನ್ ಅವರ ಬೆಂಬಲಿಗರು ಕೂಡ ರಾಹುಲ್ ಅವರನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು.
ತನ್ನ ವಿರುದ್ದ ಆರೋಪ ರಾಜ್ಯದಾಧ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆ ರಾಹುಲ್ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗುರುವಾರ (ಆ.21) ರಾಜೀನಾಮೆ ನೀಡಿದ್ದರು.
ಯುವ ಕಾಂಗ್ರೆಸ್‌ನೊಳಗೆ ಒತ್ತಡ ಹೆಚ್ಚಾದ ಹಿನ್ನೆಲೆ ಮತ್ತು ಹಿರಿಯ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾದ ಕಾರಣ ಕಾಂಗ್ರೆಸ್ ನಾಯಕತ್ವವು ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ರಾಹುಲ್ ಅವರಿಗೆ ಸೂಚಿಸಿದೆ ಎಂದು ವರದಿಯಾಗಿತ್ತು. ಇದೀಗ ಅವರನ್ನು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಮಾತುಗೊಳಿಸಿರುವ ಬಗ್ಗೆ ಮುರಳೀಧರನ್ ಹೇಳಿಕೆ ನೀಡಿದ್ದಾರೆ.
ಬಿಹಾರ ವಿಶೇಷ ತೀವ್ರ ಪರಿಷ್ಕರಣೆ: ಶೇ. 98.2ರಷ್ಟು ದಾಖಲೆಗಳ ಸಂಗ್ರಹ ಮುಕ್ತಾಯ- ಚುನಾವಣಾ ಆಯೋಗ


