ಸಚಿವರಾದ ವಿ.ಸೋಮಣ್ಣ ಮತ್ತು ಕೆ.ಸಿ ನಾರಾಯಣಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ ಇಂದು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಮೂಲಕ ಸೋಮಣ್ಣನವರು ಕಾಂಗ್ರೆಸ್ ಸೇರುತ್ತಾರೆ ಎಂಬ ವಂದಂತಿಗೆ ತೆರೆ ಎಳೆದಿದೆ. ಆದರೆ ಕೆ.ಆರ್ ಪೇಟೆಯ ಟಿಕೆಟ್ ಘೋಷಣೆ ಮಾಡದೆ ಬಾಕಿ ಉಳಿಸಿಕೊಂಡಿದೆ.
ಇತ್ತೀಚೆಗೆ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ವಿ.ಸೋಮಣ್ಣನವರು ವಿಜಯ ಸಂಕಲ್ಪ ಯಾತ್ರೆಯಿಂದ ಅರ್ಧಕ್ಕೆ ಹೊರನಡೆದಿದ್ದರು. ಅಲ್ಲದೆ ಚಾಮರಾಜನಗರದಲ್ಲಿನ ಬಿಜೆಪಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಹಾಗಾಗಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹರಡಿದ್ದವು. ಅವರು ತಮಗೆ ಮತ್ತು ತಮ್ಮ ಪುತ್ರ ಅರುಣ್ ಸೋಮಣ್ಣ ಇಬ್ಬರಿಗೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸೋಮಣ್ಣನವರು ಪ್ರತಿನಿಧಿಸುವ ಗೋವಿಂದರಾಜನಗರ, ಅವರ ಮಗ ಬಯಸಿದ್ದ ರಾಜಾಜಿನಗರ ಅಥವಾ ಹನೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಇಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಲ್ಲಿಗೆ ಸೋಮಣ್ಣನವರು ಕಾಂಗ್ರೆಸ್ ಸೇರುವ ಚರ್ಚೆ ಕೊನೆಗೊಂಡಿದೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮಾಜಿ ಶಾಸಕ ಪ್ರಿಯಾಕೃಷ್ಣರವರ ಹೆಸರನ್ನು ಅಂತಿಮಗೊಳಿಸಿದೆ. ರಾಜಾಜಿನಗರಕ್ಕೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಪುಟ್ಟಣ್ಣನವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಅಲ್ಲದೆ ಹನೂರು ಕ್ಷೇತ್ರಕ್ಕೆ ಆರ್.ನರೇಂದ್ರ ಮತ್ತು ಚಾಮರಾಜನಗರ ಕ್ಷೇತ್ರಕ್ಕೆ ಸಿ.ಪುಟ್ಟರಂಗಶೆಟ್ಟಿಯವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ.
ಇನ್ನು ಕೆ.ಆರ್ ಪೇಟೆ ಶಾಸಕರಾಗಿರುವ ಸಚಿವ ನಾರಾಯಣ ಗೌಡರವರು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾರ್ಯಕರ್ತರು ಬಿಟ್ಟಿಲ್ಲ. ಅಲ್ಲದೆ ಅಲ್ಲಿ ಜೆಡಿಎಸ್ ಟಿಕೆಟ್ ವಂಚಿತ ಬಿ.ಎಲ್ ದೇವರಾಜುರವರು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗಿದೆ. ಈ ನಡುವೆ ಬಿ.ಎಸ್ ಯಡಿಯೂರಪ್ಪ ಹಾಗೂ ಅಮಿತ್ ಶಾ ನಡೆಸಿದ ರಾಜಿ ಸಂಧಾನದಿಂದ ಅವರು ಪಕ್ಷ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಗುರುಮಿಠಕಲ್ ಕ್ಷೇತ್ರದಲ್ಲಿ ಬಿಜೆಪಿಯು ಬಾಬುರಾವ್ ಚಿಂಚನಸೂರು ಅವರಿಗೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬಾಬುರಾವ್ ಚಿಂಚನಸೂರು ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಆಗಿಲ್ಲ.
ಇದನ್ನೂ ಓದಿ: ಕಾಂಗ್ರೆಸ್ ಮೊದಲ ಪಟ್ಟಿ: ಮುಸ್ಲಿಂ ಸಮುದಾಯದ 8 ಮಂದಿಗೆ, 6 ಮಹಿಳೆಯರಿಗೆ ಟಿಕೆಟ್


