ಕಾಂಗ್ರೆಸ್ ಪಾನ್ ಇಂಡಿಯಾ ವ್ಯಾಪ್ತಿಯ ಪಕ್ಷವಾಗಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧದ ಒಕ್ಕೂಟ ರಚನೆಯಲ್ಲಿ ಕಾಂಗ್ರೆಸ್ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅನುಪಸ್ಥಿತಿಯಿಂದ ಬಿಜೆಪಿ ವಿರುದ್ಧದ ಒಕ್ಕೂಟಗಳು ದುರ್ಬಲವಾಗಲಿವೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ದೇಶದಲ್ಲಿ 200 ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ನೇರವಾಗಿ ಸ್ಪರ್ಧಿಸುವ ಶಕ್ತಿಯನ್ನು ಹೊಂದಿದೆ. ಇತರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸ್ಥಳೀಯ ಪಕ್ಷಗಳು ಈ ವಿಷಯವನ್ನು ಮರೆಯಬಾರದು ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಶರದ್ ಪವಾರ್ ನಿವಾಸದಲ್ಲಿ ನಡೆದ ಸ್ಥಳೀಯ ಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ತಮಗೆ ಮಾಹಿತಿಯಿಲ್ಲ ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಸಮಾನ ಮನಸ್ಕವಾದ ಎಲ್ಲಾ ಪಕ್ಷಗಳು ಒಂದು ಸಾಮಾನ್ಯ ಪ್ರಣಾಳಿಕೆಯ ಮೂಲಕ ಒಟ್ಟಾಗಿ ಬಿಜೆಪಿಯ ವಿರುದ್ಧ ಹೋರಾಟವನ್ನು ನಡೆಸುವ ಅಗತ್ಯವಿದೆ ಎಂದು ತೇಜಸ್ವಿ ಯಾದವ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಇತರ ಸ್ಥಳೀಯ ಪಕ್ಷಗಳ ನೇತೃತ್ವದ ಸಭೆಯಲ್ಲಿ ಭಾಗವಹಿಸಬೇಕೆಂದು ಬಯಸುವುದರಲ್ಲಿ ಅರ್ಥವಿಲ್ಲ. ವಿರೋಧ ಪಕ್ಷಗಳ ರಾಷ್ಟ್ರೀಯ ಮಟ್ಟದ ಒಕ್ಕೂಟದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವನ್ನು ಹೊಂದಿದೆ. ಇತರ ಸ್ಥಳೀಯ ಪಕ್ಷಗಳು ರಾಷ್ಟ್ರ ರಾಜಕಾರಣದ ಸಂದರ್ಭದಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ನಾಯಕತ್ವವನ್ನು ಒಪ್ಪಿಕೊಳ್ಳುವುದು ಪ್ರಸ್ತುತ ಸಂದರ್ಭಕ್ಕೆ ಸೂಕ್ತವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
2014 ರ ಲೋಕಸಭೆ ಚುನಾವಣೆ ದೇಶ ಒಗ್ಗಟ್ಟಾಗಿ ಉಳಿಯುತ್ತದೆಯೇ ಅಥವಾ ವಿಭಜನೆಯಾಗುತ್ತದೆಯೇ ಎಂದು ನಿರ್ಧರಿಸುವ ಚುನಾವಣೆ ಎಂದು ನಮ್ಮ ನಾಯಕರಾದ ಲಾಲು ಪ್ರಸಾದ್ ಯಾದವ್ 2014 ರಲ್ಲಿ ಹೆಳಿದ್ದರು. ಬಹುತೇಕರಿಗೆ ಇಂದು ಅದು ಅರ್ಥವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ಅನುಭವಗಳ ಪ್ರಕಾರ ತನ್ನ ಪ್ರಾಬಲ್ಯವಿರುವ 200 ಕ್ಷೇತ್ರಗಳ ಕಡೆಗೆ ಮಾತ್ರ ಕಾಂಗ್ರೆಸ್ ಗಮನ ಹರಿಸುತ್ತದೆ. ವಿಶಾಲ ಹೃದಯದಿಂದ ಉಳಿದ ಕ್ಷೇತ್ರಗಳನ್ನು ಸ್ಥಳೀಯವಾಗಿ ಪ್ರಬಲವಾಗಿರುವ ಪಕ್ಷಗಳಿಗೆ ಕಾಂಗ್ರೆಸ್ ಬಿಟ್ಟುಕೊಡಲು ಮುಂದಾಗಬೇಕು ಎಂದು ಆರ್‌ಜೆಡಿ ನಾಯಕ ತೇಜಸ್ವಿಯಾದವ್ ಮುಂದಿನ ಲೋಕಸಭಾ ಚುನಾವಣಾ ತಂತ್ರಗಳ ಕುರಿತು ಮಾತನಾಡಿದ್ದಾರೆ.
ಶಿವಸೇನೆಯ ಸಂಸದ ಸಂಜಯ್ ರಾವತ್ ಕೂಡ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಬಿಜೆಪಿ ವಿರುದ್ಧದ ಮೈತ್ರಿಕೂಟಕ್ಕೆ ಹೆಚ್ಚಿನ ಮಹತ್ವವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರೆ, ಕಾಂಗ್ರೆಸ್ ಹೊರತಾದ ಮೈತ್ರಿಕೂಟದ ರಚನೆಯ ಪ್ರಶ್ನೆ ತಮ್ಮ ಮುಂದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ ಕೂಡ ಸ್ಪಷ್ಟಪಡಿಸಿದ್ದಾರೆ. ತೇಜಸ್ವಿ ಯಾದವ್ ಹೇಳಿಕೆಯಿಂದ ಕಾಂಗ್ರೆಸ್ ಜೊತೆಗಿನ ವಿರೋಧ ಪಕ್ಷಗಳ ಒಕ್ಕೂಟದ ರಚನೆಯ ಚರ್ಚೆಗೆ ಮತ್ತೆ ಜೀವ ಬಂದಿದ್ದು ಕಾಂಗ್ರೆಸ್ ಯಾವ ರೀತಿಯಲ್ಲಿ ಈ ಚರ್ಚೆಗಳಿಗೆ ಸ್ಪಂದಿಸುತ್ತದೆ ಎಂಬುದು ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಜಮ್ಮು ವಾಯುಪಡೆ ವಿಮಾನ ನಿಲ್ಧಾಣದ ಮೇಲೆ ಡ್ರೋಣ್ ದಾಳಿ: ಭಾರತದ ಭದ್ರತಾ ವ್ಯವಸ್ಥೆಗೆ ಹೆಚ್ಚಿದ ಆತಂಕ



ತೇಜಸ್ವಿ ಯಾದವ್ ಅವರು ಹೇಳಿದ ಮಾತು ನಿಜಕ್ಕೂ ಶ್ಲಾಘನೀಯ ಮತ್ತು ಸತ್ಯವಾಗಿದೆ.ಉಳಿದ ಪಕ್ಷಗಳು ತಮ್ಮ ಸ್ವಾರ್ಥ ಬಿಟ್ಟು ಒಂದಾಗಿ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು.ಇಲ್ಲ ಅಂದ್ರೆ ಯಾವುದೇ ಚಿಂತನೆ ಫೇಲ್
ತೇಜಸ್ವಿ ಯಾದವ್ ಅವರ ಅಭಿಪ್ರಾಯ ಸರಿಯಾಗಿದೆ. ಎಲ್ಲಾ ವಿರೋಧ ಪಕ್ಷಗಳೂ ಒಂದಾದಾಗ ಮಾತ್ರ ಮನುವಾದಿಗಳನ್ನು ಸೋಲಿಸಬಹುದು.