ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಮಾರ್ಚ್ 7 ರಂದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ನಾಯಕರನ್ನು ಈ ಪ್ರಕ್ರಿಯೆಯ ವಿರುದ್ಧ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ಕರೆ ನೀಡಿದ್ದರು. ಕ್ಷೇತ್ರ ಪುನರ್‌ವಿಂಗಡನೆ
ಡಿಎಂಕೆಯ ಮುಖ್ಯಸ್ಥರೂ ಆಗಿರುವ ಸ್ಟಾಲಿನ್ ಅವರು ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿರುವ ಸಮಿತಿಯ ಮೊದಲ ಸಭೆಯಲ್ಲಿ ಏಳು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸೇರುವಂತೆ ಒತ್ತಾಯಿಸಿದ್ದಾರೆ. ಶುಕ್ರವಾರದಂದು ತಮಿಳುನಾಡಿನ ಐಟಿ ಮತ್ತು ಡಿಜಿಟಲ್ ಸೇವೆಗಳ ಸಚಿವ ಪಳನಿವೇಲ್ ತ್ಯಾಗರಾಜನ್ ಮತ್ತು ದಕ್ಷಿಣ ಚೆನ್ನೈ ಸಂಸದ ತಮಿಝಾಚಿ ತಂಗಪಾಂಡ್ಯನ್ ಅವರು ತಮ್ಮನ್ನು ಭೇಟಿ ಮಾಡಿರುವುದಾಗಿ ಪಿಣರಾಯಿ ವಿಜಯನ್ ಹೇಳಿದ್ದು, ಅವರು ಸಮಿತಿ ಸಭೆಗೆ ತಮ್ಮನ್ನು ಆಹ್ವಾನಿಸಿದ್ದಾಗಿ ಹೇಳಿದ್ದಾರೆ.
“ಈ ಪ್ರಮುಖ ವಿಷಯದ ಬಗ್ಗೆ ಒಗ್ಗಟ್ಟಿನಿಂದ ನಿಲ್ಲಿರಿ” ಎಂದು ಸಿಎಂ ಪಿಣರಾಯಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಕರೆ ನೀಡಿದ್ದಾರೆ. ಕ್ಷೇತ್ರ ಪುನರ್‌ವಿಂಗಡನೆ
“ರಾಜ್ಯಗಳೊಂದಿಗೆ ಒಮ್ಮತಕ್ಕೆ ಬಂದ ನಂತರ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡನೆ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧರಾಗಿರಬೇಕು. ಯಾವುದೇ ರಾಜ್ಯದ ಕ್ಷೇತ್ರಗಳ ಅನುಪಾತದ ಪಾಲನ್ನು ಕಡಿಮೆ ಮಾಡದೆ ಇದನ್ನು ಕೈಗೊಳ್ಳಬೇಕು.” ಎಂದು ಸಿಎಂ ಪಿಣರಾಯಿ ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಕೇಂದ್ರ ಸರ್ಕಾರಗಳು ಪರಿಚಯಿಸಿದ ಕುಟುಂಬ ಯೋಜನಾ ನೀತಿಗಳಿಗೆ ಅನುಗುಣವಾಗಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ದಂಡ ವಿಧಿಸಬಾರದು ಎಂದು ಅವರು ಹೇಳಿದ್ದಾರೆ. “ಕೇಂದ್ರ ಸರ್ಕಾರದ ಈ ನಡೆಯು ಇಂತಹ ಕ್ರಮವುಗಳಲ್ಲಿ ವಿಫಲವಾದ ರಾಜ್ಯಗಳಿಗೆ ಬಹುಮಾನ ನೀಡಿದಂತೆ” ಎಂದು ಅವರು ಹೇಳಿದ್ದಾರೆ.
ದಕ್ಷಿಣ ರಾಜ್ಯಗಳು ಅನುಪಾತದ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಪಾಲನ್ನು ಪಡೆಯುತ್ತವೆ ಎಂಬ ಕೇಂದ್ರ ಸರ್ಕಾರದ ವಾದಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಪಿಣರಾಯಿ ವಿಜಯನ್ ಇದೇ ವೇಳೆ ಹೇಳಿದ್ದಾರೆ.
ಜಂಟಿ ಕ್ರಿಯಾ ಸಮಿತಿಗೆ ಸೇರುವಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸ್ಟಾಲಿನ್ ಬರೆದ ಪತ್ರದಲ್ಲಿ, ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡನೆಯ ಪ್ರಕ್ರಿಯೆಯನ್ನು “ಫೆಡರಲಿಸಂ ಮೇಲಿನ ಸ್ಪಷ್ಟ ದಾಳಿ” ಎಂದು ಕರೆದಿದ್ದಾರೆ. “ಭಾರತದ ಪ್ರಜಾಪ್ರಭುತ್ವದ ಸಾರವು ಅದರ ಫೆಡರಲ್ ಸ್ವರೂಪದ ಮೇಲೆ ನಿಂತಿದೆ. ಒಂದು ರಾಷ್ಟ್ರವಾಗಿ ನಮ್ಮ ಪವಿತ್ರ ಏಕತೆಯನ್ನು ಗೌರವಿಸುತ್ತಲೆ ಪ್ರತಿಯೊಂದು ರಾಜ್ಯಕ್ಕೂ ಅದರ ಸರಿಯಾದ ಧ್ವನಿಯನ್ನು ಎತ್ತಿಹಿಡಿಯುವ ವ್ಯವಸ್ಥೆ ಇದಾಗಿದೆ” ಎಂದು ಅವರು ಹೇಳಿದ್ದಾರೆ.
ಗುರುವಾರದಂದು ಸ್ಟಾಲಿನ್ ಅವರು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಅಲ್ಲಿನ ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿ ನಾಯಕರನ್ನು ಸಮಿತಿ ಸಭೆಗೆ ಆಹ್ವಾನಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅವರು ಸಭೆಯಲ್ಲಿ ಭಾಗವಹಿಸಲು “ತಾತ್ವಿಕವಾಗಿ” ಒಪ್ಪಿಕೊಂಡಿದ್ದರೂ, ಪಕ್ಷದ ನಾಯಕತ್ವದಿಂದ ಅನುಮತಿ ಪಡೆಯುವುದಾಗಿ ಕಾಂಗ್ರೆಸ್‌ನ ರೆಡ್ಡಿ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದೇ ವೇಳೆ ಭಾರತ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಜೊತೆಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಭೆಗೆ ಹಾಜರಾಗುವಂತೆ ಕೇಳಿಕೊಂಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗದಗ: ಹೋಳಿಯಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ; ಉಸಿರಾಟದ ತೊಂದರೆಯಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು
ಗದಗ: ಹೋಳಿಯಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ; ಉಸಿರಾಟದ ತೊಂದರೆಯಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

