ಚುನಾವಣಾ ಆಯೋಗ ಕೇಂದ್ರದಲ್ಲಿರುವ ‘ಅಪಾಯಕಾರಿ’ ನರೇಂದ್ರ ಮೋದಿ ಸರ್ಕಾರದ ‘ಏಜೆಂಟ್’ನಂತೆ ವರ್ತಿಸುತ್ತಿದೆ. ಈ ಮೂಲಕ ಸಂವಿಧಾನ ಮತ್ತು ಜನರ ಮತದಾನದ ಹಕ್ಕಿಗೆ ‘ಬೆದರಿಕೆ’ ಒಡ್ಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ (ಆ.17) ಹೇಳಿದರು.
ಬಿಹಾರದ ಸಸರಾಮ್‌ನಲ್ಲಿ ನಡೆದ ರಾಹುಲ್ ಗಾಂಧಿ ನೇತೃತ್ವದ 16 ದಿನಗಳ ‘ವೋಟರ್ ಅಧಿಕಾರ್ ಯಾತ್ರೆ’ಯ ಚಾಲನಾ ಕಾರ್ಯಕ್ರಮದಲ್ಲಿ ಜನರು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿರುವವರೆಗೆ ಸಂವಿಧಾನ ಅಪಾಯದಲ್ಲಿರುತ್ತದೆ. ಈ ಸರ್ಕಾರ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ನಡೆದು ಕೆಲ ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಈ ಅವಧಿಯಲ್ಲಿ 1 ಕೋಟಿ ಹೊಸ ಮತದಾರರ ಹೆಸರುಗಳನ್ನು ಸೇರಿಸಲಾಗಿದೆ ಎಂದು ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಖರ್ಗೆ ಅವರು, “ಎಲ್ಲರೂ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಮತ ಚಲಾಯಿಸಿದಂತೆ ಕಾಣುತ್ತದೆ” ಎಂದರು.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಮೊದಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯೊಂದಿಗೆ ಬಿಹಾರದಲ್ಲಿ ಇದೇ ರೀತಿಯ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದ ಖರ್ಗೆ ಅವರು, “ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಏಜೆಂಟ್ ಆಗಿ ಮಾರ್ಪಟ್ಟಿದೆ” ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗವು ತನ್ನ ಮಾತಿಗೆ ವಿಧೇಯರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಮೋದಿ ಸರ್ಕಾರವು ಚುನಾವಣಾ ಆಯೋಗದ ಆಯ್ಕೆ ಸಮಿತಿಯಲ್ಲಿ ಕೇಂದ್ರ ಸಚಿವರು ಇರಬೇಕೆಂದು ನಿರ್ಧರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಸೇರಿಸಿಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್‌ನ ಸಲಹೆಯನ್ನು ನಿರ್ಲಕ್ಷಿಸಿದೆ ಎಂದು ಖರ್ಗೆ ಆರೋಪಿಸಿದರು.
ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪು ಕೋಟೆ ಮೇಲೆ ನಿಂತು, ದೇಶದ ಸ್ವಾತಂತ್ರ್ಯದ ಶ್ರೇಯಸ್ಸು ಆರ್‌ಎಸ್‌ಎಸ್‌ಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕರು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗಾಗಿ ಕೆಲಸ ಮಾಡಿದ್ದರು. ಬ್ರಿಟಿಷರಿಗೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕ್ಷಮೆಯಂತಹ ಕೃಪೆಗಳನ್ನು ಬಯಸುತ್ತಿದ್ದರು ಎಂದು ಖರ್ಗೆ ಹೇಳಿದರು.
ತಮ್ಮ ತಾಯ್ನಾಡಿಗಾಗಿ ರಕ್ತ, ಬೆವರು ಮತ್ತು ಕಣ್ಣೀರು ಸುರಿಸಿದ್ದ ದೇಶದ ಸ್ವಾತಂತ್ರ್ಯ ಹೋರಾಟಗಾರರು, ನರೇಂದ್ರ ಮೋದಿಯವರ ಮಾತು ಕೇಳಿ ತಮ್ಮ ಸಮಾಧಿಯಲ್ಲೇ ನೋವು ಪಡುತ್ತಿರಬಹುದು. ಮೋದಿ ತುಂಬಾ ಅಪಾಯಕಾರಿ ವ್ಯಕ್ತಿ ಎಂದು ತೋರುತ್ತದೆ. ಅವರು ಸಂವಿಧಾನ ಮತ್ತು ಅದರಲ್ಲಿ ಪ್ರತಿಪಾದಿಸಲಾದ ಮತದಾನದ ಹಕ್ಕಿಗೆ ಅಪಾಯ ಉಂಟು ಮಾಡುತ್ತಿದ್ದಾರೆ. ಅವರನ್ನು ಸಿಂಹಾಸನದಿಂದ ಕೆಳಗಿಳಿಸುವ ಮೂಲಕ ಈ ಹಕ್ಕುಗಳನ್ನು ರಕ್ಷಿಸುವುದು ಜನರ ಕರ್ತವ್ಯ. 1942ರ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ವೀರಾವೇಶದಿಂದ ಹೋರಾಡಿದ ಬಿಹಾರದ ಜನರು ಈ ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುತ್ತಾರೆ ಎಂದು ನನಗೆ ಭರವಸೆ ಇದೆ ಎಂದರು.
ಆರ್‌ಎಸ್‌ಎಸ್ ಯಾವಾಗಲೂ ಪ್ರಜಾಪ್ರಭುತ್ವವನ್ನು ವಿರೋಧಿಸುತ್ತದೆ. ಅದು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ಪರಿಚಯಿಸಿದ್ದಕ್ಕಾಗಿ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಟೀಕಿಸಿತ್ತು. ಸಬಲೀಕರಣಗೊಳಿಸುತ್ತಿದ್ದ ಮಹಿಳೆಯರು ಒಂದು ದಿನ ನೆಹರು ವಿರುದ್ಧ ತಿರುಗಿ ಬಿದ್ದು ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಆರ್‌ಎಸ್‌ಎಸ್‌ನವರು ಅಪಹಾಸ್ಯ ಮಾಡಿದ್ದರು. ಆ ಮನಸ್ಥಿತಿ ಇಂದಿಗೂ ಅವರಲ್ಲಿ ಚಾಲ್ತಿಯಲ್ಲಿದೆ” ಎಂದು ಹೇಳಿದರು.
ಬಿಹಾರದ ಸಿಎಂ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರವನ್ನು ಟೀಕಿಸಿದ ಖರ್ಗೆ, ಸರ್ಕಾರವನ್ನು ‘ಕುರುಡರು’ ಮತ್ತು ‘ಕಿವುಡರಂತೆ’ ಕಾಣುವ ಜನರು ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ಮತಗಳ್ಳತನ’ ಆರೋಪಕ್ಕೆ ವಾರದೊಳಗೆ ಪ್ರಮಾಣಪತ್ರ ಸಲ್ಲಿಸಿ: ರಾಹುಲ್ ಗಾಂಧಿಗೆ ಹೇಳಿದ ಚುನಾವಣಾ ಆಯೋಗ


