ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲು ರಾಜ್ಯದ ದಲಿತ ಸಂಘಟನೆಗಳು ಮುಂದಾಗಿವೆ.
ಇಂದು (ಜ.18) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಪ್ರಮುಖರು, “ಜನವರಿ 23ರಂದು ಗುರುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. 20 ರಿಂದ 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ದಲಿತ ಸಂಘಟನೆಗಳು ಪ್ರತಿಭಟನಾ ರ್‍ಯಾಲಿ ನಡೆಸಲು ಮುಂದಾಗಿವೆ. ಅವುಗಳು ಹೀಗಿವೆ.. (ಪ್ರೆಸ್ ನೋಟ್‌ನಲ್ಲಿದ್ದಂತೆ)
- ಗೃಹಮಂತ್ರಿ ಅಮಿತ್ ಶಾ ಸಂಪುಟದಿಂದ ವಜಾ ಆಗಬೇಕು ಮತ್ತು ಅವರು ಮಾಡಿದ ತಪ್ಪಿಗಾಗಿ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ.
- ಅಹಿಂದ ಸಮುದಾಯಗಳ ಸರ್ವೋಚ್ಚ ನಾಯಕ ಹಾಗೂ ಜನಪ್ರಿಯ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಸ್ವಾಭಿಮಾನಿ ದಲಿತ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ತೇಜೋವಧೆ ಮಾಡಲು ಯತ್ನಿಸುತ್ತಿರುವ ಬಿಜೆಪಿ ತನ್ನ ಕುತಂತ್ರಗಳನ್ನು ಕೂಡಲೇ ನಿಲ್ಲಿಸಬೇಕು.
- ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಕಾಂತರಾಜು ಆಯೋಗದ ಜಾತಿ ಜನಗಣತಿ ವರದಿಯನ್ನು ಯಾವುದೇ ನೆಪ ಹೇಳದೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಡ್ಡಾಯವಾಗಿ ಮಂಡಿಸಿ, ಅನುಷ್ಠಾನಗೊಳಿಸಬೇಕು.
- ದಲಿತ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಕೂಡಲೇ ದಲಿತ ಸಂಘಟನೆಗಳ ಸಭೆಯನ್ನು ಕರೆಯಬೇಕು.
2014ರಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಇಡೀ ದೇಶವನ್ನು ಹಿಂಚಲನೆಗೆ ದೂಡಲಾಗಿದೆ. ಚಾತುರ್ವರ್ಣ ವೈದಿಕ ಸಿದ್ದಾಂತದ ಪ್ರತಿಪಾದಕರಾದ ಮೋದಿ ಮತ್ತು ಅಮಿತ್ ಶಾ ಸಾಂವಿಧಾನಿಕವಾಗಿ ಮತ್ತು ಪ್ರಜಾಸತಾತ್ಮಕವಾಗಿ ಆಡಳಿತ ನಡೆಸದೆ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ ಬಳಸಿಕೊಂಡು ಇಡೀ ದೇಶವನ್ನು ಭಯ ಮತ್ತು ತಲ್ಲಣಗಳಿಗೆ ದೂಡಿದ್ದಾರೆ. ಎಲ್ಲಾ ಪ್ರಜಾಸತಾತ್ಮಕ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು, ಮೌಲ್ಯಗಳನ್ನು ನಾಶ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಸುಳ್ಳು ಮೊಕದ್ದಮೆಗಳನ್ನು ಹೂಡಿ ಕಾನೂನನ್ನು ದುರುಪಯೋಗಪಡಿಸಿಕೊಂಡು ಅವರನ್ನೆಲ್ಲ ಜೈಲಿಗೆ ತಳ್ಳಲಾಗುತ್ತಿದೆ. ಇಲ್ಲವೇ ಬೆದರಿಸಿ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜ್ ಮತ್ತು ಜೀವನಹಳ್ಳ ವೆಂಕಟೇಶ್ ಇದ್ದರು.
ಇದನ್ನೂ ಓದಿ : ಮುಖ್ಯವಾಹಿನಿಗೆ ಬಂದ 6 ನಕ್ಸಲರನ್ನು ವಶಕ್ಕೆ ಪಡೆದ ಪೊಲೀಸರು : ಚಿಕ್ಕಮಗಳೂರಿನಲ್ಲಿ ವಿಚಾರಣೆ


