ಬೆಂಗಳೂರು-ಮೈಸೂರು ನಡುವೆ ನಿರ್ಮಾಣವಾಗುತ್ತಿರುವ 10 ಲೈನ್‌ಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಸಾಗುತ್ತಿದೆ. ಮೊದಲಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಗೊಂದಲಗಳಿಂದ ತಡವಾದ ರಸ್ತೆ ಕಾಮಗಾರಿಯ ಆರಂಭ, ಈಗ ಕೊರೋನಾ ಲಾಕ್‌ಡೌನ್ ಕಾರಣದಿಂದ ಇನ್ನಷ್ಟು ವಿಳಂಬಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2018 ರಲ್ಲಿ ಕಾಮಗಾರಿ ಆರಂಭಿಸಿ 30 ತಿಂಗಳಲ್ಲಿ ಅಂತ್ಯಗೊಳಿಸಬೇಕೆಂದು ಗಡುವು ಹಾಕಿಕೊಂಡಿತ್ತು. ಆರಂಭದಲ್ಲಿ ಭೂಮಿ ವರ್ಗಾವಣೆ, ಭೂ ವಂಚಿತರಿಗೆ ಪರಿಹಾರ, ಕಾನೂನು ವ್ಯಾಜ್ಯ ಸೇರಿ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಸಾಗುತ್ತಿತ್ತು. ರಸ್ತೆ ಕಾರ್ಯ ಆರಂಭವಾದ ಮೇಲೆ ಕೊರೋನಾ ಕಾರಣದಿಂದ ಬೆಂಗಳೂರು ಮೈಸೂರು 10 ಲೈನ್ ಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಇನ್ನಷ್ಟು ವಿಳಂಬವಾಗುತ್ತಿದೆ.
ಕೇಂದ್ರ ಸರ್ಕಾರದ ಮಾರ್ಗ ಸೂಚಿಯ ಪ್ರಕಾರ ಬೆಂಗಳೂರಿನ ನೈಸ್ ರಸ್ತೆಯಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗಿನ 116 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯು 2021 ರ ಕೊನೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಬೆಂಗಳೂರು ಮೈಸೂರಿನ ನಡುವೆ ಓಡಾಟದ ಅವಧಿಯನ್ನು 90 ನಿಮಿಷಕ್ಕೆ ಇಳಿಸಲಾಗುತ್ತದೆ ಎನ್ನುವ ಈ ರಾಷ್ಟ್ರೀಯ ಹೆದ್ದಾರಿ ಕಾರ್ಯ ಸದ್ಯ ಕುಂಟುತ್ತ ಸಾಗುತ್ತಿದೆ.
ಬೆಂಗಳೂರಿನಿಂದ ಮದ್ದೂರು ಸಮೀಪದ ನಿಡಘಟ್ಟ(56.2km), ನಿಡಘಟ್ಟದಿಂದ ಮೈಸೂರಿಗೆ (60 km) ಹೀಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (NH275) ಯ ಕಾಮಗಾರಿಯನ್ನು ಎರಡು ಹಂತದಲ್ಲಿ ವಿಭಾಗಿಸಲಾಗಿದೆ. 7400 ಕೋಟಿ ಅಂದಾಜು ವೆಚ್ಚದ ಈ ರಸ್ತೆ ಕಾಮಗಾರಿಯ ಎರಡೂ ಹಂತಗಳ ಕಾಮಗಾರಿಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. 9 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು, ರಸ್ತೆ ಸೇತುವೆಗಳನ್ನೊಳಗೊಂಡ ಈ ಮಾರ್ಗದಲ್ಲಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀ ರಂಗಪಟ್ಟಣದಲ್ಲಿ ಬೈ ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ರಸ್ತೆ ನಿರ್ಮಾಣ ಯೋಜನೆಯ ಡೆಡ್‌ಲೈನ್ ಮಾತ್ರ ಮೇಲಿಂದ ಮೇಲೆ ಮುಂದಕ್ಕೆ ಹೋಗುತ್ತಲೇ ಇದೆ. ರಸ್ತೆ ನಿರ್ಮಾಣ ನಡೆಯುತ್ತಿರುವ ಕಾರಣದಿಂದ ಈಗಿರುವ ರಸ್ತೆಯಲ್ಲಿ ಸಹ ಹೆಚ್ಚಿನ ವಾಹನ ದಟ್ಟಣೆ ಸಂಭವಿಸುತ್ತಿದೆ. ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಈ ವರ್ಷಾಂತ್ಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಮುಂದಾದರೆ ಬೆಂಗಳೂರು ಮೈಸೂರು ಮಧ್ಯೆ ದಿನ ನಿತ್ಯ ಓಡಾಡುವ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಇದನ್ನೂ ಓದಿ : ಬಿಜೆಪಿ ಬಿಟ್ಟು ಮತ್ತೆ ಟಿಎಂಸಿ ಸೇರಲಿರುವ ಮುಕುಲ್ ರಾಯ್: ಮತ್ತಷ್ಟು ಜನ ಬರಲಿದ್ದಾರೆ ಎಂದ ಮಮತಾ ಬ್ಯಾನರ್ಜಿ


