ಕೆಎಫ್‌ಸಿ ಸಂಸ್ಥೆ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕನ್ನಡಿಗರು ನಡೆಸುತ್ತಿರುವ ಅಭಿಯಾನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಮಂಗಳವಾರ ಹುಬ್ಬಳ್ಳಿಯ ಕೆಎಫ್‌ಸಿ ಮಳಿಗೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಿಗ್ಬಂಧನ ಹೂಡಿದರು.
ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ, ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ್ ಹಳವದ ಅವರ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳು ಕೆಎಫ್‌ಸಿ ಮಳಿಗೆಗೆ ಮುತ್ತಿಗೆ ಹಾಕಿ, ಅಲ್ಲಿನ ಸಿಬ್ಬಂದಿಗೆ ಕನ್ನಡದ ಪಾಠ ಹೇಳಿದರು.
ಕೆಎಫ್‌ಸಿ ಮಳಿಗೆಗಳಲ್ಲಿ ಸಂಪೂರ್ಣ ಕನ್ನಡವನ್ನೇ ಬಳಸಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಎಲ್ಲ ನಾಮಫಲಕಗಳೂ ಕನ್ನಡದಲ್ಲಿ ಇರಬೇಕು, ಕನ್ನಡದ ಹಾಡುಗಳನ್ನು ಹಾಕಬೇಕು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತಿದ್ದೇವೆ ಎಂದು ಕರವೇ ರಾಜ್ಯ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ ಎಚ್ಚರಿಕೆ ನೀಡಿದರು.
ರಾಜ್ಯೋತ್ಸವಕ್ಕೆ ಮುನ್ನ ಕೆಎಫ್‌ಸಿ ಕನ್ನಡೀಕರಣವಾಗಬೇಕು. ಬೆಂಗಳೂರಿನ ಇಂದಿರಾನಗರ ಕೆಎಫ್‌ಸಿ ಮಾಲ್‌ನಲ್ಲಿ ಕನ್ನಡಿಗರ ವಿರುದ್ಧ ಮಾತಾಡಿದ್ದಕ್ಕೆ ಸಂಸ್ಥೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರವೇ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಆಗ ಆಗುವ ಅನಾಹುತಗಳಿಗೆ ಕೆಎಫ್‌ಸಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕರವೇ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಎಚ್ಚರಿಕೆ ನೀಡಿದರು.
ಕನ್ನಡವನ್ನು ಅಪಮಾನಿಸಿದ ಕೆಎಫ್‌ಸಿ ವಿರುದ್ಧ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು ಭಾನುವಾರ #RejectKFC #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್‌ಗಳು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆಗಿದ್ದವು. ಸೋಮವಾರ ದಾವಣಗೆರೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡರ ನೇತೃತ್ವದಲ್ಲಿ ಕೆಎಫ್‌ಸಿ ಮುಂಭಾಗ ಪ್ರತಿಭಟನೆ ನಡೆದಿತ್ತು.
Dear @kfc @KFC_India, This is India, Not Hindhia…#KFCಕನ್ನಡಬೇಕು#RejectKFC https://t.co/O4S6YKmTvw
— Ganesh Kodlady (@GaneshShetru) October 24, 2021
Dear @kfc Use Kannada in Karnataka.Give respect on local language.. #kfcಕನ್ನಡಬೇಕು #RejectKFC pic.twitter.com/krK1ClIXI4
— Basavaraj karajol (@basavaraj4848) October 24, 2021
I support this hashtag strongly. It's time to show the power of Tamils. Let's united for our rights guys. #RejectKFC pic.twitter.com/oqo72rTiDQ
— AB (@AjayAb28489674) October 24, 2021
ಇದನ್ನೂ ಓದಿರಿ: ವಾರದೊಳಗೆ ಎಲ್ಲಾ ಕೆಎಫ್‌ಸಿ ಮಳಿಗೆಗಳಲ್ಲಿ ಕನ್ನಡವಿರಲಿ: ಕರವೇ ತಾಕೀತು
ಮಂಗಳವಾರ ಕರವೇ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಹುಬ್ಬಳ್ಳಿ ಗೋಕುಲ ರೋಡ್ ಕೆ.ಎಫ್.ಸಿ ಮಳಿಗೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ, ಕರವೇ ರಾಜ್ಯ ಪದವೀಧರ ಘಟಕದ ಕಾರ್ಯದರ್ಶಿ ಪ್ರಭುಗೌಡ ಸಖ್ಯಾಗೌಡಶಾನಿ, ಯುವ ಘಟಕ ಜಿಲ್ಲಾ ಧ್ಯಕ್ಷರಾದ ಸಾಗರ್ ಗಾಯಕವಾಡ, ರೈತ ಘಟಕ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಗುರಪ್ಪ ಹಳ್ಯಾಳ, ಹುಬ್ಬಳ್ಳಿ ತಾಲೂಕ ಯುವ ಘಟಕ ಅಧ್ಯಕ್ಷರಾದ ಗಂಗು ಪಾಟೀಲ್, ಧಾರವಾಡ ನಗರ ಘಟಕ ಅಧ್ಯಕ್ಷರಾದ ಮಲಿಕರೀಯಾಜ ಕಂಬಾರಗಣವಿ, ಧಾರವಾಡ ತಾಲ್ಲೂಕ ಉಪಾಧ್ಯಕ್ಷರಾದ ಕಲ್ಮೇಶ ಸಾಲಿ ಇನ್ನಿತರರು ಪಾಲ್ಗೊಂಡರು.
ಕೆಎಫ್‌ಸಿ ತಿರಸ್ಕರಿಸಿ ಅಭಿಯಾನಕ್ಕೆ ತಮಿಳಿಗರ ಬೆಂಬಲ
“ನಮ್ಮ ರಾಷ್ಟ್ರಭಾಷೆ ಹಿಂದಿ, ನಮ್ಮ ಮಳಿಗೆಯಲ್ಲಿ ಕನ್ನಡದ ಹಾಡು ಹಾಕುವುದಿಲ್ಲ, ಹಿಂದಿಯನ್ನೇ ಹಾಕುತ್ತೇವೆ. ನೀವು ಏನೂ ಮಾಡಿಕೊಳ್ಳಲು ಆಗುವುದಿಲ್ಲ” ಎಂದು ದುರಹಂಕಾರ ಮೆರೆದ ಕೆಎಫ್‌ಸಿ ಸಂಸ್ಥೆ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು, ಕಳೆದ ಮೂರು ದಿನಗಳಿಂದ ನಡೆಯುತ್ತಿರುವ #RejectKFC ಅಭಿಯಾನಕ್ಕೆ ತಮಿಳುನಾಡಿನ ತಮಿಳು ಭಾಷಿಕರು ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ತಮಿಳರು ಭಾನುವಾರದಿಂದ #RejectKFC ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡುತ್ತಿದ್ದು, ಕೆಎಫ್‌ಸಿಯಂಥ ಸಂಸ್ಥೆಗಳು ಆಯಾ ರಾಜ್ಯದ ಭಾಷೆ, ಸಂಸ್ಕೃತಿಯನ್ನು ಗೌರವಿಸಬೇಕು, ಇಲ್ಲವಾದಲ್ಲಿ ಅಂಥವುಗಳನ್ನು ನಾವೇ ಧಿಕ್ಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಕನ್ನಡಿಗರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ.
ಸಣ್ಣಪುಟ್ಟ ವಿಷಯಗಳಿಗೆ ಸ್ಪಂದಿಸಿ ಉತ್ತರ ನೀಡುವ ಕೆಎಫ್‌ಸಿ, ಇದುವರೆಗೆ ಕನ್ನಡಿಗರ ಅಭಿಯಾನದ ಕುರಿತು ಮಾತನಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಒಂದುವಾರದ ಗಡುವು ನೀಡಿದ್ದು, ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದೆ.
ಮಂಗಳವಾರ ಬೆಂಗಳೂರಿನ ರಾಜಾಜಿನಗರದ ಕೆಎಫ್‌ಸಿ ಮಳಿಗೆಗೆ ಕರವೇ ಬೆಂಗಳೂರು ನಗರ ಉಪಾಧ್ಯಕ್ಷ ಕೆ.ಪಿ.ನರಸಿಂಹ ಅವರ ನೇತೃತ್ವದ ತಂಡ ಭೇಟಿ ನೀಡಿ, ಅಲ್ಲಿನ ಮೇಲ್ವಿಚಾರಕರಿಗೆ ಎಚ್ಚರಿಕೆಯ ಪತ್ರ ನೀಡಿತು.
ವಾರದ ಒಳಗೆ ಕೆಎಫ್‌ಸಿ ನಾಮಫಲಕಗಳು ಕನ್ನಡೀಕರಣಗೊಳ್ಳಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು, ಇಲ್ಲವಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತೀರಿ ಎಂದು ಕೆ.ಪಿ.ನರಸಿಂಹ ಎಚ್ಚರಿಸಿದರು.
ಕರವೇ ರಾಜಾಜಿನಗರ ಕ್ಷೇತ್ರ ಅಧ್ಯಕ್ಷರಾದ ಮಂಜುನಾಥ್, ಬಸವೇಶ್ವರನಗರ ಕ್ಷೇತ್ರ ಅಧ್ಯಕ್ಷರಾದ ಸಿದ್ಧರಾಜು, ಪ್ರಕಾಶನಗರ ವಾರ್ಡ್ ಉಪಾಧ್ಯಕ್ಷ ರವಿ, ಮುಖಂಡರಾದ ಗಂಗಣ್ಣ, ನಿರ್ಮೋಹ, ಲಕ್ಷ್ಮಿನಾರಾಯಣಪುರ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿರಿ: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವ: ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ಪಡೆದ ಕನ್ನಡದ ‘ನಾನು ಲೇಡಿಸ್’


