ಅದು 2017ರ ಜುಲೈ ತಿಂಗಳ ಬಿರು ಬೇಸಿಗೆಯ ಕಾಲ. ಹಸಿರುಹೊದ್ದ ಗಿಡಮರಗಳೂ ಬೇಸತ್ತುಹೋಗುವ ಕಾಲ. ಯಾವುದೋ ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದ ಗೌರಕ್ಕ(ಗೌರಿ ಲಂಕೇಶ್)ನಿಗೆ ಮುಖ್ಯವಾಗಿ ಜೆಎನ್ಯೂವಿನ ಅವಳ ಪುತ್ರರತ್ನರಾದ ಕನ್ಹಯ್ಯ ಕುಮಾರ್, ಅನಿರ್ಬಾನ್, ಉಮರ್ ಖಾಲಿದ್‌ರನ್ನು ಭೇಟಿಯಾಗುವುದಿತ್ತು. ಈಗಾಗಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ತಮ್ಮ ಚಳವಳಿಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದರು. ಗೌರಕ್ಕ ಅವರನ್ನು ಭೇಟಿಯಾಗಿ ಅವರ ಹೋರಾಟಗಳಿಗೆ ಶಕ್ತಿ ತುಂಬಲು ಅವರೊಂದಿಗೆ ಕೆಲ ಕಾಲ ಕಳೆಯಲು ಬಯಸಿದ್ದಳು. ಆಗ ಕನ್ನಡ ಪೀಠದ ಮುಖ್ಯಸ್ಥರಾಗಿದ್ದ ಡಾ. ಬಿಳಿಮಲೆ ಅವರೂ ಜೊತೆಗಿದ್ದುದರಿಂದ ಗೌರಿಯ ಆಗಮನ ನಮಗೆಲ್ಲ ಹೊಸ ಉತ್ಸಾಹವನ್ನು ತುಂಬಿತ್ತು. ಕಚೇರಿಗೆ ರಜೆ ಹಾಕಿ ನಾನೂ ಅವಳ ಜೊತೆಯಾಗಿದ್ದೆ ಇಡೀ ದಿನ; ಆದರೆ ಅವತ್ತು ಜೆಎನ್‌ಯುವಿನ ವಿದ್ಯಾರ್ಥಿಗಳೆಲ್ಲ ಯುಜಿಸಿ (University Grant Commission) ಮುಖ್ಯ ಕಚೇರಿಯ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರಿಂದ ನನಗೆ JNUನಲ್ಲಿ ಅವರು ನನಗೆ ಸಿಗಲಿಲ್ಲ.
2014ರಲ್ಲಿ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದನಂತರ JNUವಿನಂತಹ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ UGC ಧನಸಹಾಯದಲ್ಲಿ ಕಡಿಮೆಯಾಗಿದ್ದು, ಶುಲ್ಕ ಹೆಚ್ಚಳ ಹಾಗೂ ಆರ್ಥಿಕ ಕೊರತೆಗೆ ಕಾರಣವಾಗಿತ್ತು. ಇದಕ್ಕಿಂತ ಹೆಚ್ಚಾಗಿ ಜವಾಹರ್ ನೆಹರೂ ವಿಶ್ವವಿದ್ಯಾಲಯವು ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದ್ದು ಇದು ಜಾತ್ಯತೀತ, ಎಡಪಂಥೀಯ ರಾಜಕೀಯ (ಸಾಂಸ್ಕೃತಿಕ ರಾಜಕೀಯವನ್ನು ಒಳಗೊಂಡಂತೆ) ಮತ್ತು ವಿದ್ಯಾರ್ಥಿ ಚಳವಳಿಗೆ ಹೆಸರಾಗಿದೆ. ಆರೆಸ್ಸೆಸ್‌ನ ಬಲಪಂಥೀಯ ವಿಚಾರಧಾರೆಯ ಮೋದಿ ಸರ್ಕಾರ ಅಧಿಕಾರಕ್ಕೆ ಬಂದನಂತರ JNUವಿನ ಮೇಲೆ ಆಕ್ರಮಣಗಳು ಹೆಚ್ಚಾದವು. ಕೆಲವು ಮಾಧ್ಯಮಗಳು JNUವನ್ನು ದೇಶವಿರೋಧಿ ಚಟುವಟಿಕೆಗಳ ಕೇಂದ್ರವೆಂದು ಸುಳ್ಳುಸುಳ್ಳೇ ಚಿತ್ರಿಸಿದವು. ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು, ನಗರ ನಕ್ಸಲರು ಎಂದು ಚಿತ್ರಿಸಿ ರಾಜಕೀಯ ಧ್ರುವೀಕರಣವನ್ನು ಮಾಡಿದ್ದಲ್ಲದೇ ದೇಶದ್ರೋಹಿ ನೆರೆಟಿವ್‌ಅನ್ನು ದೇಶದ ಜನಮಾನಸದಲ್ಲಿ ಬೇರೂರುವಂತೆ ಮಾಡುವಲ್ಲಿ ಸಫಲವಾಯಿತು.
2016ರ ಫೆಬ್ರವರಿಯಲ್ಲಿ JNUವಿನ ಕೆಲ ವಿದ್ಯಾರ್ಥಿಗಳು 2001ರ ಸಂಸತ್ ದಾಳಿಯ ಆರೋಪಿ ಅಫ್ಜಲ್ ಗುರು ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ಮಕ್ಬೂಲ್ ಭಟ್‌ರ ಗಲ್ಲುಶಿಕ್ಷೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಆರೋಪವನ್ನು ಹೊರಿಸಿ (ನಂತರ ತಿರುಚಲ್ಪಟ್ಟದ್ದೆಂದು ಸಾಬೀತಾಯಿತು) ಅಂದಿನ ವಿದ್ಯಾರ್ಥಿಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿದ್ದು ಗೊತ್ತೇ ಇದೆ.
ಆ ದಿನವೂ ಜೆಎನ್‌ಯುವಿನ ಕ್ಯಾಂಪಸ್ಸಿನಲ್ಲಿ ಕನ್ಹಯ್ಯಾ ಕುಮಾರ್ ಮತ್ತವರ ಗೆಳೆಯರು ಪ್ರತಿಭಟನೆಯ ಸಿದ್ಧತೆಯಲ್ಲಿದ್ದುದರಿಂದ ನಾವೂ ಪ್ರತಿಭಟನಾ ಸ್ಥಳಕ್ಕೇ ಹೋಗೋಣವೆಂದು ತೀರ್ಮಾನಿಸಿದ್ದೆವು. ಜುಲೈನ ನಡುಮಧ್ಯಾಹ್ನದ ಉರಿಬಿಸಿಲಿನಲ್ಲಿ ಯುಜಿಸಿ ಕಚೇರಿಯ ಎದುರು ವಿದ್ಯಾರ್ಥಿಗಳೊಂದಿಗೆ ನಾವೆಲ್ಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆವು. ಅವತ್ತೇ ನಾನು ಉಮರ್ ಖಾಲಿದ್‌ನನ್ನು ಕನ್ಹಯ್ಯಾ ಕುಮಾರ್, ಅನಿರ್ಬಾನ್ ಜೊತೆ ನೋಡಿದ್ದು. ಸಮಾನ ಸೈದ್ಧಾಂತಿಕತೆ, ಸಮಾನ ವಿಚಾರ, ಸಮಾನ ಗುರಿಯುಳ್ಳ ಈ ಮೂವರು ಅಣ್ತಮ್ಮಂದಿರಂತಹ ಗೆಳೆಯರನ್ನು ಗೌರಿ ತುಂಬಾ ಹೆಮ್ಮೆಯಿಂದ ತನ್ನ ಮಾನಸ ಪುತ್ರರೆಂದು ಅಪ್ಪಿಕೊಂಡಿದ್ದಳು. ಅವರಿಗಾಗಿ ಬೆಂಗಳೂರಿಂದ ಬರುವಾಗ ಬಟ್ಟೆಬರೆಗಳನ್ನು ತಂದಿದ್ದಲ್ಲದೇ ಅವರು ತೊಟ್ಟುಕೊಂಡ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡೂ ಇದ್ದಳು.
ಸಂಜೆಯವರೆಗೂ ಐಟಿಯೋ ಎದುರಿನ ಮೆಟ್ರೋ ನಿಲ್ದಾಣದ ವಿಶಾಲವಾದ ಗ್ರಾನೈಟ್ ಕಲ್ಲುಹಾಸಿನ ಅಂಗಳದ ತುಂಬ ವಿದ್ಯಾರ್ಥಿಗಳ ಕಲರವ, ರೋಡಿನ ತುಂಬಾ ಪೊಲೀಸ್ ಪಡೆ, ನಿಧಾನಗತಿಯಲ್ಲಿನ ಟ್ರಾಫಿಕ್ಕನ್ನು ನಿಯಂತ್ರಿಸುತ್ತಿದ್ದ ಪೊಲೀಸರು, ಆಚೆಯೀಚೆ ಓಡಾಡುವವರನ್ನು ಬೆದರಿಸುತ್ತಿದ್ದ ಪೊಲೀಸರು; ಇತ್ತ ಸಂಜೆಯಾದರೂ ಯುಜಿಸಿಯ ಅಧಿಕಾರಿಯ ಪತ್ತೆಯಿದ್ದಿಲ್ಲ. ಪ್ರತ್ಯಕ್ಷವಾಗಿ ತಮ್ಮ ಅಹವಾಲನ್ನು ಅಧಿಕಾರಿಯ ಕೈಗೆ ಕೊಡುವವರಿದ್ದರು ಈ ಹೋರಾಟಗಾರರು. ನಾವು ಇಳಿಸಂಜೆ ವಿದ್ಯಾರ್ಥಿಗಳಿಂದ ಬೀಳ್ಕೊಂಡು ಕೆಲಕಾಲ ಜನ್‌ಪತ್‌ನ ಮಾರುಕಟ್ಟೆಯಲ್ಲಿ ಸುತ್ತಾಡಿದೆವು. ಫ್ಯಾಸಿಸಂ, ದೇಶ ಸಾಗುತ್ತಿರುವ ರೀತಿ ಇತ್ಯಾದಿ ಸಾಕಷ್ಟು ವಿಷಯಗಳನ್ನು ಮಾತಾಡಿದೆವು. ನೀಲಿ ಬಣ್ಣದ ಕುರ್ತಾ ಪೈಜಾಮಕ್ಕಾಗಿ ಸುಮಾರು ಅಂಗಡಿಗಳನ್ನು ಜಾಲಾಡಿ ಕೊನೆಗೆ ಒಂದು ಅಂಗಡಿಯಲ್ಲಿ ಕುರ್ತಾ ಪೈಜಾಮ ಖರೀದಿಸಿದ್ದಳು. ಅವಳೊಂದಿಗಿನ ಈ ಭೆಟ್ಟಿ ಮೊದಲನೆಯದೂ ಮತ್ತು ಕೊನೆಯದೂ ಆಗುತ್ತದೆಂದು ಗೊತ್ತಿರಲಿಲ್ಲ. ಕೊಲೆಗಡುಕರು ಸೆಪ್ಟೆಂಬರ್ 5ರಂದು ಆಕೆಯನ್ನೇ ಬಲಿತೆಗೆದುಕೊಂಡರು.
ಈಗ ಈ ಗೌರಕ್ಕನ ಮಾನಸಪುತ್ರರಲ್ಲಿ ಇಬ್ಬರು ಒಳ್ಳೆಯ ಸುರಕ್ಷಿತ ಮತ್ತು ಪ್ರತಿಷ್ಠಿತ ಸ್ಥಾನದಲ್ಲಿದ್ದಾರೆ. ಕನ್ಹಯ್ಯಾ ಕುಮಾರ್ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ವಿಯಾಗಿದ್ದಾನೆ. ಮುಂದೆ ಚುನಾವಣೆಯಲ್ಲಿ ಗೆದ್ದು ಸಂಸದನೂ ಆಗಬಹುದು. ಆದರೆ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನ ನಾಲ್ಕು ಗೋಡೆಗಳ ನಡುವೆ ಕೈದಿಯಾಗಿ ಬದುಕುತ್ತಿದ್ದಾನೆ. ಉಮರ್ ಖಾಲಿದನನ್ನು ನೆನೆದಾಗೆಲ್ಲ ತಿಹಾರ್ ಜೈಲಿನ ಎತ್ತರೆತ್ತರದ ರಾಕ್ಷಸ ಗೋಡೆಗಳು ಕಂಡಂತಾಗಿ ಹೃದಯದಲ್ಲಿ ಮುಳ್ಳಾಡಿಸಿದಂತಾಗುತ್ತದೆ. ಗೌರಿ ಇದ್ದಿದ್ದರೇ ಉಮರ್ ಖಾಲಿದ್‌ನ ಬಿಡುಗಡೆಗಾಗಿ ಖಂಡಿತವಾಗಲೂ ದನಿ ಎತ್ತುತ್ತಿದ್ದಳು, ಸರ್ಕಾರದ ದಮನಕಾರಿ ತಂತ್ರದ ವಿರುದ್ಧ ಬರೆಯುತ್ತಿದ್ದಳು, ನ್ಯಾಯದ ವಿಳಂಬದ ಬಗ್ಗೆ ಸಿಟ್ಟುಗೊಳ್ಳುತ್ತಿದ್ದಳು ಎಂದೆಲ್ಲ ಯೋಚಿಸುತ್ತೇನೆ. ಕೊನೆಗೂ ಶೇಷವಾಗಿ ಉಳಿಯುವುದು ಇಷ್ಟೇ; ಆಕೆ ಇದ್ದಿದ್ದರೇ…
ಆಗ ಜೆಎನ್‌ಯುವಿನ ಚಳವಳಿಗಳಲ್ಲಿ ಸಕ್ರಿಯರಾಗಿದ್ದ, ಜೊತೆಜೊತೆಯಲ್ಲೇ ಇದ್ದ ಕನ್ಹಯ್ಯಾ ಕುಮಾರ್, ಅನಿರ್ಬಾನ್ ಮುಂತಾದವರ ವಿಚಿತ್ರ ಮೌನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾಕೆ ಒಬ್ಬರೂ ಬಾಯಿಬಿಡುತ್ತಿಲ್ಲ? ಯಾಕೆ ಒಬ್ಬರೂ ಉಮರನಿಗಾಗಿ ದನಿಯೆತ್ತುತ್ತಿಲ್ಲ? ಉಮರ್ ಅವರ ಸ್ನೇಹಿತನಾಗಿರಲಿಲ್ಲವೇ? ಅಥವಾ ಸರ್ಕಾರದ ನೀತಿಗಳ ಬಗ್ಗೆ ಭಯವೇ?
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ | ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ವಿಚಾರಣೆ ಅ.31ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ 2020ರ ಸೆಪ್ಟಂಬರ್ 13ರಿಂದ ದಿಲ್ಲಿಯ ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಅವರ ಮೇಲೆ 2020ರ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಡೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ. ಈ ಗಲಭೆಗಳು ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಭವಿಸಿದ್ದವು, ಇದರಲ್ಲಿ 53 ಜನರು ಮೃತಪಟ್ಟಿದ್ದರು ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈಗಾಗಲೇ ಐದು ವರ್ಷ, ಅಂದರೆ 1825 ದಿನಗಳನ್ನು ಜೈಲಿನಲ್ಲಿ ಕಳೆದರೂ ಅವರ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಖಾಲಿದ್ ಅವರು 2021ರ ಜುಲೈನಲ್ಲಿ ಮೊದಲ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು, ಆದರೆ ಅದನ್ನು ತಿರಸ್ಕರಿಸಲಾಯಿತು. 2025ರ ಜುಲೈನಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಲಾಗಿದೆ. 2024ರ ಡಿಸೆಂಬರ್ 28ರಿಂದ ಜನವರಿ 3, 2025ರವರೆಗೆ ಅವರಿಗೆ ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರಾಗಿತ್ತು, ಇದರಲ್ಲಿ ಅವರು ಸೋದರ ಸಂಬಂಧಿಯ ವಿವಾಹಕ್ಕೆ ಹಾಜರಾಗಿದ್ದರು. ಜಾಮೀನು ಅವಧಿ ಮುಗಿದನಂತರ, ಅವರು ಜನವರಿ 4, 2025ರಂದು ತಿಹಾರ್ ಜೈಲಿಗೆ ಮರಳಿದರು. ಸೆಪ್ಟಂಬರ್ 2, 2025ರಂದು ದೆಹಲಿ ನ್ಯಾಯಾಲಯ ಮತ್ತೆ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದೆ.
ಐದು ವರ್ಷಗಳ ಜೈಲು ಜೀವನದ ಬಗ್ಗೆ ತಿಳಿಯಬೇಕೆಂದರೆ ಯುಟ್ಯೂಬ್‌ನಲ್ಲಿ ಉಮರ್ ಸಂಗಾತಿ ಬನೋಜ್ಯೋತ್ಸಾ ಲಾಹಿರಿ ನೀಡಿದ ಸಂದರ್ಶನಗಳಿವೆ. ವಿಚಾರಣೆಯನ್ನೂ ನಡೆಸದೇ ಐದು ವರ್ಷಗಳ ಕಾಲ ಜೈಲಿನಲ್ಲಿಟ್ಟ ಸರ್ಕಾರದ ದುಷ್ಟನೀತಿಯನ್ನು ನ್ಯಾಯಕ್ಕಾಗಿ ದನಿ ಎತ್ತುವ ರವೀಶ್ ಕುಮಾರ್ ಸಹಿತ ಅನೇಕ ಸ್ವತಂತ್ರ ಪತ್ರಕರ್ತರು ಖಂಡಿಸಿ ಉಮರ್ ಬಿಡುಗಡೆಗಾಗಿ ಆಗ್ರಹಿಸಿದ್ದಾರೆ. ಜೈಲಿಗೆ ಹೋಗಿ ಮಾತಾಡಿಸಿದವರೂ ಕೆಲವರು ಇದ್ದಾರೆ. ನಾಗರಿಕ ತಿದ್ದುಪಡಿ ಕಾಯ್ದೆಯ ವಿರುದ್ಧ ವಿಶೇಷವಾಗಿ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದದ್ದು ಎಲ್ಲರಿಗೂ ಗೊತ್ತು; ಅನೇಕ ಕಡೆ ಹಿಂಸಾತ್ಮಕ ಪ್ರತಿಭಟನೆಗಳಾದವು. ಆದರೆ ಇದರಲ್ಲಿ ಶಾಹೀನ್ ಬಾಗ್ ಮುಸ್ಲಿಂ ಮಹಿಳೆಯರಿಂದ ನಡೆದ ಶಾಂತಿಯುತ ಧರಣಿ ಚಾರಿತ್ರಿಕವಾಗಿ ದಾಖಲಿಸಲ್ಪಟ್ಟಿತು. ಶಾಹೀನ್ ಬಾಗಿನ ಮಹಿಳೆಯರು, ವೃದ್ಧ ದಾದಿಗಳು, ಮಕ್ಕಳಾದಿಯಾಗಿ ಸತತ ನಾಲ್ಕು ತಿಂಗಳು ಧರಣಿ ನಡೆಸಿದರು. (ಡಿಸೆಂಬರ್ 2019ರಿಂದ ಮಾರ್ಚ್ 2020) ಇದು ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (NPR) ವಿರುದ್ಧ ಒಂದು ಚಳವಳಿಯಾಗಿ ಬೆಳೆಯಿತು. ಕೊರೊನಾ ಸಾಂಕ್ರಾಮಿಕದ ಕಾರಣ ಒತ್ತಾಯಪೂರ್ವಕವಾಗಿ ಪೊಲೀಸರು ಶಾಹೀನ್ ಬಾಗ್ ತೆರವುಗೊಳಿಸಿದ್ದರು.
2020ರಲ್ಲಿ ಫೆಭ್ರವರಿ 23ರಿಂದ 26ವರೆಗಿನ ಮೂರೇ ಮೂರು ದಿನಗಳಲ್ಲಿ ಈಶಾನ್ಯ ದಿಲ್ಲಿಯಲ್ಲಿ ಉಂಟಾದ ಪರ ವಿರೋಧದ ಗಲಭೆಯಲ್ಲಿ ಘರ್ಷಣೆಯುಂಟಾಗಿ ಕನಿಷ್ಠ 53 ಜನ ಸಾವನ್ನಪ್ಪಿದರು. ಆಸ್ತಿಪಾಸ್ತಿಗಳು ಧ್ವಂಸವಾದವು; ಗಲಭೆಕೋರರು ಕಲ್ಲುಗಳು, ಪೆಟ್ರೋಲ್ ಬಾಂಬ್ ಇತ್ಯಾದಿಗಳನ್ನು ಬಳಸಿದ್ದರು. ದೆಹಲಿ ಪೊಲೀಸರು ಮಾತ್ರ ಪ್ರಭುತ್ವದ ಕಾಲಾಳುಗಳಂತೆ ಕೆಲವೆಡೆ ನಿಂತು ಮೋಜು ನೋಡಿದರು ಅಥವಾ ನಿಷ್ಕ್ರಿಯವಾಗಿದ್ದು ವಿನಾಶಕ್ಕೆ ಕಾರಣರಾದರೇ ಹೊರತು ಗಲಭೆಯನ್ನು ನಿಯಂತ್ರಿಸುವಲ್ಲಿ ಸೋತರು. ಅನುರಾಗ್ ಠಾಕೂರ್ ಹಾಗೂ ಕಪಿಲ್ ಮಿಶ್ರಾನಂತಹ ಬಿಜೆಪಿ ಪಕ್ಷದ ರಾಜಕಾರಣಿಗಳು, “ಗೋಲಿ ಮಾರೋ ಸಾಲೋಂ ಕೋ” ಘೋಷಣೆ ಕೂಗಿ ಗಲಭೆಯನ್ನು ಪ್ರಚೋದಿಸಿದ್ದರು. ವಿಪರ್ಯಾಸವೆಂದರೆ ಅವರ ಮೇಲೆ ಯಾವ ಎಫ್‌ಐಆರ್ ಕೂಡ ದಾಖಲಾಗಿಲ್ಲ; ವಿಚಾರಣೆ-ಶಿಕ್ಷೆಯ ಮಾತಂತೂ ದೂರವೇ ಉಳಿಯಿತು. ಆದರೆ ಅವತ್ತು ದೆಹಲಿಯಲ್ಲೇ ಇದ್ದಿರದ ಉಮರ್ ಖಾಲಿದನ ಮೇಲೆ (UAPA) ಆರೋಪಪಟ್ಟಿ ದಾಖಲಾಯಿತು. ಉಮರ್ ಖಾಲಿದನಲ್ಲದೇ ಜಾಮಿಯಾ ಮಿಲ್ಲಿಯಾ ಮತ್ತು ಜೆಎನ್‌ಯು ವಿದ್ಯಾರ್ಥಿ ಹೋರಾಟಗಾರರನ್ನು ಕರಾಳ ಕಾಯ್ದೆಯಾದ ಕಾನೂನುಬಾಹಿರ ಚಟವಟಿಕೆಗಳ ತಡೆ ಕಾಯ್ದೆ (UAPA) ಅಡಿ ಬಂಧಿಸಿದರು. ಉಮರ್ ಖಾಲಿದ್, ಶರ್ಜಿಲ್ ಇಮಾಮ್, ದೇವಾಂಗನಾ ಕಲಿತಾ, ಖಾಲಿದ್ ಸೈಫಿ, ಮೀರಾನ್ ಹೈದರ್, ಅಥರ್ ಖಾನ್, ಶಿಫಾ ಉರ್ ರೆಹಮಾನ್, ಗುಲ್ಫಿಶಾ ಫಾತಿಮಾ ಮುಂತಾದವರನ್ನು ಗಲಭೆಗಳ ಹಿಂದಿನ ’ಮಾಸ್ಟರ್ ಮೈಂಡ್’ ಎಂದು ಚಿತ್ರಿಸಲಾಯಿತು. ಗರ್ಭಿಣಿ ಆಗಿದ್ದ ಶಪೂರಾ ಜರ್ಗೂರ್‌ಗೆ ಜಾಮೀನು ಸಿಕ್ಕಿತು. 2021ರಲ್ಲಿ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಿಗೂ ಜಾಮೀನು ದೊರೆಯಿತು. ಇವರಿಬ್ಬರೂ ಪಿಂಜರಾ ತೋಡ್ (Pinjara Tod) ಎಂಬ ಮಹಿಳಾ ವಿದ್ಯಾರ್ಥಿ ಸಂಘಟನೆಯ ಸ್ಥಾಪಕ ಸದಸ್ಯೆಯರಾಗಿದ್ದರು. “ಪದೇಪದೇ ಜಾಮೀನು ನಿರಾಕರಣೆ ಮತ್ತು ವಿಚಾರಣೆಯಿಲ್ಲದೆ ದೀರ್ಘಕಾಲದ ಜೈಲುವಾಸವು ಖಾಲಿದ್ ಮತ್ತು ಇತರರ ಪ್ರಕರಣದ ಅತ್ಯಂತ ದುಃಖಕರ ಅಂಶಗಳಲ್ಲಿ ಒಂದಾಗಿದೆ” ಎನ್ನುತ್ತಾರೆ ಸಮೀಕ್ಷಕರು.
ಮುಸ್ಲಿಂ ವಿದ್ಯಾರ್ಥಿಗಳ ಹಾಗೂ ಆ ಧಾರ್ಮಿಕ ಸಮುದಾಯದ ವಿರೋಧಿಯಾಗಿ ವರ್ತಿಸುವ ಮೋದಿ ನೇತೃತ್ವದ ದ್ವೇಷರಾಜಕಾರಣದ ಆಡಳಿತವು ಮೊದಲು ಭಾರತೀಯ ಪೌರತ್ವದ ಹಕ್ಕಿನೊಂದಿಗೆ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವ ಕಾನೂನನ್ನು ತಂದಿತು. ನಂತರ ಈ ಕ್ರಮದ ವಿರುದ್ಧ ಧ್ವನಿ ಎತ್ತಿದವರನ್ನು, ಅದರಲ್ಲೂ ಅವರು ಮುಸ್ಲಿಮರಾಗಿದ್ದರೆ ಅವರನ್ನು ಅಂಥವರನ್ನು ಗುರುತಿಸಿ ಹಿಂಸಿಸುತ್ತಿದೆ. ಉಮರ್ ಖಾಲಿದ್ ಒಂದು ಕಡೆ ಹೇಳುತ್ತಾರೆ, “ಈ ಮೋದಿ ಎಲ್ಲಿಯತನಕ ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯತನಕ ತಮಗೆ ಈ ಜೈಲಿನಿಂದ ಮುಕ್ತಿಯಿಲ್ಲ ಎಂದು! ಇದು ಅತ್ಯಂತ ನೋವಿನ ಸಂಗತಿಯಾದರೂ ಸತ್ಯವೆನಿಸುತ್ತದೆ.
ಉಮರ್ ಖಾಲಿದ್ ಜೈಲಿನಿಂದ ಬರೆದ ಪತ್ರಗಳಲ್ಲಿ, ಜೈಲು ಜೀವನದ ಕಷ್ಟಗಳ ಬಗ್ಗೆ ತಿಳಿಸಿದ್ದಾರೆ. “ಜೈಲು ಒಳ್ಳೆಯ ಸ್ಥಳವಲ್ಲ, ಯಾರೂ ಅಲ್ಲಿ ಇರಬಾರದು” ಎಂದು ಅವರು ಹೇಳಿದ್ದಾರೆ. ಕೆಲವೊಮ್ಮೆ ಏಕಾಂಗಿತನ ಮತ್ತು ಹತಾಶೆಯನ್ನು ಅನುಭವಿಸುವುದಾಗಿಯೂ ಅವರು ತಿಳಿಸಿದ್ದಾರೆ. ಉಮರ್ ಪತ್ರಗಳನ್ನು ದಿ ಕ್ವಿಂಟ್, ಫ್ರಂಟ್‌ಲೈನ್, ಸ್ಕ್ರೋಲ್ ಮುಂತಾದ ಪತ್ರಿಕೆಗಳು ಪ್ರಕಟಿಸಿವೆ.
ಜೆಎನ್‌ಯುವಿನ ಇತಿಹಾಸ ವಿದ್ವಾಂಸ ಡಾ. ಉಮರ್ ಖಾಲಿದ್‌ಗೆ ಜೈಲಿನ ಸಂಗಾತಿಗಳೆಂದರೆ ಪುಸ್ತಕಗಳು ಮತ್ತು ಆಗಾಗ ಹೋಗಿ ಹೊಸಹೊಸ ಪುಸ್ತಕ ನೀಡುವ ಮತ್ತು ಹೊರಗಿನ ವಿದ್ಯಮಾನಗಳ ಬಗ್ಗೆ ಹೇಳುವ ಸ್ನೇಹಿತರು. ಈ ಸೆಪ್ಟೆಂಬರ್‌ಗೆ ದೆಹಲಿಯ ತಿಹಾರ್ ಜೈಲಿನ ಅವರ ಸೆರೆಮನೆವಾಸಕ್ಕೆ ಐದು ವರ್ಷಗಳು ಪೂರ್ಣಗೊಳ್ಳುತ್ತದೆ. ಉಮರ್ ತಮ್ಮ ಸ್ಥಿತಿಯನ್ನು ಫ್ಯೋದೋರ್ ದಸ್ತೋವಸ್ಕಿ ಅವರ “ದಿ ಹೌಸ್ ಆಫ್ ದಿ ಡೆಡ್”ಗೆ ಹೋಲಿಸಿಕೊಳ್ಳುತ್ತಾರೆ.
“ನಾವು ಬದುಕಿದ್ದರೂ ಜೀವಂತವಾಗಿಲ್ಲ, ಮತ್ತು ನಾವು ಸತ್ತಿದ್ದರೂ ನಾವು ನಮ್ಮ ಸಮಾಧಿಗಳಲ್ಲಿಲ್ಲ.” ಜೈಲಿನ ನಾಲ್ಕು ಗೋಡೆಗಳಲ್ಲಿ ಬಂಧಿತವಾಗಿ ಇರುವವರ ಮನಸ್ಥಿತಿಯನ್ನು ನಾವು ಅವರ ಮಾತುಗಳನ್ನು ಓದಿಯೇ ಅರ್ಥಮಾಡಿಕೊಳ್ಳಬೇಕು. ಉಮರ್ ಕಂಡುಕೊಳ್ಳುವ ಸತ್ಯಗಳಿಗೆ ಹೊರಜಗತ್ತು ಅಪರಿಚಿತವಾಗಿರುತ್ತದೆ.
“ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರಾದ ರಷ್ಯನ್ ಲೇಖಕ ದಸ್ತೋವಸ್ಕಿಯವರನ್ನು ಯಾವುದೋ ಕ್ಷುಲ್ಲಕ ಸಾಕ್ಷ್ಯಗಳಿಂದ ಪ್ರೇರಿತಗೊಂಡು ಸುಳ್ಳುಪ್ರಕರಣದಲ್ಲಿ ಬಂಧಿಸಿರುತ್ತಾರೆ ಮತ್ತು ಅವರನ್ನು ಒಬ್ಬ ಅತ್ಯಂತ ಅಪಾಯಕಾರಿ ಅಪರಾಧಿಯೆಂದು ಪರಿಗಣಿಸಿ ಕೈಕಾಲುಗಳಿಗೆ ಕೋಳ ಹಾಕಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಪಡಿಸಲಾಗಿರುತ್ತದೆ. ಆ ನೋವಿನ ಸಮಯ ಕುರಿತ ’ದಿ ಹೌಸ್ ಆಫ್ ದಿ ಡೆಡ್’ ಕಾದಂಬರಿ ಬರೆದು 150 ವರ್ಷಗಳು ಕಳೆದಿವೆ ಮತ್ತು ಜಗತ್ತು ಗುರುತಿಸಲಾಗದಷ್ಟು ಬದಲಾಗಿದೆ; ಆದರೆ ತಿಹಾರ್‌ನಂಥ ಅನೇಕ ಸ್ಥಳಗಳಲ್ಲಿ ನನ್ನ ಸುತ್ತಲೂ ನಾನು ನೋಡುವ ವಿಷಯಗಳು ಮತ್ತು ಘಟನೆಗಳನ್ನೇ ಅವನು ಹೇಳುತ್ತಿದ್ದಾನೆ ಎಂದು ನನಗೆ ಅನಿಸಿತು” ಎನ್ನುತ್ತಾರೆ ಉಮರ್ ಖಾಲಿದ್.
ಮಾರಿಟಾನಿಯಾ ದೇಶದ ಇನ್ನೊಬ್ಬ ಲೇಖಕ ಮೊಹಮ್ಮದೌ ಒಲ್ಡ್ ಸ್ಲಾಹಿ ಬರೆದ ’ಗ್ವಾಂತಾನಾಮೋ ಡೈರಿ’ ಎಂಬ ಅವರ ಆತ್ಮಕಥೆಯಲ್ಲಿನ “I haven’t done anything wrong, but the accusations against me have stolen my life” – “ನಾನು ಯಾವ ತಪ್ಪೂ ಮಾಡಿಲ್ಲ ಆದರೆ ನನ್ನ ಮೇಲಿನ ಆರೋಪಗಳು ನನ್ನ ಜೀವನವನ್ನೇ ಕಸಿದುಕೊಂಡಿವೆ” ಎನ್ನುವ ಸಾಲುಗಳನ್ನು ಉಮರ್ ಉಲ್ಲೇಖಿಸುತ್ತಾರೆ. ಸ್ಲಾಹಿ ಕೂಡ ಯಾವುದೇ ಅಧಿಕೃತ ವಿಚಾರಣೆಯಿಲ್ಲದೆ 14 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರ ಈ ಮೇಲಿನ ಮಾತುಗಳು ಎಲ್ಲ ದೇಶಗಳ ರಾಜಕೀಯ ಕೈದಿಗಳ ಸ್ಥಿತಿಯನ್ನು ಚಿತ್ರಿಸುತ್ತದೆ; UAPA ಕಾಯ್ದೆಯಡಿ ಖಾಲಿದ್‌ರವರ ದಮನಕ್ಕೆ ಹಿಡಿದ ಕನ್ನಡಿಯಂತಿದೆ.
ಒಂದುವೇಳೆ ದೆಹಲಿ ಪೊಲಿಸರು ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿದ್ದರೆ ಸುಳ್ಳು ಆರೋಪದಲ್ಲಿ ಬಂಧಿತರಾದವರಲ್ಲಿ ಎಷ್ಟೋ ಜನ ಇಂದು ಜೈಲಿನಲ್ಲಿ ಕೊಳೆಯುತ್ತಿರಲಿಲ್ಲ. ದೆಹಲಿಯಲ್ಲಿ ಗಲಭೆ ನಡೆಯುತ್ತಿದ್ದಾಗ ಉಮರ್ ಖಾಲಿದ್ ತನ್ನ ಹುಟ್ಟೂರಾದ ಅಮರಾವತಿಯಲ್ಲಿ ಭಾಷಣ ಮಾಡುತ್ತಿದ್ದರು. ಉಮರ್ ಖಾಲಿದರ ಯಾವ ಭಾಷಣವೂ ಜೀವ ವಿರೋಧಿಯಾಗಲೀ, ಗಲಭೆಯನ್ನು ಪ್ರಚೋದಿಸುವಂತಹದ್ದಾಗಲೀ ಆಗಿರಲಿಲ್ಲ. “ದ್ವೇಷಿಸುವವರನ್ನು ದ್ವೇಷದಿಂದ ಉತ್ತರಿಸುವುದಿಲ್ಲ, ಪ್ರೀತಿಯಿಂದ ಉತ್ತರಿಸುತ್ತೇವೆ” ಅನ್ನುತ್ತಾರೆ ಉಮರ್. “ಅವರು ಕೈ ಎತ್ತಿದರೂ ನಾವು ಕೈ ಎತ್ತುವುದಿಲ್ಲ- ಹೀಗೆ ಬಹುತ್ವ, ಜಾತ್ಯತೀತತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿಪಾದಿಸುವ ನಿರರ್ಗಳ ಭಾಷಣಗಳಿಗೆ ಹೆಸರುವಾಸಿಯಾದ ಉಮರ್ ಖಾಲಿದ್ ಅವರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಲು ಪಿತೂರಿ ನಡೆಸಿದ್ದಾರೆ ಎಂದು ನಾಚಿಕೆಗೆಟ್ಟ ಕೂಗುಮಾರಿಗಳು ಅರಚಿದ್ದಕ್ಕೆ ಪಕ್ಷಪಾತಿಗಳಾದ ದೆಹಲಿ ಪೊಲೀಸರು ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಅದರಲ್ಲಿ ಒಂದನ್ನು ಕೈಬಿಡಲಾಗಿದೆ ಮತ್ತು ಇನ್ನೊಂದರಲ್ಲಿ ಅವರ ವಿರುದ್ಧ ಇನ್ನೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ. ಕೆಳಹಂತದಿಂದ ಉನ್ನತ ನ್ಯಾಯಾಲಯಗಳು ಅವರಿಗೆ ಜಾಮೀನು ನಿರಾಕರಿಸುವುದನ್ನು ಮುಂದುವರಿಸಿವೆ.
ಈ ಹೊತ್ತು ನಮ್ಮೊಡನೆ ಗೌರಿಯಿಲ್ಲ. ಉಮರ್ ಖಾಲಿದ್‌ನ ಬಿಡುಗಡೆಗಾಗಿ ಮತ್ತು ನ್ಯಾಯಕ್ಕಾಗಿ ನಾವೆಲ್ಲಾ ಕಾಯುತ್ತಿದ್ದೇವೆ. ನಮ್ಮ ಇತಿಹಾಸ ಪಠ್ಯಪುಸ್ತಕಗಳಿಂದ ಏಕರೂಪಿ ’ಕೇಸರಿ’ ಬಣ್ಣವು ಕಣ್ಮರೆಯಾಗಿ ಮತ್ತೆ ಪ್ರತಿ ಋತುವಿನ ನವಿರು ರೋಮಾಂಚಕ ಬಣ್ಣಗಳು ಮರಳಬೇಕಾದರೆ, ನಮ್ಮ ಜನರ ಹೆಚ್ಚು ಒಳಗೊಳ್ಳುವಿಕೆಯ ಹೊಸ ಇತಿಹಾಸಗಳನ್ನು ಪುನಃ ಬರೆಯಬೇಕಾದರೆ ಅಂತಹ ಇತಿಹಾಸಗಳನ್ನು ರೂಪಿಸಬಲ್ಲವರನ್ನು ಕಬ್ಬಿಣದ ಸರಳುಗಳ ಆಚೆಯಿಂದ ಮತ್ತೆ ಮಾತನಾಡಲು ಅವಕಾಶ ನೀಡಬೇಕು ಎಂಬ ಲೇಖಕಿಯೊಬ್ಬಳ ಆಶಯಗಳು ನಮ್ಮವೇ ಎನಿಸುವಾಗ ಮತ್ತೆ ಮತ್ತೆ ಗೌರಿ ನೆನಪಾಗುತ್ತಾಳೆ. ಉತ್ತರ ಸಿಗಲಾರದ ಈ ಹೊತ್ತಿನ ಪ್ರಶ್ನೆಗಳಲ್ಲಿ ಗೌರಿಯ ಅವತ್ತಿನ ಮುಖ, ಅವಳೊಂದಿಗೆ ಕಂಡ ಉಮರ ಖಾಲಿದನ ಮುಖ ಕಣ್ಣು ಮಂಜಾಗಿಸುತ್ತದೆ.

ರೇಣುಕಾ ನಿಡಗುಂದಿ
ಲೇಖಕಿ, ಅನುವಾದಕಿ ಮತ್ತು ಸಂಪಾದಕಿ. ಸದ್ಯ ದೆಹಲಿಯಲ್ಲಿ ನೆಲೆಸಿದ್ದಾರೆ. ಅವರ ಕೆಲವು ಕೃತಿಗಳು “ಕಣ್ಣ ಕಣಿವೆ” (ಕವನ ಸಂಕಲನ), “ದಿಲ್ಲಿ ಡೈರಿಯ ಪುಟಗಳು” (ಪ್ರಬಂಧಗಳು), “ಅಮೃತ ನೆನಪುಗಳು” (ಅಮೃತಾ ಪ್ರೀತ್‌ರ ಜೀವನಚರಿತ್ರೆ), ಮತ್ತು “ನಮ್ಮಿಬ್ಬರ ನಡುವೆ” (ಕವನ ಸಂಕಲನ).



Heartrending and excellent writing about Umar Khalid. Several academics are still in jail without even bail for wrong reasons. It’s very sad.