ಗೆಳೆಯರೊಬ್ಬರ ಮನೆಬಾಗಿಲಲ್ಲಿ ಪುಟ್ಟ ಮಗುವೊಂದು ಕುಳಿತಿತ್ತು. ಅದಿನ್ನು ಸ್ಕೂಲಿಗೆ ಸೇರಿರಲಿಲ್ಲ. ಏನು ಮಾಡ್ತಯಿದ್ದಿ ಕಂದಾ ಎಂದೆ. ಓದಿಕೊಬೇಕು ಎಂತು. ಏನೊದಿಕತ್ತಿ ಎಂದೆ. ಇಂಗ್ಳಿಶು ಎಂದಿತು. ಯಾಕೆ ಎಂದೆ. ಎಗ್‍ಜಾಮು ಎಂದ ಅದರ ಮುಖಭಾವ ನೋಡಬೇಕಿತ್ತು.
ನಾವೆಲ್ಲ ಮಕ್ಕಳ ಮನಸ್ಸನ್ನು ದಾಟಿ ಬಂದಿದ್ದೇವೆ. ಆದರೂ ಮಕ್ಕಳ ಮನಸ್ಸನ್ನು ಗ್ರಹಿಸುವುದರಲ್ಲಿ ಸೋತಿದ್ದೇವೆ. ಇತ್ತೀಚೆಗೆ ಕೋರ್ಟು ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಹೋಂವರ್ಕ್ ಕೊಡಬೇಡಿ ಎಂದು ಆಜ್ಞೆ ಮಾಡಿದೆ. ಆದರೆ ಈ ಆಜ್ಞೆಗೆ ಮಕ್ಕಳ ವಾರಸುದಾರರು ಕೇರ್ ಮಾಡಿದಂತೆ ಕಾಣುತ್ತಿಲ್ಲ. ಈ ಕ್ರಿಸ್‍ಮಸ್ ರಜದಲ್ಲಿ ನಾನೊಂದಿಷ್ಟು ಎಲ್‍ಕೆಜಿ, ಯುಕೆಜಿ ಮಕ್ಕಳನ್ನು ಮಾತನಾಡಿಸಿದೆ. ಅವೆಲ್ಲಾ, ಪರಿಚಿತರ ಮಕ್ಕಳಾಗಿದ್ದರಿಂದ ನನ್ನ ಜೊತೆ ಸಲುಗೆಯಿಂದಿದ್ದವು. ಯುಕೆಜಿ ಮಗುವೊಂದನ್ನ ಕುರಿತು “ನಿಮ್ಮ ಮನೇಲಿ ಏನೇನು ಸಾಕಿದ್ದೀರಿ ಎಂದೆ”. ಕೂಡಲೇ ಆಕೆಯ ಪ್ರಪಂಚಕ್ಕೆ ಜಿಗಿದ ಮಗು “ಸಾರ್ ನಾವೊಂದು ಹುಲಿ ಸಾಕಿದ್ದೀವಿ” ಎಂದಿತು. ನಾನು ಅಚ್ಚರಿಯಿಂದ ಅಯ್ಯಪ್ಪಾ ಹೌದಾ ಎಂದೆ. ‘ಹೌದು ಸಾರ್’. ಎಲ್ಲಿಂದ ತಂದ್ರೀ.”
“ಸಾರ್ ಲಂಡನ್ನಿಂದ ಡಿಸ್‍ಕೌಂಟಲ್ಲಿ ತಂದಿದ್ದೀವಿ” ಎಂದಿತು. ಆ ಕೂಡಲೇ ಆಕೆ ಜೊತೆಯಲ್ಲಿ ನಿಂತಿದ್ದ ತಮ್ಮ ನಿಧಾನಕ್ಕೆ ಚತುಸ್ಪಾದಿಯಾಗಿ ಆಕಡೆ ಈಕಡೆ ಹುಲಿಗತ್ತಿನಲ್ಲಿ ನೋಡತೊಡಗಿದ. ನಾನು ಹುಲಿಮರಿಯನ್ನೂ ದಿಟ್ಟಿಸಿದೆ. ಅದು ಎಲ್ಲ ಸಂಕೋಚಬಿಟ್ಟು ಹುಲಿಮರಿಯೇ ಆಗಿ ಕಣ್ಣು ಮೆಡರಿಸಿತು. ನಾನು ಗಂಭೀರವಾಗಿ “ಏನೇನು ಕಲ್ತಿದೆ ಅದು” ಅಂದೆ. ಸಾರ್ ಅದೇ ಹೋಗಿ ಟಾಯ್ಲೆಟ್ ಮಾಡಿಕಳುತ್ತೆ ಬೇಕಿದ್ರೆ ನೋಡಿ ಎಂದಿತು. ಹುಲಿ ನಿಧಾನವಾಗಿ ಕಂಬದ ಮರೆಗೋಗಿ ಈಚೆ ಬಂದಿತು. “ಊಟ ಏನೇನ್ ಕೊಡ್ತಿರಿ” ಎಂದೆ. ಸಾರ್ ಚಾಕ್ಲೇಟು ಕೇಕು, ಅನ್ನ ಸಾಂಬರ್, ಮೊಸರನ್ನ ಕೊಡ್ತಿವಿ ಎಂದಿತು. ಅಂದ್ರೆ ನೀವು ತಿನ್ನುವುದೆಲ್ಲಾ ಕೊಡ್ತಿರಾ ಎಂದೆ. ಹೌದು ಸಾರ್ ಎಂದಿತು. ಮಟನ್ ಚಿಕ್ಕನ್ ಕೊಡಲ್ವ ಎಂದೆ. “ಒಂದೊಂದಿನ ಚಿಕ್ಕನ್ ಕೊಡ್ತಿವಿ ಸಾರ್ ಎಂದಿತು. ಹಸಿ ಮಾಂಸ ಕೊಡ್ತಿರೋ, ಸಾಂಬರ್ ಮಾಡಿ ಕೊಡ್ತಿರೋ ಎಂದೆ. “ಸಾಂಬರ್ ಮಾಡಿಕೊಡ್ತಿವಿ ಸಾರ್” ಎಂದಿತು.
“ಹೊರಗಡೆ ಕರಕಂಡೋದಾಗ ಜನಗಳ ಮೇಲೆ ಎಗರಲ್ವಾ”. “ಸಾರ್ ಜನಗಳನ್ನ ಕಚ್ಚಲ್ಲ, ಅವುರೇನಾದ್ರು ಕೊಟ್ರೆ ತಿಂತದೆ” ಎಂದು ಮಗು ಹೇಳುತ್ತಿರುವಾಗ, ಆಕೆಯ ತಂದೆ ವ್ಯಂಗ್ಯವಾಗಿ ನಕ್ಕ. ಆ ವ್ಯಂಗ್ಯವನ್ನ ಗುರುತಿಸಿದ ಮಗು ಆಟದ ಮನಸ್ಸಿಂದ ಹೊರಬಂದು ಅಪ್ಪನಿಗೆ ಹೊಡೆಯುತ್ತ ಅವಮಾನಗೊಂಡು ಆಟ ಮುಗಿಸಿದಳು.
ಇದೊಂದು ಬಹಳ ಸೂಕ್ಷ್ಮ ಮನಸ್ಸಿನ ಮಗು. ಬೆಳ್ಳಂಬೆಳಿಗ್ಗೆಯೇ ಒಬ್ಬ ಕತ್ತೆಯ ಹಾಲು ಮಾರಲು ಬಂದು, “ಕತ್ತೆ ಹಾಲೂ” ಎಂದು ಕೂಗತೊಡಗಿದ. ಆಗ ನಾನು ಮಗುವನ್ನು ಕುರಿತು “ಕತ್ತೆ ಹಾಲು ಕುಡಿತಿಯೇನವ್ವಾ ಕಾಯಿಲೆ ಕಸಾಲೆ ಹೋಯ್ತದಂತೆ” ಎಂದೆ. ಕೂಡಲೆ ಈ ಮಗು, “ಅದರ ಹಾಲು ಅದರ ಮರಿಗಲ್ವಾ, ಮನುಸ್ರು ಕುಡಿತರಾ” ಎಂದಿತು. ಕತ್ತೆ ಹಾಲು ಮಾರಲು ಬಂದವನಿಗೆ ಅವಮಾನವಾದಂತಾಗಿ ಮುಂದೆ ಹೋದ.
ಈ ಮಕ್ಕಳ ಗೆಳೆಯನೊಬ್ಬ ಆಗಲೇ ಡ್ರೈವರ್ ಆಗಿ ಹೋಗಿದ್ದಾನೆ. ಆಗಾಗ್ಗೆ ಹಠಾತ್ತನೆ ಸ್ಟೈರಿಂಗ್ ತಿರುಗಿಸುತ್ತ, ಗೇರ್ ಬದಲಿಸಿ ತದೇಕಚಿತ್ತದಿಂದ ಡ್ರೈವ್ ಮಾಡುತ್ತ ಟರ್ನಿಂಗ್‍ನಲ್ಲಿ ಅನಾಹುತ ತಪ್ಪಿಸಿದವನಂತೆ ಸ್ಟೈರಿಂಗ್ ತಿರುಗಿಸುತ್ತ ಸಾಹಸ ಮಾಡಿದ ಮಂದಹಾಸದಲ್ಲಿ ಗಾಡಿಬಿಡುತ್ತಾನೆ. ಎಲ್ಲ ಕಾರುಗಳ ಹೆಸರು ಇವನ ಬಾಯಲ್ಲಿವೆ. ಸದ್ಯಕ್ಕೆ ಈತ ಬೆಂಗಳೂರು- ಮಂಗಳೂರು ವೋಲ್ವೋಗಾಡಿ ಡ್ರೈವರ್. ಈ ಬಗ್ಗೆ ವಿಚಾರಿಸತೊಡಗಿದೆ. “ತಮ್ಮೆಸರೇನು ಸಾರ್.” “ಪುರು ಅಂತ.” ಪುರು ಅಂದ್ರೆ. “ಪೂರುವರ ಅಂತ ಸಾರ್”. ಒಳ್ಳೆ ಹೆಸರು ಈಗ್ಯಾವ ಬಸ್ಸಿಗೆ ಡ್ರೈವರ್. “ಓಲ್ವೋ ಬಿಸ್ಸಿನ ಡ್ರೈವರ್.” ಓಲ್ವೋ ಬಸ್‍ನೇ ಯಾಕ್ ತಕೊಂಡ್ರಿ. “ಅದ್ಕೆ ಪವರ್ ಸ್ಟೈರಿಂಗ್ ಇದೆ. ಯಂಗೆಬೇಕಾದ್ರು ತಿರಗಿಸಬವುದು, ಬೇರೆ ಯಾವ ವೆಯಿಕಲ್ಲು ಸೈಡ್ ಕೇಳಿದ್ರು ಕೊಡದಂತೆ ಓಡುಸಬಹುದು.” ಎಂದವನೆ, ಹಠಾತ್ತನೆ ತನ್ನ ಬೆನ್ನಹಿಂದೆ ವಾಹನವೊಂದು ಹಾದುಹೋದಂತೆ ನೋಡಿ, ಆ ಲಾರಿಯವನು ಸಾರ್ ಎಷ್ಟು ಸೈಡ್ ಕೇಳಿದ್ರು ಕೊಡ್ಲಿಲ್ಲ ನಾನು, ಅದ್ಕೆ ದುರುಗುಟ್ಟಿಕೊಂಡು ನೋಡ್ಕಂಡ್ ಹೋದ ನೋಡಿ” ಎಂದ. ಏ ಓಲ್ವೋ ಬಸ್ಸೆಲ್ಲ ಲಾರಿಗೆ ಸೈಡುಕೊಡಲು ಅವಮಾನ ಎಂದೆ. ಅದ್ಕೆ ಕೊಡ್ಲಿಲ್ಲ ಸಾರ್. ಗಾಡಿ ಯಾಕೆ ಇಲ್ಲಿ ನಿಲ್ಲಿದ್ದೀರಿ. “ಕಿಬ್ಬನಳ್ಳಿ ಕ್ರಾಸು ಸಾರ್ ಇದು ಊಟಕ್ಕೆ ನಿಲ್ಸಿದ್ದೀನಿ”. ಬೆಂಗಳೂರು – ಮಂಗಳೂರು ಬಸ್ಸು ಈಕಡೆ ಯಾಕ್ ಬಂದ್ರಿ. “ಪ್ಯಾಸೆಂಜರು ಇಲ್ಲೇ ಊಟಕ್ಕೆ ನಿಲ್ಸಿ ಅಂದ್ರು ಸಾರ್ ಅದ್ಕೆ”. ನಿಮ್ಮ ಲೇಡಿ ಕಂಡಕ್ರು ಸರಿಯಿಲ್ಲ ಎಂದೆ. ಉಷಾರಾಗಿರಿ ಸಾರ್ ಕಳ್ಳಿ ಅವುಳು, ಅವುರ ಮನೆಯವರು ಜೈಲಲ್ಲೆಲ್ಲಾ ಇದ್ದು ಬಂದವರೆ ಟಿವಿಲೆಲ್ಲ ಅವರ ಸುದ್ದಿ ಬಂತು, ನಿಮ್ಮ ಒಡವೆ ದುಡ್ಡನೆಲ್ಲ ಜೋಪಾನವಾಗಿ ಇಟ್ಟುಕೊಳ್ಳಿ” ಎಂದ. ಕೂಡಲೇ ಕಂಡಕ್ಟರ್ ಸುಳ್ಳೆ ತನ್ನ ಮುಖವಾಡ ತೆಗೆದು ನಾನು ಕಳ್ಳಿಯಲ್ಲ ಬೇಕಾದ್ರೆ ನೋಡಿ ಎಂದು ಸತ್ಯದರ್ಶನ ಮಾಡಿದ ಮುಖಭಾವದಲ್ಲಿ ನಿಂತಳು. ಆಕೆ ಮಾಡಿದ್ದು ಅದಾವ ಸಿನಿಮಾದಲ್ಲಿಯೋ ಗೊತ್ತಿಲ್ಲ. “ಇಂಥವರನ್ನೆಲ್ಲ ನೀವು ಕೆಲಸಕ್ಕೆ ಸೇರಿಸಿಕೊಳ್ಳುಬಾರ್ದು ಎಂದೆ”. ಏನ್ಮಾಡದು ಸಾರ್ ಲಂಚಕೊಟ್ಟು ಸೇರಿಕೊಳ್ತರೆ, ನಮಿಗೆ ತೊಂದ್ರೆ, ಗಾಡಿ ಕೆಟ್ಟಾಗ ಒಂಚೂರು ಹೆಲ್ಪ್ ಮಾಡಲ್ಲ” ಎಂದ. ಓಲ್ವೋ ಗಾಡಿ ಕೆಡಲ್ಲ ಅಲ್ವಾ. ಕೆಡಲ್ಲ ಆದ್ರು ಒಂದೊಂದು ಸಾರ್ತಿ ರಸ್ತೆ ಬದಿ ನಿಲ್ಲುಸ್ತಿವಿ, ಆಗ ಪ್ಯಾಸೆಂಜರ್‍ಗಳಿಗೆ ಹೆಲ್ಪ್ ಮಾಡಬೇಕು, ನಾನು ಡ್ರೈವರ್ ಹೆಲ್ಪ್ ಮಾಡಕ್ಕಾಗತ್ತ. ಈ ಓಲ್ವೋ ಗಾಡಿ ನಿಂದೂ ಅಥವಾ ಕೆಲಸಕ್ಕಿದ್ದಿಯೋ ಎಂದೆ. ನಾನು ಡ್ರೈವರ್ ಕೆಲಸ ಮಾಡ್ತಿನಿ ಎಂದ. ನಿಮ್ಮ ಸಾವುಕಾರ್ರು ಕೆಲಸ ಬಿಡಿಸಿದ್ರೆ ಏನ್ ಮಾಡ್ತಿ ಎಂದೆ. ಓಲ್ವೋ ಕಾರು ತಕೊಂಡು ಓಡುಸ್ತಿನಿ ಎಂದ. ಓಲ್ವೋ ಕಾರು ಒಳ್ಳೆದ ಎಂದೆ. “ತುಂಬಾ ಒಳ್ಳೆದು ಸಾರ್, ಗೇರ್ ಹಾಕಂಗಿಲ್ಲ, ಬರೀ ಎಕ್ಸಲೇಟ್ರು, ಬ್ರೇಕ್ ಅಷ್ಟೇ. ಆರಾಮಾಗಿ ಓಡುಸಬಹುದು” ಎಂದ. ಹುಡುಗನಿಗೆ ಎಲ್ಲಾ ಕಾರುಗಳ ಹೆಸರೂ ಗೊತ್ತು. ಜೊತೆಗೆ ಅವುಗಳ ಬಗ್ಗೆ ಅಸಾಧ್ಯ ಸುಳ್ಳು ಮಾಹಿತಿಯೂ ಗೊತ್ತು. ಈತನ ಓಲ್ವೋ ಬಸ್ಸಿನಲ್ಲಿ ಸಹಾಯಕಿ ಆಗಿರುವ ಮಗು ಆಗಾಗ್ಗೆ ಸುಳ್ಳು ಸುಳ್ಳೇ ಮೊಬೈಲ್ ಫೋನ್ ಮಾಡುತ್ತ, ನಗುತ್ತ ಆಶ್ಚರ್ಯ ಪಡುತ್ತ ಮಾತನಾಡುತ್ತಾಳೆ. ಅಲ್ಲದೆ ದೊಡ್ಡವರಂತೆ ತಿರುಗಾಡುತ್ತ ಕಿಟಕಿಬಳಿ ನಿಂತು ಬಾಗಿಲಬಳಿ ನಿಂತು ಮಾತನಾಡುತ್ತಾಳೆ. “ಯಾರ ಜೊತೆ ಮಾತಾಡ್ತಯಿದ್ದಿ ಮಗು” ಎಂದೆ. ನನ್ನ ಪ್ರೆಂಡ್ ಹಿರೀಶ್ “ಎಲ್ಲಿನಾನೆ ಅವುನು” ಎಂದೆ. “ಪಾರ್ಕತ್ರ ನಿಂತಿದಾನೆ” ಎಂದಿತು. ಕರಿ ಮನಿಗೆ ನಾನು ಮಾತಾಡುಸ್ತಿನಿ ಎಂದೆ. ಆಕೆ ಕರೆದಳು. ಕ್ಷಣಬಿಟ್ಟು ಬಾಗಿಲ ಕಡೆ ನೋಡಿದ ನಾನು “ಬಾರಪ್ಪ ಬಾ ಒಳಗಡೆ ಕೂತುಕೊ ಎಂದು” ಅವನನ್ನೆ ನೋಡಿದೆ. ಆತ ಬಂದು ಕುರ್ಚಿ ಮೇಲೆ ಕೂತ ನಂತರ ಅವನ ತಂದೆತಾಯಿ ಬಗ್ಗೆ ವಿಚಾರಿಸಿದೆ. ಪ್ರಶ್ನೆಗಳಿಗೆ ನಾನೇ ಉತ್ತರ ಹೇಳುತ್ತಾ ಇರಬೇಕಾದರೆ ಅವನಿಗೆ ಫೋನ್ ಮಾಡಿದವರ ಮುಖಭಾವ ನೋಡಬೇಕಿತ್ತು ನಿಜಕ್ಕು ಹಿರೀಕೆ ಕುರ್ಚಿಮೇಲೆ ಕುಳಿತು ಉತ್ತರಿಸುತ್ತಿದ್ದಾನೆ ಎಂದು ನೋಡಿದರು. ಕಡೆಗೆ ನಾನು “ನೋಡು ನಮ್ಮ ಮಕ್ಕಳಿಗೆ ಯಾವಾಗಲೂ ಫೋನ್ ಮಾಡಬೇಡ ಆಯ್ತ, ಈಗ ಹೋಗು” ಎಂದೆ. ಆತ ಎದ್ದು ಹೊರಟಂತೆ ನೋಡಿದ ನಾನು, ನಿಮ್ಮ ತಂದೆ ತಾಯಿ ಕರಕಂಡು ಬಾ ಒಂದಿನ ಎಂದುದಲ್ಲದೆ, ಓಕೆ ಬಾಯ್ ಎಂದೆ. ಓಲ್ವೋ ಬಸ್ಸಿನ ಸಹಾಯಕಿ ಮತ್ತು ಫೋನ್ ನಂಬರ್ ಒತ್ತತೊಡಗಿತು. ಯಾರಿಗೆ ಮಗು ಫೋನ್ ಮಾಡ್ತಿ ಎಂದೆ. ನನ್ನ ಪ್ರೆಂಡಿಗೆ ಎಂದಳು. ಎಲ್ಲ ನಂಬರ್ ಹೇಳು ನಾನು ಮಾಡ್ತಿನಿ ಎಂದೆ. ಆಕೆ ಹೇಳಿದ ನಂಬರ್‍ಗೆ ಮಾಡಿದೆ. ಅದು ತಮಿಳುನಾಡಿಗೆ ಹೋಯಿತು. ಏನಮ್ಮ ಇದು ತಮಿಳುನಾಡಿಗೋಯ್ತಲ್ಲ ಯಾರವುರಲ್ಲಿ ಎಂದೆ. ಸಾಂಜನೇಯ ಎಂದಿತು. ಸಾಂಜನೇಯ ಅಂತ್ಲೂ ಇದ್ದಾರ ಎಂದು ಮತ್ತೆ ಮಾಡಿದಾಗ “ಈ ನಂಬರ್ ಚಾಲನೆಯಲ್ಲಿ ಇಲ್ಲ” ಎಂದು ಬಂತು. ಸಾಂಜನೇಯನ ಫೋನ್ ನಂಬರ್ ಇದಲ್ಲ ಎಂದೆ. ಕೂಡಲೇ ಮಗು ನನ್ನ ಅಜ್ಞಾನವನ್ನ ತಿದ್ದುವಂತೆ ಅಯ್ಯೋ ನಂಬರ್‍ಗೆ ಹೊಡಿಬಾರ್ದು ಸುಮ್ಮನೆ ಮೊಬೈಲ್ ಮೇಲೆ ಹಿಂಗೆ ಮಾಡಬೇಕು” ಎಂದು ತನ್ನ ಅಂಗೈ ಮೇಲೆ ಒತ್ತಿ ತೋರಿದಳು. ಅಂದರೆ ಇವರ ಕನಸಿನ ಲೋಕದ ಗೆಳೆಯರು ಸುಳ್ಳು ನಂಬರ್‍ಗಳಲ್ಲಿದ್ದರು. ಅದೋ ಇಬ್ಬರೂ ಹುಡುಗರು ಭಲಾ ಮಕ್ಕಳೆ ಎನಿಸಿತು.
ಗೆಳೆಯರೊಬ್ಬರ ಮನೆಬಾಗಿಲಲ್ಲಿ ಪುಟ್ಟ ಮಗುವೊಂದು ಕುಳಿತಿತ್ತು. ಅದಿನ್ನು ಸ್ಕೂಲಿಗೆ ಸೇರಿರಲಿಲ್ಲ. ಏನು ಮಾಡ್ತಯಿದ್ದಿ ಕಂದಾ ಎಂದೆ. ಓದಿಕೊಬೇಕು ಎಂತು. ಏನೊದಿಕತ್ತಿ ಎಂದೆ. ಇಂಗ್ಳಿಶು ಎಂದಿತು. ಯಾಕೆ ಎಂದೆ. ಎಗ್‍ಜಾಮು ಎಂದ ಅದರ ಮುಖಭಾವ ನೋಡಬೇಕಿತ್ತು. ಯಾರು ಹಾಗೆ ಹೇಳಿದ್ದರೋ ಏನೋ, ಈ ಮಗು ಚಿಂತಾಕ್ರಾಂತ ಮುಖಭಾವದಲ್ಲಿ ಉತ್ತರಿಸಿತ್ತು. ನಾನು ಮಾತನಾಡಿಸಿದ ಕಾನ್ವೆಂಟ್ ಮಕ್ಕಳಿಗೆ ಈಗಾಗಲೇ ಕನ್ನಡ ಇಂಗ್ಲಿಷ್ ಹಿಂದಿ ಭಾಷೆ ಕಲಿಸುತ್ತಿದ್ದಾರೆ. ಆ ಮಕ್ಕಳಿಗೆ ಕನ್ನಡ ಕಲಿಯುವುದು ಕಷ್ಟವಾಗಿದೆ. ಏಕೆಂದರೆ ಹಿಂದಿ ಇಂಗ್ಲಿಷ್ ಅಕ್ಷರ ಕಲಿಯಲು ಅವರಿಗೆ ಸುಲಭವಾಗಿದ್ದಂತ ಕನ್ನಡ ತಿದ್ದಲು ಕಷ್ಟವಾಗಿದೆ. ಈ ಕಾನ್ವೆಂಟ್‍ನ ಅಥವ ಯಾವುದೇ ಶಾಲೆಯ ಮೂರ್ಖ ಶಿಕ್ಷಕರು, ಮೊದಲು ನಮ್ಮ ಮಾತೃ ಭಾಷೆಯನ್ನ ಕಲಿಸಬೇಕು. ಅದನ್ನ ಪೂರ್ಣವಾಗಿ ಕಲಿತ ನಂತರ ಇತರ ಭಾಷೆಯನ್ನ ಹೇಳಿಕೊಡಬೇಕು. ಹಕ್ಕಿ-ಪಕ್ಷಿಗಳು ಕೂಡ ಹೂಮರಿಗಳಿಗೆ ಜೀರ್ಣವಾಗುವ ಮೃದುವಾದ ಕೀಟಗಳನ್ನ ಆರಿಸಿ ತಂದು ನಂತರ ಗಟ್ಟಿಯಾದ ಆಹಾರ ಕೊಡುತ್ತವೆ. ಈ ನರ ಮನುಷ್ಯರಿಗೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ. ಮೊನ್ನೆ ಕಾನ್ವೆಂಟಿಗೆ ಹೋಗುವ ಮಗುವೊಂದು ಸದ್ದಿಲ್ಲದೆ ಕಣ್ಣೀರು ಹಾಕುತ್ತಿತ್ತು ಪ್ರೀತಿಯಿಂದ ಕೇಳಿದಾಗ, ಹೋಂವರ್ಕ್ ಮಾಡಿರಲಿಲ್ಲ. ಅದರ ತಂದೆ ತಾಯಿಗಳು ಮತ್ತು ಕಾನ್ವೆಂಟ್ ಕೋರ್ಟ್ ಆಜ್ಞೆಯನ್ನೇ ಉಲ್ಲಂಘಿಸಿದರು. ಗೆಳೆಯ ಕೃಷ್ಣಮೂರ್ತಿ ಬಿಳಿಗೆರೆ ತನ್ನ ಅಕ್ಕನ ಮಗುವನ್ನು ಮಾತನಾಡಿಸಿ ಆ ಮಗುವಿನ ಕನಸಿನ ಮಾತುಗಳನ್ನೆ ಪುಟಾಣಿಗಳ ಕತೆಯಾಗಿಸುತ್ತಿದ್ದ. ಯಾವತ್ತು ಆ ಮಗುವನ್ನೇ ಕಾನ್ವೆಂಟ್‍ಗೆ ಸೇರಿಸಿದರೋ ಅವತ್ತೆ ಆ ಮಗುವಿನ ಕನಸುಗಳೆಲ್ಲಾ ಒಂದಾದವು. ಸದ್ಯದ ಕಾನ್ವೆಂಟುಗಳು ಮಕ್ಕಳು ಆಲೋಚನೆಯನ್ನ ಅಂದರೆ ಅವುಗಳ ಮನಸ್ಸನ್ನೇ ಪೂರ್ಣ ಬಂದ್ ಮಾಡಿ ಹೋಂ ವರ್ಕ್ ಕೊಡುತ್ತಿದ್ದಾರೆ. ಇದು ನಾವು ಹೇಳಿದಷ್ಟೇ ನೀವು ಕೇಳಬೇಕು ಮಾಡಬೇಕು ಎಂಬ ಶತಮಾನಗಳ ಕಾಲದ ಪುರೋಹಿತ ಸಿದ್ಧಾಂತದಂತಿದೆ. ಮಕ್ಕಳ ಮೇಲೆ ಪೋಷಕರು ತಮ್ಮ ಕನಸುಗಳನ್ನು ಹೇರುತ್ತಿದ್ದಾರೆ. ನನ್ನ ಸುತ್ತಲವರ ಉದಾಹರಣೆಗಳನ್ನು ಕೊಡುವುದಾದರೆ, ಪರಿಚಿತ ಗೆಳೆಯನೊಬ್ಬನ ಹೆಂಡತಿ ಅಣ್ಣಂದಿರು ಎಂಬಿಬಿಎಸ್ ಮಾಡಿದ್ದರಂತೆ. ಆ ನನ್ನ ಮಕ್ಕಳಿಗೆ ನಾನೇನು ಕಡಿಮೆ ಅಂತ ಮಗಳನ್ನು ಡಾಕ್ಟರಳನ್ನಾಗಿಸಲು ಹಟತೊಟ್ಟು ದಾವಣಗೆರೆಗೆ ಕಳಿಸಿದರು ಅಪ್ಪನ ಒತ್ತಡಕ್ಕೆ ಸುಸ್ತಾದ ಮಗಳು, ಡಲ್ಲಾದಳು ಕಡೆಗೆ ಎಂಬಿಬಿಎಸ್ ಬಿಟ್ಟು ಮನೆ ಸೇರಿದಳು. ಇನ್ನೊಬ್ಬ ಗೆಳೆಯ ತನ್ನ ಮಗನನ್ನು ಕರೆದುಕೊಂಡು ಹೋಗಿ ಸಿದ್ದರಾಮೇಶ್ವರ ಜಯಂತಿಯ ವೇದಿಕೆ ಮೇಲಿದ್ದ ಗಣ್ಯಮಾನ್ಯರನ್ನ ತೋರಿಸುತ್ತ “ನೋಡಪ್ಪ ನೀನೂ ಹಾಗೇ ಆಗಬೇಕು. ನನ್ನ ಹೆಸರುಳಿಸಿ ನಮ್ಮ ಮನೆತನಕ್ಕೆ ಕೀರ್ತಿ ತರಬೇಕು ಎಂಬ ಜವಾಬ್ದಾರಿಯನ್ನು ಆ ಕಂದನ ತಲೆಗೆ ಎಷ್ಟು ತುಂಬದ ಎಂದರೆ, ತಾನು ಅಪ್ಪನ ಮಹದಾಸೆಯನ್ನ ಈಡೇರಿಸಲು ಸಾಧ್ಯವೇ ಇಲ್ಲ ಎಂಬ ಹಂತಕ್ಕೆ ಆ ಹೈಸ್ಕೂಲ್ ಮಗು ಬಂದು ನಿಂತಿತು. ಎರಡೇ ದಿನದ ಅಂತರದಲ್ಲಿ ಮಂಗಳೂರು ಬೀಚಲ್ಲಿ ಹುಡುಗನ ಶವ ತೇಲುತ್ತಿತ್ತು. ತಂದೆ-ತಾಯಿಗಳು ತಮ್ಮ ಬಾಲ್ಯದ ದಿನಗಳನ್ನ ನೆನೆಸಿಕೊಂಡು ಮಕ್ಕಳೊಡನೆ ಬೆರೆತರೆ ಇಂತಹ ದುರಂತ ನಡೆಯಲಾರವು.


