ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ಇಳಕಲ್‌ನಲ್ಲಿರುವ ಸೇಂಟ್ ಪೌಲ್ಸ್ ಹೈಯರ್ ಪ್ರೈಮರಿ ಶಾಲೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಮುಚ್ಚಿದ್ದಾರೆ.
‘ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮತಾಂತರಕ್ಕೆ ಶಾಲೆಯವರು ಯತ್ನಿಸುತ್ತಿದ್ದಾರೆ’ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದ್ದು, “ಕೆಲ ಬಲಪಂಥೀಯ ಸಂಘಟನೆಗಳು ದೂರು ನೀಡಿದ್ದವು” ಎಂದು ಡಿ.30ರಂದು ಬ್ಲಾಕ್ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
‘ನಿಯಮ ಉಲ್ಲಂಘಿಸಿ ಕ್ರಿಸ್‌ಮಸ್ ಆಚರಿಸಿದ ಕಾರಣಕ್ಕೆ ಶಾಲೆಯನ್ನು ಅನಿರ್ದಿಷ್ಟಾವಧಿ ಮುಚ್ಚಲಾಗುತ್ತಿದೆ’ ಎಂದು ಹೇಳಲಾಗಿದೆ. ಆದರೆ ಆದೇಶದಲ್ಲಿ ನಿಯಮಗಳು ಯಾವುವೆಂದು ಉಲ್ಲೇಖಿಸಿಲ್ಲ. “ಡಿಸೆಂಬರ್ 25ರಂದು ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ನೀವು ತರಗತಿ ಕೊಠಡಿಗಳಲ್ಲಿ ಮಾಂಸವನ್ನು ಬಡಿಸಿದ್ದೀರಿ. ಇದು ಸಾರ್ವಜನಿಕರಿಗೆ ಮತ್ತು ಇಲಾಖೆಗೆ ಮುಜುಗರಕ್ಕೆ ಕಾರಣವಾಗಿದೆ. ಮುಂದಿನ ಆದೇಶದವರೆಗೆ ನೀವು ಶಾಲೆಯನ್ನು ಮುಚ್ಚಬೇಕು. ಅನುಮತಿ ಪಡೆಯದೇ ಶಾಲೆ ತೆರೆದರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಹಿಂದುತ್ವ ಪರ ಸಂಘಟನೆಗಳ ಸಂಚಾಲಕ ಪ್ರದೀಪ ಅಮರಣ್ಣನವರ್, ‘ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮತಾಂತರಕ್ಕೆ ಯತ್ನಿಸಲಾಗುತ್ತಿದೆ’ ಎಂದು ತಹಶೀಲ್ದಾರ್ ಕೆ.ರತ್ನ ಅವರಿಗೆ ದೂರು ನೀಡಿದರು.
“ಶಾಲೆಯ ಮ್ಯಾನೇಜ್‌ಮೆಂಟ್ ಕ್ರಿಸ್ಮಸ್ ದಿನದಂದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶಾಲೆಗೆ ಆಹ್ವಾನಿಸಿತು. ಮಾಂಸ, ಮದ್ಯ ಮತ್ತು ಬೈಬಲ್‌ನ ಕನ್ನಡ ಅನುವಾದವಾದ ‘ಸತ್ಯ ವೇದ’ ನೀಡಲಾಯಿತು. ಇದು ಆಮಿಷ ಮತ್ತು ಬಲವಂತದ ಮೂಲಕ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ” ಎಂದು ಹಿಂದುತ್ವ ಮುಖಂಡರು ಆರೋಪಿಸಿದ್ದಾರೆ.
ಪ್ರಾಂಶುಪಾಲರಾದ ಸಿಲ್ವಿಯಾ ಡಿ ಮಾರ್ಕ್, ಶಾಲಾ ಆಡಳಿತ ಸಮಿತಿ ಸದಸ್ಯರಾದ ಜಾಕ್ಸನ್ ಡಿ ಮಾರ್ಕ್ ಮತ್ತು ಉಮೇಶ್ ನಾಯಕ್ ಹರಪನಹಳ್ಳಿ ಅವರನ್ನು ದೂರಿನಲ್ಲಿ ಹೆಸರಿಸಲಾಗಿದೆ.
“ಶಾಲೆ ಪ್ರಾರಂಭವಾದಾಗಿನಿಂದಲೂ ಬಂಜಾರ, ಅಂಬಿಗ ಮತ್ತು ಇತರ ಗುಂಪುಗಳಂತಹ ಬಡ ಮತ್ತು ಹಿಂದುಳಿದ ಸಮುದಾಯಗಳ ಜನರನ್ನು ಮತಾಂತರಿಸಲಾಗುತ್ತಿದೆ. ಅವರು ಹಿಂದೂ ದೇವರುಗಳನ್ನು ಅವಮಾನಿಸುತ್ತಿದ್ದಾರೆ ಮತ್ತು ದುರ್ಬಲ ಗುಂಪುಗಳನ್ನು ಮತಾಂತರ ಮಾಡುತ್ತಿದ್ದಾರೆ. ಅವರು ಮತಾಂತರಗೊಂಡ ನಂತರ ತಮ್ಮ ಮನೆಗಳಿಂದ ಹಿಂದೂ ದೇವರುಗಳ ಪ್ರತಿಮೆಗಳು ಮತ್ತು ಚಿತ್ರಗಳನ್ನು ಎಸೆಯುವಂತೆ ಅವರು ಒತ್ತಾಯಿಸುತ್ತಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಅದಕ್ಕಿಂತ ಹೆಚ್ಚಾಗಿ ಶಾಲೆಯ ಆಡಳಿತ ಮಂಡಳಿಯು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳಿಗೆ ಲಂಚ ನೀಡುವುದರಿಂದ ಶಾಲೆಯ ಪರವಾನಗಿಯನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತಿದೆ. ಅಧಿಕಾರಿಗಳು ಶಾಲೆಯನ್ನು ಮುಚ್ಚಬೇಕು ಮತ್ತು ಪರವಾನಗಿ ರದ್ದುಗೊಳಿಸಬೇಕು” ಎಂದು ದೂರಿನಲ್ಲಿ ಆಗ್ರಹಿಸಿದ್ದರು.
ದೂರಿನ ಮೇರೆಗೆ ಶಿಕ್ಷಣ ಇಲಾಖೆಯ ಬ್ಲಾಕ್ ಸಂಪನ್ಮೂಲ ಸಮನ್ವಯಾಧಿಕಾರಿ ಐ.ಎಂ.ಅಂಗಡಿ ಶಾಲೆಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಬಿಇಒ ವರದಿ ಅನ್ವಯ ಕ್ರಮಕೈಗೊಂಡು ಮುಚ್ಚಲು ಆದೇಶಿಸಿದ್ದಾರೆ.
ಶಾಲಾ ಆಡಳಿತ ಸಮಿತಿ ಸದಸ್ಯರಾದ ಜಾಕ್ಸನ್ ಡಿ ಮಾರ್ಕ್ ಇಳಕಲ್ ಅವರು ಪತ್ರಕರ್ತರೊಂದಿಗೆ ಮಾತನಾಡಿದ್ದು, “ಬಲಪಂಥೀಯ ಗುಂಪುಗಳು ಹೊರಿಸಿರುವ ಆರೋಪಗಳು ಆಧಾರ ರಹಿತವಾಗಿವೆ” ಎಂದು ತಿಳಿಸಿದ್ದಾರೆ.
“ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಮೊದಲನೆಯದಾಗಿ, ಶಾಲೆಯನ್ನು ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿಲ್ಲ. ಇಳಕಲ್‌ನ ಕೆಲ ನಿವಾಸಿಗಳು ಇದನ್ನು ನಡೆಸುತ್ತಿದ್ದಾರೆ. ಬಾಡಿಗೆ ಆವರಣದಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲಾ ಸಮಿತಿಯು ಎಲ್ಲಾ ಧರ್ಮಗಳ ಸದಸ್ಯರನ್ನು ಒಳಗೊಂಡಿದೆ. ಶಾಲೆಯಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ: ’ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿ ಮಣಿಪುರದ ಪಾದ್ರಿ ಮೇಲೆ ಹಲ್ಲೆ; ವಿಡಿಯೊ ವೈರಲ್



Mistion SCHOOL IS GOOD FOR Education
All ready due to Covid-19 Children’s lost education 2yrs
Please open school give education
ಶಾಲೆ ಮುಚ್ಚಿದರೆ ಸಾಲದು, ಮತಾಂತರ ಮಾಡಲು ಯತ್ನಿಸಿದ ಎಲ್ಲರಿಗೂ ಶಿಕ್ಷೇ ಆಗಲಿ