ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ ಅಲಿಯಾಸ್ ಚಾರ್ಲಿ ಥಾಮಸ್ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣ ಸಂಬಂಧ ನಾಲ್ವರು ಅಧಿಕಾರಿಗಳನ್ನು ಕೇರಳ ಸರ್ಕಾರ ಶುಕ್ರವಾರ (ಜುಲೈ 25) ಅಮಾನತುಗೊಳಿಸಿದೆ.
ಸಹಾಯಕ ಜೈಲು ಮೇಲ್ವಿಚಾರಕ ರೇಜೊ, ಉಪ ಜೈಲು ಅಧಿಕಾರಿ ರೇಜಿಶ್ ಮತ್ತು ಸಹಾಯಕ ಜೈಲು ಅಧಿಕಾರಿಗಳಾದ ಸಂಜಯ್ ಮತ್ತು ಫರಿತ್ ಅಮಾನತುಗೊಂಡವರು. ಕಾರಾಗೃಹಗಳ ಉಪ ಮಹಾನಿರೀಕ್ಷಕರು (ಉತ್ತರ ವಲಯ) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಈ ಅಧಿಕಾರಿಗಳ ಕರ್ತವ್ಯ ಲೋಪ ಕಂಡು ಬಂದಿದೆ. ಈ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
23 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗೋವಿಂದಚಾಮಿ, ಶುಕ್ರವಾರ ಮುಂಜಾನೆ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ. ಪೊಲೀಸರ ಅಂದಾಜಿನ ಪ್ರಕಾರ, ಮುಂಜಾನೆ ಸುಮಾರು 4.15 ರಿಂದ 6.30ರ ನಡುವೆ ಆತ ಜೈಲಿನಿಂದ ತಪ್ಪಿಸಿಕೊಂಡಿದ್ದ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕಣ್ಣೂರು ನಗರ ಪೊಲೀಸ್ ಆಯುಕ್ತ ನಿಧಿನ್ ರಾಜ್, ಬೆಳಿಗ್ಗೆ 6.30ರ ಸುಮಾರಿಗೆ ಗೋವಿಂದಚಾಮಿ ಜೈಲಿನಿಂದ ತಪ್ಪಿಸಿಕೊಂಡ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ನಂತರ ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಕಣ್ಣೂರಿನ ಮೇಲೆ ವಿಶೇಷ ಗಮನ ಹರಿಸಲಾಯಿತು. ನೆರೆಯ ರಾಜ್ಯಗಳಿಗೂ ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ.
ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಸುಮಾರು ಐದು ಗಂಟೆಗಳ ನಂತರ, ಬೆಳಿಗ್ಗೆ 10.15ರ ಸುಮಾರಿಗೆ ಜೈಲಿನಿಂದ ಮೂರು ಕಿಲೋಮೀಟರ್ ದೂರದ ತಲಾಪ್‌ನಲ್ಲಿರುವ ಪಾಳುಬಿದ್ದ ಮನೆಯ ಬಾವಿಯಲ್ಲಿ ಗೋವಿಂದಚಾಮಿ ಅವಿತುಕೊಂಡಿರುವುದು ಗೊತ್ತಾಯಿತು. ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಸೆರೆ ಹಿಡಿದರು ಎಂದು ತಿಳಿಸಿದ್ದಾರೆ.
ಕಾರಾಗೃಹಗಳ ಉಪ ಮಹಾನಿರೀಕ್ಷಕರು (ಉತ್ತರ ವಲಯ) ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಜೈಲು ಅಧಿಕಾರಿಗಳ ಲೋಪ ಕಂಡುಬಂದಿವೆ ಎಂದು ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಹಾನಿರ್ದೇಶಕ ಬಲರಾಮ್ ಕುಮಾರ್ ಉಪಾಧ್ಯಾಯ ಹೇಳಿದ್ದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಈ ಪ್ರಕರಣದ ಬಗ್ಗೆ ಡಿಐಜಿ ವಿವರವಾದ ತನಿಖೆ ನಡೆಸಲಿದ್ದಾರೆ. ಅವರ ಪ್ರಾಥಮಿಕ ತನಿಖೆಯಲ್ಲಿ ಹಲವಾರು ಲೋಪಗಳು ಬೆಳಕಿಗೆ ಬಂದಿವೆ. ಗೋವಿಂದಚಾಮಿ ನಿಖರವಾದ ಯೋಜನೆ ರೂಪಿಸಿ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂಬುವುದು ಆಂತರಿಕ ತನಿಖೆ ಸೂಚಿಸುತ್ತದೆ ಎಂದಿದ್ದಾರೆ.
ವರದಿಗಳ ಪ್ರಕಾರ, ಪ್ರತಿದಿನ ಬೆಳಿಗ್ಗೆ 5:30ಕ್ಕೆ ಜೈಲು ಅಧಿಕಾರಿಗಳು ಖೈದಿಗಳನ್ನು ಎಣಿಕೆ ಮಾಡುತ್ತಾರೆ. ಶುಕ್ರವಾರ ಬೆಳಿಗ್ಗೆ ಎಣಿಕೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದ ಅಧಿಕಾರಿಗಳು ಎಲ್ಲವೂ ಸರಿಯಾಗಿದೆ ಎಂದಿದ್ದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಜೈಲಿನ ಗೋಡೆಯ ಮೇಲೆ ಬಟ್ಟೆ ನೇತಾಡುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು, ಖೈದಿಗಳ ಮರು ಪರಿಶೀಲನೆ ನಡೆಸಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಗೋವಿಂದಚಾಮಿ ತಪ್ಪಿಸಿಕೊಂಡಿರುವುದು ಅವರಿಗೆ ಗೊತ್ತಾಗಿದೆ.
ಗೋವಿಂದಚಾಮಿ ಜೈಲಿನ ಕೋಣೆಯ ಸರಳುಗಳನ್ನು ಕತ್ತರಿಸಿ, ಬೆಡ್‌ಶೀಟ್ ಅನ್ನು ಹಗ್ಗದಂತೆ ಬಳಸಿ ಜೈಲಿನ ಗೋಡೆಗಳನ್ನು ಹತ್ತಿ ತಪ್ಪಿಸಿಕೊಂಡಿದ್ದ. ಜೈಲಿನ ಗೋಡೆಗೆ ವಿದ್ಯುತ್ ಬೇಲಿ ಹಾಕಲಾಗಿದ್ದರೂ, ಗೋವಿಂದಚಾಮಿ ತಪ್ಪಿಸಿಕೊಳ್ಳುವ ಸಮಯದಲ್ಲಿ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಆತ ತಪ್ಪಿಸಿಕೊಂಡಿರುವುದು ಖಚಿತವಾಗಿದೆ.
ಗೋವಿಂದಚಾಮಿ ತಪ್ಪಿಸಿಕೊಳ್ಳಲು ಬಹಳ ಎಚ್ಚರಿಕೆಯಿಂದ ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಆತ ತೂಕ ಇಳಿಸಿಕೊಳ್ಳಲು ಅನ್ನ ತಿನ್ನುವುದನ್ನು ಕಡಿಮೆ ಮಾಡಿ ರೊಟ್ಟಿ ಮಾತ್ರ ತಿನ್ನುತ್ತಿದ್ದ. ಇದರಿಂದಾಗಿ ಆತ ಕಂಬಿಗಳನ್ನು ಕತ್ತರಿಸಿ ಅವುಗಳ ಮಧ್ಯೆ ತಪ್ಪಿಸಿಕೊಳ್ಳಲು ಸುಲಭವಾಗಿದೆ ಎಂದಿದ್ದಾರೆ.
ಫೆಬ್ರವರಿ 2011ರಲ್ಲಿ, 23 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣದಲ್ಲಿ ಗೋವಿಂದಚಾಮಿ ಶಿಕ್ಷೆಗೊಳಗಾಗಿದ್ದ. ಕೊಲೆಯಾದ ಮಹಿಳೆ ಫೆಬ್ರವರಿ 1, 2011ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಆಕೆಯನ್ನು ರೈಲಿನಿಂದ ಕೆಳಕ್ಕೆ ತಳ್ಳಿ ಗೋವಿಂದಚಾಮಿ ಅತ್ಯಾಚಾರವೆಸಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಫೆಬ್ರವರಿ 6 ರಂದು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದರು.
ಬಾಲಕಿ ಮೇಲೆ ಮೂವರಿಂದ ಅತ್ಯಾಚಾರ; ಗರ್ಭಿಣಿ ಎಂದು ತಿಳಿದ ಬಳಿಕ ಜೀವಂತ ಹೂಳಲು ಪ್ರಯತ್ನ


