COVID-19 ವಿರುದ್ಧದ ಹೋರಾಟದಲ್ಲಿ ನಾವು ಕೇಂದ್ರದೊಂದಿಗೆ ಸಂಪೂರ್ಣ ಹೃದಯದಿಂದ ಸಹಕಾರ ನೀಡುತ್ತಿದ್ದೇವೆ. ಆದರೆ ನಿಸ್ಸಂಶಯವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಅಧಿಕಾರದ ಅಸಮತೋಲನವು ಕೆಲವು ಸವಾಲುಗಳನ್ನು ಒಡ್ಡುತ್ತಿದೆ. ಈ ಸಮಸ್ಯೆಗಳನ್ನು ಸಾಂವಿಧಾನಿಕ ಮಾರ್ಗಗಳ ಮೂಲಕ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರ್ಕಾರದೊಂದಿಗಿನ ಮುಖಾಮುಖಿ ನಮ್ಮ ಹಾದಿಯಾಗಿಲ್ಲ. ಅದೇ ಸಮಯದಲ್ಲಿ ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ”ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ದಿ ಫೆಡರಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದಿರುವ ವಿಜಯನ್‌ರವರ ಸಂದರ್ಶನದ ಕೆಲವು ಆಯ್ದ ಭಾಗಗಳು ಇಲ್ಲಿವೆ.
ಕಳೆದ ಮೂರು ವರ್ಷಗಳಲ್ಲಿ, ನಿಮ್ಮ ಸರ್ಕಾರವು ಓಖಿ ಚಂಡಮಾರುತದಿಂದ COVID-19 ವರೆಗಿನ ಹಲವು ವಿಪತ್ತುಗಳನ್ನು ಎದುರಿಸಬೇಕಾಯಿತು. ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಸಮರ್ಥ ನಾಯಕನಾಗಿ ನಿಮ್ಮನ್ನು ನೋಡಲಾಗುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಇರುವ ಬಿಕ್ಕಟ್ಟಿನ ವಿರುದ್ಧ ಹೋರಾಡುವುದು ಮತ್ತು ಧೈರ್ಯದಿಂದ ಎದುರಿಸಿದರೆ ಮಾತ್ರ ನೀವು ಅದನ್ನು ಅವಕಾಶವಾಗಿ ಪರಿವರ್ತಿಸಬಹುದು. ಕೇರಳವು ಹಿಂದಿನಿಂದಲೂ ಆ ಕೆಲಸ ಮಾಡುತ್ತಿದ್ದು ನಾವು ಅದನ್ನು ಪುನಾರಾವರ್ತನೆ ಮಾಡಿದ್ದೇವೆ ಅಷ್ಟೇ. ಅಲ್ಲದೇ ನಾನೊಬ್ಬನೇ ಇದನ್ನು ಮಾಡಲಾಗುವುದಿಲ್ಲ. ಒಟ್ಟಾರೆ ಇಡೀ ಕೇರಳ ಸಮಾಜವಾಗಿ ನಾವು ಇದನ್ನು ಎದುರಿಸುತ್ತಿದ್ದೇವೆ.
ನಾವು 2017ರ ಓಖಿ ಚಂಡಮಾರುತ, ನಿಫಾ ವೈರಸ್, 2018-19ರ ನೆರೆ ಹಾವಳಿ ಮತ್ತು ಕೋವಿಡ್ ಎಲ್ಲವನ್ನು ಇಡೀ ಸಮಾಜವಾಗಿ ಎದುರಿಸಿದ್ದೇವೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ.
ಮುಖ್ಯಮಂತ್ರಿಯಾಗಿ ನಿಮಗೆ ಸಿಗುವ ಪುರಸ್ಕಾರಗಳ ನಡುವೆಯೂ ಗೃಹ ಇಲಾಖೆ ಮತ್ತು ಪೊಲೀಸರು ಈಗ ಸ್ವಲ್ಪ ಸಮಯದವರೆಗೆ ಟೀಕೆಗೆ ಗುರಿಯಾಗಿದ್ದಾರೆ. ಬಿಜೆಪಿ/ಆರ್‌ಎಸ್‌ಎಸ್ ಜನರು ಒಳಗೊಂಡ ಪ್ರಕರಣಗಳಲ್ಲಿ ಪೊಲೀಸರು ಮೃದುವಾಗಿ ವರ್ತಿಸುತ್ತಾರೆ ಎಂಬ ಆರೋಪವಿದೆ. ನಿಮ್ಮ ಪಕ್ಷಬಿ ಯುಎಪಿಎಗೆ ವಿರುದ್ಧವಾಗಿದ್ದರೂ, ಈ ಕಾಯ್ದೆಯನ್ನು ಕೇರಳ ಪೊಲೀಸರು ಬಳಸಿದ ಉದಾಹರಣೆಗಳಿವೆ. ಕೇರಳ ಪೊಲೀಸರು ಬಲಪಂಥೀಯ ಪಡೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಯುಎಪಿಎ ಕುರಿತು ನಮ್ಮ ಪಕ್ಷ ಮತ್ತು ಸರ್ಕಾರದ ನಿಲುವು ತುಂಬಾ ಸ್ಪಷ್ಟವಾಗಿದೆ. ಯುಎಪಿಎ ಪ್ರಕರಣಗಳನ್ನು ಪರಿಶೀಲಿಸಲು ಒಂದು ಸಮಿತಿ ಇದೆ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಕೇಂದ್ರ ಏಜೆನ್ಸಿಗಳು ನೇರವಾಗಿ ಮಧ್ಯಪ್ರವೇಶಿಸುವಂತಹ ಪರಿಸ್ಥಿತಿ ಇದೆ. ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಡಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ. ಆದ್ದರಿಂದ, ಈ ವಿಷಯಗಳಲ್ಲಿ ತೊಡಗಿಸಿಕೊಳ್ಳುವವರ ರಾಜಕೀಯ ಸಂಬಂಧಕ್ಕಿಂತ ಕಾನೂನುಬದ್ಧತೆಯನ್ನು ನಾವು ಮಾನ್ಯ ಮಾಡುತ್ತೇವೆ. ಪೊಲೀಸರು ಮಾಡಿದ ಉತ್ತಮ ಕಾರ್ಯಗಳನ್ನು ಅಂಗೀಕರಿಸಲು ಮತ್ತು ಅವರ ನ್ಯೂನತೆಗಳನ್ನು ಎತ್ತಿ ತೋರಿಸಲು ಸರ್ಕಾರ ಹಿಂಜರಿಯುವುದಿಲ್ಲ. ಇನ್ನು ಪೊಲೀಸರ ಕುರಿತಂತೆ ಉಳಿದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂಬುದು ನನ್ನ ಅಭಿಪ್ರಾಯ.
ನಿಮ್ಮ ರಾಜಕೀಯ ವಿರೋಧಿಗಳು ದೇಶವನ್ನು ಆಳುತ್ತಿದ್ದಾರೆ. ನರೇಂದ್ರ ಮೋದಿಯವರೊಂದಿಗೆ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಿದಿದ್ದು, ಇದು ಯಾವ ರೀತಿಯಲ್ಲಿ ಕಮ್ಯುನಿಸ್ಟ್ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ?
ಕೇಂದ್ರ-ರಾಜ್ಯ ಸಂಬಂಧದಲ್ಲಿ ಅಧಿಕಾರದ ಅಸಮತೋಲನವು ಕೆಲವು ಸವಾಲುಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಗಳನ್ನು ಸಾಂವಿಧಾನಿಕ ಮಾರ್ಗಗಳ ಮೂಲಕ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. COVID-19 ವಿರುದ್ಧ ಹೋರಾಡುವಾಗ, ನಾವು ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಬದ್ಧರಾಗಿದ್ದೇವೆ.
ಕೇಂದ್ರವು ಮಾಡುವ ಮೊದಲೇ ನಾವು ಲಾಕ್‌ಡೌನ್ ಪ್ರಾರಂಭಿಸಿದ್ದೇವೆ. ಕೇಂದ್ರದೊಂದಿಗೆ ಮುಖಾಮುಖಿಯಾಗದೆ, ನಾವು ಸಹಕಾರದ ಮೂಲಕ ರಾಜ್ಯಕ್ಕೆ ಗರಿಷ್ಠ ಲಾಭಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ, ನಾವು ಕೇಂದ್ರ ಸರ್ಕಾರದ ಸಹಕಾರಕ್ಕಾಗಿ ಹೋದಾಗ ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ.
ರಾಜ್ಯದ ವಿರೋಧ ಪಕ್ಷ ಮತ್ತು ಅದರ ನಾಯಕರ ಸಹಕಾರದ ಕುರಿತು ನಿಮ್ಮ ಅಭಿಪ್ರಾಯವೇನು?
ರಾಜ್ಯದ ಉಳಿವು ಮತ್ತು ಭವಿಷ್ಯದ ವಿಷಯಗಳಿಗೆ ಸಂಬಂಧಿಸಿದಂತೆ, ಸರ್ಕಾರ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ನಂಬುತ್ತೇನೆ.
COVID-19 ಅನ್ನು ಕೇರಳ ನಿರ್ವಹಿಸುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘಿಸಲಾಗಿದೆ ಮತ್ತು ಹೆಚ್ಚು ಹೆಚ್ಚು ವ್ಯಾಖ್ಯಾನಕಾರರು ಇದನ್ನು ಜಗತ್ತಿಗೆ ಒಂದು ಮಾದರಿ ಎಂದು ಉಲ್ಲೇಖಿಸುತ್ತಿದ್ದಾರೆ. ನಿಫಾ ಬಿಕ್ಕಟ್ಟಿನ ಸಮಯದಲ್ಲಿಯೂ ಇದೇ ಸಂಭವಿಸಿದೆ. ನಿಮ್ಮ ‘ಯಶಸ್ಸಿನ ಮಂತ್ರ’ ಏನು?
ಯಶಸ್ಸಿಗೆ ಅಂತಹ ಯಾವುದೇ ಮಂತ್ರವಿಲ್ಲ. ನಾವು ಏನನ್ನಾದರೂ ಸಾಧಿಸಿದರೆ, ಅದರ ಸಂಪೂರ್ಣ ಮನ್ನಣೆ ಬಿಕ್ಕಟ್ಟನ್ನು ನಿವಾರಿಸಲು ಒಟ್ಟಾಗಿ ನಿಂತಿರುವ ಕೇರಳದ ಜನರಿಗೆ ಸಲ್ಲುತ್ತದೆ. ಅಂತಹ ಸೌಹಾರ್ದವು ನಮ್ಮ ಸಮಾಜದಲ್ಲಿ ಯಾವಾಗಲೂ ಇತ್ತು. ಕಠಿಣ ಕಾಲದಲ್ಲಿ ಇಂತಹ ಪ್ರಚಂಡ ಏಕತೆಯ ಪ್ರಜ್ಞೆಯನ್ನು ನಾವು ಪ್ರದರ್ಶಿಸಿದ್ದೇವೆ.
ಕೃಪೆ: ದಿ ಫೆಡರಲ್
ಇದನ್ನೂ ಓದಿ: ಕೊರೋನ ವಾರಿಯರ್ಸ್‌ಗಳೇ ರಿಯಲ್ ಹೀರೋಗಳು: ಅವರಿಗೆ ಹುಸಿ ಸಮ್ಮಾನಗಳು ಸಾಲವು


