Homeಮುಖಪುಟಕೊರೋನ ವಾರಿಯರ್ಸ್‌ಗಳೇ ರಿಯಲ್‌ ಹೀರೋಗಳು: ಅವರಿಗೆ ಹುಸಿ ಸಮ್ಮಾನಗಳು ಸಾಲವು

ಕೊರೋನ ವಾರಿಯರ್ಸ್‌ಗಳೇ ರಿಯಲ್‌ ಹೀರೋಗಳು: ಅವರಿಗೆ ಹುಸಿ ಸಮ್ಮಾನಗಳು ಸಾಲವು

- Advertisement -
- Advertisement -

ಕೊರೋನ ಮುನ್ನ ಸಿನಿಮಾ ತಾರೆಯರು, ಸ್ಪೋರ್ಟ್ಸ್‌ ಸ್ಟಾರ್‌ಗಳು, ಬಾಬಾಗಳು, ಆಧ್ಯಾತ್ಮ ಗುರುಗಳು ದಿನಾ ಟಿವಿಯಲ್ಲಿ ಬರುತ್ತಿದ್ದರು. ಇವರೇ ನಮ್ಮ ಹೀರೋಗಳು, ಇವರ ಸೇವೆ ಸಮಾಜಕ್ಕೆ ಅನಿವಾರ್ಯವೆಂದು ಮಾಧ್ಯಮಗಳು ಬಿಂಬಿಸಿದ್ದವು. ಮಾಧ್ಯಮಗಳ ಬಹುಪಾಲು ಅವಧಿಯನ್ನು ಇವರೇ ಕಬಳಿಸುತ್ತಿದ್ದರು. ಇವರಿಂದಲೇ ನಮ್ಮ ಸಮಾಜದಲ್ಲಿ ಸುಖ ನೆಮ್ಮದಿ ನೆಲೆಸಿದೆ ಎನ್ನುವ ಭ್ರಮೆ ಸೃಷ್ಟಿಯಾಗಿತ್ತು. ಇವೇ ಕಾರಣಗಳಿಂದ, ಇವರ (ಭ್ರಮೆ ಸೃಷ್ಟಿಸುವವರ) ಆದಾಯ, ಅಧಿಕಾರ, ಸ್ಥಾನಮಾನಗಳು, ಶ್ರಮ ಸೃಷ್ಟಿಸುವವರ (ನಮ್ಮ ಸುಖ ನೆಮ್ಮದಿಗೆ ನಿಜವಾದ ಕೊಡುಗೆ ನೀಡುವವರ) ಆದಾಯ, ಅಧಿಕಾರ, ಸ್ಥಾನಮಾನಗಳಿಂದ ನೂರಾರು ಪಟ್ಟು ಹೆಚ್ಚಿದೆ. ಅಷ್ಟು ಮಾತ್ರವಲ್ಲ ನಾವೆಲ್ಲ ಬದುಕಿ ಉಳಿಯಲು ಭ್ರಮೆ ಸೃಷ್ಟಿಸುವವರು ಅನಿವಾರ್ಯ ಅಲ್ಲ ಎನ್ನುವುದು ಎರಡು ತಿಂಗಳ ಲಾಕ್‍ಡೌನ್ ಸಂದರ್ಭದಲ್ಲಿ ಮನವರಿಕೆ ಆಗಿದೆ. ನಾವು ಬದುಕಿ ಉಳಿಯಲು ಸರಕಾರಿ ವೈದ್ಯರು, ದಾದಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಪೋಲಿಸರು ಮುಖ್ಯ ಎನ್ನುವ ಪಾಠವನ್ನು ಕೊರೋನ ಮಾಡಿದೆ. ಇದೇ ಕಾರಣದಿಂದ ಇವರನ್ನು ಕೊರೋನ ವಾರಿಯರ್ಸ್ ಎಂದು ಸರಕಾರ ಮತ್ತು ಮಾಧ್ಯಮಗಳು ಕೊಂಡಾಡುತ್ತಿವೆ.

ಹುಸಿ ಸಮ್ಮಾನಗಳು: ನಮ್ಮ ಸುಖ ನೆಮ್ಮದಿಗೆ ನಿಜ ಹಿರೋಗಳು ಎಷ್ಟು ಮುಖ್ಯವೆಂದು ಸಮಾಜಕ್ಕೆ ಮನವರಿಕೆ ಮಾಡಲು ಸರಕಾರ ಹಲವು ಕಸರತ್ತುಗಳನ್ನು ಮಾಡುತ್ತಿದೆ. ಚಪ್ಪಾಳೆ ತಟ್ಟುವುದು, ಶಂಖ ಊದುವುದು, ಜಾಗಟೆ ಬಾರಿಸುವುದು, ಕ್ಯಾಂಡಲ್ ಉರಿಸುವುದು ಇವೆಲ್ಲ ಮೊದಲ ಕಂತಿನಲ್ಲಿ ನಡೆದ ಸಮ್ಮಾನಗಳು. ನಂತರದ ಕಂತಿನಲ್ಲಿ ಇನ್ನು ಹಲವು ಸಮ್ಮಾನಗಳು ನಡೆದವು. ಹಸುಗೂಸನ್ನು ಮನೆಯಲ್ಲಿ ಬಿಟ್ಟು ಸೇವೆ ಸಲ್ಲಿಸುವ ದಾದಿಗಳು ವೈರಲ್ ಆದರು. ಹತ್ತಿಪ್ಪತ್ತು ದಿನ ಸತತ ಸೇವೆ ಸಲ್ಲಿಸಿ ಮನೆಗೆ ಬರುವ ದಾದಿಗಳಿಗೆ ಹೂ ಹಾಕಿ ಸ್ವಾಗತಿಸಲಾಯಿತು. ಹೆಲಿಕಾಪ್ಟರ್‍ಗಳಿಂದ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಹೂವಿನ ಮಳೆ ಸುರಿಸಲಾಯಿತು. ಇಂತಹ ಸಮ್ಮಾನಗಳಿಗೆ ಇವರು ಯೋಗ್ಯರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಜೀವದ ಹಂಗು ತೊರೆದು ಇವರೆಲ್ಲ ಸೇವೆ ಸಲ್ಲಿಸಿದ್ದಾರೆ. ರಾತ್ರಿ ಹಗಲ್ಲೆನ್ನದೆ ದುಡಿದಿದ್ದಾರೆ. ಸಣ್ಣಪುಟ್ಟ ಕಂದಮ್ಮಗಳನ್ನು ಮನೆಯಲ್ಲಿ ಬಿಟ್ಟು ಕರ್ತವ್ಯ ನಿಭಾಯಿಸಿದ್ದಾರೆ. ಮತ್ತೊಬ್ಬರ ಬದುಕು ಉಳಿಸುವ ಪ್ರಯತ್ನದಲ್ಲಿ ತಮ್ಮ ಜೀವವನ್ನೇ ಆಪಾಯಕ್ಕೆ ಒಡ್ಡಿದ್ದಾರೆ. ಇವರ ಸೇವೆ ಶ್ಲಾಘನೀಯ.

ಹಾಗೆಂದು ಇವರ್ಯಾರು ಪುರಸ್ಕಾರಕ್ಕಾಗಿ ಕೊರೋನ ವಿರುದ್ಧ ಹೋರಾಟಕ್ಕೆ ನಿಂತವರಲ್ಲ. ಇವರೆಲ್ಲ ಈ ಹಿಂದೆ ಮಾಡುತ್ತಿರುವುದನ್ನೇ ಈಗ ಕೊರೋನ ಸಂದರ್ಭದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಇವರ ಸೇವೆಯನ್ನು ಸರಕಾರ ಗುರುತಿಸಲಿಲ್ಲ, ಸಾರ್ವಜನಿಕರೂ ಗುರುತಿಸಲಿಲ್ಲ, ಮಾಧ್ಯಮಗಳೂ ಗುರುತಿಸಲಿಲ್ಲ. ಈ ಹಿಂದೆ ಇವರನ್ನು ನಡೆಸಿಕೊಂಡ ರೀತಿಯನ್ನು ನೋಡಿದರೆ ಇಂದಿನ ಸಮ್ಮಾನಗಳು ತುಂಬಾ ‘ಸಮೀಪ ದೃಷ್ಟಿಯ’ ಮತ್ತು ‘ಅವಕಾಶವಾದಿ ನಡೆ’ಗಳ ರೂಪದಲ್ಲಿ ಕಾಣುತ್ತಿವೆ. ಇದನ್ನು ಕೆಲವು ಸಿಬ್ಬಂದಿಗಳು ಹೇಳಿಕೊಂಡಿದ್ದಾರೆ ಕೂಡ. ‘ನೀವು ಚಪ್ಪಾಳೆ ತಟ್ಟುವುದು, ಹೂ ಹಾಕುವುದು ಯಾವುದು ಬೇಡ. ರೋಗಿಗಳ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮನ್ನು ಸರಕಾರ ನೇಮಕ ಮಾಡಿದ್ದು ಇದೇ ಕೆಲಸಕ್ಕಾಗಿ. ಈ ಕೆಲಸ ಚೆನ್ನಾಗಿ ನಿರ್ವಹಿಸಲು ನಮಗೆ ರಕ್ಷಣಾ ಕವಚಗಳು, ಔಷಧಿಗಳು, ಸವಲತ್ತುಗಳು ಬೇಕು. ಇವನ್ನು ಪೂರೈಸಿದರೆ ನಮಗೆ ಅದುವೇ ದೊಡ್ಡ ಬೆಂಬಲ’ ಎಂದು ವೈದ್ಯರೊಬ್ಬರು ಹೇಳಿಕೊಂಡಿದ್ದಾರೆ. ಹಲವು ದಿನಗಳ ಕರ್ತವ್ಯ ಮುಗಿಸಿ ಬರುವ ದಾದಿಯ ಹಾದಿಗೆ ಹೂ ಚೆಲ್ಲುವ ವಿಡಿಯೋ ವಾಟ್ಸ್‍ಆ್ಯಪ್‍ಗಳಲ್ಲಿ ಹರಿದಾಡುತ್ತಿತ್ತು. ಆ ಹೆಣ್ಣುಮಗಳ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಏಕೆಂದರೆ ಇದೇ ನೆರೆಕರೆಯವರು ಕೊರೋನ ಮುನ್ನ ನೀನು ಬದುಕಿದ್ದಿಯಾ ಇಲ್ವಾ ಎಂದು ವಿಚಾರಿಸಿದವರಲ್ಲ. ಕೊರೋನ ಸಂದರ್ಭದಲ್ಲೂ ಹಲವು ಕಡೆ ನೆರೆಕರೆಯವರು ವೈದ್ಯರನ್ನು, ದಾದಿಗಳನ್ನು ಮನೆ ಬಿಡಿಸಿರುವ ಘಟನೆಗಳು ನಡೆದಿವೆ.

ಆಶಾ ಕಾರ್ಯಕರ್ತರು : ಕೊರೋನ ಮುನ್ನ ಆಶಾ ಕಾರ್ಯತರ್ಕರು 18 ತಿಂಗಳು ಸಂಬಳ ಇಲ್ಲದೆ ದುಡಿದಿದ್ದಾರೆ. ಸಂಬಳ ಕೊಡಿಯೆಂದು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸಲು ಅವರು ತಮ್ಮ ಸ್ವಂತ ಖರ್ಚಲ್ಲಿ ದೂರದ ಊರಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಕೆಲವರು ಬಾಡಿಗೆ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಆ ಸಂದರ್ಭದಲ್ಲಿ ಅಪಘಾತ ಆಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನ ಸಮಸ್ಯೆ ಶುರುವಾದ ನಂತರ ಇವರ ಕೆಲಸದ ಅವಧಿಗೆ ದಿಕ್ಕುದಿಶೆಯೇ ಇಲ್ಲದಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆ ತನಕ ಕೊರೋನ ಸರ್ವೇ, ಜಾಗೃತಿ ಕೆಲಸ. 3 ಗಂಟೆ ನಂತರ ಸಂಜೆಯ ವರೆಗೆ ಪಂಚಾಯತ್ ಕಚೇರಿಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್‍ನ ಕೆಲಸಗಳು. ಇವುಗಳ ಜೊತೆಗೆ ತಮ್ಮ ಮೂಲ ಜವಾಬ್ದಾರಿ – ಗರ್ಭಿಣಿ ಹೆಂಗಸರನ್ನು ತಪಾಸಣೆಗೆ ಕರೆದುಕೊಂಡು ಹೋಗುವುದು, ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದು ಕೊಡಿಸುವುದು, ಟಿಬಿ, ಏಡ್ಸ್ ಪೇಶಂಟ್‍ಗಳಿಗೆ ಮಾತ್ರೆ ವಿತರಿಸುವುದು, ಮಲೇರಿಯಾ, ಡೆಂಗ್ಯೂ ಇತ್ಯಾದಿಗಳ ಬಗ್ಗೆ ಮಾಹಿತಿ ಕಲೆ ಹಾಕುವುದು ಮತ್ತು ಮಾಹಿತಿಯನ್ನು ಅದೇ ದಿನ ವರದಿ ಮಾಡುವ ಕೆಲಸಗಳನ್ನು ನಿರ್ವಹಿಸಬೇಕು. ಇಷ್ಟೆಲ್ಲ ಕೆಲಸಗಳಿವೆ ಇವರಿಗೆ ಸಿಗುವ ತಿಂಗಳ ಸಂಬಳ ನಾಲ್ಕು ಸಾವಿರ ರೂಪಾಯಿಗಳು ಮಾತ್ರ. ಯಶಸ್ವಿ ಡೆಲಿವರಿ ಮಾಡಿಸುವುದು, ಮಕ್ಕಳನ್ನು ಪರೀಕ್ಷೆ ಮಾಡಿಸುವುದು, ರೋಗ ನಿರೋಧಕ ಚಚ್ಚು ಮದ್ದು ಕೊಡಿಸುವುದು ಇತ್ಯಾದಿಗಳಿಗೆ ಇನ್‍ಸೆಂಟೀವ್ ಕೊಡುವ ಕ್ರಮ ಇತ್ತು. ಕೆಲವು ಆಶಾಕಾರ್ಯಕರ್ತರು ಸಂಬಳಕ್ಕಿಂತ ಹೆಚ್ಚು ಇನ್‍ಸೆಂಟೀವ್ ಪಡೆಯುತ್ತಿದ್ದರು. ಆದರೆ ಎರಡು ವರ್ಷಗಳಿಂದ ಇನ್‍ಸೆಂಟೀವ್‍ಗಳಿಗೆ ಅನುದಾನ ಬರುವುದು ನಿಂತಿದೆ.

ಕೊರೋನ ಸಮಸ್ಯೆ ಆರಂಭವಾದ ನಂತರ ಆಶಾ ಕಾರ್ಯಕರ್ತರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಎಎ, ಎನ್‍ಆರ್‍ಸಿ ಪ್ರತಿಭಟನೆ ನಡುವೆಯೇ ಕೊರೋನ ಬಂದಿದೆ. ಕೊರೋನ ಸರ್ವೇಯನ್ನು ಸಿಎಎ, ಎನ್‍ಆರ್‍ಸಿ ಸರ್ವೇಯೆಂದು ತಪ್ಪಾಗಿ ತಿಳಿದು ಆಶಾ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದಿವೆ. ಅಷ್ಟು ಮಾತ್ರವಲ್ಲ ಪರ ಊರಿಂದ ಬಂದ ನೆಂಟರ ಬಗ್ಗೆ ಆಶಾ ಕಾರ್ಯಕರ್ತರೇ ಪಂಚಾಯತ್‍ಗೆ ಮಾಹಿತಿ ನೀಡುತ್ತಾರೆಂದು ಊರಿನ ಸಣ್ಣಪುಟ್ಟ ರಾಜಕೀಯ ಲೀಡರ್‍ಗಳಿಂದಲೂ ಹಲ್ಲೆಗಳು ನಡೆದಿವೆ. ಇವನ್ನೆಲ್ಲ ಸರಕಾರದ ಗಮನಕ್ಕೆ ತಂದಾಗ ಪೊಲೀಸ್ ರಕ್ಷಣೆ ನೀಡಲಾಗುವುದೆಂದು ಭರವಸೆ ನೀಡಲಾಯಿತು. ಆದರೆ ಪೊಲೀಸ್ ರಕ್ಷಣೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಎರಡು ತಿಂಗಳ ಲಾಕ್‍ಡೌನ್‍ನಿಂದ ಆಶಾ ಕಾರ್ಯಕರ್ತರ ಮನೆಮಂದಿಯೆಲ್ಲ ಕೆಲಸ ಕಳೆದುಕೊಂಡರು. ಇಂದು ಆಶಾ ಕಾರ್ಯಕರ್ತರ ಕನಿಷ್ಠ ಸಂಬಳದಿಂದಲೇ ಅವರ ಮನೆಮಂದಿ ಉಸಿರಾಡುವ ಸ್ಥಿತಿ ಇದೆ. ಇವತ್ತು ಹಾಡಿಹೊಗಳುವ ಮಾಧ್ಯಮಗಳು ಇವರ ಗೋಳನ್ನು ಚರ್ಚಿಸಲು ಐದು ನಿಮಿಷ ಮೀಸಲಿಟ್ಟ ಉದಾಹರಣೆ ಸಿಗುವುದಿಲ್ಲ. ಇವರ ಸಮಸ್ಯೆಯನ್ನು ಸಮಾಜಕ್ಕೆ ತಿಳಿಸಲು ವಿದ್ವಾಂಸರು ಕೂಡ ಪ್ರಯತ್ನ ಪಟ್ಟಿಲ್ಲ. ಇಷ್ಟೆಲ್ಲ ಸೇವೆಯನ್ನು ಇವರಿಂದ ಪಡೆದರೂ ಸಮಾಜ, ಸಮುದಾಯ, ಕುಟುಂಬಗಳಲ್ಲಿ ಇವರ ಸ್ಥಾನಮಾನದಲ್ಲಿ ವಿಶೇಷ ಬದಲಾವಣೆಯಾಗಿಲ್ಲ. ಇಲಾಖೆಯಲ್ಲೂ ಇವರ ಸೇವೆಯನ್ನು ಪರಿಗಣಿಸಿ ಸ್ಥಾನಮಾನ ನೀಡುವ ಚರ್ಚೆಗಳಿಲ್ಲ. ಇವರ ಸೇವಾ ಸ್ಥಿತಿ ಮತ್ತು ಆಡಳಿತಾತ್ಮಕ ಸಂಬಂಧವನ್ನು ಸುಧಾರಿಸುವ ಬದಲು ಕೊರೋನ ವಾರಿಯರ್ಸ್ ಎನ್ನುವ ಬಿರುದು ನೀಡಿ ಸರಕಾರ ಸುಮ್ಮನಾಗಿದೆ.

ಸರಕಾರಿ ವ್ಯವಸ್ಥೆಯಲ್ಲಿ ದುಡಿಯುವ ವೈದ್ಯರು, ದಾದಿಗಳು ಕೊರೊನ ಸಂದರ್ಭದಲ್ಲಿ ಸಾರ್ವಜನಿಕರು, ಮಾಧ್ಯಮಗಳು, ಸರಕಾರ ತೋರಿಸುವ ಸಮ್ಮಾನಗಳನ್ನು ನಿರ್ಲಿಪ್ತರಾಗಿ ಸ್ವೀಕರಿಸುತ್ತಿದ್ದಾರೆ. ಇದು ಏಕೆಂದು ಅರ್ಥವಾಗಬೇಕಾದರೆ ಆರೊಗ್ಯ ಇಲಾಖೆ ಕಾರ್ಯನಿರ್ವಹಿಸುವ ವೈಖರಿ ಅರ್ಥವಾಗಬೇಕು. ಸರಕಾರಿ ಆರೋಗ್ಯ ಇಲಾಖೆ ಕಾರ್ಯವೈಖರಿ ಬೇರೆ ಇಲಾಖೆಗಿಂತ ಭಿನ್ನವಲ್ಲ. ಇಲ್ಲೂ ಕೈ ಬಿಸಿ ಮಾಡದೇ ಯಾವುದೇ ಕೆಲಸಗಳಾಗುವುದಿಲ್ಲ. ಸರಕಾರಿ ವೈದ್ಯರು, ದಾದಿಗಳು ತಮ್ಮ ಹಕ್ಕಿನ ರಜೆ, ಮುಂಬಡ್ತಿ, ಸಂಬಳ ಪಡೆಯಲು ಲಂಚ ಕೊಡುವ ಸ್ಥಿತಿ ಇರಬಹುದು. ಇಕ್ವಿಪ್‍ಮೆಂಟ್, ಔಷಧಿ ಖರೀದಿಯಲ್ಲಿ ಸಲ್ಲಿಸಬೇಕಾದನ್ನು ಸಲ್ಲಿಸದಿದ್ದರೆ ಟೆಂಡರ್ ಪಡೆಯುವುದು ಕನಸಿನ ಮಾತು. ಕೆಳಗಿನಿಂದ ಪಡೆದು ಮೇಲಿನವರಿಗೆ ದಾಟಿಸಲು ಸಮರ್ಥರಾದ ವೈದ್ಯರು ಮಾತ್ರ ಅಧಿಕಾರದ ಸ್ಥಾನ ಪಡೆಯಲು ಸಾಧ್ಯ. ಯೋಗ್ಯರು, ಪ್ರಮಾಣಿಕರು, ನಿಷ್ಠೆಯಿಂದ ಕೆಲಸ ಮಾಡುವವರು ಅಧಿಕಾರದ ಸ್ಥಾನ ಏರುವುದು ದೂರದ ಮಾತು. ಇವುಗಳೊಂದಿಗೆ ಸ್ಥಳೀಯ ರಾಜಕೀಯ ಪುಡಾರಿಗಳು ನೀಡುವ ಕಿರುಕುಳವನ್ನು ಸತತ ಅನುಭವಿಸಬೇಕು.

ಆಶಾ ಕಾರ್ಯಕರ್ತೆಯರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಸಲ್ಲಿಸುತ್ತಿರುವ ನರ್ಸಗಳು, ಆಯುಷ್ ವೈದ್ಯರು, ಅಲೋಪತಿಕ್ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು – ಭಾಗಶಃ ಗುತ್ತಿಗೆ ನೌಕರರು ಅಥವಾ ಒಂದು ವರ್ಷದ ಅವಧಿಯ ಟೆಂಡರ್ ಮೂಲಕ ಕಾರ್ಯ ನಿರ್ವಹಿಸುವ ಷರತ್ತಿಗೆ ಒಳಪಟ್ಟ ಹೊರಗುತ್ತಿಗೆ ಸಿಬ್ಬಂದಿಗಳು. ಗುತ್ತಿಗೆ ನೌಕರರು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನೇಮಕಾತಿಯಾಗುವಾಗ ರಾಜಕೀಯ ಶಕ್ತಿಯ ಜೊತೆಯಲ್ಲಿ 5-6 ತಿಂಗಳ ಸಂಬಂಳವನ್ನು ನೇಮಕಾತಿ ಮಾಡಿದ ಅಧಿಕಾರಿಗಳಿಗೆ ಲಂಚ ನೀಡದೆ ಉದ್ಯೋಗ ಪಡೆಯುವುದು ಕಷ್ಟ. ಹೊರಗುತ್ತಿಗೆ ಸಂಸ್ಥೆಯಿಂದ ನಿಯೋಜಿತ ಸಿಬ್ಬಂದಿಗಳು ಸಂಘಟನೆ ಕಟ್ಟಿ ಹೋರಾಡುವ ಅವಕಾಶ ಇರುವುದಿಲ್ಲ. ಹೋರಾಟ ಮಾಡಿದ್ದಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ 108 ಸಿಬ್ಬಂದಿಗಳು ಸಂಘಟಿತರಾಗಿ ಅಗತ್ಯ ಸೌಲಭ್ಯದ ಬೇಡಿಕೆಯನ್ನು ಸರಕಾರದ ಮುಂದಿಟ್ಟಾಗ ಅವರನ್ನು ಸಾಮೂಹಿಕವಾಗಿ ಉಚ್ಚಾಟನೆ ಮಾಡಿ ಹೊಸ ನೇಮಕಾತಿ ಮಾಡಿಕೊಳ್ಳಲಾಯಿತು.

ಪೋಲಿಸರು: ಕೊರೊನ ಸಂದರ್ಭದಲ್ಲಿ ಪೋಲಿಸರ ಸಕರಾತ್ಮಕ ಮುಖ ನೊಡಲು ಸಾಧ್ಯವಾಯಿತು. ಬಿಸಿಲು ಮಳೆ ಎನ್ನದೇ ಬೆಳಿಗ್ಗೆನಿಂದ ಸಂಜೆ ತನಕ ದುಡಿಯುವ ಚಿತ್ರಣ. ರಜೆ ಇಲ್ಲದೆ ಬಸವಳಿದ ಪೋಲಿಸರ ಚಿತ್ರಣ. ತಮ್ಮ ಕಷ್ಟದ ಮಧ್ಯಯೂ ಊಟಕ್ಕಿಲ್ಲದವರಿಗೆ ಊಟ ಕೊಡುವ, ನೀರಿಲ್ಲದವರಿಗೆ ನೀರು ಕೊಡುವ ಚಿತ್ರಣ. ಜನರಿಗೆ ಕೊರೊನದ ಬಗ್ಗೆ ಜಾಗೃತಿ ನೀಡುವ ಚಿತ್ರಣ. ವಿವಿಧ ವಿಧಾನಗಳನ್ನು ಬಳಸಿಕೊಂಡು ಮಾಸ್ಕ್ ಧರಿಸಲು ಮನವರಿಕೆ ಮಾಡುವ ಚಿತ್ರಣ. ಜನರನ್ನು ಕೊರೊನದಿಂದ ಪಾರು ಮಾಡಲು ಲಾಠಿ ಚಾರ್ಜ್ ಮಾಡುವ ಚಿತ್ರಣ. ಕೊರೊನ ಪೋಲಿಸರ ಚಿತ್ರಣವನ್ನೇ ಬದಲಾಯಿಸಿದೆ. ಕೊರೊನ ಮುನ್ನ ಪೋಲಿಸರು ಮನುಷ್ಯರೇ ಅಲ್ಲ ಎನ್ನುವ ಚಿತ್ರಣ ಹೆಚ್ಚು ಪ್ರಚಾರದಲ್ಲಿತ್ತು. ಕೊರೊನ ನಂತರ ಪೋಲಿಸರಲ್ಲೂ ಮನುಷತ್ವ ಇದೆ ಎನ್ನುವ ಚಿತ್ರಣ ಮುಂಚೂಣಿಗೆ ಬಂದಿದೆ. ಮನುಷ್ಯರೇ ಅಲ್ಲದವರು ಕೊರೊನದಿಂದ ಮನುಷ್ಯರಾಗಿರುವುದು ಹೇಗೆ? ಕೊರೊನ ಮುನ್ನ ಕೂಡ ಪೋಲಿಸರು ಮನುಷ್ಯರೇ ಆಗಿದ್ದರು. ಆದರೆ ಪೋಲಿಸ್ ವ್ಯವಸ್ಥೆ ಅವರನ್ನು ಮನುಷ್ಯರಂತೆ ನಡೆಸಿಕೊಂಡಿಲ್ಲ. ರಜೆ ಒಂದು ಹಕ್ಕಲ್ಲ ಎನ್ನುವ ನಿಯಮ ಪೋಲಿಸರಿಗೆ ಅನ್ವಯ ಆದಷ್ಟು ಬೇರೆ ಇಲಾಖೆಗಳಲ್ಲಿ ಆಗುವುದಿಲ್ಲ. ರಾತ್ರಿ ಪಾಳಿ ಮಾಡಿದರೆ ಹಗಲು ಡ್ಯೂಟಿ ಇಲ್ಲ ಎನ್ನುವ ಗ್ಯಾರಂಟಿ ಇಲ್ಲ. ವಾರದ ರಜೆ ಕೂಡ ಪೋಲಿಸರಿಗೆ ಅಪರೂಪವಾಗಿದೆ. ಪೋಲಿಸ್ ದೌರ್ಜನ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಪೋಲಿಸರ ಮೇಲೆ ನಡೆಯುವ ಹಲ್ಲೆಗಳ ಬಗ್ಗೆ ಚರ್ಚೆಗಳು ಅಪರೂಪ. ಹಲವು ಬಾರಿ ಪೋಲಿಸರ ಮೇಲೆ ಹಲ್ಲೆಗಳು ನಡೆಯುತ್ತವೆ. ಹಲ್ಲೆ ಮಾಡಿದವರು ಪ್ರಭಾವಿಗಳಾಗಿದ್ದರೆ ಅಥವಾ ಪ್ರಭಾವಿಗಳ ಸಂಬಂಧ ಇದ್ದರೆ ಪೋಲಿಸ್ ಪೇದೆಗಳಿಗೆ ನ್ಯಾಯ ಸಿಗುವುದು ಕಷ್ಟ.

ಕೊರೊನದಿಂದ ರಕ್ಷಿಸಿಕೊಳ್ಳಲು ಆಗಾಗ ಕೈತೊಳೆಯಬೇಕು, ಮೂಗು, ಕಣ್ಣುಗಳನ್ನು ಮುಟ್ಟಬಾರದು, ಹೊರಗೆ ಹೋದರೆ ಬಟ್ಟೆ ಬದಲಾಯಿಸಿ ಸ್ನಾನಮಾಡಬೇಕು ಇತ್ಯಾದಿ ಸಲಹೆಗಳನ್ನು ಆರೋಗ್ಯ ತಜ್ಞರು ನೀಡುತ್ತಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸರಕಾರ ಲಾಕ್‍ಡೌನ್ ಘೋಷಿಸಿದೆ. ಈ ಲಾಕ್‍ಡೌನ್‍ನ್ನು ಜನರ ಮಧ್ಯೆ ಹೋಗಿ ಜಾರಿಗೆ ತರುತ್ತಿರುವುದು ಪೋಲಿಸರು. ಇದಕ್ಕಾಗಿ ಇವರು ಹಗಲು ರಾತ್ರಿ ದುಡಿಯಬೇಕು. ಮತ್ತೊಬ್ಬರ ಆರೋಗ್ಯ ರಕ್ಷಿಸಬೇಕಾದ ಪೋಲಿಸರ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಗಮನ ಹರಿಸಿದಂತೆ ಕಾಣುವುದಿಲ್ಲ. ಕೊರೊನ ಡ್ಯೂಟಿಯಲ್ಲಿರುವ ಪೋಲಿಸರು ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕಾದರೆ ಶುದ್ಧ ನೀರು, ಉತ್ತಮ ಆಹಾರ, ವಸತಿ, ಶುದ್ಧ ಬಟ್ಟೆ ಎಲ್ಲವೂ ಅವಶ್ಯ. ಆದರೆ ಕೊರೊನ ಡ್ಯೂಟಿ ಮಾಡುವ ಪೋಲಿಸರಿಗೆ ಸ್ಪೆಷಲ್ ಭತ್ತೆ ಸರಕಾರ ಘೋಷಿಸಿಲ್ಲ. ಸರಕಾರ ನೀಡುವುದು ವರ್ಷಕ್ಕೆ ಎರಡೇ ಯೂನಿಫಾರಂ. ಇವೇ ಯೂನಿಫಾರಂಗಳನ್ನು ಪ್ರತಿದಿನ ತೊಳೆದು ಹಾಕಿಕೊಳ್ಳಬೇಕು. ಸರ್ಕಾರ ಯೂನಿಫಾರಂ ಭತ್ಯೆಯಲ್ಲಿ ಏರಿಕೆಯನ್ನೂ ಮಾಡಿಲ್ಲ. ಪರ ಊರಿಗೆ ಡ್ಯೂಟಿಗೆ ಹೋದರೆ ಅಲ್ಲಿ ಉತ್ತಮ ವಸತಿ, ಆಹಾರ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಮೇಲಾಧಿಕಾರಿಗಳ ಆದೇಶ ಜಾರಿಗೊಳಿಸಲು ಇಷ್ಟೊಂದು ಸಮಸ್ಯೆ ಎದುರಿಸುವ ಪೋಲಿಸರು ತಮ್ಮ ಅಳಲನ್ನು ಸಾರ್ವಜನಿಕಗೊಳಿಸುವಂತಿಲ್ಲ. ತಮಗಾಗುವ ಅನ್ಯಾಯವನ್ನು ಸಂಘ ಕಟ್ಟಿಕೊಂಡು ಪ್ರತಿಭಟಿಸುವಂತಿಲ್ಲ. ಇವೆಲ್ಲವೂ ದುರ್ನಡತೆಗಳಾಗುತ್ತವೆ. ಇವಕ್ಕೆ ಇವರು ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ. 2019ರ ಔರಾದ್ಕರ್ ಕಮಿಶನ್ ವರದಿ ಜಾರಿಗೆ ಬರುವ ಮುನ್ನ ಪೋಲಿಸರ ಸಂಬಳ, ಭತ್ತೆಗಳು ಕನಿಷ್ಠ ಮಟ್ಟದಲ್ಲಿದ್ದವು. ಈ ವರದಿ ಜಾರಿಗೆ ಬಂದ ನಂತರ ಸಂಬಳ, ಭತ್ತೆಗಳು ಸ್ವಲ್ಪ ಏರಿಕೆ ಕಂಡಿವೆ.

ಕಾನ್‍ಸ್ಟೆಬಲ್‍ಗಳು ಸಣ್ಣ ಮುಂಬಡ್ತಿಗೆ 20 ವರ್ಷ ಕಾಯಬೇಕಿದ್ದು ಈ ವರದಿ ಕೃಪೆಯಿಂದ 10 ವರ್ಷಕ್ಕೆ ಇಳಿದಿದೆ. ನೇಮಕಾತಿ, ತರಬೇತಿ, ಡ್ಯೂಟಿ, ಸಂಬಳ, ಮುಂಬಡ್ತಿ, ಇಲಾಖೆಯೊಳಗಿನ ಮಾನವ ಸಂಬಂಧ ಎಲ್ಲವೂ ಮನುಷ್ಯತ್ವವನ್ನೇ ನಾಶ ಮಾಡುವಂತಿದ್ದರೆ ಪೋಲಿಸರನ್ನು ದೂರಿ ಏನು ಪ್ರಯೋಜನ.

ಶ್ರಮಿಕರು: ಕೊರೊನ ಕೃಪೆಯಿಂದ ಸರಕಾರಿ ಆಸ್ಪತ್ರೆ, ವೈದ್ಯರು, ದಾದಿಗಳು, ಆಶಾ ಕಾರ್ಯಕರ್ತರು, ಪೋಲಿಸರು ಇವರೆಲ್ಲರ ಪ್ರಾಮುಖ್ಯತೆ ಅರಿವಾಗಿದೆ. ಆದರೆ ಈ ಅರಿವು ಕೊರೊನ ನಂತರವೂ ಇರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಈ ಬೆನ್ನು ತಟ್ಟುವಿಕೆ ಅವಕಾಶವಾದಿ ಪುರಸ್ಕಾರ ಎನ್ನುವುದು ಬೇರೆ ಬೆಳವಣಿಗೆಗಳಿಂದಲೂ ದೃಢವಾಗುತ್ತಿದೆ. ಕೆಲವು ರಾಜಕೀಯ ಮುಖಂಡರು ಸ್ಪರ್ಧೆಗೆ ಬಿದ್ದವರಂತೆ ಇವರನ್ನು ಗೌರವಿಸುವ, ಸಣ್ಣಪುಟ್ಟ ಕಿಟ್ ಕೊಡುವ ಪೋಟೊ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕಾರಣ ಸದ್ಯದಲ್ಲಿ ಘೋಷಣೆಯಾಗುವ ಗ್ರಾಮ ಪಂಚಾಯಿತಿ ಚುನಾವಣೆ. ಜನರೊಂದಿಗೆ ಸೇವೆಸಲ್ಲಿಸುತ್ತಿರುವ ಈ ನೌಕರರ ಅಭಿಪ್ರಾಯಗಳು ಪ್ರಚಾರವಾಗಿ ಮತವಾಗಿ ಬದಲಾವಣೆಯಾಗಲಿ ಎನ್ನುವ ಅವಕಾಶವಾದಿತನ ಕೂಡಾ ಇದೆ. ನಮ್ಮ ನಗರಗಳನ್ನು, ಮಾಲ್‍ಗಳನ್ನು, ವಸತಿ ಸಮುಚ್ಚಯಗಳನ್ನು, ರಸ್ತೆಗಳನ್ನು, ರೈಲು ಮಾರ್ಗಗಳನ್ನು, ವಿಮಾನ ನಿಲ್ದಾಣಗಳನ್ನು, ಗಗನಚುಂಬಿ ಕಟ್ಟಡಗಳನ್ನು ಬೆವರು ಸುರಿಸಿ ಕಟ್ಟಿದ ವಲಸೆ ಕಾರ್ಮಿಕರನ್ನು ಈ ಅವಕಾಶವಾದಿ ವ್ಯವಸ್ಥೆ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಬಸ್, ರೈಲು ಇಲ್ಲದ ಕಾರಣ ಲಕ್ಷಾಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮರಳಿದರು. ಹೆಂಗಸರು, ಮಕ್ಕಳು, ಮುದುಕರು ನೂರಾರು ಮೈಲು ನಡೆದು ಬಸವಳಿದರು. ಹಲವರು ದಾರಿ ಮಧ್ಯದಲ್ಲೇ ಪ್ರಾಣ ಬಿಟ್ಟರು. ಇವತ್ತು ಇವರೆಲ್ಲ ಉದ್ಯೋಗ ಕಳೆದುಕೊಂಡಿದ್ದಾರೆ. ಆರೋಗ್ಯ ಕಳೆದುಕೊಂಡಿದ್ದಾರೆ. ಇದ್ದ ಅಲ್ಪಸ್ವಲ್ಪ ಆದಾಯವನ್ನೂ ಕಳೆದುಕೊಂಡಿದ್ದಾರೆ. ಇವರು ನಮ್ಮ ನಗರಗಳನ್ನು ನಿರ್ಮಸಿದ ವಾರಿಯರ್ಸ್ ಅಲ್ವಾ? ಕೊರೊನ ಬಂದ ಕೂಡಲೇ ಈ ವಾರಿಯರ್ಸ್‍ನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ. ಮುಂದೆ ನಮ್ಮ ನಗರಗಳನ್ನು ನಿರ್ಮಿಸಲು ಈ ವಾರಿಯರ್ಸ್ ಬೇಡವೇ? ಆದರೆ ಅವಕಾಶವಾದಿ ಸರಕಾರಗಳು ಘೋಷಿಸುವ ಕೋಟಿಗಟ್ಟಲೆ ಪ್ಯಾಕೇಜಲ್ಲಿ ವಲಸೆ ಕಾರ್ಮಿಕರ ಪಾಲೆಷ್ಟೆಂದು ಹುಡುಕುವುದು ಕಷ್ಟವಾಗಿದೆ.

ಸಣ್ಣಪುಟ್ಟ ವ್ಯಾಪಾರಿ, ಉದ್ಯಮಗಳು, ಕೃಷಿಗಳು ನಮ್ಮ ಅರ್ಥ ವ್ಯವಸ್ಥೆಯ ಬೆನ್ನಲುಬು. ದೇಶದ ಸರಕುಸೇವೆಗಳ ಒಟ್ಟು ಉತ್ಪಾದನೆಯ ಸರಿ ಅರ್ಧದಷ್ಟನ್ನು ಇವರು ಉತ್ಪಾದಿಸುತ್ತಾರೆ. ಅಷ್ಟು ಮಾತ್ರವಲ್ಲ ಇವೇ ಚಟುವಟಿಕೆಗಳು ಶೇ.90ಕ್ಕಿಂತಲೂ ಹೆಚ್ಚಿನ ಜನರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿವೆ. ಇದಕ್ಕಾಗಿ ಇವರಿಗೆ ಸರಕಾರ ಏನೇನೂ ಸವಲತ್ತು ನೀಡುವುದಿಲ್ಲ. ಇವರಿಗೆ ಕಡಿಮೆ ಬಡ್ಡಿ ಸರಕಾರಿ ಸಾಲ ಸಿಗುವುದಿಲ್ಲ, ಕಡಿಮೆ ಬೆಲೆಗೆ ಭೂಮಿ ಸಿಗುವುದಿಲ್ಲ, ಅಗ್ಗದ ಪ್ರಾಕೃತಿಕ ಸಂಪನ್ಮೂಲ ಸಿಗುವುದಿಲ್ಲ. ಕೊರೊನ ಮುನ್ನವೇ ನೋಟು ರದ್ಧತಿ, ಜಿಎಸ್‍ಟಿಗಳು ಇವರ ಬೆನ್ನ ಮೂಳೆ ಮುರಿದಿವೆ. ಕೊರೊನ ದಿಶೆಯಿಂದ ಪ್ರಾಪ್ತವಾದ ಎರಡು ತಿಂಗಳ ಲಾಕ್‍ಡೌನ್ ಇವರನ್ನು ಸಂಪೂರ್ಣ ನಾಶ ಮಾಡಿದೆ. ಹಾಗೆಂದು –“ಸಾರ್ವಜನಿಕ ಆರೋಗ್ಯಕ್ಕಾಗಿ ಸಣ್ಣಪುಟ್ಟ ವ್ಯಾಪಾರ, ಉದ್ದಿಮಗಳನ್ನು ಮುಚ್ಚಿದ್ದೀರಿ, ಆದಾಯದ ಏಕಮಾತ್ರ ಮೂಲವನ್ನು ಬಲಿಕೊಟ್ಟಿದ್ದೀರಿ. ಆದಾಯ ಮೂಲವನ್ನೇ ಬಲಿಕೊಡುವುದೆಂದರೆ ಬದುಕನ್ನೇ ಬಲಿಕೊಡುವುದು, ಇದಕ್ಕಿಂತ ದೊಡ್ಡ ದೇಶಪ್ರೇಮ ಇರಲು ಸಾಧ್ಯವಿಲ್ಲ, ನೀವು ಕೂಡ ಕೊರೊನ ವಾರಿಯರ್ಸ್” ಎಂದು ಸರಕಾರ ಎಲ್ಲೂ ಹೇಳಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಉದ್ದಿಮೆಗಳ ಪುನಶ್ಚೇತನಕ್ಕೆ ನೀಡುವ 3 ಲಕ್ಷ ಕೋಟಿ ರುಪಾಯಿಗಳಲ್ಲಿ ಒಂದು ನಯಾ ಪೈಸೆ ಕೂಡ ಇವರಿಗೆ ತಲುಪುವುದಿಲ್ಲ. ಏಕೆಂದರೆ ಕನಿಷ್ಠ 100 ಕೋಟಿ ರುಪಾಯಿಗಳ ವಹಿವಾಟು ಇರುವ ಉದ್ದಿಮೆಗಳು ಮಾತ್ರ ಈ ಪ್ಯಾಕೇಜ್ ಲಾಭ ಪಡೆಯಲು ಸಾಧ್ಯ. ಇಂತಹ ಉದ್ದಿಮೆಗಳು 45-50 ಲಕ್ಷದಷ್ಟಿರಬಹುದು. ಆದರೆ ಕೆಲವು ಸಾವಿರದಿಂದ ಕೆಲವು ಲಕ್ಷ ರೂಪಾಯಿ ಬಂಡವಾಳ ಹೂಡಿ ವ್ಯಾಪಾರ ಉದ್ದಿಮೆ ನಡೆಸುವವರು 5 ಕೋಟಿಗಿಂತಲೂ ಹೆಚ್ಚಿದ್ದಾರೆ. ಸಾರ್ವಜನಿಕ ಆರೋಗ್ಯಕ್ಕಾಗಿ ತಮ್ಮ ವ್ಯಾಪಾರ ಉದ್ದಿಮಗಳನ್ನು ಬಲಿಕೊಟ್ಟವರಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು ಪ್ರಮುಖರು. ಆದರೆ ಇವರನ್ನು ಕೊರೊನ ವಾರಿಯರ್ಸ್ ಎಂದು ಸರಕಾರ, ಮಾಧ್ಯಮಗಳು ಪರಿಗಣಿಸುತ್ತಿಲ್ಲ.

ದೂರದೃಷ್ಟಿ : ವಲಸೆ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರ, ಉದ್ದಿಮೆಗಳು, ಕೃಷಿಕರನ್ನು ಸರಕಾರ ನಡೆಸಿಕೊಂಡ ರೀತಿ ನೋಡಿದರೆ ಕೊರೋನ ನಂತರ ಸರಕಾರಿ ಆಸ್ಪತ್ರೆ, ವೈದ್ಯರು, ದಾದಿಗಳು, ಆಶಾ ಕಾರ್ಯಕರ್ತರು, ಪೋಲಿಸರನ್ನು ನೋಡುವ ದೃಷ್ಟಿ ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಕೊರೊನ ಸಂದರ್ಭದಲ್ಲಿ ಬೆನ್ನು ತಟ್ಟುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಇವರ ಸೇವಾ ಸ್ಥಿತಿಯನ್ನು ಬದಲಾಯಿಸುವುದು. ಇವರ ಸೇವಾ ಸ್ಥಿತಿ ಸುಧಾರಿಸಬೇಕಾದರೆ ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆ, ಲಂಚ, ಕಳಪೆ ಔಷಧಿ, ಇಕ್ವಿಪ್‍ಮೆಂಟ್‍ಗಳ ಖರೀದಿ, ಯೋಗ್ಯರು ಅನುಭವಿಸುವ ಅವಮಾನ, ಅಯೋಗ್ಯರು ಗಳಿಸುವ ಸ್ಥಾನಮಾನ ಇವೆಲ್ಲ ಕಡಿಮೆಯಾಗಬೇಕು. ಇದೇ ರೀತಿಯಲ್ಲಿ ಆಶಾ ಕಾರ್ಯಕರ್ತರ ಸಂಬಳ ಹೆಚ್ಚಬೇಕು ಮತ್ತು ಈಗಿರುವ ಸಂಬಳನ್ನಾದರೂ ಸಮಯಕ್ಕೆ ಸರಿಯಾಗಿ ಕೊಡಬೇಕು. ಪೋಲಿಸ್ ಇಲಾಖೆಯ ಸುಧಾರಣೆಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಏಳು ಸುಧಾರಣೆಗಳು ಕಾರ್ಯಗತಗೊಳ್ಳಬೇಕು. ಆದರೆ ಎಲ್ಲೂ ಆರೋಗ್ಯ ಇಲಾಖೆಯ ಕಾರ್ಯವೈಖರಿಯನ್ನು ಸುಧಾರಿಸುವ, ಪೋಲಿಸ್ ಇಲಾಖೆಯ ಸುಧಾರಣೆ ಅನುಷ್ಠಾನಗೊಳಿಸುವ, ಆಶಾ ಕಾರ್ಯಕರ್ತರ ಸೇವಾ ಸ್ಥಿತಿಯನ್ನು ಸುಧಾರಿಸುವ ಚರ್ಚೆಗಳು ನಡೆಯುತ್ತಿಲ್ಲ. ಅದರ ಬದಲು ಊಳಿಗಮಾನ್ಯ ವ್ಯವಸ್ಥೆಯ ಜಮೀನ್ದಾರರು ತಮ್ಮ ಕೂಲಿಯಾಳುಗಳ ಬೆನ್ನು ತಟ್ಟುವಂತೆ ಸರಕಾರ ಕೊರೊನ ವಿರುದ್ಧ ಹೋರಾಡುವವರ ಬೆನ್ನು ತಟ್ಟುತ್ತಿದೆ. ಕೊರೊನ ವಾರಿಯರ್ಸ್ ಎಂದು ಬೆನ್ನು ತಟ್ಟುವುದರಿಂದ ಇಲಾಖೆಗಳ ಕಾರ್ಯವೈಖರಿ ಸುಧಾರಿಸುವುದಿಲ್ಲ. ಇವು ಸುಧಾರಣೆಯಾಗದಿದ್ದರೆ ಸಾರ್ವಜನಿಕ ಸೇವೆಯ ಗುಣಮಟ್ಟ ಸುಧಾರಿಸುವುದಿಲ್ಲ.

ಸಾರ್ವಜನಿಕ ಸೇವೆಯ ಗುಣಮಟ್ಟ ಸುಧಾರಿಸದಿದ್ದರೆ ದೇಶ, ರಾಜ್ಯ ಅಂದರೆ ‘ಜನ’ ದೊಡ್ಡ ಬೆಲೆ ತೆರಬೇಕಾಗುತ್ತದೆ. ಏಕೆಂದರೆ ಕೊರೊನ ಹಾಗೆ ಬಂದು ಹೋಗುವ ಆರೋಗ್ಯ ಸಮಸ್ಯೆಯಲ್ಲ. ಹಲವು ಕಾಲ ನಮ್ಮೊಂದಿಗೆ ಇರುವ ರೋಗ ಇದು. ಇದಕ್ಕೆ ಪರಿಹಾರ ಇನ್ನೂ ಹುಡುಕಾಟದ ಹಂತದಲ್ಲಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಆಸ್ಪತ್ರೆಗಳು, ಔಷಧಿಗಳು, ಇಕ್ವಿಮೆಂಟ್‍ಗಳು, ವೈದ್ಯರು, ದಾದಿಗಳು, ಆರೋಗ್ಯ ಸಹಾಯಕರು ನಮ್ಮಲ್ಲಿ ಇಲ್ಲ. ಎರಡು ತಿಂಗಳ ಲಾಕ್‍ಡೌನ್ ಸಂದರ್ಭದಲ್ಲಿ ಈ ಆರೋಗ್ಯ ಸವಲತ್ತುಗಳು ಎಷ್ಟು ಸುಧಾರಣೆಯಾಗಿದೆ ಎನ್ನುವ ಲೆಕ್ಕಚಾರ ಮಾಧ್ಯಮಗಳಲ್ಲಿ ಚರ್ಚೆಗೆ ಬರುತ್ತಿಲ್ಲ. ಬುನಾದಿ ಇಲ್ಲದೆ ಕಟ್ಟಡವಿಲ್ಲ. ಕಟ್ಟಡದ ಬುನಾದಿ ಭೂಮಿಯಲ್ಲಿ ಮುಳುಗಿರುತ್ತದೆ. ನೋಡುವವರಿಗೆ ಬುನಾದಿ ಕಾಣುವುದಿಲ್ಲ. ನೋಡುವವರಿಗೆ ಬುನಾದಿ ಮೇಲೆ ಎದ್ದು ನಿಂತ ಕಟ್ಟಡಗಳು ಮಾತ್ರ ಕಾಣುವುದು.

ಬುನಾದಿ ಗಟ್ಟಿಯಾಗಿದ್ದರೆ ಮಾತ್ರ ಕಟ್ಟಡ ಗಟ್ಟಿ ಇರಲು ಸಾಧ್ಯ. ಕೃಷಿ, ವ್ಯಾಪಾರ, ಉದ್ದಿಮೆ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರು ನಮ್ಮ ಸಮಾಜದ ಬುನಾದಿ. ಕೊರೊನ ಮುನ್ನ ಕಟ್ಟಡದ ಬುನಾದಿ ತರಹ ಇವರ ಪ್ರಾಮುಖ್ಯತೆ ನಮಗೆ ಕಾಣಿಸಲಿಲ್ಲ. ಕೊರೊನ ನಂತರ ಬುನಾದಿ ಕಾಣಲು ಆರಂಭಿಸಿದೆ. ಆದರೆ ಈ ಗುರುತಿಸುವಿಕೆ ಕೇವಲ ಪ್ರಶಂಸೆಯ ಮಾತುಗಳಿಗೆ ಸೀಮಿತವಾಗಬಾರದು. ಇವರ ಸಂತೃಪ್ತ ಬದುಕು ‘ಅವಕಾಶವಾದಿ ಹೊಗಳಿಕೆ’ಗಳ ಮೇಲೆ ನಡೆಯುವುದಿಲ್ಲ. ಇವರ ಆದಾಯ, ಅಧಿಕಾರ, ಸಂಬಳ, ಉದ್ಯೋಗ ಭದ್ರತೆ, ಲಂಚರಹಿತ ಆಡಳಿತ, ಇಲಾಖೆ ಒಳಗೆ ಮತ್ತು ಹೊರಗೆ ಸಿಗುವ ಮಾನಸಮ್ಮಾನಗಳು ಇವರನ್ನು ಸಂತೃಪ್ತಿ ಪಡಿಸುವ ಸಂಗತಿಗಳು. ಇವನ್ನು ನೀಡುವ ಕ್ರಮಗಳ ಪ್ರಸ್ತಾಪ ಎಲ್ಲೂ ಕಂಡು ಬರುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ನಾವಿಂದು ಎಲ್ಲ ಕ್ಷೇತ್ರಗಳಲ್ಲು ಗುಣಮಟ್ಟದ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ಕೆಳಗಿನವರ ಯೋಗ್ಯತೆಯ ಕೊರತೆಯಿಂದಲ್ಲ; ಮೇಲಿನವರ ಅಯೋಗ್ಯತೆಯಿಂದ. ಈ ಸಮಸ್ಯೆಗೆ ಪರಿಹಾರ ಭ್ರಮೆ ಸೃಷ್ಟಿಸುವವರನ್ನು ಮುಖ್ಯರೆಂದು ಪರಿಗಣಿಸಿ ಆರಾಧಿಸುವ ಅಭ್ಯಾಸವನ್ನು ಪರಿವರ್ತಿಸುವುದರಲ್ಲಿದೆ. ಭ್ರಮೆ ಸೃಷ್ಟಿಸುವವರ ಆದಾಯ, ಅಧಿಕಾರ, ಸ್ಥಾನಮಾನ ಹೆಚ್ಚಿಸುವ ವ್ಯವಸ್ಥೆಯನ್ನು ಬದಲಾಯಿಸುವುದರಲ್ಲಿದೆ ಈ ಸಮಸ್ಯೆಗೆ ಪರಿಹಾರ. ಶ್ರಮ ಸೃಷ್ಟಿಸುವವರ ಆದಾಯ, ಅಧಿಕಾರ, ಸ್ಥಾನಮಾನಗಳನ್ನು ಹೆಚ್ಚಿಸುವ ವ್ಯವಸ್ಥೆಯನ್ನು ರೂಪಿಸುವುದರಲ್ಲಿದೆ ಈ ಸಮಸ್ಯೆಗೆ ಪರಿಹಾರ.


ಇದನ್ನು ಓದಿ: ಕರೋನಾ ಬಿಕ್ಕಟ್ಟು, ಗ್ರಾಮ ಭಾರತದ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಭವಿಷ್ಯ

Also Read: How Cuba is saving the world during COVID-19 pandemic?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...