ಅಝರ್ ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನಡೆಯುತ್ತಿರುವ 29ನೇ ವಿಶ್ವ ಹವಾಮಾನ ಶೃಂಗಸಭೆ (COP29) ಮೇಲೆ ಯುಎಸ್ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮರು ಆಯ್ಕೆಯಾಗಿರುವ ಕಾರ್ಮೋಡ ಆವರಿಸಿದೆ.
ಮತ್ತೆ ಆಯ್ಕೆಯಾದರೆ ಜಾಗತಿಕ ತಾಪಮಾನ ನಿಯಂತ್ರಣ ಪ್ರಯತ್ನಗಳ ಹೆಗ್ಗುರುತಾಗಿರುವ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆಯುವುದಾಗಿ ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಅದರಂತೆ ನಡೆದುಕೊಳ್ಳುವ ಆತಂಕ ಎದುರಾಗಿದೆ.
ಟ್ರಂಪ್ 2016ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಯುಎಸ್ ಅನ್ನು ಪ್ಯಾರಿಸ್ ಒಪ್ಪಂದದಿಂದ ಹೊರಗಿಟ್ಟಿದ್ದರು. ನಾಲ್ಕು ವರ್ಷಗಳ ನಂತರ ಜೋ ಬೈಡೆನ್ ಮತ್ತೆ ಒಪ್ಪಂದದಲ್ಲಿ ಯುಎಸ್ ಅನ್ನು ಸೇರಿಸಿದ್ದರು. ಈಗ ಎರಡನೇ ಬಾರಿ ಯುಎಸ್ ಅನ್ನು ಟ್ರಂಪ್ ಹೊರಗಿಡುವ ಸಾಧ್ಯತೆ ಇದೆ.
ಈ ಬಾರಿಯ ಹವಾಮಾನ ಶೃಂಗಸಭೆ ಹಿಂದುಳಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ ಕಡಿತಗೊಳಿಸುವುದು ಸೇರಿದಂತೆ ತಾಪಮಾನ ಹೆಚ್ಚಳ ನಿಯಂತ್ರಣ ಕ್ರಮಗಳಿಗೆ ಹಣಕಾಸಿನ ನೆರವು (COP FInance) ಒದಗಿಸುವ ಬಗ್ಗೆ ಪ್ರಮುಖ ಚರ್ಚೆ ನಡೆಯುತ್ತಿದೆ.
ಸಂಪದ್ಭರಿತ ಅಥವಾ ಮುಂದುವರಿದ ರಾಷ್ಟ್ರಗಳು ವಾರ್ಷಿಕ 100 ಬಿಲಿಯನ್ ಡಾಲರ್ ನೆರವನ್ನು ಹವಾಮಾನ ಯೋಜನೆಗಳ ನಿಧಿಗೆ ನೀಡಬೇಕು ಎಂದು 2009ರಲ್ಲಿ ಕೋಪನ್ ಹ್ಯಾಗನ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.
2015 ಪ್ಯಾರಿಸ್ ಒಪ್ಪಂದವು 2009ರ ಒಪ್ಪಂದವನ್ನೇ ಮತ್ತೊಮ್ಮೆ ಪುನರುಚ್ಚರಿಸಿತ್ತು. ಆದರೆ, 2022ರ ಹೊತ್ತಿಗೆ ಕೇವಲ 83.3 ಬಿಲಿಯನ್ ಡಾಲರ್ ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು. 100 ಬಿಲಿಯನ್ ಗುರಿಯನ್ನು ಅಂತಿಮವಾಗಿ 2023 ರಲ್ಲಿ ತಲುಪಲಾಯಿತು. ಯುಎಸ್ ಸೇರಿದಂತೆ ಎಲ್ಲಾ 196 ದೇಶಗಳು 2015ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭೂಮಿಯ ತಾಪಮಾನ ಕಡಿಮೆ ಮಾಡುವಲ್ಲಿ ಬದ್ದವಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದವು.
ಕೋಪನ್ ಹ್ಯಾಗನ್ ಮತ್ತು ಪ್ಯಾರಿಸ್, ಈ ಎರಡು ಒಪ್ಪಂದಗಳ ಮುಖ್ಯ ಗುರಿ ಹಿಂದುಳಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹವಾಮಾನ ಯೋಜನೆಗಳ ಅನುಷ್ಠಾನಕ್ಕೆ ಮುಂದುವರಿದ ರಾಷ್ಟ್ರಗಳು ಆರ್ಥಿಕ ನೆರವು ಒದಗಿಸುವುದು.
2023ರಲ್ಲಿ 100 ಬಿಲಿಯನ್ ಗುರಿ ತಲುಪಿದರೂ, ಈ ಬಾರಿಯ ಬಾಕು ಶೃಂಗಸಭೆಯಲ್ಲಿ ಈ ಮೊತ್ತವನ್ನು ಹೆಚ್ಚಿಸಬೇಕು ಎಂದು ಭಾರತ ಸೇರಿದಂತೆ ಹಿಂದುಳಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಬೇಡಿಕೆ ಇಟ್ಟಿವೆ. ಆದರೆ, ಮುಂದುವರಿದ ರಾಷ್ಟ್ರಗಳು ಈ ವಿಚಾರದಲ್ಲಿ ಬಿನ್ನಾಭಿಪ್ರಾಯ ಹೊಂದಿವೆ. ನಿಧಿ ಸಂಗ್ರಹ ವಿಚಾರದಲ್ಲಿ ಒಮ್ಮತ ಮೂಡಿಲ್ಲ. ಈ ನಡುವೆ ದೊಡ್ಡ ಪಾಲುದಾರರಾಗಿರುವ ಯುಎಸ್ ಅಧ್ಯಕ್ಷ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದಲೇ ಹೊರ ನಡೆಯುವುದಾಗಿ ಹೇಳುತ್ತಿದ್ದಾರೆ.
ಬಾಕುನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯುಎಸ್‌ನ ಉನ್ನತ ಹವಾಮಾನ ರಾಯಭಾರಿ ಜಾನ್ ಪೊಡೆಸ್ಟಾ ಅವರು “ಟ್ರಂಪ್ ಸರ್ಕಾರ ಹವಾಮಾನ ಕ್ರಮಗಳು ಅಥವಾ ಪ್ಯಾರಿಸ್ ಒಪ್ಪಂದದ ವಿಚಾರದಲ್ಲಿ ಯೂ-ಟರ್ನ್ ಹೊಡೆಯಬಹುದು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಯುಎಸ್‌ನ ನಗರಗಳು, ರಾಜ್ಯಗಳು ಮತ್ತು ಜನರು ಜಾಗತಿಕ ತಾಪಮಾನ ತಗ್ಗಿಸುವ ವಿಚಾರದಲ್ಲಿ ಬದ್ದತೆಯ ಪ್ರಯತ್ನ ಮುಂದುವರೆಸಲಿದ್ದಾರೆ” ಎಂದು ಹೇಳಿದ್ದಾಗಿ ಎಎಫ್‌ಪಿ ವರದಿ ಮಾಡಿದೆ.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಯೋಜನೆಗಳು ಒಂದು ‘ವಂಚನೆ’ ಅದರಿಂದ ಯಾವುದೇ ಪರಿಣಾಮಗಳು ಆಗುತ್ತಿಲ್ಲ ಎಂಬುವುದು ಟ್ರಂಪ್ ವಾದ. ಅವರು ತನ್ನದೇ ಆದ ಯೋಜನೆಗಳನ್ನು ರೂಪಿಸಬಹುದು ಎಂದು ವರದಿಗಳು ಹೇಳಿವೆ.
2016ರಲ್ಲಿ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆದಾಗ ಇತರ ರಾಷ್ಟ್ರಗಳೂ ಇದೇ ನಿಲುವನ್ನು ಹೊಂದಬಹುದು ಎಂದು ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿತ್ತು. ಆದರೆ, 2021ರಲ್ಲಿ ಜೋ ಬೈಡೆನ್ ಆಡಳಿತ ಅವಧಿಯಲ್ಲಿ ಯುಎಸ್ ಪ್ಯಾರಿಸ್ ಒಪ್ಪಂದಕ್ಕೆ ಮರು ಸೇರ್ಪಡೆ ಆಯಿತು. 2030ರ ವೇಳೆಗೆ, ತನ್ನ ಇಂಗಾಲ ಹೊರಸೂಸುವಿಕೆಯನ್ನು 2005ರ ಮಟ್ಟಕ್ಕಿಂತ ಅರ್ಧದಷ್ಟು ಕಡಿತಗೊಳಿಸುವುದಾಗಿ ಶಪಥ ಮಾಡಿತು.
ಯುಎಸ್ ಅಥವಾ ಅಮೆರಿಕ ದೊಡ್ಡ ಆರ್ಥಿಕ ದೇಶವಾದ್ದರಿಂದ ಕೋಪನ್ ಹ್ಯಾಗನ್ ಮತ್ತು ಪ್ಯಾರಿಸ್ ಒಪ್ಪಂದಗಳ ಗುರಿ ತಲುಪಲು ಅದರ ಸಹಭಾಗಿತ್ವ ಅಗತ್ಯವಾಗಿದೆ. ಅದರೆ, ಯುಎಸ್ ಹೊರ ನಡೆದರೆ, ಇತರ ದೇಶಗಳು ಅದನ್ನು ಹಿಂಬಾಲಿಸಬಹುದು. ಈ ಮೂಲಕ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಮಾಡಿದ ಶ್ರಮಗಳು ವ್ಯರ್ಥವಾಗಬಹುದು. ಭಾರತದಂತಹ ರಾಷ್ಟ್ರಗಳು ಸರಿಯಾದ ಆರ್ಥಿಕ ನೆರವು ಸಿಗದೆ ಹವಾಮಾನ ಯೋಜನೆಗಳ ಅನುಷ್ಠಾನಗೊಳಿಸಲು ವಿಫಲವಾಗಬಹುದು. ಈಗ ನಡೆಯುತ್ತಿರುವ COP ಯಂತಹ ಹವಾಮಾನ ಚರ್ಚೆಗಳು ಸ್ಥಗಿತಗೊಳ್ಳಬಹುದು. ಬಹು ಮುಖ್ಯವಾಗಿ ಯುಎಸ್ ತಾನು ಹೊರ ಹೋಗುವುದಲ್ಲದೆ ಇತರ ರಾಷ್ಟ್ರಗಳನ್ನು ತನ್ನ ಜೊತೆ ಕರೆದೊಯ್ಯಬಹುದು.
ಒಟ್ಟಿನಲ್ಲಿ, ಟ್ರಂಪ್ ಮರು ಆಯ್ಕೆಯ ಕಾರ್ಮೋಡ ಹವಾಮಾನ ಯೋಜನೆಗಳ ಮೇಲೆ ಆವರಿಸಿದೆ. ಟ್ರಂಪ್ ಆಡಳಿತದ ಹವಾಮಾನ ತಂತ್ರವು ಜನವರಿ 20ರಂದು ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರದ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ.
ಇದನ್ನೂ ಓದಿ | COP29 Azerbaijan : ನಿಧಿ ಸಂಗ್ರಹ ಹೆಚ್ಚಳ ವಿಷಯದಲ್ಲಿ ಮೂಡದ ಒಮ್ಮತ


