ಕೋವಿಡ್-19 ಪಿಡುಗಿಗೆ ಉಪಶಮನವನ್ನು ಕಂಡುಹಿಡಿಯಲು ಜಗತ್ತು ಹೆಣಗಾಡುತ್ತಿರುವಂತೆಯೇ ವಿಶ್ವದಾದ್ಯಂತ ಜನರು ರೋಗ ನಿರೋಧಕತೆ ಮತ್ತು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅದರ ಮಹತ್ವವನ್ನು ಕುರಿತು ಮಾತನಾಡುತ್ತಿದ್ದಾರೆ. ಆಹಾರ, ಗಿಡಮೂಲಿಕೆಗಳು, ಮತ್ತು ಸಸ್ಯ ಜನ್ಯವಲ್ಲದ ಉತ್ಪನ್ನಗಳು ಮತ್ತು ಔಷಧಿಗಳ ಕುರಿತ ಕುತೂಹಲ ಹೆಚ್ಚಾಗಿದೆ. ವೈದ್ಯಕೀಯದ ಬೇರೆಬೇರೆ ಪದ್ಧತಿಗಳಿಗೆ ಸೇರಿದ ಆರೋಗ್ಯ ತಜ್ಞರು ಉತ್ತಮವಾದ ರೋಗ ನಿರೋಧಕ ಶಕ್ತಿ ಹೊಂದಿರುವುವ ಅಗತ್ಯವನ್ನು ಒತ್ತಿಹೇಳಿದ್ದು, ಅದು ಈ ರೋಗದ ಪರಿಣಾಮಗಳನ್ನು ಕಡಿಮೆ ಮಾಡಬಹುದು ಮತ್ತು ಶೀಘ್ರ ಗುಣಮುಖರಾಗುವಲ್ಲಿ ನೆರವಾಗಬಹುದು.
“ಆಯುಷ್” ಸಚಿವಾಲಯವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗಬಲ್ಲ ಗಿಡಮೂಲಿಕೆಗಳು, ಮತ್ತು ಸಸ್ಯ ಜನ್ಯವಲ್ಲದ ಉತ್ಪನ್ನಗಳ ಕುರಿತು ಒಂದಕ್ಕಿಂತ ಹೆಚ್ಚು ಸಲಹೆಗಳನ್ನು ಬಿಡುಗಡೆ ಮಾಡಿದೆ. ಆಯುರ್ವೇದವು ಅನಾದಿ ಕಾಲದಿಂದಲೂ ತನ್ನದೇ ಭಾಷೆಯಲ್ಲಿ ರೋಗ ನಿರೋಧಕ ಶಕ್ತಿಯ ಕುರಿತು ಮಾತನಾಡುತ್ತಲೇ ಬಂದಿದೆ ಮತ್ತು ಈ ಕುರಿತು ಶ್ರೀಮಂತವಾದ ಪರಿಕಲ್ಪನೆಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯ ಕುರಿತು ಮಾತನಾಡಲು ಸೂಕ್ತ ಸಮಯ ಎಂದು ನನ್ನ ಭಾವನೆ.
ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಲ್ಲೇಖಿಸಲು ವ್ಯಾಧಿ ಕ್ಷಮತ್ವ ಎಂಬ ಪದವನ್ನು ಬಳಸಲಾಗಿದೆ. ರೋಗ ನಿರೋಧಕ ಶಕ್ತಿ ಎಂದರೆ ದೇಹದ ಒಳಗೆ ಪ್ರವೇಶಿಸುವ ಅಪಾಯಕಾರಿ ಸೂಕ್ಷ್ಮಾಣು ಜೀವಿಗಳನ್ನು ತಡೆಗಟ್ಟಿ, ರೋಗ ಬರುವುದನ್ನು ತಡೆಗಟ್ಟುವ ಸಾಮರ್ಥ್ಯ (ವ್ಯಾಧಿ ಉತ್ಪಾದಕ ಪ್ರತಿಬಂಧಕತ್ವಂ) ಮತ್ತು ಈಗಾಗಲೇ ಇರುವ ರೋಗವನ್ನು ಎದುರಿಸಿ ಹೋಗಲಾಡಿಸುವ ಸಾಮರ್ಥ್ಯ (ವ್ಯಾಧಿಬಲ ವಿರೋಧಿತ್ವಂ). ರೋಗ ನಿರೋಧಕ ಶಕ್ತಿಯು ಮೂರು ಮಹತ್ವದ ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ, ಸಹಜ ಬಲ ಅಂದರೆ, ತನ್ನಿಂದ ತಾನಾಗಿಯೇ ದೇಹದಲ್ಲಿ ಇರುವ ಶಕ್ತಿ ‘ಸಹಜ ಬಲ’, ‘ಯುಕ್ತಿಜ ಬಲ’ ಅಂದರೆ ಹೊಂದಾಣಿಕೆ ಅಥವಾ ಪಡೆದುಕೊಂಡ ಶಕ್ತಿ ಮತ್ತು ‘ಕಾಲಜ ಬಲ’ ಅಂದರೆ ಸಮಯ, ವಯಸ್ಸು ಮತ್ತು ಋತುಮಾನಗಳಿಗೆ ನಿರ್ದಿಷ್ಟವಾದ ರೋಗ ನಿರೋಧಕ ಶಕ್ತಿ.
ಸಹಜ ಬಲವು ದೇಹದ ಮೂಲ ವಂಶವಾಹಿಯಲ್ಲಿಯೇ ಹೊಂದಿರುವ ಶಕ್ತಿಯಾಗಿದ್ದು, ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಇದರ ಪರಿಣಾಮವಾಗಿ ನಿರ್ದಿಷ್ಟವಾಗಿ ಕೆಲವು ಭೌಗೋಳಿಕ ಪರಿಸರಗಳಲ್ಲಿ ವಾಸಿಸುವ ಕೆಲವು ಜನಾಂಗಗಳು, ಕುಟುಂಬಗಳು ಮತ್ತು ಜನರಿಗೆ ನಿರ್ದಿಷ್ಟವಾದ ಕೆಲವು ಸೋಂಕು ರೋಗಗಳು ತಗಲುವುದಿಲ್ಲ. ಈ ರೀತಿಯಲ್ಲಿ ನೈಸರ್ಗಿಕವಾಗಿ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿಯಿಂದ ಕೆಲವು ವ್ಯಕ್ತಿಗಳಿಗೆ ಅಥವಾ ಸಮುದಾಯಗಳಿಗೆ ನಿರ್ದಿಷ್ಟವಾದ ರೋಗಾಣುಗಳನ್ನು ಎದುರಿಸುವ ಸಾಮರ್ಥ್ಯ ಇರುತ್ತದೆ. ಅನಿರ್ದಿಷ್ಟವಾದ ಅಂತರ್ಗತ ರೋಗ ನಿರೋಧಕ ಶಕ್ತಿಯು ಎಲ್ಲಾ ಸೋಂಕುಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.
ಯುಕ್ತಿಜ ಬಲವು ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಮತ್ತು ಶಿಸ್ತಿನ ಜೀವನ ಶೈಲಿಯಿಂದ ಬರುತ್ತದೆ. ಈ ರೀತಿಯ ರೋಗ ನಿರೋಧಕ ಶಕ್ತಿಯನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ಒಂದು ಯಾವುದೇ ರೋಗಾಣುವಿನ ಆಕಸ್ಮಿಕ ಸಂಪರ್ಕದಿಂದ ಸಹಜವಾಗಿ ಉಂಟಾಗುವ ರೋಗ ನಿರೋಧಕ ಶಕ್ತಿ ಮತ್ತು ಲಸಿಕೆಗಳ ಮೂಲಕ ಉದ್ದೇಶಪೂರ್ವಕವಾಗಿ ಪಡೆದುಕೊಂಡ ರೋಗ ನಿರೋಧಕ ಶಕ್ತಿ.
ಕಾಲಜ ಬಲವು ನಿರ್ದಿಷ್ಟ ವಯಸ್ಸು, ಸಮಯ ಮತ್ತು ಕಾಲಮಾನವನ್ನು ಹೊಂದಿಕೊಂಡು ಪಡೆಯುವಂತದ್ದು. ಐದು ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಮತ್ತು 60 ವರ್ಷಗಳಿಗಿಂತ ಹೆಚ್ಚು ವಯಸ್ಸಿನವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆ ಕಾರಣದಿಂದಲೇ ಈ ವಯೋವರ್ಗದ ಮತ್ತು ಹೃದಯ ಖಾಯಿಲೆ, ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ರಕ್ತದ ಅತಿಯೊತ್ತಡ ಇತ್ಯಾದಿ ಸಮಸ್ಯೆ ಇರುವವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತಾದ್ದರಿಂದ ಸುರಕ್ಷಿತತೆ ಮತ್ತು ಕಾಳಜಿಯ ಕುರಿತು ಕೊರೋನ ಸಂದರ್ಭದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಈಗ ನಾವು ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದಕ್ಕೆ ಕೆಲವು ಸಾಮಾನ್ಯ ಕಾರಣಗಳನ್ನು ನೋಡೋಣ.
ಅತ್ಯಲ್ಪ ನಿದ್ರಾ (ನಿದ್ರಾಹೀನತೆ): ನಿದ್ರಾಕಾಲದಲ್ಲಿ ನಮ್ಮ ರೋಗನಿರೋಧಕ ವ್ಯವಸ್ಥೆಯು ಸೈಟೋಕಿನ್ (cytokine) ಎಂಬ ಪ್ರೊಟೀನನ್ನು ಬಿಡುಗಡೆ ಮಾಡುತ್ತದೆ. ಇವುಗಳಲ್ಲಿ ಕೆಲವು ನಿದ್ದೆಯನ್ನು ಉತ್ತೇಜಿಸುತ್ತವೆ. ಅವುಗಳಲ್ಲಿ ಕೆಲವು ಸೈಟೋಕಿನ್‌ಗಳು ನಿದ್ದೆಯನ್ನು ಉತ್ತೇಜಿಸುವುದಲ್ಲದೆ, ಹೆಚ್ಚುವರಿಯಾಗಿ ಸೋಂಕು ರೋಗವನ್ನು ಉಂಟುಮಾಡುವ ರೋಗಾಣುಗಳ ವಿರುದ್ಧ ಹೋರಾಡುತ್ತವೆ. ನಿದ್ರಾಹೀನತೆಯು ಇಂತಹ ಸೈಟೋಕಿನ್‌ಗಳ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ಆದುದರಿಂದ ನಿದ್ರೆಯನ್ನು ಆಯುರ್ವೇದದಲ್ಲಿ ಆರೋಗ್ಯದ ಮೂರು ಅತೀ ಮುಖ್ಯ ಆಧಾರ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಅತಿ ಮಧುರ ಆಹಾರ (ಶುದ್ಧೀಕೃತ ಸಕ್ಕರೆಯ ಹೆಚ್ಚು ಬಳಕೆ): ಆಹಾರದಲ್ಲಿರುವ ಶುದ್ಧೀಕೃತ ಸಕ್ಕರೆಯ ಅಂಶವು ರೋಗ ನಿರೋಧಕ ಶಕ್ತಿಯ ಮೇಲೆ ಮತ್ತು ಆರೋಗ್ಯದ ಮೇಳೆ ಪರಿಣಾಮ ಉಂಟುಮಾಡುತ್ತದೆ. ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಬಿಳಿ ರಕ್ತಕಣಗಳ ಕಾರ್ಯಕ್ಷಮತೆಯನ್ನು ಹೆಚ್ಚುವರಿ ಸಕ್ಕರೆಯು ಕುಂಠಿತಗೊಳಿಸುತ್ತದೆ.
ಅತಿ ಮದ್ಯಪಾನ (ಆಲ್ಕೋಹಾಲ್ ಸೇವನೆ): ಮದ್ಯಪಾನ ಮತ್ತು ರೋಗ ನಿರೋಧಕ ಶಕ್ತಿಯ ಮೇಲೆ ದುಷ್ಪರಿಣಾಮದ ನಡುವೆ ವ್ಯತಿರಿಕ್ತವಾದ ಸಂಬಂಧ ಇದೆಯೆಂದು ಜಗತ್ತಿನಾದ್ಯಂತ ವೈದ್ಯರು ಗುರುತಿಸಿದ್ದಾರೆ. ನ್ಯುಮೋನಿಯಾದಂತಹ ರೋಗಗಳಿಗೆ ತುತ್ತಾಗುವುದು, ಶ್ವಾಸಕೋಶದ ತೊಂದರೆಗಳು, ಸಾಂಕ್ರಾಮಿಕ ರೋಗಗಳಿಂದ ನಿಧಾನ ಮತ್ತು ಅಪೂರ್ಣ ಚೇತರಿಕೆ, ಯಕೃತ್ತಿನ ತೊಂದರೆಗಳು ಇತ್ಯಾದಿಗಳಿಗೆ ಮದ್ಯಪಾನ ಕಾರಣವಾಗಬಹುದು ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಮದ್ಯಪಾನವು ಹಲವಾರು ಸಂಕೀರ್ಣ ರೀತಿಗಳಲ್ಲಿ ರೋಗಗಳನ್ನು ನಿರೋಧಿಸುವ ದೇಹದ ಸ್ಥಿರತೆಯನ್ನು ದುರ್ಬಲಗೊಳಿಸುವ ಬಗ್ಗೆ ಸಾಕ್ಷ್ಯಾಧಾರಗಳು ಇವೆ.
ಧೂಮಪಾನ (ಸಿಗರೆಟ್ ಸೇವನೆ): ಇದು ಅನೇಕ ರೋಗಗಳ ಜೊತೆ ನೇರ ಸಂಬಂಧ ಹೊಂದಿದೆ ಮತ್ತು ಅಂತರ್ಗತ ಮತ್ತು ಪಡೆದುಕೊಳ್ಳುವ ರೋಗ ನಿರೋಧಕ ಶಕ್ತಿಯ ಮೇಲೆ ನೇರ ಪರಿಣಾಮವನ್ನು ಉಂಟುಮಾಡುತ್ತದೆ. ಧೂಮಪಾನವು ಬಿಳಿ ರಕ್ತಕಣಗಳ ಕಾರ್ಯಸಾಮರ್ಥ್ಯವನ್ನು ಕುಗ್ಗಿಸುವ ಮೂಲಕ ಸಾಂಕ್ರಾಮಿಕ ರೋಗಗಳ ವಿರುದ್ಧ ರಕ್ಷಣೆಯನ್ನು ಕುಂಠಿತಗೊಳಿಸುತ್ತದೆ.
ಅತಿ ವ್ಯಾಯಾಮ: ಅತಿಯಾದ ವ್ಯಾಯಾಮವು ಕೂಡಾ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಕುರಿತು ಸಾಕ್ಷ್ಯಾಧಾರಗಳು ಇವೆ. ಕೋರ್ಟಿಸೋಲ್ ಮತ್ತು ಅಡ್ರಿನಾಲಿನ್ (Cortisol and adrenaline) ಎಂಬ ಭಾವನೆಗಳಿಗೆ ಸಂಬಂಧಿಸಿದ ಹಾರ್ಮೋನ್‌ಗಳು ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ ಎಂಬುದಕ್ಕೂ ಸಾಕ್ಷ್ಯಾಧಾರಗಳು ಇವೆ.
ಆದುದರಿಂದಲೇ, ಅತಿ ವ್ಯಾಯಾಮ ಮಾಡುವ ಎಲ್ಲಾ ಜನರು ಮತ್ತು ಕ್ರೀಡಾಳುಗಳು ದೇಹದ ರೋಗ ನಿರೋಧಕ ಶಕ್ತಿ ಚೇತರಿಸಿಕೊಳ್ಳುವ ಸಲುವಾಗಿ ಸಾಕಷ್ಟು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ಮಾಡಲಾಗುತ್ತದೆ.
ಮನೋದ್ವೇಗ (ಒತ್ತಡ): ಮಾನಸಿಕ ಒತ್ತಡವೂ ಖಾಯಿಲೆ ತರುವ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಒತ್ತಡದ ಹಾರ್ಮೋನ್ ಕಾರ್ಟಿಕೋಸ್ಟೆರಾಯ್ಡ್, ಲಿಂಫೋಸೈಟ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿ ರೋಗಾಣು ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ.
ವ್ಯಾಧಿ ಸಂಕರ (ಬೇರೆ ಇತರ ರೋಗಗಳು ಹೊಂದಿರುವುದು): ಇದೆಂದರೆ, ಒಂದು ಸ್ಥಿತಿಯಲ್ಲಿ ಆಗಲೇ ಇದ್ದು ಬೇರೆ ಕಾಯಿಲೆಯಿಂದ ಉಲ್ಬಣಗೊಳ್ಳುವ ಸಾಧ್ಯತೆ. ಇದು ದೈಹಿಕವಾಗಿಯೂ ಇರಬಹುದು, ಅಥವಾ ಮಾನಸಿಕವಾಗಿಯೂ ಇರಬಹುದು. ಇವುಗಳಲ್ಲಿ ಹೃದಯ ಖಾಯಿಲೆ, ಕಿಡ್ನಿ, ಸಕ್ಕರೆ ಕಾಯಿಲೆ, ರಕ್ತದ ಅತಿಯೊತ್ತಡ, ಕ್ಯಾನ್ಸರ್, ಎಚ್ಐವಿ/ಏಡ್ಸ್ ಮುಂತಾದ ಕಾಯಿಲೆಗಳು ಸೇರಿವೆ. ಹೆಚ್ಚು ವಯಸ್ಸಾದವರಲ್ಲಿ ಇವು ಹೆಚ್ಚಾಗಿ ಇರುವುದರಿಂದ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ಅನ್ಯ ಕಾರಣ: ಜನರು ಅಪೌಷ್ಟಿಕತೆ, ಅಪಾಯಕಾರಿ ರಾಸಾಯನಿಕಗಳ ಜೊತೆಗೆ ನಿರಂತರವಾಗಿ ಕೆಲಸ ಮಾಡುವುದು, ಮೂಲಭೂತ ಆರೋಗ್ಯ ಸೌಕರ್ಯಗಳು ಇಲ್ಲದಿರುವುದು ಇತ್ಯಾದಿ ಕಾರಣಗಳಿಂದ ಕೂಡಾ ಸೋಂಕು ರೋಗಗಳಿಗೆ ಸುಲಭದ ತುತ್ತಾಗಬಹುದು. ಏಕೆಂದರೆ, ಅವರ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಮತ್ತು ಅವರು ಸಾಮಾನ್ಯವಾಗಿ ಸಮಾಜದ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲ ಮತ್ತು ಕಡೆಗಣಿಸಲ್ಪಟ್ಟ ಜಾತಿ, ವರ್ಗಗಳಿಗೆ ಸೇರಿರುತ್ತಾರೆ ಎಂಬುದು ಕೂಡಾ ನಿಜ.
– ಡಾ. ಮಾನಸ ಎಸ್, ಆಯುರ್ವೇದ ವೈದ್ಯರು
– ಕನ್ನಡಕ್ಕೆ: ನಿಖಿಲ್ ಕೋಲ್ಪೆ
ಇದನ್ನೂ ಓದಿ:
ಪತಂಜಲಿ ಕೊರೊನಾ ಔಷಧಿ: ಆಯುರ್ವೇದ ವೈದ್ಯಶಾಸ್ತ್ರಕ್ಕೆ ಮಸಿ ಬಳಿಯುವ ಪ್ರಯತ್ನ


