ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಕಾರಣ ದೇಶದಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್ ಸೇರಿದಂತೆ ಕೋವಿಡ್ ಸಂಬಂಧಿತ ವಿಷಯಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ 93,249 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣಗಳಲ್ಲಿ ಎಂಟು ರಾಜ್ಯಗಳಿಂದಲೇ ಶೇಕಡಾ 81.42 ರಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಮಹಾರಾಷ್ಟ್ರ, ಕರ್ನಾಟಕ, ಚತ್ತೀಸ್‌ಘಡ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್ ಮತ್ತು ಮಧ್ಯಪ್ರದೇಶ ಆ ರಾಜ್ಯಗಳಾಗಿವೆ.
ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಒಳಗೊಂಡಂತೆ ಜನಸಾಮಾನ್ಯರಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಬಲವಾದ ಕ್ರಮ ಕೈಗೊಳ್ಳುವಂತೆ ಕೇಂದ್ರವು ಈಗಾಗಲೇ ರಾಜ್ಯಗಳನ್ನು ಕೇಳಿದೆ. ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚುತ್ತಿರುವ ಸಡಿಲತೆಯು ಪ್ರಸ್ತುತ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಮತ್ತು ಸರ್ಕಾರದ ಕೋವಿಡ್ ಟಾಸ್ಕ್ ಫೋರ್ಸ್‌ನ ಉನ್ನತ ಸದಸ್ಯರಾದ ಡಾ. ರಣದೀಪ್ ಗುಲೇರಿಯಾ, ಹೆಚ್ಚು ಪ್ರಸರಣ ವಲಯಗಳು, ಲಾಕ್‌ಡೌನ್ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವುದು, ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕತೆಗೊಳಿಸುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ. ರೂಪಾಂತರಗೊಂಡ ವೈರಸ್ ಸಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಅವರು ತಿಳಿಸಿದ್ದಾರೆ.
ಇಂದಿನ ಪ್ರಧಾನಿಯವರ ಉನ್ನತ ಮಟ್ಟದ ಸಭೆಯಲ್ಲಿ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ; ಕೊರೊನಾ ಎರಡನೇ ಅಲೆ; ಸಿದ್ಧವಾಗಿದೆಯೇ ಕರ್ನಾಟಕ?: ಡಾ. ಅಖಿಲಾ


