Homeಕರೋನಾ ತಲ್ಲಣಕೊರೊನಾ ಎರಡನೇ ಅಲೆ; ಸಿದ್ಧವಾಗಿದೆಯೇ ಕರ್ನಾಟಕ?: ಡಾ. ಅಖಿಲಾ

ಕೊರೊನಾ ಎರಡನೇ ಅಲೆ; ಸಿದ್ಧವಾಗಿದೆಯೇ ಕರ್ನಾಟಕ?: ಡಾ. ಅಖಿಲಾ

- Advertisement -
- Advertisement -

ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಕೋವಿಡ್-19ನ ಎರಡನೇ ಅಲೆ ಶುರುವಾಗಿರುವುದು ಖಚಿತವಾಗುತ್ತಿದೆ. ನಾಲ್ಕು ತಿಂಗಳ ಹಿಂದೆಯೇ ಕರ್ನಾಟಕ ಜನಾರೋಗ್ಯ ಚಳವಳಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಡಾ. ಹಿಮಾಂಶು ಅವರು ಎರಡನೇ ಅಲೆಯ ಬಗ್ಗೆ ಹೇಳುತ್ತ ಸರಕಾರವು ತನ್ನ ಟೆಸ್ಟ್-ಟ್ರೇಸ್-ಟ್ರೀಟ್ ಸ್ಟ್ರಾಟಜಿಯನ್ನು ತೀವ್ರಗೊಳಿಸಬೇಕಾಗಿದೆ ಹಾಗೂ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದಿದ್ದರು. ಆದರೆ ಎರಡನೇ ಅಲೆಯ ಪ್ರಾರಂಭ ಈ ಎರಡರಲ್ಲೂ ವಿಫಲವಾಗಿರುವುದನ್ನು ಸೂಚಿಸುತ್ತದೆ.

ಮಾರ್ಚ್ ಪ್ರಾರಂಭದಲ್ಲಿ ಕೊರೊನಾ ಪ್ರಕರಣಗಳು ದೇಶದ ಹಲವೆಡೆ ಹೆಚ್ಚಳವಾದವು. ಇದು ಮೊದಲ ಅಲೆಗಿಂತ ಭಿನ್ನವಾಗಿದ್ದು, ಸಂಖ್ಯೆಗಳು ತ್ವರಿತವಾಗಿ ಹೆಚ್ಚಿದವು. ಉದಾಹರಣೆಗೆ, ಮೊದಲ ಅಲೆಯಲ್ಲಿ ಸೋಂಕಿತರ ಸಂಖ್ಯೆ 18,000ದಿಂದ 50,000ಕ್ಕೆ ಏರಲು 32 ದಿನ ತೆಗೆದುಕೊಂಡರೆ, ಈ ವರ್ಷ ಕೇವಲ 17 ದಿನಗಳಲ್ಲೇ ಈ ಹೆಚ್ಚಳ ಕಂಡುಬಂದಿತು. ಕೇವಲ ಒಂದು ವಾರದಲ್ಲಿ ಹೊಸ ಪ್ರಕರಣಗಳ ದರವು 66%ಅಷ್ಟು ಹೆಚ್ಚಾಯಿತು. ಇದು 2020ರ ಮೇ 10ರ ನಂತರ ಕಂಡುಬಂದ ವಾರದಿಂದ ವಾರಕ್ಕೆ ಆದ ಅತ್ಯಧಿಕ ಹೊಸ ಪ್ರಕರಣಗಳ ದರವಾಗಿದೆ. ಮೊದಲ ಅಲೆಯಲ್ಲಿ ಕಂಡುಬಂದಂತೆ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ಪಂಜಾಬ್ ರಾಜ್ಯಗಳಲ್ಲಿಯೇ 75% ಪ್ರಕರಣಗಳು ಕಂಡುಬಂದಿವೆ. ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿಯ ಪ್ರಕರಣಗಳೂ ಹೆಚ್ಚುತ್ತಿವೆ. ಅತೀ ಹೆಚ್ಚು ನಗರೀಕರಣ, ಕೈಗಾರಿಕೀಕರಣ, ದೊಡ್ಡ ನಗರಗಳು ಮತ್ತು ಅಂತರರಾಜ್ಯ ಮತ್ತು ಹೆಚ್ಚಿನ ಅಂತಾರಾಷ್ಟ್ರೀಯ ಚಲನವಲನ ಹೊಂದಿದ ಈ ರಾಜ್ಯಗಳ ಮೇಲೆ ಪರಿಣಾಮ ಮುಂಚಿತವಾಗಿದ್ದು, ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಒರಿಸ್ಸಾ ರಾಜ್ಯಗಳಲ್ಲಿ ಎರಡನೇ ಅಲೆ ತಡವಾಗಿ ಶುರುವಾಗಲಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ 1ನೇ ಮಾರ್ಚ್ 2021ರಿಂದ 29ನೇ ಮಾರ್ಚ್ 2021ರ ಒಳಗೆ ಹೊಸ ಪ್ರಕರಣಗಳ ಸಂಖ್ಯೆಯು ಆರು ಪಟ್ಟು ಹೆಚ್ಚಾಗಿದೆ.

ಎರಡನೇ ಅಲೆಯ ಈ ದಿಢೀರ್ ಆರಂಭ ಮತ್ತು ವೇಗದ ಹರಡುವಿಕೆಗೆ ವಿವರಣೆ ಏನು?

ಹಲವಾರು ತಜ್ಞರು ಹೇಳುವುದೇನೆಂದರೆ, ಈ ಎರಡನೇ ಅಲೆ ’ದಿಢೀರ್’ ಆಗಿ ಬಂದಿದ್ದಲ್ಲ. ಇದು ನಿರೀಕ್ಷಿತವೇ ಆಗಿತ್ತು ಏಕೆಂದರೆ, ಈ ಹಿಂದೆ ಬಂದ ಇಂತಹ ವೈರಲ್ ಸಾಂಕ್ರಾಮಿಕಗಳ ಸ್ವರೂಪವೂ ಇದೇ ಆಗಿತ್ತು. ’ಅಲೆ’ ಎಂದರೆ ತುದಿಗಳ ಮತ್ತು ಕಣಿವೆಗಳ ಒಂದು ಪ್ಯಾಟರ್ನ್ ಹಾಗೂ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ ಎಂದು ಅಂದುಕೊಂಡಾಗಲೂ ಈ ಹೆಚ್ಚಳವನ್ನು ನಿರೀಕ್ಷಿಸುವಂತಹದ್ದೆ. ಹಾಗೂ ಪ್ರತಿಯೊಂದು ಅಲೆಯೂ ಋತು, ಹವಾಮಾನ, ಮಾನವ ಚಟುವಟಿಕೆಯ ಪ್ಯಾಟರ್ನ್‌ಗಳಂತಹ ಅಂಶಗಳೊಂದಿಗೆ ತಳಕುಹಾಕಿಕೊಂಡಿರುತ್ತದೆ. ಹಾಗೂ ಪ್ರತಿಯೊಂದು ಅಲೆಯ ತೀವ್ರತೆಯೂ ಭಿನ್ನವಾಗಿರುತ್ತದೆ. ಈ ಅಧ್ಯಯನಗಳ ಪ್ರಕಾರ, SARSCoV2 ಕೂಡ ಈ ಹಿಂದೆ ಕಂಡ ಸಾಂಕ್ರಾಮಿಕ ಪ್ಯಾಟರ್ನ್‌ನ ದಾರಿಯನ್ನೇ ತುಳಿಯಲಿದೆ. ಉದಾಹರಣೆಗೆ, ಡಿಸೆಂಬರ್‌ನ ಮೊದಲಲ್ಲಿ ಯುರೋಪಿನಲ್ಲಿ ಕಂಡುಬಂದ ಎರಡನೇ ಅಲೆಯು ಮೊದಲ ಅಲೆಗಿಂತ ತೀವ್ರವಾಗಿತ್ತು.

29 ಮಾರ್ಚ್ 2021ರಂದು ರಾಜ್ಯಗಳಲ್ಲಿ ಹೊಸ ಕೊವಿಡ್-19 ಪ್ರಕರಣಗಳ ಚಿತ್ರಣ

ಭಾರತದಲ್ಲಿ ಸೀರೊ-ಪ್ರಿವೆಲನ್ಸ್ ದರವು 30-40% ಆದಾಗ ನಾವು ’ಸಮೂಹ ನಿರೋಧಕತೆ’(herd immunity)ಯನ್ನು ತಲುಪುತ್ತಿದ್ದೇವೆ ಎಂದುಕೊಂಡು ನಮ್ಮ ರಾಜಕೀಯ ವರ್ಗವು ಆಲಕ್ಷ್ಯ ತೋರಿಸಲು ಪ್ರಾರಂಭಿಸಿತು. ಈ ಸಮೂಹ ನಿರೋಧಕತೆಯ ನಿರೀಕ್ಷೆಗಳು ತಪ್ಪು ಎಂದು ಈಗ ತಿಳಿದಿದೆ. ಉದಾಹರಣೆಗೆ, ಒಂದು ಜನಸಮೂಹದ 70% ಜನರು ಸೋಂಕಿಗೆ ತುತ್ತಾದಲ್ಲಿ ಆ ಪ್ರದೇಶದಲ್ಲಿ ಸಮೂಹ ನಿರೋಧಕತೆ ಸಿದ್ಧಿಯಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಬ್ರೆಜಿಲ್‌ನಲ್ಲಿ 73% ಜನರಿಗೆ ಕೊರೊನಾ ನಿರೋಧಕ ಪ್ರತಿಕಾಯಗಳು ಪತ್ತೆಯಾಗಿದ್ದರೂ ಅಲ್ಲಿ ಸಾಂಕ್ರಾಮಿಕದ ತೀವ್ರತೆ ಕಡಿಮೆಯಾಗಿಲ್ಲ.

ಈ ಸಮೂಹ ನಿರೋಧಕತೆಯ ನಂಬಿಕೆಯ ಆಲಕ್ಷ್ಯತೆಗೆ ಎಡೆಮಾಡಿಕೊಟ್ಟಿತು. ಧಾರ್ಮಿಕ ಸಭೆಗಳು, ರ್‍ಯಾಲಿಗಳು, ಚುನಾವಣಾ ಪ್ರಚಾರಗಳಿಗೆ ಅನುವು ಮಾಡುತ್ತಲೇ, ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಚಟುವಟಿಕೆಗಳು ಕಡಿಮೆಯಾದವು. ಒಂದು ಆಘಾತಕಾರಿಯಾದ ಉದಾಹರಣೆಯೆಂದರೆ, 1ನೇ ಡಿಸೆಂಬರ್ ಮತ್ತು 21ನೇ ಡಿಸೆಂಬರ್ ನಡುವೆ ಪ್ರಯಾಣಿಸಿದ 2406 ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ 570 ಜನ ಕಾಣೆಯಾಗಿದ್ದಾರೆ ಎಂದು ಕರ್ನಾಟಕ ಸರಕಾರ ಹೇಳಿಕೆ ನೀಡಿತ್ತು. ಹಾಗಾಗಿ ಬೇರೆ ಬೇರೆ ದೇಶಗಳಿಂದ ಬಂದ ಈ ವೈರಸ್‌ನ ಹೊಸ ತಳಿಗಳು ದೇಶದಲ್ಲಿ ಮುಕ್ತವಾಗಿ ಹರಡುತ್ತಿದ್ದಲ್ಲಿ ಆಶ್ಚರ್ಯವೇನಿಲ್ಲ.

ಇದಕ್ಕೆ ತಜ್ಞರು ಕಂಡುಕೊಂಡಿರುವ ಇನ್ನೊಂದು ಕಾರಣ; ಮುಂಚೆಯ ರೀತಿಯಲ್ಲಿ ಮುನ್ನೆಚ್ಚರಿಕೆಗಳನ್ನು ಪಾಲಿಸುವುದಕ್ಕೆ ಜನರಿಗೆ ಆಗದೇ ಇರುವುದು, ಜನರು ಆಯಾಸಗೊಂಡಿರುವುದು. ಉದಾಹರಣೆಗೆ, ಕಳೆದ ಒಂದು ವರ್ಷದಲ್ಲಿ ಬಿಬಿಎಂಪಿಯು ಜನರು ಮಾಸ್ಕ್ ಧರಿಸದೇ ಇದ್ದಿದ್ದಕ್ಕಾಗಿ ವಿಧಿಸಿದ ದಂಡದ ಮೊತ್ತ 10 ಕೋಟಿ ರೂಪಾಯಿಗಳು. ಸದಾಕಾಲ ಜಾಗೃತರಾಗಿರುವುದರಿಂದ ಜನರು ದಣಿಯುವುದು ಸ್ವಾಭಾವಿಕವೇ. ಆದರೆ ನೆನಪಿಡಬೇಕಾಗಿದ್ದೇನೆಂದರೆ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆಯುವುದು, ದೈಹಿಕ ಅಂತರ ಕಾಪಾಡುವುದು, ಇವುಗಳೇ ವೈರಸ್‌ನಿಂದ ಜನರನ್ನು ಖಚಿತವಾಗಿ ಸುರಕ್ಷಿತವಾಗಿಡಬಲ್ಲವು. ಇತರ ದಾರಿಗಳೆಲ್ಲವೂ, ಅದು ಚಿಕಿತ್ಸೆಯಾಗಿರಲಿ ಅಥವಾ ಲಸಿಕೆಯಾಗಿರಲಿ ಅವೆಲ್ಲವುಗಳ ಮೇಲೆ ಇನ್ನೂ ಕೆಲಸ ನಡೆಯುತ್ತಿದೆ. ಇನ್ನೂ ಕೆಲ ಸಮಯ ಕಳೆದ ನಂತರವೇ ಅವುಗಳ ಪರಿಣಾಮಕತ್ವದ ಬಗ್ಗೆ ಸಂಪೂರ್ಣ ಅರಿವು ಮೂಡಬಹುದಾಗಿದೆ.

ಮ್ಯೂಟೇಷನ್ ಹೊಂದಿದ ಭಿನ್ನ ತಳಿಗಳು ಮತ್ತು ವೈರಸ್‌ನ ಇತರ ವಿವಿಧ ತಳಿಗಳು

ಸಾರ್‍ಸ್-ಕೊವ್-2ನ ಜೆನೆಟಿಕ್ ಅಂಶವು ರಿಬೊನ್ಯೂಕ್ಲಿಯಿಕ್ ಅಸಿಡ್ (ಆರ್‌ಎನ್‌ಎ) ಆಗಿದೆ. ಒಂದು ಆರ್ಗ್ಯಾನಿಸಂನ ಆರ್‌ಎನ್‌ಎ ಅಥವಾ ಡಿಎನ್‌ಎನ ಸಂಪೂರ್ಣ ಸೆಟ್‌ಅನ್ನು ಜಿನೋಮ್ ಎಂದು ಕರೆಯಲಾಗುತ್ತದೆ. ವೈರಸ್‌ಗಳ ಪುನರುತ್ಪತ್ತಿಯ ಈ ಪ್ರಕ್ರಿಯೆಯ ಸಮಯದಲ್ಲಿ ದೋಷಗಳು ಉಂಟಾಗುತ್ತವೆ, ಅದರಿಂದ ಬರುವ ಹೊಸ ವೈರಸ್‌ಗಳು ಅದರಂತೆ ಇದ್ದರೂ ಮೂಲ ವೈರಸ್‌ನ ಪ್ರತಿಕೃತಿಯಾಗಿರುವುದಿಲ್ಲ. ವೈರಲ್ ಆರ್‌ಎನ್‌ಎಗಳ ಈ ದೋಷವನ್ನು ಮ್ಯುಟೇಷನ್ ಎಂದು ಕರೆಯಲಾಗುತ್ತದೆ ಹಾಗೂ ಈ ಮ್ಯುಟೇಷನ್‌ಗಳನ್ನು ಹೊಂದಿದ ವೈರಸ್‌ಗಳನ್ನು ವೇರಿಯಂಟ್ಸ್ (ಭಿನ್ನ ತಳಿಗಳು) ಎಂದು ಕರೆಯಲಾಗುತ್ತದೆ. ಈ ವೇರಿಯಂಟ್‌ಗಳು ಒಂದು ಅಥವಾ ಹಲವಾರು ಮ್ಯುಟೇಷನ್‌ಗಳ ವ್ಯತ್ಯಾಸವನ್ನು ಹೊಂದಿರಬಹುದು.

ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಇತರ ಮಾದರಿಗಳಿಗೆ ಹೋಲಿಸಿದಲ್ಲಿ E484Q ಮತ್ತು L452R ಹೆಸರಿನ ಎರಡು ಮ್ಯುಟೇಷನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ. ಒಂದು ಮ್ಯುಟೇಷನ್ ಇದೆ ಎಂದ ಮಾತ್ರಕ್ಕೆ ಅದರ ತೀವ್ರತೆಯಲ್ಲಿ ಬದಲಾವಣೆ ಆಗುವುದಿಲ್ಲ. ಆದರೆ, ಒಂದು ವೇಳೆ ಆ ಮ್ಯುಟೇಷನ್‌ನ ಕಾರಣದಿಂದ ವೈರಸ್‌ನ ತೀವ್ರತೆ ಬದಲಾದಲ್ಲಿ ಅದನ್ನು ಸ್ಟ್ರೇನ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಲಂಡನ್‌ನ ಇಂಪೀರಿಯಲ್ ಕಾಲೇಜಿನ ಒಂದು ಅಧ್ಯಯನ ಕಂಡುಕೊಂಡಿದ್ದೇನೆಂದರೆ, ಇಂಗ್ಲೆಂಡಿನಲ್ಲಿ ಕಂಡುಬಂದ ಹೊಸ ಸ್ಟ್ರೇನ್‌ನಲ್ಲಿ ’ಆರ್’ ಮೌಲ್ಯ 1.45 ಆಗಿದ್ದು, ಅದಕ್ಕಿಂತ ಮುಂಚೆ ಆ ಮೌಲ್ಯವು 0.92 ಆಗಿತ್ತು. ಅದರರ್ಥ, ಮುಂಚೆಯ ಸ್ಟ್ರೇನ್‌ಗಿಂತ ಈ ಹೊಸ ಸ್ಟ್ರೇನ್ ಹೆಚ್ಚು ಸೋಂಕು ಹರಡುವ ಶಕ್ತಿ ಹೊಂದಿದೆ ಎಂದು.

ಸದ್ಯಕ್ಕೆ, ಎರಡನೇ ಅಲೆಗೆ ಸಂಬಂಧಿಸಿದಂತೆ ಇರುವ ದೊಡ್ಡ ಆತಂಕವೆಂದರೆ, ವೈರಸ್‌ನ ಮ್ಯುಟೇಷನ್ ಹೊಂದಿದ ವಿವಿಧ ತಳಿಗಳು ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕ ಮತ್ತು ಬ್ರೆಜಿಲ್‌ನಿಂದ ಬಂದಿರುವ ಬೇರೆ ಬೇರೆ ತಳಿಗಳು ಎಲ್ಲೆಡೆ ಹರಡುತ್ತಿರುವುದು. ಸೋಂಕಿನ ತೀವ್ರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿರಬಹುದು ಮತ್ತು ಇವುಗಳು ಇನ್ನಷ್ಟು ಗಂಭೀರ ಕಾಯಿಲೆಗೆ ಕಾರಣವಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಜಿನೊಮ್ ಸಿಕ್ವೆನ್ಸಿಂಗ್ ಎಂಬ ಪ್ರಯೋಗವನ್ನು ಕೈಗೊಳ್ಳಬೇಕಾಗುತ್ತದೆ. ಈ ಪ್ರಯೋಗವು ಒಂದು ನಿರ್ದಿಷ್ಟ ಜೀವಿಯ ಇಡೀ ಜೆನೆಟಿಕ್ ರಚನೆಯನ್ನು ನಿರ್ಧರಿಸಲು ಮತ್ತು ಆ ಜಿನೊಮ್‌ನಲ್ಲಿಯ ಬದಲಾವಣೆಗಳನ್ನು ಕಂಡುಹಿಡಿಯಲು ಬಳಸಲಾಗುತ್ತದೆ.

ಉದಾಹರಣೆಗೆ, ನಿಮ್ಹಾನ್ಸ್‌ನಲ್ಲಿ ಇಂಗ್ಲೆಂಡಿನಿಂದ ಬಂದವರ 86 ಮಾದರಿಗಳನ್ನು ಪರೀಕ್ಷಿಸಿದಾಗ, 25ರಲ್ಲಿ ಇಂಗ್ಲೆಂಡಿನ ತಳಿ ಕಾಣಿಸಿಕೊಂಡಿತ್ತು, ಆದರೆ, ಬ್ರೆಜಿಲ್‌ನ ಅಥವಾ ದಕ್ಷಿಣ ಆಫ್ರಿಕಾದ ತಳಿ ಯಾರಲ್ಲೂ ಕಾಣಿಸಿಕೊಳ್ಳಲಿಲ್ಲ. ಹಾಗೆಯೇ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನಲ್ಲಿ ಪಂಜಾಬಿನ 401 ಮಾದರಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 81% ಮಾದರಿಗಳಲ್ಲಿ ಇಂಗ್ಲೆಂಡಿನ ತಳಿ ಕಾಣಿಸಿಕೊಂಡಿತ್ತು. ಹಾಗೂ ಮಾರ್ಚ್ 24ರಂದು ಪಂಜಾಬ್ ರಾಜ್ಯವು ದೇಶದಲ್ಲಿರುವ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಮೂರನೇ ರಾಜ್ಯವಾಗಿತ್ತು ಹಾಗೂ ಅತ್ಯಂತ ಹೆಚ್ಚು ಮರಣ ದರ (ಸಿಎಫ್‌ಆರ್ – ಕೇಸ್ ಫೆಟಾಲಿಟಿ ರೇಟ್) ಹೊಂದಿತ್ತು.

ಆದರೆ, ಈ ಸ್ಟ್ರೇನ್‌ಗಳು(ತಳಿಗಳು) ಹರಡುವಿಕೆಯನ್ನು ಹೆಚ್ಚಿಸುತ್ತಿವೆಯೇ ಅಥವಾ ರೋಗದ ತೀವ್ರತೆಯನ್ನು ಹೆಚ್ಚಿಸುತ್ತಿವೆಯೆ ಅಥವಾ ಇನ್ನೂ ಬೇರೆ ಸ್ಟ್ರೇನ್‌ಗಳು ಹುಟ್ಟಿಕೊಂಡಿವೆಯೇ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಈ ಮಾದರಿಗಳಿಂದ ಆಗುವುದಿಲ್ಲ ಏಕೆಂದರೆ ಮಾದರಿಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ತಜ್ಞರು ಹೇಳುವುದೇನೆಂದರೆ, ಒಂದು ವೇಳೆ ಈ ಎರಡನೇ ಅಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅದಕ್ಕೆ ತಡೆಗಟ್ಟುವ ಕ್ರಮಗಳನ್ನು ವಿಧಿಸಬೇಕೆಂದರೆ, ಈ ಜಿನೋಮ್ ಸಿಕ್ವೆನ್ಸಿಂಗ್ ಪ್ರೊಸಿಜರ್‌ಅನ್ನು ವಿಸ್ತರಿಸಬೇಕಾಗುತ್ತದೆ. ಭಾರತವು Indian SARS-CoV-2 Genomic Consortium (INSACOG) ಭಾಗವಾಗಿ ಜಿನೊಮ್ ಸಿಕ್ವೆನ್ಸಿಂಗ್ ಅನ್ನು 10 ಪ್ರಯೋಗಶಾಲೆಗಳಲ್ಲಿ ಜನವರಿಯಲ್ಲಿ ಪ್ರಾರಂಭಿಸಿತು. ಆದರೆ ಮಾರ್ಚ್2021ರ ಕೊನೆಯಲ್ಲಿ ಕಂಡುಬಂದಿದ್ದೇನೆಂದರೆ, ಅನುದಾನದ ಕೊರತೆಯಿಂದಾಗಿ ಜಿನೊಮ್ ಸಿಕ್ವೆನ್ಸಿಂಗ್‌ನ ವಿಸ್ತರಣೆಯನ್ನು ನಿಲ್ಲಿಸಲಾಗಿದೆ.

ಆರೋಗ್ಯ ವ್ಯವಸ್ಥೆಯ ಸನ್ನದ್ಧತೆ ಹೇಗಿದೆ?

ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್) ಮತ್ತು ಐಸಿಯು (ತೀವ್ರ ನಿಗಾ ಘಟಕ) ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರವು ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಗಂಭೀರ ಆತಂಕವಿರುವುದು, ಸರಕಾರದ ತಡೆಗಟ್ಟುವಿಕೆಯ ಪ್ರಯತ್ನದ ಚಾಲನಶಕ್ತಿಯಾಗಿರುವ ಆಶಾ ಕಾರ್ಯಕರ್ತೆಯರು, ಮುಂಚೂಣಿಯಲ್ಲಿರುವ ಕೆಲಸಗಾರರಲ್ಲಿ ಕಾಣಿಸಿಕೊಳ್ಳುತ್ತಿರುವ ಬಳಲಿಕೆ, ದಣಿವು. ಈ ಪತ್ತೆಹಚ್ಚುವ (ಟ್ರೇಸಿಂಗ್ & ಟ್ರ್ಯಾಕಿಂಗ್) ಮತ್ತು ಪರೀಕ್ಷೆ ನಡೆಸುವ ಅಪಾಯಕಾರಿ ಕೆಲಸಗಳಿಗೆ ಅವರಿಗೆ ಯಾವುದೇ ಪ್ರೋತ್ಸಾಹಧನವನ್ನು ನೀಡಲಾಗಿಲ್ಲ. ಅವರ ಮನೋಬಲ ಕುಸಿದಿದ್ದು, ಅವರಲ್ಲಿ ಅನೇಕರು ತಮ್ಮ ಪ್ರಯತ್ನಕ್ಕೆ ಯಾವುದೇ ಪುರಸ್ಕಾರವಿಲ್ಲ ಮತ್ತು ತಮ್ಮ ಕೊಡುಗೆಯನ್ನು ಗುರುತಿಸತ್ತಲೂ ಇಲ್ಲವೆಂದಾಗ ತಮ್ಮ ಜೀವವನ್ನು ಪಣಕ್ಕಿಡುವುದು ಸರಿಯೇ ಎಂದು ಯೋಚಿಸುತ್ತಿದ್ದಾರೆ. ಪ್ರತಿ 500 ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಬಿಬಿಎಂಪಿ ಹೇಳಿದೆ. ಆದರೆ, ತನ್ನ ಶೋಷಣಾತ್ಮಕ ತಂತ್ರಗಳನ್ನು ಮುಂದುವರೆಸುತ್ತ ಕೇವಲ ಅವರ ಸಂಖ್ಯೆಯನ್ನು ಹೆಚ್ಚಿಸುವುದು ಅನೈತಿಕ ಮತ್ತು ನಾಚಿಕೆಗೇಡಿನ ವಿಷಯ. ಸರಕಾರ ಆಶಾ ಕಾರ್ಯಕರ್ತೆಯ ವೇತನವನ್ನು ಗಣನೀಯವಾಗಿ ಹೆಚ್ಚಿಸಬೇಕು ಹಾಗೂ ಅವರನ್ನು ಖಾಯಂ ಆಗಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಮುಂಚೂಣಿಯಲ್ಲಿರುವ ಕಾರ್ಮಿಕರ ಮನೋಸ್ಥೈರ್ಯ ಹೆಚ್ಚಿಸಿದಂತಾಗಿ, ತಡೆಗಟ್ಟುವಿಕೆಯ ತಂತ್ರಗಳನ್ನು ಗಟ್ಟಿಗಳಿಸಬಹುದಾಗಿದೆ.

ಲಸಿಕೆ ಹಾಕಿಸುವುವದರಿಂದ ಹರಡುವಿಕೆ ಕಡಿಮೆ ಆಗಬಹುದೇ?

ಸರಕಾರದ ಲಸಿಕಾ ಪ್ರಕ್ರಿಯೆ ನಿಧಾನವಾಗಿ ಮುಂದುವರೆಯುತ್ತಿದೆ. ಆದರೆ ಲಸಿಕೆ ಅಗತ್ಯವಿರುವ ಜನಸಂಖ್ಯೆಯ ಒಂದು ಸಣ್ಣ ಭಾಗಕ್ಕೆ ಮಾತ್ರ ಅದು ಈಗ ಲಭ್ಯವಾಗಿದೆ. ಹರಡುವಿಕೆ ಕಡಿಮೆಯಾಗುವುದಕ್ಕೆ ಕಾರಣವಾಗುವಷ್ಟು ಲಸಿಕೆಯಿಂದ ಪರಿಣಾಮ ಆಗಬಹುದು ಎಂದು ನಿರೀಕ್ಷಿಸುವ ಹಂತಕ್ಕೆ ನಾವಿನ್ನೂ ಮುಟ್ಟಿಲ್ಲ. ಹಾಗೂ ವೈರಸ್‌ನ ಯಾವ ಸ್ಟ್ರೇನ್‌ಗಳು ಹರಡುತ್ತಿವೆ ಎಂಬುದರ ಮೇಲೆ ಮತ್ತು ಅವುಗಳ ಮೇಲೆ ಈ ಲಸಿಕೆ ಪರಿಣಾಮಕಾರಿ ಆಗಿರುವುದೇ ಎಂಬುದರ ಮೇಲೆ ಅದು ನಿಂತಿದೆ. ಇದೇ ಸಮಯದಲ್ಲಿ ಲಸಿಕಾ ಪ್ರಕ್ರಿಯೆಯ ಗತಿಯನ್ನು ಹೆಚ್ಚಿಸುವುದು ಮುಖ್ಯವಾಗಿದೆ. ಜನರಿಗೆ ಬೇರೆ ಕಾಯಿಲೆಗಳು ಇವೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೇ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಬೇಕೆನ್ನುವ ಸರಕಾರದ ನಿರ್ಧಾರ ಈ ನಿಟ್ಟಿನಲ್ಲಿ ಸರಿಯಾಗಿದೆ.

ಸಾರಾಂಶದಲ್ಲಿ, ಟ್ರೇಸ್-ಟೆಸ್ಟ್-ಟ್ರೀಟ್ ತಂತ್ರದೊಂದಿಗೆ ಜನರು ಒಂದೆಡೆ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವುದು, ಮಾಲ್, ಥಿಯೇಟರ್ ಮುಂತಾದ ಸ್ಥಳಗಳಲ್ಲಿ ಹೆಚ್ಚಿನ ಜನರು ಸೇರದಂತೆ ತಡೆಯುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ವೈಯಕ್ತಿಕ ಸ್ತರದಲ್ಲಿ, ಸಮೂಹ ನಿರೋಧಕತೆ ಎಂಬುದರ ಬಗ್ಗೆ ಖಚಿತತೆ ಇಲ್ಲ ಹಾಗೂ ಅದು ಎಂದಿಗೂ ಆಗದೇ ಇರಬಹುದು ಎಂಬುದನ್ನು ನೆನಪಿಡುವುದು ಮುಖ್ಯವಾಗಿದೆ. ಲಸಿಕೆಯ ಪರಿಣಾಮಕತ್ವದ ಬಗ್ಗೆ ಇನ್ನೂ ಸಂಪೂರ್ಣ ಸ್ಪಷ್ಟತೆ ಇಲ್ಲದಿರುವುದು ಮತ್ತು ಕೋವಿಡ್-19 ಕಾಯಿಲೆಯಿಂದ ತಕ್ಷಣಕ್ಕೆ ಕಾಣಿಸುವ ಲಕ್ಷಣಗಳಲ್ಲದೇ ಶ್ವಾಸಕೋಶಗಳಿಗೆ ಆಗಬಹುದಾದ ಹಾನಿಯೂ ಒಂದು ಸಮಸ್ಯೆಯಾಗಿದೆ. ಹಾಗಾಗಿ, ಜನರು ಜವಾಬ್ದಾರಿಯುತರಾಗಿ ಮಾಸ್ಕ್‌ಗಳನ್ನು ಸರಿಯಾಗಿ ಧರಿಸಿ, ಪದೇಪದೇ ಕೈಗಳನ್ನು ತೊಳೆಯುತ್ತ, ದೈಹಿಕ ಅಂತರವನ್ನು ಕಾಪಾಡಿಕೊಂಡು, ಯಾವುದೇ ರೀತಿಯ ಸಮಾವೇಶಗಳಿಗೆ ಹೋಗದೇ ಇರುವುದನ್ನು ಇನ್ನೂ ಸ್ವಲ್ಪ ಸಮಯದ ಮಟ್ಟಿಗೆ ಮಾಡಬೇಕಾದದ್ದು ಅವಶ್ಯಕ.

ಕೊನೆಯದಾಗಿ, ಎಲ್ಲರ ಕಣ್ಗಾವಲಿಗಾಗಿ ಸೂಕ್ತ ಅನುದಾನವನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಎರಡನೇ ಅಲೆಯನ್ನು ತಡೆಗಟ್ಟಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುವಂತೆ ಪರೀಕ್ಷಿಸಿದ 5% ಮಾದರಿಗಳಿಗೆ ಜಿನೊಮ್ ಸೀಕ್ವೆನ್ಸಿಂಗ್ ವಿಸ್ತರಿಸುವುದು ಅವಶ್ಯಕವಾಗಿದೆ.

ಡಾ.ಅಖಿಲಾ ವಾಸನ್

ಡಾ.ಅಖಿಲಾ ವಾಸನ್
ಕರ್ನಾಟಕ ಜನಾರೋಗ್ಯ ಚಳವಳಿಯ ಸಕ್ರಿಯ ಕಾರ್ಯಕರ್ತೆ


ಇದನ್ನೂ ಓದಿ: ಕೊರೊನಾ ಲಸಿಕೆ ಕೊರತೆ: ಕೋವಾಕ್ಸಿನ್‌ ತಯಾರಿಕೆ ಗಮನಾರ್ಹವಾಗಿ ಹೆಚ್ಚಿಸಲು ಕೇಳಿಕೊಂಡ ಕೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...