- Advertisement -
- Advertisement -
ದೇಶದಾದ್ಯಂತ ಬಿಗಡಾಯಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಕೊರೊನಾ ಸಂಕಷ್ಠವನ್ನು ಜನತೆ ಅತ್ಯಂತ ಗಂಭೀರವಾಗಿ ಎದುರಿಸುತ್ತಿರುವಾಗ ಸರಕಾರ ಜನರ ಜೊತೆ ನಿಂತು ದೇಶದ ಆರ್ಥಿಕ ಸಂಕಷ್ಠ ಹಾಗೂ ಆರೋಗ್ಯ ರಕ್ಷಣೆಗೆ ನಿಲ್ಲುವುದರ ಬದಲು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿರುವ ಸೆಂಟರ್ ಅಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಕರ್ನಾಟಕ ಪ್ರಾಂತ ರೈತ ಸಂಘ (KPRS) ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ಅಂತಹ ನೀತಿಗಳನ್ನು ತಕ್ಷಣವೇ ಕೈಬಿಡುವಂತೆ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿವೆ.
ಮೂರು ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು, ಆರ್ಥಿಕ ಕುಸಿತ ಮತ್ತು ಕೊರೊನಾ ಬಿಕ್ಕಟ್ಟಿನ ಪರಿಸ್ಥಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿಗೆ ಹಕ್ಕೊತ್ತಾಯ ಮಾಡಿದೆ.
ಹಕ್ಕೋತ್ತಾಯವು, ವಿಶೇಷ ಪ್ಯಾಕೇಜ್ ಘೋಷಿಸಬೇಕು, ಜನದ್ರೋಹಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಒಳಿಸಬೇಕು, ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕೆಂದು ಆಗ್ರಹಿಸಿದೆ.
ಜಂಟಿ ಕ್ರಿಯಾ ಸಮಿತಿಯ ಹಕ್ಕೊತ್ತಾಯಗಳು :
- ಕೊರೊನಾ ವೈರಾಣುವನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ನಾಗರೀಕರುಗಳಿಗೆ ಉಚಿತ ಹಾಗೂ ಸುರಕ್ಷತಾ ಚಿಕಿತ್ಸೆ ದೊರೆಯುವಂತೆ ಕ್ರಮವಹಿಸಬೇಕು. ಇದಕ್ಕಾಗಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇ 3 ರಷ್ಠು ಅಂಶವನ್ನು ವೆಚ್ಚ ಮಾಡಲು ಕ್ರಮವಹಿಸಬೇಕು.
- ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲಾ ಕುಟುಂಬಗಳಿಗೆ ಕನಿಷ್ಟ ಕೊರೊನಾ ಸಮಸ್ಯೆ ಇತ್ಯರ್ಥವಾಗುವವರೆಗೆ ಮಾಸಿಕ 7,500 ರೂಗಳ ನೆರವು ಘೋಷಿಸಬೇಕು.
- ಈ ಎಲ್ಲಾ ಕುಟುಂಬಗಳ ಸದಸ್ಯರಿಗೆ, ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಸಾಮಗ್ರಿಗಳನ್ನು ಒದಗಿಸಬೇಕು ಹಾಗೂ ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಕಿಟ್‌ನ್ನು ಒದಗಿಸಬೇಕು.
- ನಗರ ಹಾಗೂ ಗ್ರಾಮೀಣ ಪ್ರದೇಶದ ಉದ್ಯೋಗ ಕೇಳುವ ಎಲ್ಲಾ ಜನತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ತಲಾ ಕುಟುಂಬಕ್ಕೆ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. ಕೂಲಿ ಹಣವನ್ನು ಕನಿಷ್ಟ 600 ರೂಗಳಿಗೆ ಹೆಚ್ಚಿಸಬೇಕು.
- ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ 10,000 ರೂಗಳನ್ನು ಒದಗಿಸಬೇಕು.
- ಎಲ್ಲ ರೀತಿಯ ಕಾರ್ಮಿಕರುಗಳಿಗೆ ಲಾಕ್‌ಡೌನ್ ಅವಧಿಯ ವೇತನವು ದೊರೆಯುವಂತೆ ಅಗತ್ಯ ಕ್ರಮವಹಿಸಬೇಕು. ಕಾರ್ಮಿಕ ಕಾಯ್ದೆಗಳ ದುರ್ಬಲಗೊಳಿಸುವಿಕೆಯನ್ನು ತಕ್ಷಣ ತಡೆಯಬೇಕು.
- ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ವಲಯದ ಸಂಸ್ಥೆಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು.
- ವ್ಯವಸಾಯವನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ಎಲ್ಲಾ ಭೂ ಹಾಗೂ ವ್ಯವಸಾಯ ಸಂಬಂಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.
- ಸಾರ್ವಜನಿಕರನ್ನು ಕಾಳಸಂತೆಯ ಲೂಟಿಕೋರತನಕ್ಕೆ ಒಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ನ್ನು ವಾಪಾಸು ಪಡೆಯಬೇಕು.
ಇದನ್ನೂ ಓದಿ: ಮಾಸ್ಕ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾದ ದಲಿತ ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವು!


