ಸರ್, ನಿಲ್ಲಿ ಅಂದ್ರು ಒಬ್ಬರು ಆಟೋ ಚಾಲಕರು. ಅವರು ನನಗೆ ಹಲವು ವರ್ಷಗಳಿಂದ ಪರಿಚಯಸ್ಥರು. ನೀವೇನೋ ಹೆಂಗೋ ಜೀವನ ನಡೆಸ್ತೀರ. ನಾವ್ ಹೆಂಗ್ ಮಾಡೋದೋ ಗೊತ್ತಾಗುತ್ತಿಲ್ಲ. ಒಂದಲ್ಲ, ಎರಡಲ್ಲ ಒಂದು ವಾರ್ ರಾಜ್ಯ ಲಾಕ್ ಡೌನ್ ಆಗುತ್ತಂತೆ. ನಮ್ಮ ದುಡಿಮೆಗೆ ಪೆಟ್ಟು ಬಿತ್ತು. ಅವೊತ್ತಿನ ದುಡಿಮೆಯಿಂದ ಅಂದು ಜೀವನ ನಡೆಸುತ್ತಿದ್ವಿ. ಈಗ ಮುಖ್ಯಮಂತ್ರಿ ನಾವೇನೂ ಮಾಡೋಕಾಗಲ್ಲ. ಲಾಕ್ ಡೌನ್ ಮಾಡ್ತೀವಿ ಅಂತಿದ್ದಾರೆ ಎಂದು ಅಳಲು ತೋಡಿಕೊಂಡರು. ಅವರ ಮುಖದಲ್ಲಿ ಆತಂಕ ಮನೆ ಮಾಡಿತ್ತು. ನೋವು ತೋಡಿಕೊಳ್ಳಲು ಅವರಿಗೆ ಒಬ್ಬರು ಬೇಕಿತ್ತು. ಅದೇ ಕಾರಣಕ್ಕೆ ನನ್ನ ಬಳಿ ಅಳಲು ತೋಡಿಕೊಂಡರು.
ನೋಡಿ ಸರ್, ಕೇರಳದಲ್ಲಿ ಎಲ್ಲರಿಗೂ ಅನುಕೂಲ ಮಾಡಿಕೊಟ್ಟೌರೆ. ಆಟೋದೋರು ಸಾಲ ಮಾಡಿದ್ರೆ ಸಾಲದ ಮೇಲಿನ ಸೇವಾ ಶುಲ್ಕ ರದ್ದು ಮಾಡಿದೆ. ಅಲ್ಲಿನ ಮುಖ್ಯಮಂತ್ರಿಗಳು ಬಡವರಿಗೆ ಎರಡು ತಿಂಗಳು ಮೊದಲೇ ದವಸ ಧಾನ್ಯ ಕೊಟ್ಟಿದ್ದಾರೆ. ಬಡವರಿಗೆ ಊಟ ಕೊಡ್ತಾರೆ. ನಮ್ಮಲ್ಲಿ ಮುಖ್ಯಮಂತ್ರಿಗಳು ಅಂತ ಕ್ರಮಗಳನ್ನು ಕೈಗೊಂಡಿಲ್ಲ. ಲಾಕ್ ಡೌನ್ ಅಂದ್ರ ಸುಮ್ನೆನೇ. ಆಟೋದವ್ರು ದುಡಿಮೆ ನಿಮಗೆ ಗೊತ್ತಲ್ಲ. ಮನೆ ಬಾಡಿಗೆ ಏನು ಮಾಡ್ಬೇಕು. ಸರ್, ಮನೆ ಓನರ್ ಎರಡು ತಿಂಗಳ ಬಾಡಿಗೆ ಮೊದ್ಲೇ ಹಾಕಿ ಅಂದ್ರು. ಹಾಕಿದೆ. ನಾನು ಮರು ಮಾತಾಡಲಿಲ್ಲ.ನಮ್ ಜೀವನ ನಡೆಯೋದು ಹೆಂಗೆ, ಏನೋ ನಮ್ ಗ್ರಹಚಾರ ಸರಿಯಿಲ್ಲ ಅಂದ್ರು.
ಇದು ಕೇವಲ ಒಬ್ಬ ಆಟೋ ಚಾಲಕರ ಪ್ರಶ್ನೆಯಲ್ಲ. ಎಲ್ಲಾ ಆಟೋ ಚಾಲಕರ ನೋವು ಆಗಿದೆ. ನಗರದ ಜೀವ ದಂತೆ ಕೆಲಸ ಮಾಡುತ್ತಿದ್ದ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ ಎಂಬ ಮಾತು ಕೇಳಿಬರುತ್ತಿರುವುದರಿಂದ ಆಟೋ ಚಾಲಕರ ಬದುಕು ಸಂಪೂರ್ಣ ಸ್ಥಬ್ದವಾಗಲಿದೆ. ದುಡಿಯುವವರು ಮನೆಯಲ್ಲಿ ಕೂತರೆ ಉಣ್ಣುವ ಕೈ ಏನು ಮಾಡಬೇಕು. ಮಕ್ಕಳ ಖರ್ಚು ವೆಚ್ಚ, ಮನೆ ಬಾಡಿಗೆ ಹೊಂದಿಸುವುದು ಹೇಗೆಂಬ ಪ್ರಶ್ನೆ ಬೃಹದಾಕಾರವಾಗಿ ಕಾಡತೊಡಗಿದೆ.
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಸಿಪಿಎಂ ಮುಖಂಡ ಕೆ.ಎನ್.ಉಮೇಶ್, ಕೊರೊನ ವೈರಸ್ ಹರಡುತ್ತಿರುವುದರಿಂದ ಆಟೋಚಾಲಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಬದುಕು ದುಸ್ಥರ ವಾಗಲಿದೆ. ಹೀಗಾಗಿ ಆಟೋ ಚಾಲಕರ ಪ್ರತಿಯೊಬ್ಬರ ಖಾತೆಗೆ 6 ಸಾವಿರ ಹಣ ಹಾಕಬೇಕು. ಕಟ್ಟಬೇಕಾದ ಇಎಂಐಗಳನ್ನು ಮುಂದೂಡಬೇಕು. ಆಟೋಚಾಲಕರ ಬಡ್ಡಿ ಮನ್ನಾ ಮಾಡಬೇಕು. ಇದೆಲ್ಲವನ್ನೂ ಅಸಂಘಟಿತ ವಲಯದ ಭದ್ರತ ಮಂಡಳಿಯಿಂದ ಕೊಡಬೇಕು. ಆಟೋಚಾಲಕರು ಸೇರಿದಂತೆ ಎಲ್ಲಾ ಅಸಂಘಟಿತರಿಗೆ ಉಚಿತ ರೇಷನ್ ಕೊಡಬೇಕು. ಯುವಕರಿಗೆ ನಿರುದ್ಯೋಗ ಭತ್ಯ ಕೊಡಬೇಕು ಎಂದು ಒತ್ತಾಯಿಸಿದರು.
ಕೊರೊನ ರೋಗ ಹರಡುತ್ತಿರುವುದರಿಂದ ಅಸಂಘಟಿತ ಕಾರ್ಮಿಕರ ಬದುಕು ದಿಕ್ಕಾಪಾಲಾಗಿದೆ. ಬೀದಿಬದಿ ವ್ಯಾಪಾರಿಗಳು ಮೀಟರ್ ಬಡ್ಡಿಗೆ ಸಾಲ ತಂದು ವ್ಯಾಪಾರ ಮಾಡುತ್ತಾರೆ. ಆಟೋ ಚಾಲಕರು ಬಾಡಿಗೆ ಮೇಲೆ ಆಟೋವನ್ನು ರಸ್ತೆಗೆ ಇಳಿಸಿರುತ್ತಾರೆ. ಆಟೋ ರಸ್ತೆಗೆ ಇಳಿಯದಿದ್ದರೆ ಬಾಡಿಗೆ ಪಡೆಯುತ್ತಿದ್ದ ಚಾಲಕರು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಟೋಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಬೇರೆ ದುಡಿಯುವ ಮಾರ್ಗವಿಲ್ಲ. ಬೆಳಗಿನಿಂದ ಸಂಜೆಯವರೆಗೂ ಆಟೋ ಓಡಿಸಿಯೇ ಬದುಕಿನ ಬಂಡಿ ನಡೆಸಬೇಕು. ಇಲ್ಲದಿದ್ದರೆ ಅವರ ಪಾಡು ಹೇಳತೀರದು.
ಸಾಮಾನ್ಯ ಸಂದರ್ಭದಲ್ಲಿ ಒಂದು ದಿನ ನಡೆಯುವ ಮುಷ್ಕರ, ಬಂದ್ ಸಮಯದಲ್ಲೇ ಆಟೋ ಓಡಿಸದಿದ್ದರೆ ಸಂಕಷ್ಟಗಳನ್ನು ಎದುರಿಸುತ್ತೇವೆ. ಇನ್ನು ಒಂದು ವಾರ ಆಟೋಗಳನ್ನು ರಸ್ತೆಗೆ ಇಳಿಸದಿದ್ದರೆ ಬದುಕು ನಡೆಸುವುದು ಕಷ್ಟಕರ. ಕುಟುಂಬ ನಿರ್ವಹಣೆಗೆ ತೊಂದರೆಯಾಗಲಿದೆ. ನಗರಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ವಸ್ತುವನ್ನು ಕೊಳ್ಳಲೇಬೇಕು. ಅದಕ್ಕೆ ಹಣ ಬೇಕು. ದುಡಿಮೆ ಇಲ್ಲದಿದ್ದರೆ ದಿನಸಿ ವಸ್ತುಗಳನ್ನು ಖರೀದಿಸುವುದು ಹೇಗೆ? ಒಂದು ವಾರ ಆಟೋ ಇಳಿಯದಿದ್ದರೆ ಆಟೋಗಳು ಕೆಡುತ್ತವೆ ಎಂದು ಆಟೋಚಾಲಕ ಗಿರೀಶ್ ನೋವು ತೋಡಿಕೊಂಡರು.
ಸರ್ಕಾರಗಳು ಆರಂಭದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಿತ್ತು. ವಿದೇಶಗಳಿಂದ ಬರುತ್ತಿರುವವರನ್ನು ಮೊದಲೇ ಪ್ರತ್ಯೇಕವಾಗಿ ಇಡುವಂತಹ ವ್ಯವಸ್ಥೆ ಮಾಡಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಊರು ಹಾಳಾದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ದೇಶದಲ್ಲಿ ಕೊರೊನ ರೋಗ ಹರಡಿದ ಮೇಲೆ ಕ್ರಮ ಕೈಗೊಂಡರೆ ರೋಗವನ್ನು ನಿಯಂತ್ರಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಇದನ್ನೂ ಓದಿ:


