Homeಕರೋನಾ ತಲ್ಲಣಒಂದೇ ಕುಟುಂಬದ 16 ಜನರಿಗೆ ಕೊರೊನಾ: ಮನೆಯಲ್ಲಿದ್ದುಕೊಂಡೇ ಎಲ್ಲರೂ ಗುಣಮುಖ

ಒಂದೇ ಕುಟುಂಬದ 16 ಜನರಿಗೆ ಕೊರೊನಾ: ಮನೆಯಲ್ಲಿದ್ದುಕೊಂಡೇ ಎಲ್ಲರೂ ಗುಣಮುಖ

ಈ ಕುಟುಂಬದಲ್ಲಿ ಹತ್ತು ತಿಂಗಳ ಶಿಶು, ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಮತ್ತು 45 ವರ್ಷ ಮೇಲ್ಪಟ್ಟವರು ಸಹ ಗುಣಮುಖರಾಗಿದ್ದಾರೆ.

- Advertisement -

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಒಂದೇ ಕುಟುಂಬದ 16 ಜನಕ್ಕೆ ಕೊರೊನಾ ಪಾಸಿಟಿವ್ ಆಗಿದ್ದು, ಹೋಮ್ ಐಸೋಲೇಷನ್‌ಗೆ ಒಳಪಟ್ಟು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಸೂಚಿಸಿದ ಔಷಧಿ ಸೇವಿಸಿ, ಅವರು ಹೇಳಿದ ಗೈಡ್‌ಲೈನ್ಸ್ ಪಾಲಿಸಿ ಕೊರೊನಾದಿಂದ ವಿಮುಕ್ತರಾಗಿದ್ದಾರೆ. ಒಂದನೇ ಅಲೆಯಲ್ಲಿ ಹೀಗೇ ಹಲವು ಕುಟುಂಬಗಳು ಮನೆಯಲ್ಲೇ ಇದ್ದು ಕೊರೊನಾ ಹಿಮ್ಮೆಟ್ಟಿಸಿದ್ದವು.

ಇಲ್ಲಿ ಒಟ್ಟು ಸಾರಾಂಶವೆಂದರೆ, ಈ ಕುಟುಂಬದ ಪಾಸಿಟಿವ್ ಪೀಡಿತ ಸದಸ್ಯರಾರು ಕೋವಿಡ್ ಕೇಂದ್ರಗಳಲ್ಲಿ ದಾಖಲಾಗಲಿಲ್ಲ. ವೈದ್ಯರು ಮತ್ತು ಆಶಾ ಕಾರ್ಯಕರ್ತರ ಸಕಹೆಗಳನ್ನು ಕಟ್ಟಾ ಪಾಲಿಸಿದರು. ಅವರು ಸೂಚಿಸಿದ ಮಾತ್ರೆ ಪಡೆದುಕೊಂಡರು.

ಆದರೆ ಇಲ್ಲಿ ಹತ್ತು ತಿಂಗಳ ಮಗು, 3 ವರ್ಷಕ್ಕಿಂತ ಕಡಿಮೆಯ ಮೂವರು ಮಕ್ಕಳು ಮತ್ತು 45 ದಾಟಿದ ಆದರೆ ಎರಡೂ ಲಸಿಕೆ ಪಡೆದ ಹಿರಿಯರೊಬ್ಬರಿಗೂ ಪಾಸಿಟಿವ್ ಆಗಿತ್ತು. ಈಗ ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ ನಮ್ಮ ವೈದ್ಯರಿಗೆ ಇದು ಒಂದು ಕೇಸ್ ಸ್ಟಡಿಗೆ ಅವಕಾಶ ಒದಗಿಸಿದೆ.
ಏಕೆಂದರೆ, ಕೋವಿಡ್ ಕುರಿತಂತೆ ಇನ್ನೂ ನೂರಾರು ಗೊಂದಲ ಇರುವಾಗ ಈ ಪ್ರಕರಣ ಇಟ್ಟುಕೊಂಡು ಹುಬ್ಬಳ್ಳಿಯ ಕೆಎಂಸಿ (ಕಿಮ್ಸ್) ಕೂಡ ಒಂದು ಕೇಸ್ ಸ್ಟಡಿ ಮಾಡಬಹುದು ಅಲ್ಲವೇ?

ಒಂದಿಷ್ಟು ಪೂರ್ವ ವಿವರ

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿ ಮಠ ಕುಟುಂಬದ 16 ಸದಸ್ಯರಿಗೆ ಈ ತಿಂಗಳು ಮೊದಲ ವಾರದ ಹೊತ್ತಿಗೆ ಪಾಸಿಟಿವ್ ದೃಢಪಟ್ಟಿತ್ತು. ಕಿಮ್ಸ್‌ನ ಒಬ್ಬ ವೈದ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಲಹೆ ಮೇರೆಗೆ ಇವರೆಲ್ಲ ಹೋಮ್ ಐಸೋಲೇಷನ್‌ನಲ್ಲಿ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ.

ಸುಳ್ಳದ ಈ ಕುಟುಂಬದ ಸದಸ್ಯರಲ್ಲಿ ಒಬ್ಬರಾದ, ಪಾಸಿಟಿವ್‌ಗೆ ಒಳಗಾಗಿ ಈಗ ಗುಣಮುಖರಾದ, ಕಾಲೇಜೊಂದರ ಜರ್ನಲಿಸಂ ವಿಭಾಗದ ಅಧ್ಯಾಪಕರೂ ಆಗಿರುವ ಮಲ್ಲಿಕಾರ್ಜುನ್ ಅವರೊಂದಿಗೆ ನಾನುಗೌರಿ.ಕಾಂ ಮಾತನಾಡಿತು.

‘ವಿಜ್ಞಾನ, ವೈದ್ಯಕೀಯಗಳ ಆಚೆ ನಾವೆಂದೂ ನೋಡಲಿಲ್ಲ. ಎಲ್ಲರಿಗೂ ಮನೆಯಲ್ಲಿ ಧೈರ್ಯ ತುಂಬಿದೆವು. ಯಾವುದೇ ಮೂಢ ವಿಚಾರಗಳನ್ನು ಫಾಲೋ ಮಾಡಲಿಲ್ಲ. ಕಿಮ್ಸ್‌ನ ಹಿರಿಯ ವೈದ್ಯರು, ಇಲ್ಲೇ ಪಕ್ಕದ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಮನೆಗೇ ಬಂದು ಉಪಚಾರ ಮಾಡುವ ಆಶಾ ಕಾರ್ಯಕರ್ತೆಯರ ಸಲಹೆ ಪಾಲಿಸಿದೆವು. ಇಲ್ಲಿ ಆತ್ಮಸ್ಥೈರ್ಯವೇ ಮುಖ್ಯ ಅಷ್ಟೇ. ಒಂದು ಜ್ವರವನ್ನು ವಿಭಿನ್ನವಾಗಿ ಎದುರಿಸಲು ನಮಗೆ ಈಗ ವಿಜ್ಞಾನ ಮತ್ತು ವೈದ್ಯಕೀಯವಷ್ಟೇ ಮಾರ್ಗದರ್ಶಕ ಆಗಬೇಕು’ ಎಂದು ಗುಣಮುಖರಾದ ಮಲ್ಲಿಕಾರ್ಜುನ ನಮಗೆ ತಿಳಿಸಿದರು.

ಈ ಕುಟುಂಬದಲ್ಲಿ ಹತ್ತು ತಿಂಗಳ ಶಿಶು, ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. ಇದರಲ್ಲಿ 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೆ ಡೋಸ್ ಲಸಿಕೆ ಪಡೆದಿದ್ದರು, ಅದರಲ್ಲಿ ಮೂವರಿಗೆ ನೆಗೆಟಿವ್ ರಿಪೋರ್ಟ್ ಬಂದಿತ್ತು. ಆದರೆ, ಎರಡು ಡೋಸ್‌ಗಳ ನಂತರವೂ ಪಾಸಿಟಿವ್ ರಿಪೋರ್ಟ್ ಪಡೆದಿದ್ದ 60 ವರ್ಷದ ಮಹಿಳೆಯಲ್ಲಿ ಯಾವ ಲಕ್ಷಣವೂ ಇರಲಿಲ್ಲ. ಅವರೂ ಈಗ ಗುಣಮುಖರಾಗಿದ್ದಾರೆ.

ಪ್ರಶ್ನೆ ಏನು ಅಂದರೆ ಮಕ್ಕಳಿಗೂ ಕೋವಿಡ್ ಕಾಟ ಶುರುವಾಗಿದೆಯಾ? ಇದು ಮೂರನೇ ಅಲೆಯ ಆರಂಭವೇ? ಎರಡು ಲಸಿಕೆ ಪಡೆದವರು ಇದನ್ನು ಎದುರಿಸಬಲ್ಲರು ಎಂದಾದರೆ, ಯಾಕೆ ತುರ್ತಾಗಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿಲ್ಲ? ನಮ್ಮ ಪಾಲಿಸಿಯೇ ತಪ್ಪಾಗಿದೆಯೇ?
ಈ ಕುರಿತು ಮಾತನಾಡಿದ ಧಾರವಾಡದ ಸರ್ಕಾರಿ ವೈದ್ಯ ಡಾ. ಸಂತೋಷ್, ‘ರೋಗ ನಿರೋಧಕ ಶಕ್ತಿ ಚೆನ್ನಾಗಿ ಇರುವವರಿಗೆ ಕೊರೊನಾ ತಟ್ಟುವುದು ಅಪರೂಪ. ದಿನವೂ ಹಲವು ರೋಗಿಗಳನ್ನು ನಾನು ಪರೀಕ್ಷೆ ಮಾಡುತ್ತೇನೆ. ಬಹುತೇಕರು ಶ್ರೀಮಂತ ಅಥವಾ ಮಧ್ಯಮ ವರ್ಗದವರೇ. ಇವರು ತುಂಬ ನಾಜೂಕಾದ ಜೀವನಶೈಲಿ ಅಳವಡಿಸಿಕೊಂಡ ಜನರು. ಇವರ ಜೀವನಶೈಲಿಯೇ ಅವರ ಪ್ರತಿರೋಧಕ ಶಕ್ತಿಯನ್ನು ಕಡಿಮೆ ಮಾಡಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲೋ ಮಲಗಿ ಜೀವನ ಸಾಗಿಸುವ ಭಿಕ್ಷುಕರು ನಮ್ಮ ಆಸ್ಪತ್ರೆಗಳತ್ತ ಬಂದೇ ಇಲ್ಲ. ಅವರು ಕೊರೊನಾಗೆ ಎಕ್ಸ್‌ಪೋಸ್‌ ಆಗಿದ್ದಾರೆ, ಅವರಿಗೆ ಈಗ ಕೊರೊನಾ ತಟ್ಟುವ ಸಂಭವವೂ ಕಡಿಮೆ’ ಎಂದರು.

‘ಈ ವಿಷಯದಲ್ಲಿ ಯಾವುದು ಅಂತಿಮವಲ್ಲವಾದರೂ, ಗಾಬರಿ ಬಿದ್ದು ಆಸ್ಪತ್ರೆ ಸೇರದೇ ಇರುವುದು, ವೈದ್ಯರ ಸಲಹೆ ಪಡೆದು ಮನೆಯಲ್ಲೇ ಐಸೋಲೇಷನ್ ಆಗುವುದು ಮುಖ್ಯ. ಎರಡನೇ ಅಲೆಯಲ್ಲಿ ಆಕ್ಸಿಜನ್ ಮಟ್ಟದ ಸಮಸ್ಯೆ ಬಂದಾಗ ಆಸ್ಪತ್ರೆಯ ಅಗತ್ಯ ಇದೆ. ಆದರೆ, ಯಾವುದಕ್ಕೂ ವೈದ್ಯರ ಸಲಹೆ ಪಡೆದೇ ಎಲ್ಲವನ್ನೂ ನಿಭಾಯಿಸಬೇಕು. ಸುಳ್ಳ ಗ್ರಾಮದ ಕುಟುಂಬ ಅದನ್ನು ಅನುಸರಿಸಿದ ಕಾರಣಕ್ಕೇ ಮನೆಯಲ್ಲೇ ಗುಣಮುಖ ಆಗಿರಬಹುದು’ ಎಂದು ಗದಗಿನ ವೈದ್ಯ ಡಾ. ಎಂ.ಡಿ ಸಾಮುದ್ರಿ ಹೇಳಿದರು.

‘ಕಳೆದ ತಿಂಗಳು 29ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಇದ್ದೆವು ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿದೆವು’ ಎಂದು ಮನೆಯ ಹಿರಿಯ ಮಲ್ಲಯ್ಯ ಶಿವಳ್ಳಿಮಠ ಹೇಳಿದರು.

ಎಂಬಿಬಿಎಸ್ ವಿದ್ಯಾರ್ಥಿಗಳು ಈ ಬಗ್ಗೆ ಒಂದು ಕೇಸ್ ಸ್ಟಡಿ ಮಾಡಬಹುದು ಅನಿಸುತ್ತೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು

ಮಲ್ಲನಗೌಡರ್‌ ಪಿ.ಕೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares