Homeಮುಖಪುಟಕಾಂಟ್ರಾಕ್ಟ್ ಫಾರ್ಮಿಂಗ್: ರೈತರ ಪಾಲಿಗೆ ಕಾರ್ಪೊರೇಟ್ ಉರುಳು?

ಕಾಂಟ್ರಾಕ್ಟ್ ಫಾರ್ಮಿಂಗ್: ರೈತರ ಪಾಲಿಗೆ ಕಾರ್ಪೊರೇಟ್ ಉರುಳು?

ಕಾಂಟ್ರಾಕ್ಟ್ ಫಾರ್ಮಿಂಗ್‌ಗಿಂತ ಕೋ-ಆಪರೇಟಿವ್ ಫಾರ್ಮಿಂಗ್ ಹೆಚ್ಚು ಅನುಕೂಲಕರ ಎನ್ನುವುದನ್ನು ಸರ್ಕಾರ ಒಪ್ಪದಿರುವುದು ದುರಂತ.

- Advertisement -
- Advertisement -

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ ಎನ್ನುವ ಅಸ್ಮಿತೆಯನ್ನು ಕಳೆದುಕೊಳ್ಳುವುದೇ ಅಭಿವೃದ್ಧಿ ಎನ್ನುವ ಭ್ರಮೆ ಇವತ್ತಿನದ್ದಾಗಿದೆ. ಇದೊಂದು ವಿಷಾದನೀಯ ಬೆಳವಣಿಗೆ ಎನ್ನುವುದನ್ನೂ ಕೂಡ ಒಪ್ಪದ ತಜ್ಞರ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಾಲಕ್ಕೆ ದೇಶದ ಮುಕ್ಕಾಲು ಪಾಲು ರಾಷ್ಟ್ರೀಯ ವರಮಾನ ಕೃಷಿ ವಲಯದಿಂದ ಬರುತ್ತಿದ್ದುದು ಇಂದು ಕಾಲು ಭಾಗಕ್ಕಿಂತ ಕೆಳಗಿಳಿದಿದೆ. ಬಹುಸಂಖ್ಯಾತ ಗ್ರಾಮೀಣ ಜನಸಂಖ್ಯೆಗೆ ಉದ್ಯೋಗದ ಆಸರೆಯಾಗಿರುವ ಈ ವಲಯವನ್ನು ವಾಣಿಜ್ಯೀಕರಿಸುವ ಪ್ರಯತ್ನಗಳು, 90ರ ದಶಕದಲ್ಲಿ ಈ ದೇಶದಲ್ಲಿ ಆರಂಭವಾದ ಜಾಗತೀಕರಣ ಮೂಲದ ಹೊಸ ಆರ್ಥಿಕ ಸುಧಾರಣೆಗಳ ಮೂಲಕ ವೇಗ ಪಡೆದುಕೊಂಡವು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆರಂಭಿಸಿದ ಈ ಸುಧಾರಣೆಗಳ ವೇಗವನ್ನು ನಂತರ ಬಂದ ಎಲ್ಲ ಸರ್ಕಾರಗಳು ಹೆಚ್ಚಿಸಿವೆ. ಅವರು ತಂದು ನಿಲ್ಲಿಸಿದ ಬಂಡಿಯನ್ನು ಇನ್ನಷ್ಟು ವೇಗದಲ್ಲಿ ಓಡಿಸಿಕೊಂಡು ಹೋಗುವುದೇ ಈಗಿನ ಎನ್‌ಡಿಎ ಸರ್ಕಾರದ ನೀತಿಯಾಗಿದೆ.

ಭಾರತೀಯ ಜನತಾ ಪಕ್ಷದ ನೇತೃತ್ವದ ಈ ಸರ್ಕಾರ 2014ರಿಂದ ಖಾಸಗೀಕರಣವನ್ನೇ ಹೆಚ್ಚು ಹೆಚ್ಚು ಉದಾರೀಕರಿಸುತ್ತ ಮುಕ್ತ ಮಾರುಕಟ್ಟೆಯ ಸಬಲೀಕರಣಕ್ಕೆ ಮುಂದಾಯಿತು. ಮಿಶ್ರ ಅರ್ಥ ವ್ಯವಸ್ಥೆಯ ದಿಕ್ಕು-ದಿಶೆ ಮತ್ತು ಸಮತೋಲನ ನಿಯಂತ್ರಣಗಳನ್ನು ಭಯ ಹುಟ್ಟಿಸುವ ಮಟ್ಟಿಗೆ ಅನಿಯಂತ್ರಿತಗೊಳಿಸುತ್ತಾ ಸಣ್ಣ ರೈತರುಗಳಲ್ಲಿ, ಕಾರ್ಮಿಕರಲ್ಲಿ ಮತ್ತು ಸರ್ಕಾರದ ಸವಲತ್ತುಗಳ ರಕ್ಷಣೆಯಲ್ಲಿ ಅಭಿವೃದ್ಧಿಯತ್ತ ಕಣ್ಣು ಬಿಡುತ್ತಿರುವ ತಳ ವರ್ಗದ ಜನ ಸಮುದಾಯಗಳಲ್ಲಿ ಭಯದ ವಾತಾವರಣ ಹೆಚ್ಚುತ್ತಿದೆ. ಆ ಭಯದ ಫಲವೇ ಇದೀಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳಿಗೆ ಸಂಬಂಧಿಸಿದಂತೆ ವಿರೋಧ ಮತ್ತು ಪ್ರತಿಭಟನೆಗಳು. ಈ ಮೂರು ಕಾಯಿದೆಗಳಾದ, “ರೈತರ ಉತ್ಪನ್ನಗಳು, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯಗಳು) ಕಾಯಿದೆ 2020, ಬೆಲೆಗಳ ಭರವಸೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯಿದೆ 2020 ಮತ್ತು ಅತ್ಯಾವಶ್ಯ ವಸ್ತುಗಳ ಕಾಯಿದೆ 2020” ಕುರಿತ ವಿರೋಧಗಳು ಮತ್ತು ಸಮರ್ಥನೆಗಳ ಹಿನ್ನೆಲೆಯಲ್ಲಿ ಅವುಗಳ ಸಂವಿಧಾನಾತ್ಮಕ ಬದ್ಧತೆಗಳನ್ನು ಕುರಿತು ವಿವೇಚಿಸುವುದು ಈ ಲೇಖನದ ಉದ್ದೇಶ.

ಇವತ್ತಿನ ಕೇಂದ್ರ ಸರ್ಕಾರದ ದೀರ್ಘಾವಧಿ ಅಭಿವೃದ್ಧಿ ಉದ್ದೇಶಗಳಲ್ಲಿ ಗೊಂದಲಗಳಿಲ್ಲ. ಅದು ಜಗತ್ತಿನ ವಿದ್ಯಮಾನಗಳಿಗೆ ವೇಗವಾಗಿ ತೆರೆದುಕೊಳ್ಳುವುದು ಮತ್ತು ಸ್ವಾತಂತ್ರ್ಯ ನಂತರದ ಏಳು ದಶಕಗಳಲ್ಲಿ ಕಾಯ್ದುಕೊಂಡು ಬಂದ ಆರ್ಥಿಕ ನಿಯಂತ್ರಣಗಳನ್ನು ಸಡಿಲಿಸಿ ಮುಕ್ತಗೊಳಿಸುವುದು. ಇದು ಈ ದೇಶದ ಜನಾಭಿಪ್ರಾಯದ ನೆಲೆಯಿಂದ ಹುಟ್ಟಿಬರದೆ ಜಾಗತಿಕ ವ್ಯಾಪರ ಸಂಸ್ಥೆಯ ಬೋಧೆಯಿಂದ ಬಂದದ್ದು. ಈಗ ಜಾರಿಯಾಗಿರುವ ಕಾಯಿದೆಗಳಿಗೆ ಭೂಮಿಕೆ ಈ ಸರ್ಕಾರದ ಮೊದಲ ಅವಧಿಯಲ್ಲಿಯೇ ರೂಪುಗೊಂಡಿತ್ತು. ಎರಡನೇ ಅವಧಿಗೆ ದೊರೆತ ಸಂಪೂರ್ಣ ಬಹುಮತ ಅವುಗಳ ಜಾರಿಗೆ ಶೀಘ್ರ ಹೆಜ್ಜೆ ಇಡಲು ನೈತಿಕ ಸ್ಥೈರ್ಯ ತಂದು ಕೊಟ್ಟಿತು. ಇದರ ಪರಿಣಾಮವೇ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿನ ಕಾನೂನುಗಳ ಸಮಗ್ರ ಬದಲಾವಣೆಗಳು. ಸರ್ಕಾರದ ಈ “ಯು” ಟರ್ನ್, ಸಾಂಸ್ಕೃತಿಕ ಕ್ಷೇತ್ರವೊಂದನ್ನುಳಿದು ಎಲ್ಲ ವಲಯಗಳಿಗೆ ವ್ಯಾಪಿಸಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ದೇಶದ ಕೃಷಿ ಮಾರುಕಟ್ಟೆಗಳನ್ನು ಉದಾರೀಕರಿಸುವ ಉದ್ದೇಶವನ್ನು ಇಟ್ಟುಕೊಂಡಿತ್ತೆನ್ನುವುದು ಸುಳ್ಳಲ್ಲ. ಹಾಗಾಗಿ, ಇವತ್ತಿನ ಈ ಮೂರು ಕಾಯಿದೆಗಳ ಬಗೆಗಿನ ಆ ಪಕ್ಷದ ವಿರೋಧ, ಕೇವಲ ವಿರೋಧಕ್ಕಾಗಿ ವಿರೋಧ ಎನ್ನುವಂತಿದೆ ಎಂದು ಜನ ನಿರ್ಧಾರಕ್ಕೆ ಬಂದಿರುವುದು ಸಹಜವಾಗಿದೆ.

PC : Famous People, (ಎಮ್. ಎಸ್. ಸ್ವಾಮಿನಾಥನ್)

ಭಾರತದ ಕೃಷಿ ವಲಯದ ಬಹುದೊಡ್ಡ ಸಮಸ್ಯೆ ಎಂದರೆ ತುಂಡು ಭೂಮಿ ಮಾಲಿಕತ್ವ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೂ ಮಾಲಿಕತ್ವದ ವಿಕೇಂದ್ರೀಕರಣ ಅತ್ಯಂತ ಸ್ವಾಗತಾರ್ಹವಾದರೂ, ಅದು ಆಧುನಿಕ ಬೇಸಾಯ ಪದ್ದತಿಯ ಅನುಷ್ಠಾನಕ್ಕೆ ಅಡ್ಡಿಯಾಗಿರುವುದು ನಿಜ. ಎಮ್. ಎಸ್. ಸ್ವಾಮಿನಾಥನ್ ಅವರ ನೇತೃತ್ವದ ರಾಷ್ಟ್ರೀಯ ರೈತರ ಆಯೋಗ ಈ ಭೂ ವಿಕೇಂದ್ರೀಕರಣವನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದು, ಅದನ್ನೆ ಆಧರಿಸಿ ಯಾವ ರೀತಿಯ ಕೃಷಿ ವಿಧಾನಗಳನ್ನು ಮತ್ತು ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾಗಿರುವ ಸರ್ಕಾರಗಳ ಹೊಣೆಗಾರಿಕೆಯನ್ನು ಸ್ಪಷ್ಟಪಡಿಸಿದೆ. ಜೊತೆಗೆ, ಆ ನೆರವೂ ಕೂಡ ಹೇಗಿರಬೇಕೆನ್ನುವುದರ ಬಗ್ಗೆಯೂ ದಿಕ್ಸೂಚಿ ಮಾರ್ಗೋಪಾಯಗಳನ್ನು ಸೂಚಿಸಿದೆ. ಈ ಮಾರ್ಗೋಪಾಯಗಳಲ್ಲಿ ಸಹಕಾರಿ ಬೇಸಾಯ, ಸಮುದಾಯ ಬೇಸಾಯ, ಗುತ್ತಿಗೆ ಬೇಸಾಯ (ಕಾಂಟ್ರಾಕ್ಟ್ ಫಾರ್‍ಮಿಂಗ್) ಮತ್ತು ಸಣ್ಣ ಸಣ್ಣ ಕಾರ್ಪೊರೇಟ್ ಸಂಸ್ಥೆಗಳ ಅಡಿಯಲ್ಲಿ ಕಾರ್ಯಗತಗೊಳ್ಳಬಹುದಾದ ಕೃಷಿ ಪದ್ದತಿಗಳೂ ಒಂದು. ಬೃಹತ್ ಕಾರ್ಪೊರೆಟ್ ಸಂಸ್ಥೆಗಳು ಕೃಷಿಯೇತರ ಉದ್ದೇಶಗಳಿಗಾಗಿ ಕೃಷಿ ಭೂಮಿ ಮಾಲಿಕತ್ವದ ಹೊದುವುದರ ಬಗ್ಗೆ ಸ್ಪಷ್ಟ ನಿರಾಕರಣೆ ಈ ವರದಿಯಲ್ಲಿದೆ. ಬದಲಾಗಿ, ಸಣ್ಣ ರೈತರುಗಳು ಷೇರುದಾರರಾಗುವ ಮೂಲಕ ಸಣ್ಣ ಖಾಸಗಿ ಕಂಪನಿಗಳನ್ನು ಆರಂಭಿಸಿಕೊಂಡು ಉತ್ಪಾದನೆ ಮತ್ತು ಮಾರಾಟಗಳಲ್ಲಿ ಪ್ರಗತಿ ಸಾಧಿಸಬಹುದು ಎನ್ನುವ ಸಲಹೆಗಳಿವೆ. ಆದರೆ, ಈಗ ಜಾರಿಗೊಳ್ಳುತ್ತಿರುವ ಕಾಯಿದೆಗಳ ಉದ್ದೇಶ ರೈತರ ಷೇರುದಾರಿಕೆ ಹೊರತುಪಡಿಸಿದ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ರೀತಿಯಲ್ಲಿರುವುದು ರೈತರ ಆತಂಕವಾಗಿದೆ.

ಮುಂದುವರೆದು, ಸ್ವಾಮಿನಾಥನ್ ವರದಿಯಲ್ಲಿ ಹೆಸರಿಸಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಸೌಲಭ್ಯಗಳು ಜಾರಿಯಾಗುವುದಿರಲಿ, ಈಗ ಇರುವ ಬೆಂಬಲ ಬೆಲೆ, ಸಬ್ಸಿಡಿ ಮೊದಲಾದ ಅನುಕೂಲಗಳೂ ಇಲ್ಲವಾಗುತ್ತವೆ ಎನ್ನುವ ಆತಂಕ ಅವರನ್ನು ಆವರಿಸಿದೆ. ಇದಕ್ಕೆ ಕಾರಣ, ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನುಗಳನ್ನು ಮಾಡುವಾಗ ಸಹ ಭಾಗಿದಾರರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವುದು ಮತ್ತು ಆ ಕಾನೂನುಗಳ ಉಪಯುಕ್ತತೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವಲ್ಲಿನ ನಿರಾಸಕ್ತಿ. ಸದ್ಯಕ್ಕೆ, 2025ರ ಒಳಗಾಗಿ ರಾಷ್ಟ್ರೀಯ ಕೃಷಿ ಉತ್ಪನ್ನವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿರುವ ಪ್ರಸ್ತುತ ಸರ್ಕಾರ, ಈ ಮೂರು ಕಾಯಿದೆಗಳನ್ನು ಜಾರಿಗೊಳಸಿರುವ ಉದ್ದೇಶವೇ ಕಾರ್ಪೊರೇಟ್ ಕಂಪನಿಗಳ ಮೂಲಕ ಗುತ್ತಿಗೆ ಬೇಸಾಯ ಪದ್ದತಿಯನ್ನು ಅನುಷ್ಠಾನಗೊಳಸಿ, ದೊಡ್ಡ ಪ್ರಮಾಣದ ಮತ್ತು ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸಿ, ಕೃಷಿ ಉತ್ಪಾದನೆ ಹೆಚ್ಚಿಸುವುದು. ಕಳೆದ ಮೂರು ದಶಕಗಳಿಂದ ಕ್ರಿಯಾಶೀಲವಾಗಿರುವ ಜಾಗತೀಕರಣ ಪ್ರಕ್ರಿಯೆಗಳಲ್ಲಿ ಒಂದಾದ ಕಾರ್ಪೊರೆಟ್ ಸಂಸ್ಥೆಗಳ ಮೂಲಕ ಗುತ್ತಿಗೆ ಬೇಸಾಯ ಪದ್ಧತಿಗೆ ಸಂಪೂರ್ಣ ಚಾಲನೆ ಕೊಡುವ ಉದ್ದೇಶ ಸರ್ಕಾರದ್ದು. ಅಸ್ಪಷ್ಟತೆಗಳ ಮಧ್ಯೆ ಜಾರಿಗೊಳಿಸಲಾಗಿರುವ ಹೊಸ ಕೃಷಿ ಕಾನೂನುಗಳು ಮತ್ತು ಜಾರಿಯಲ್ಲಿದ್ದ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳ ಕೇಂದ್ರ ಬಿಂದುವಾಗಿರುವ ಗುತ್ತಿಗೆ ಬೇಸಾಯ ಕುರಿತಂತೆ ಒಂದಷ್ಟು ವಿವರಗಳನ್ನು ನೋಡೋಣ.

ಗುತ್ತಿಗೆ ಬೇಸಾಯ ವಿಧಾನ

ಗುತ್ತಿಗೆ ಬೇಸಾಯ ವಿಧಾನ ನಮ್ಮ ದೇಶಕ್ಕೆ ಹೊಸದೇನು ಅಲ್ಲ. ಅನೌಪಚಾರಿಕವಾಗಿ ಶತಮಾನಗಳಿಂದ ರೂಢಿಯಲ್ಲಿದೆ. ಗುತ್ತಿಗೆಯ ಕರಾರುಗಳಲ್ಲಿ ಲೋಪವಾದರೆ, ಆಯಾ ಸಮುದಾಯ ಮತ್ತು ಗ್ರಾಮಗಳ ಮಟ್ಟದಲ್ಲಿ ಬಗೆಹರಿಸಲ್ಪಡುತ್ತಿದ್ದವು. ನಾಗರಿಕರಣ ಮತ್ತು ನಗರೀಕರಣದ ಕಾರಣಕ್ಕೆ ಪ್ರಾಥಮಿಕ ನಂಬಿಕೆಯ ಸಂಬಂಧಗಳು ಕಡಿಮೆಯಾಗುತ್ತಿದ್ದು ಔಪಚಾರಿಕ ಕಾನೂನುಗಳ ನೆರವು ಅನಿವಾರ್ಯವಾಗಿದೆ. ಭೂ ಮಾಲಿಕತ್ವ ಮತ್ತು ಕೃಷಿ ವಿಷಯಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುವುದರಿಂದ ಕೃಷಿ ಭೂಮಿಯ ಗುತ್ತಿಗೆ ಅಂಶಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿವೆ. ಇವುಗಳಲ್ಲಿ ಏಕರೂಪತೆಯನ್ನು ತರುವ ಉದ್ದೇಶದಿಂದ ರಾಜ್ಯಗಳು ತಮ್ಮವೇ ಆದ ಕಾನೂನುಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ, “ಕೃಷಿ ಭೂಮಿ ಗುತ್ತಿಗೆ ಮಾದರಿ ಕಾಯಿದೆ 2016″ನ್ನು ಕೇಂದ್ರ ಸರ್ಕಾರ ರೂಪಿಸಿತು. ಇದು ಕೃಷಿ ವಲಯವನ್ನು ಕಾರ್ಪೊರೇಟ್ ಸಂಸ್ಥೆಗಳ ಹೊರ ಗುತ್ತಿಗೆಗೆ ಮುಕ್ತಗೊಳಿಸುವ ಸಾಧ್ಯತೆಗಳ ಸುಳುಹುಗಳನ್ನು ನೀಡಿತ್ತು. ಜೊತೆಗೆ, ಭೂ ಮಾಲಿಕತ್ವ ಕಳೆದುಕೊಳ್ಳದೆಯೇ ತುಂಡು ಭೂಮಿದಾರ ರೈತರುಗಳು ಒಂದಷ್ಟು ಆದಾಯವನ್ನು ಪಡೆಯುವ ಸಾದ್ಯತೆ ಇರುವ ಈ ಗುತ್ತಿಗೆ ಬೇಸಾಯಕ್ಕೆ ಸಂಬಂಧಿಸಿದಂತೆ ಮತ್ತು ರೈತರಿಗೆ ವಂಚನೆಯಾಗುವದನ್ನು ತಡೆಯಲು ಕಾನೂನೊಂದರ ಅಗತ್ಯವೂ ಇತ್ತು. ಇದರ ಭಾಗವಾಗಿಯೇ ಈ ಮಾದರಿ ಕಾನೂನು. ಆದರೆ, ಈ ಕಾನೂನು ಲಗಾಮು ತೆಗೆದ ಕುದುರೆಯಂತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಮುಕ್ತ ಮಾರ್ಗವಾಗಬಾರದೆನ್ನುವ ಎಚ್ಚರಿಕೆ, ಇದರ ಮುಂದುವರಿಕೆಯಾಗಿ ರಾಜ್ಯಗಳು ರೂಪಿಸುವ ಕಾನೂನುಗಳಲ್ಲಿ ಸ್ಪಷ್ಟವಾಗಿ ನಮೂದಿಸಲ್ಪಡಬೇಕಿದೆ.

ಸದ್ಯದ ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಡಲು ಕಾರಣ, ಈಗಾಗಲೇ ಜಾಗತಿಕ ವ್ಯಪಾರ ಸಂಸ್ಥೆಯ ಸದಸ್ಯರಾಗಿ ಗುತ್ತಿಗೆ ಬೇಸಾಯವನ್ನು ಜಾರಿಗೊಳಸಲು ಮುಂದಾಗಿರುವ ಅಮೆರಿಕಾ ಮತ್ತು ಚೀನಾ ದೇಶಗಳ ಉದಾಹರಣೆ. ಈ ಮಾದರಿಯನ್ನು ಜಾರಿಗೊಳಿಸುವಲ್ಲಿ ಆಸಕ್ತಿ ತೋರಿರುವ ಉತ್ತರ ಅಮೆರಿಕ, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳಲ್ಲಿ ಭಾರತ ಮೂರನೇಯದು. ಈ ಮಾದರಿಯ ಅನುಷ್ಠಾನದಿಂದಾಗಿ ಒಂದಷ್ಟು ರಾಷ್ಟ್ರೀಯ ವರಮಾನ ಹೆಚ್ಚಾಗಿರಬಹುದು ಅಥವಾ ಮುಂದೆ ಹೆಚ್ಚಾಗಲೂಬಹುದು ಎಂದಿಟ್ಟುಕೊಳ್ಳೋಣ. ಆದರೆ ಅದು ನಿರುದ್ಯೋಗ ಸಮಸ್ಯೆಗೆ ಸ್ಪಂದಿಸಿರುವುದು ಕಡಿಮೆ. ಬದಲಾಗಿ ಹೆಚ್ಚಾಗಲು ಕಾರಣವಾಗುವಂತಹುದು. ಕಾರ್ಪೊರೆಟ್ ಸಂಸ್ಥೆಗಳು ಬಳಸುವ ತಂತ್ರಜ್ಞಾನ ಎಲ್ಲ ಅತಿರಿಕ್ತ ನಿರುದ್ಯೋಗಿಗಳಿಗೆ ಕೆಲಸ ಕೊಡುವ ಉದ್ದೇಶವನ್ನಾಗಲೀ ಅಥವಾ ಭೂಮಿ ಕಳೆದುಕೊಂಡು ಕೃಷಿಯಿಂದ ಪಲ್ಲಟಗೊಳ್ಳುವವರಿಗೆ ಉದ್ಯೋಗ ನೀಡುವುದಾಲೀ ಆಗಿರುವುದಿಲ್ಲ. ಕಾಳಜಿ ವಹಿಸಬೇಕಾದ ಸರ್ಕಾರ ಕಾರ್ಪೊರೇಟ್ ಧಣಿಗಳನ್ನು ಓಲೈಸುವ ನಿಟ್ಟಿನಲ್ಲಿ ಮುಂದಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಹಾಗಾಗಿಯೇ ಕೃಷಿಯಲ್ಲಿ ಆಸಕ್ತಿ ಇದ್ದೂ ಕೃಷಿಕರಾಗಲು ಸಾಧ್ಯವಾಗದಿರುವವರು ಕೃಷಿ ಭೂಮಿಯನ್ನು ಖರೀದಿಸಲು ಮತ್ತು ಕೃಷಿಕರಾಗಿದ್ದು ಕೃಷಿಯಲ್ಲಿ ಮುಂದುವರಿಯಲು ಇಷ್ಟವಿಲ್ಲದವರು ಸುಲಭವಾಗಿ ತಮ್ಮ ಜಮೀನುಗಳನನ್ನು ಮಾರಲು ಸಾಧ್ಯವಾಗುವಂತೆ ಭೂ ಸುಧಾರಣಾ ಕಾಯಿದೆಗಳಿಗೆ ತಿದ್ದುಪಡಿ ತರಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇದರ ಅನುಪಾಲನೆಯಾಗಿ ಕರ್ನಾಟಕ ಸಕಾರವೂ ಒಳಗೊಂಡಂತೆ, ಬಿಜೆಪಿ ಪಕ್ಷದ ಆಳ್ವಿಕೆ ಇರುವ ರಾಜ್ಯಗಳು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿಗಳನ್ನು ತಂದು ಇದೀಗ ಕಾಯೆದೆಗಳನ್ನಾಗಿ ಮಾಡ ಹೊರಟಿವೆ. ಇದು ಕಾರ್ಪೊರೆಟ್ ಸಂಸ್ಥೆಗಳನ್ನು ಗುತ್ತಿಗೆ ಬೇಸಾಯ ವಿಧಾನದತ್ತ ಸೆಳೆಯುವ ಕ್ರಮವಲ್ಲದೆ ಇನ್ನೇನೂ ಅಲ್ಲ.

ಕೇಂದ್ರದ ಪ್ರಸ್ತುತ ಮೂರು ಕಾಯಿದೆಗಳ ಜಾರಿಯಿಂದ ಇದು ಸ್ಪಷ್ಟಗೊಂಡಿದೆ. ಕಾರ್ಪೊರೆಟ್ ಕಂಪನಿಗಳು ನೇರವಾಗಿ ರೈತರೊಂದಿಗೆ ವ್ಯವಹರಿಸಲು ಮತ್ತು ರೈತರು ತಮ್ಮ ಅಧಿಕೃತ ವಲಯದ ಕೃಷಿ ಮಾರುಕಟ್ಟೆಗಳನ್ನು ಮೀರಿ ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರುವ ಸ್ವಾತಂತ್ರ್ಯವನ್ನು ಮೊದಲ ಎರಡು ಕಾಯಿದೆಗಳು ಸ್ಪಷ್ಟವಾಗಿ ನೀಡುತ್ತವೆ. ಆದರೆ ಇದು ರೈತರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಗಳನ್ನು ಮತ್ತು ಅವರು ವಿಧಿಸುತ್ತಿದ್ದ ದಲ್ಲಾಳಿ, ತೆರಿಗೆ ವೆಚ್ಚಗಳನ್ನು ಉಳಿಸುತ್ತದೆ ಎನ್ನುವುದನ್ನು ನಂಬುವುದು ಕಷ್ಟ. ರಾಜ್ಯ ಸರ್ಕಾರಗಳು ಕೃಷಿ ಮಾರುಕಟ್ಟೆಗಳ ಮೂಲಕ ಸಂಗ್ರಹಿಸುತ್ತಿದ್ದ ತೆರಿಗೆ ನಿಲ್ಲಬಹುದು. ಆದರೆ, ರೈತರು ನೇರವಾಗಿ ಕೊಳ್ಳುವವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಕೊಳ್ಳುವವರು ತಮ್ಮ ಅನುಕೂಲಕ್ಕಾಗಿ ಮಧ್ಯವರ್ತಿಗಳನ್ನಿಟ್ಟುಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಈ ಕಾನೂನುಗಳ ಜಾರಿಯಿಂದ ಕೃಷಿಕರನ್ನು ಅವರ ವ್ಯಾಪ್ತಿಯ ಮಾರುಕಟ್ಟೆಗಳ ಬಂಧನದಿಂದ ಮತ್ತು ಮಧ್ಯವರ್ತಿಗಳ ಉಪಟಳದಿಂದ ಬಿಡುಗಡೆ ಮಾಡಲಾಗಿದೆ ಎನ್ನುವ ಮಾತುಗಳಿಗೆ ಅರ್ಥ ದಕ್ಕುತ್ತಿಲ್ಲ.

ಭಾರತದಲ್ಲಿ ಅಷ್ಟೇ ಏಕೆ, ಇತರೆ ದೇಶಗಳಲ್ಲೂ ಕೂಡ ಕೃಷಿ ಹಲವು ನೈಸರ್ಗಿಕ ಪ್ರಭಾವ, ಪರಿಣಾಮಗಳಿಗೆ ಒಳಗಾಗಿರುವಂತಹುದು. ಊಹಿಸಲು ಸಾಧ್ಯವಿರದ ಕಾರಣಗಳಿಂದಾಗಿ ನಿಗದಿತ ಗುಣಮಟ್ಟದ ಉತ್ಪನ್ನಗಳನ್ನು ನಿಗದಿತ ಪ್ರಮಾಣದಲ್ಲಿ ಬೆಳೆದು ಕೊಡುವುದು ಸಾಧ್ಯವಾಗದಿದ್ದಾಗ ಅಥವಾ ಕೊಳ್ಳುವವರು ಕೊಳ್ಳಲು ಸಾಧ್ಯವಾಗದಿದ್ದಾಗ ಇಬ್ಬರಲ್ಲೊಬ್ಬರ ಕಡೆಯಿಂದ ಒಪ್ಪಂದದ ಉಲ್ಲಂಘನೆಯಾಗಬಹುದು. ಒಂದು ವೇಳೆ ನೈಸರ್ಗಿಕ ಕಾರಣಗಳಾದ ಅತಿವೃಷ್ಟಿ, ಅನಾವೃಷ್ಟಿ, ಅನಿರೀಕ್ಷಿತ ರೋಗ-ರುಜಿನಗಳು ಮೊದಲಾದ ಕಾರಣಕ್ಕೆ ಅಸಹಾಯಕ ರೈತರು ಕೊಳ್ಳುವವರಿಗೆ ಆದ ನಷ್ಟಕ್ಕೆ ಪರಿಹಾರ ಕಟ್ಟಿಕೊಡಲು ಸಾಧ್ಯವೆ? ಹಾಗೆಯೇ, ಅಂಥಹುದೇ ಕಾರಣಕ್ಕೆ ಕೊಳ್ಳುವವರಿಂದ ಒಪ್ಪಂದದ ಉಲ್ಲಂಘನೆಯಾದಾಗ ಏನು ಮಾಡುವುದು? ಆಗ ಸರ್ಕಾರ ಯಾರ ಬೆಂಬಲ ಅಥವಾ ಸಹಾಯಕ್ಕಾದರೂ ಬರುವ ಸಾಧ್ಯತೆಗಳೇನು? ಮೊದಲಾದುವುಗಳ ಬಗ್ಗೆ ಸ್ಪಷ್ಟನೆಗಳು ಕಾಯಿದೆ ರೂಪದಲ್ಲಿ ಬೇಕಿವೆ. ಏಕೆಂದರೆ, ಈಗಿರುವ ಫಸಲ್ ಬಿಮಾ ಯೊಜನೆಯಲ್ಲೇ ವಿಮಾ ಕಂತು ಕಟ್ಟಿಯೂ ವಿಮಾ ಕಂಪನಿಗಳಿಂದ ನಷ್ಟ ಪರಿಹಾರ ಪಡೆಯದೆ ಅಲೆಯುವ ಸ್ಥಿತಿಯಿಂದ ರೈತರು ಮುಕ್ತವಾಗಿಲ್ಲ. ಇಂಥ ಸಂದರ್ಭಗಳಲ್ಲಿ ರೈತರ ಹಿತ ಕಾಯುವ ರಕ್ಷಣಾ ಕ್ರಮಗಳ ಬಗ್ಗೆ ಸ್ಪಷ್ಟತೆಗಳು ಕಾನೂನುಗಳಲ್ಲಿ ಬರುವವರೆವಿಗೂ ರೈತರ ವಿರೋಧಗಳು ನಿಲ್ಲಲಾರವು.

ಸ್ವಾಮಿನಾಥನ್ ವರದಿ ಶಿಫಾರಸ್ಸುಗಳು

ಗುತ್ತಿಗೆ ಬೇಸಾಯಕ್ಕೆ ಸಂಬಂಧಿಸಿದಂತೆ ಎಮ್.ಎಸ್ ಸ್ವಾಮಿನಾಥನ್ ವರದಿಯಲ್ಲಿ ತುಂಬಾ ಸ್ಪಷ್ಟ ಪ್ರಸ್ತಾಪವಿದೆ. ಈಗ ಜಾರಿಗೊಳಿಸಿರುವ ಗುತ್ತಿಗೆ ಬೇಸಾಯ ಪ್ರಸ್ತಾಪಿತ ಕಾಯಿದೆಯಲ್ಲಿನ ಅಂಶಗಳು ಈ ವರದಿಯ ಆಶಯಕ್ಕೆ ಅನುಗುಣವಾಗಿವೆಯೇ ಎನ್ನುವುದನ್ನು ನೋಡುವುದಾದರೆ, ಅಲ್ಲಿಯೂ ಸ್ಪಷ್ಟತೆ ಇಲ್ಲ. “ಕೃಷಿ ಉತ್ಪನ್ನಗಳ ಉತ್ಪಾದಕರು ಮತ್ತು ಕೊಳ್ಳುವವರಿಬ್ಬರಿಗೂ ಅನುಕೂಲಕರವಾದ ಮಾರುಕಟ್ಟೆ ಅವಕಾಶಗಳು ದೊರೆಯುವಂತೆ ಮಾಡುವ ಒಪ್ಪಂದಗಳು ಸೂಕ್ತವಾದುವುಗಳಾಗಿವೆ. ಅದೇ ಸಂದರ್ಭಕ್ಕೆ, ಭಾರತೀಯ ಆಹಾರ ನಿಗಮ (ಎಫ್‌ಸಿಐ), ಭಾರತೀಯ ಸಹಕಾರಿ ಕೃಷಿ ಮಾರುಕಟ್ಟೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಎಫ್‌ಇಡಿ) ಮುಂತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಬೆಂಬಲ ಬೆಲೆ ನೀಡುವ ಅವಕಾಶಗಳನ್ನು ಕಲ್ಪಿಸಬೇಕು. ಸ್ಪಷ್ಟ ವ್ಯಾಖ್ಯಾನವಿರುವ ನೀತಿ ಸಂಹಿತೆಯಿಂದ ಕೂಡಿದ, ಸಣ್ಣ ಉತ್ಪಾದಕರಿಗೆ ಬೆಳೆ ಬೆಳೆಯಲು ಬೇಕಾದ ಗುಣಮಟ್ಟದ ಉತ್ಪಾದಕಗಳನ್ನು, ಲಾಭದಾಯಕ ಬೆಲೆ ಮತ್ತು ತಕ್ಷಣವೇ ಹಣ ಪಾವತಿಯಾಗುವ ವ್ಯವಸ್ಥೆಯನ್ನು ಮಾಡಿಕೊಡುವ ಗುತ್ತಿಗೆ ಬೇಸಾಯವು ಅವರಿಗೆ ಸಹಕಾರಿಯಾದುದಾಗಿದೆ. ತರಕಾರಿ, ಹಣ್ಣು, ಹೂವು, ಔಷಧಿ ಸಸ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ಕಬ್ಬು, ಹತ್ತಿ ಮುಂತಾದ ಉತ್ಪನ್ನಗಳಿಗೆ ಈ ವಿಧಾನದ ಸಂಹಿತೆಯಲ್ಲಿ ಸ್ಪಷ್ಟ ನಿರೂಪಣೆಗಳಿರಬೇಕು.

ಯಾವುದೇ ಸಂದರ್ಭದಲ್ಲೂ ರೈತರು ತಮ್ಮ ಜಮೀನುಗಳ ಮಾಲಿಕತ್ವದಿಂದ ವಂಚಿತರಾಗಬಾರದು. ಲಭ್ಯವಿರುವ ಆಧಾರಗಳ ಪ್ರಕಾರ, ಮಾರುವ ಮತ್ತು ಕೊಳ್ಳುವವರ ನಡುವೆ ಜಗಳವೇರ್ಪಟ್ಟಾಗ ಸರ್ಕಾರವು ಮೂರನೇ ಭಾಗಿದಾರನಾಗಿ ಹಸ್ತಕ್ಷೇಪ ಮಾಡುವ ಸ್ಥಿತಿ, ಮದ್ಯವರ್ತಿಗಳ ಮೂಲಕ ಪರೋಕ್ಷವಾಗಿ ಏರ್ಪಡುವ ಒಪ್ಪಂದಗಳಿಗಿಂತ ಹೆಚ್ಚು ಅನುಕೂಲಕರವಾಗಿದೆ. ಶೋಷಣೆಗೆ ಅವಕಾಶವಿಲ್ಲದಂತೆ ಒಪ್ಪಂದಗಳಾಗುವುದನ್ನು ಖಾತ್ರಿಪಡಿಸಿಕೊಳ್ಳಲು ರೈತರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ರಾಜ್ಯ ಮಟ್ಟದ ಸಮಿತಿಯೊಂದನ್ನು ನೇಮಿಸಬೇಕು”. ಅತ್ಯಂತ ಸ್ಪಷ್ಟವಿರುವ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಭಾರತದಲ್ಲಿ ಗುತ್ತಿಗೆ ಬೇಸಾಯ ಪದ್ದತಿ ಜಾರಿಗೆ ಬರುವುದಾದರೆ, ನಿಜಕ್ಕೂ ಅದು ಅತ್ಯಂತ ಸ್ವಾಗತಾರ್ಹ. ಈಗ, ಈ ಆಂಶಗಳು ಸದರಿ ಕಾಯಿದೆಗಳಲ್ಲಿ ಇರುವುದರ ಬಗ್ಗೆ ಮಾಹಿತಿ, ಮನವರಿಕೆ ಮತ್ತು ಕಾಳಜಿ ಸಂಬಂಧಪಟ್ಟ ಸರ್ಕಾರಗಳಿಂದ ಸ್ಪಷ್ಟಗೊಳ್ಳಬೇಕಾಗಿದೆ. ಈ ಕಾಯಿದೆಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿಲ್ಲದಿರುವುದು, ಜಾರಿಯಾದ ವಿಧಾನ ಮತ್ತು ಸಂದರ್ಭಗಳು ಕೂಡ ಗೊಂದಲಗಳಿಗೆ ಕಾರಣವಾಗಿವೆ.

ಅಡ್ಡ ಅನುಭವಗಳು

ಕೆಲವು ದಶಕಗಳ ಹಿಂದೆ ಬೆಳೆ ಆಧಾರಿತ ಗುತ್ತಿಗೆ ಬೇಸಾಯ ಪದ್ಧತಿ ಕರ್ನಾಟಕ ರಾಜ್ಯದಲ್ಲಿ ತಂಬಾಕು ಮತ್ತು ಕಬ್ಬು ಬೆಳೆಗಾರರಿಗೆ ಇತ್ತು. ಕಬ್ಬು ಬೆಳೆಗೆ ಸಂಬಂಧಿಸಿದಂತೆ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಗಳಲ್ಲಿ ಈಗಲೂ ಇದೆ. ಈ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಸಂಬಂಧಪಟ್ಟ ರೈತರಿಗೆ ಬೀಜ, ಗೊಬ್ಬರ ಮತ್ತು ಖರ್ಚಿಗಾಗಿ ಮುಂಗಡ ಹಣ ಮೊದಲಾದುವುಗಳನ್ನು ಕೊಟ್ಟು ಕಟಾವು ನಂತರ ಕಾರ್ಖಾನೆಗೆ ತಲುಪಿಸಿ, ಲೆಕ್ಕ ಹಾಕಿ ಬಾಕಿ ಚುಕ್ತ ಮಾಡಿಕೊಂಡು ತಮಗೆ ಬರಬೇಕಾದ ಹಣ ಪಡೆಯುತ್ತಿದ್ದರು.

ಕಬ್ಬನ್ನು ಕಾರ್ಖಾನೆಗೆ ತಲುಪಿಸಿ ಎಷ್ಟೋ ತಿಂಗಳು, ವರ್ಷಗಳಾದರೂ ರೈತರಿಗೆ ಕಾರ್ಖಾನೆಗಳು ಹಣ ನೀಡದೆ ಸತಾಯಿಸಿದ ಸಂದರ್ಭಗಳು ಈಗಲೂ ಎಷ್ಟೋ ಇವೆ. ಕಬ್ಬನ್ನು ಕಟಾವು ಮಾಡಿ ಕಾರ್ಖಾನೆಗೆ ತಲುಪಿಸಲು ಅನುಮತಿಯ ವಿಳಂಬದ ಕಾರಣಕ್ಕೆ ತೂಕ ಕಡಿಮೆಯಾಗಿ, ಕಬ್ಬಿನಲ್ಲಿನ ಸುಕ್ರೋಸ್ ಕಡಿಮೆಯಾಗಿ ರೈತರಿಗೆ ಸಾಕಷ್ಟು ನಷ್ಟ ಆಗಿದೆ. ಇದಕ್ಕೆ ಯಾರು ಯಾರಿಗೂ ಹೊಣೆಗಾರರಲ್ಲ ಎನ್ನುವಂತಾಗಿ ಕೊನೆಗೆ ದುಃಸ್ಥಿತಿ ರೈತರದ್ದೇ. ಈಗ ಜಾರಿಯಾಗಿರುವ ಕಾನೂನುಗಳಿಂದ ರೈತರು ಇಂಥ ದುಸ್ಥಿತಿಗಳಿಂದ ರಕ್ಷಿಸಲ್ಪಡುತ್ತಾರೆ ಎನ್ನುವುದಾದದರೆ ಅದನ್ನು ನಿಜಕ್ಕೂ ಸ್ವಾಗತಿಸಬಹುದು. ಆದರೆ ಅಂತಹ ಯಾವ ಭರವಸೆಯೂ ಕಾಣುತ್ತಿಲ್ಲ.

ಇದೇ ಅನುಭವ ತಂಬಾಕು ಬೆಳೆದು, ಬ್ಯಾರಲ್ಲುಗಳಲ್ಲಿ ಅದನ್ನು ಒಣಗಿಸಿ, ಸಂಸ್ಕರಿಸಿ ಕೇಳಿದ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸಿ, ಕೊನೆಗೆ ಅದರ ಉಸಾಬರಿಯೇ ಬೇಡ ಎಂದು ಕೈಬಿಟ್ಟವರು ಎಷ್ಟೋ ಮಂದಿ. ಈಗ ಈರುಳ್ಳಿ, ಟೊಮ್ಯಾಟೋ, ಆಲೂಗೆಡ್ಡೆ, ಹೂವು ಮುಂತಾದುವುಗಳನ್ನು ಬೆಳೆದು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಿ ಆದಾಯ ಪಡೆಯುವ ಅವಕಾಶವಿದ್ದರೂ ಸೂಕ್ತ ಬೆಲೆ ಸಿಗದೆ ಹಾದಿ ಬೀದಿಯಲ್ಲಿ ಚೆಲ್ಲಿ ಸಂಕಟ ಅನುಭವಿಸಿದವರನ್ನು ನೋಡಿದ್ದೇವೆ.

ದಾಳಿಂಬೆ, ಪೊಪ್ಪಾಯಿ, ದ್ರಾಕ್ಷಿ, ಗೋಡಂಬಿ ಮೊದಲಾದುವುಗಳನ್ನು ಬೆಳೆದ ಕೆಲವರಿಗೆ ಆ ಉತ್ಪಾದಕರ ಸಹಕಾರ ಸಂಘಗಳ ನೆರುವು ದೊರೆತು ಒಂದಷ್ಟು ಅನುಕೂಲ ಮಾಡಿರುವುದನ್ನು ನೋಡಿದರೆ ಕಾಂಟ್ರಾಕ್ಟ್ ಫಾರ್ಮಿಂಗ್‌ಗಿಂತ ಕೋ-ಆಪರೇಟಿವ್ ಫಾರ್ಮಿಂಗ್ ಹೆಚ್ಚು ಅನುಕೂಲಕರ ಎನ್ನುವುದನ್ನು ಸರ್ಕಾರ ಮತ್ತು ಅದರ ವಕ್ತಾರರುಗಳು ಒಪ್ಪದಿರುವುದು ಮತ್ತು ಅವರೆಲ್ಲ ರಫ್ತು ಆಧಾರಿತ ಕೃಷಿಯಿಂದ ಮಾತ್ರ ದೇಶದ ಕೃಷಿ ಅಭಿವೃದ್ಧಿ ಸಾಧ್ಯ ಎಂದು ನಂಬಿರುವುದು ದುರಂತವೇ ಸರಿ.

ಆಶಯಗಳು

ಗುತ್ತಿಗೆ ಬೇಸಾಯ ಪದ್ದತಿಯ ಅನುಷ್ಠಾನದಿಂದ ನೀರಾವರಿ ಜಮೀನುಳ್ಳ ರೈತರಿಗೆ ಹೆಚ್ಚು ಅನುಕೂಲವಾಗಬಹುದು. ಒಣ ಬೇಸಾಯಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತ ಅವಘಡಗಳು ಹೆಚ್ಚಾಗಿರುವುದರಿಂದ ಕೊಳ್ಳುವವರು ಒಪ್ಪಂದದ ಮೂಲಕ ಪ್ರಸ್ತಾಪಕ್ಕೆ ಬರುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು. ಕಾರ್ಪೊರೆಟ್ ವಲಯದ ಗುತ್ತಿಗೆ ಆಧಾರಿತ ಬೇಸಾಯ ಭಾರತದಲ್ಲಿ ಯಶಸ್ವಿಯಾಗಬೇಕಾದರೆ, ಅದು ಸ್ವಾಮಿನಾಥನ್ ವರದಿಯಲ್ಲಿರುವಂತೆ ಯಥಾವತ್ತಾಗಿ ಜಾರಿಯಾಗಬೇಕು. ಅಂದರೆ, ರೈತರುಗಳೇ ಹೆಚ್ಚಾಗಿ ಷೇರುದಾರರಾಗಿರುವ ಸಣ್ಣ ಸಣ್ಣ ಕಂಪನಿಗಳು ರಚಿತವಾಗಬೇಕು. ಅವುಗಳವೇ ಆದ ಮಾರುಕಟ್ಟೆ ವಾಹಿನಿ ವ್ಯವಸ್ಥೆ ಇರಬೇಕು ಮತ್ತು ಸರ್ಕಾರಗಳ ಸಾಂದರ್ಭಿಕ ಹಸ್ತಕ್ಷೇಪವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜಗಳ, ಸಂಘರ್ಷಗಳು ಏರ್ಪಟ್ಟಾಗ ಶೀಘ್ರ ನ್ಯಾಯ ನೀಡಿಕೆಯ ವಿಶೇಷ ವ್ಯವಸ್ಥೆ ಜಾರಿಯಾಗಬೇಕು. ಈಗ ರೈತರುಗಳಿಗೆ ಇರುವ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಳು ಯಾವುದೇ ಕಾರಣಕ್ಕೂ ರದ್ದಾಗಬಾರದು. ಈ ಭರವಸೆಗಳನ್ನು ಕಾನೂನು ರೂಪದಲ್ಲಿ ಸರ್ಕಾರಗಳು ನೀಡಿದಲ್ಲಿ ಕೃಷಿಯನ್ನು ಮುಕ್ತ ಮಾರುಕಟ್ಟೆಯತ್ತ ಸೆಳೆವ ಪ್ರಯತ್ನಗಳಿಗೆ ಎಲ್ಲ ಭಾಗಿದಾರರ ಬೆಂಬಲ ಸಿಗುವುದರಲ್ಲಿ ಸಂಶಯವಿಲ್ಲ. ಆಗ ನಿಜಕ್ಕೂ ಈಗ ಸತ್ಯಾಗ್ರಹ ಹೂಡಿರುವ ರೈತರು ಹೋರಾಟದಿಂದ ಹಿಂದೆ ಸರಿದಾರು.

  • ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನಪ್ಪನವರು, ಆರ್ಥಿಕ ವಿದ್ಯಮಾನಗಳ ಬಗ್ಗೆ ಮಹತ್ವದ ಲೇಖನಗಳನ್ನು ಬರೆದಿದ್ದಾರೆ. ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕಾರಿ
ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...