Homeಅಂಕಣಗಳುರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ.

- Advertisement -
- Advertisement -

ಸುಮಾರು ಎರಡು ಲಕ್ಷ ಮಂದಿ ಪಾಲ್ಗೊಂಡಿರುವ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಐತಿಹಾಸಿಕ ಸ್ವರೂಪದ್ದು. ಪಕ್ಷ ರಾಜಕಾರಣವನ್ನು ದೂರವಿಟ್ಟು ನಡೆಯುತ್ತಿರುವ ಅನನ್ಯ ಶಾಂತಿಯುತ ಆಂದೋಲನ. ವಿಶ್ವವೇ ಗಮನಿಸುತ್ತಿರುವ ವಿದ್ಯಮಾನ.

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ. ದೆಹಲಿಯ ಗಡಿಗಳತ್ತ ಸಾಗುವ ಮುನ್ನ ಐವತ್ತೈದು ದಿನಗಳ ಕಾಲ ಕಿಚ್ಚಿನಂತೆ ವ್ಯಾಪಿಸಿದ್ದ ಪ್ರತಿಭಟನೆಯಿದು. ಹಳ್ಳಿ ಹಳ್ಳಿಗಳು ಆಹಾರ ಧಾನ್ಯ, ತರಕಾರಿ, ಹಾಲು, ಹಣ್ಣು, ಹಣವನ್ನು ಸಂಗ್ರಹಿಸಿ ದೆಹಲಿ ಗಡಿಯ ಪ್ರತಿಭಟನೆಗೆ ರವಾನಿಸುತ್ತಿದೆ. ಖಾಸಗಿ ಬಸ್ಸುಗಳು ಕ್ವಿಂಟಾಲ್‌ಗಟ್ಟಲೆ ದಿನಸಿಗಳು ಹಾಲು ಹೈನನ್ನು ಉಚಿತವಾಗಿ ಸಾಗಿಸುತ್ತಿವೆ. ಪಂಜಾಬಿನ ಮದುವೆಗಳಲ್ಲಿ ಉಡುಗೊರೆಗಳ ಬದಲಿಗೆ ವಂತಿಗೆ ಸಂಗ್ರಹಿಸಿ ಕಳಿಸಲಾಗುತ್ತಿದೆ. ಈ ಸತ್ಯಾಗ್ರಹದ ಬೇರುಗಳ ಜನಪದದಲ್ಲಿವೆ. ಅವುಗಳನ್ನು ಕತ್ತರಿಸುವುದು ಸುಲಭವಲ್ಲ. ಸಿಡಿದೆದ್ದಿರುವ ಈ ಭುಗಿಲನ್ನು ಸದ್ಯಕ್ಕಾದರೂ ಶಾಂತಗೊಳಿಸುವ ಏಕೈಕ ಸುಲಭದ ದಾರಿಯೆಂದರೆ ರೈತರ ಬೇಡಿಕೆಗಳನ್ನು ಒಪ್ಪುವುದು.

ಬ್ಲಾಕ್
PC: PTI

ದೆಹಲಿ-ಹರಿಯಾಣದ ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮೊನ್ನೆ ಬಹಾದೂರ್‌ಗಢ ಬೈಪಾಸ್ ಹೆದ್ದಾರಿಯುದ್ದದ ವಿಭಜಕದಲ್ಲಿ (ಡಿವೈಡರ್) ಉಳುಮೆ ಮಾಡತೊಡಗಿದರು. ತಮ್ಮ ಅಡುಗೆಗೆ ನಿತ್ಯ ಬೇಕಿರುವ ತರಕಾರಿಗಳು ಮತ್ತು ಸೊಪ್ಪು ಬೆಳೆಯುವುದು ಅವರ ವಿನೂತನ ಪ್ರತಿಭಟನೆಯ ಪರಿ.

ರಾಜಸ್ತಾನ, ಹರಿಯಾಣ, ಪಶ್ಚಿಮೀ ಉತ್ತರಪ್ರದೇಶ, ಮಹಾರಾಷ್ಟ್ರ ಮಾತ್ರವಲ್ಲದೆ ದಕ್ಷಿಣ ರಾಜ್ಯಗಳ ರೈತರೂ ಈ ಪ್ರತಿಭಟನೆಯನ್ನು ಕೂಡಿಕೊಳ್ಳತೊಡಗಿದ್ದಾರೆ. ಮುಂಬರುವ ದಿನಗಳು ಉಬ್ಬರವನ್ನು ಕಾಣುವುವೇ ವಿನಾ ಇಳಿತವನ್ನಲ್ಲ. ಅರ್ಥಾತ್ ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’.

ಕೇಂದ್ರ ಸರ್ಕಾರ ಮಾತ್ರವಲ್ಲದೆ, ಅಂಬಾನಿ-ಅದಾನಿಯಂತಹ ಭಾರಿ ಲಾಭಬಡುಕ ಕಾರ್ಪೊರೇಟ್‌ಗಳು ಹಾಗೂ ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟುಗಳ ತುತ್ತೂರಿಗಳಾಗಿರುವ ಸಮೂಹ ಮಾಧ್ಯಮಗಳನ್ನು ಈ ಆಂದೋಲನ ಕಟಕಟೆಯಲ್ಲಿ ನಿಲ್ಲಿಸಿದೆ. ರಾಜ್ಯ ಸರ್ಕಾರಗಳು ಮತ್ತು ರೈತ ಸಮುದಾಯಗಳೊಂದಿಗೆ ಸಮಾಲೋಚನೆಯನ್ನೇ ನಡೆಸದೆ ಏಕಪಕ್ಷೀಯವಾಗಿ ಕೃಷಿ ಕಾಯಿದೆಗಳನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರ, ಒಕ್ಕೂಟ ಗಣತಂತ್ರದ ತಿರುಳು ಮತ್ತು ಸತ್ವವನ್ನೇ ಗಾಳಿಗೆ ತೂರಿರುವ ನಡೆಯನ್ನು ಪ್ರಶ್ನಿಸಿರುವ ಚಳವಳಿಯಿದು.

ಜೈ ಜವಾನ್-ಜೈ ಕಿಸಾನ್ ಎಂಬುದು ಭಕ್ತಗಣ ಮತ್ತು ಆಳುವವರ ಪರ ನಿಂತಿರುವ ಜನವಿರೋಧಿ ತಮಟೆ-ತುತ್ತೂರಿ ಮೀಡಿಯಾ ಇತ್ತೀಚಿನವರೆಗೆ ಜಪಿಸುತ್ತಿದ್ದ ಮಂತ್ರ. ಆದರೆ ಕುರುಡುಭಕ್ತಿಗೆ ಇತಿಮಿತಿಗಳು ಹದ್ದುಬಸ್ತುಗಳು ಉಂಟೇನು? ತಮ್ಮ ಚಂಡಪ್ರಚಂಡ ನಾಯಕನಿಗೆ ಎದುರಾಗಿ ನಿಂತರೆಂದು ರೈತರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗಿದೆ. ಖಾಲಿಸ್ತಾನಿಗಳೆಂದು ಸಾರಲಾಗಿದೆ. ದೇಶ ರಕ್ಷಣೆಗೆ ಒರೆಯಿಂದ ಹಿರಿದ ಖಡ್ಗವೆಂದೇ ಪಂಜಾಬನ್ನು ಬಣ್ಣಿಸುವುದುಂಟು. ಅದಕ್ಕೆ ಐತಿಹಾಸಿಕ ಕಾರಣಗಳಿವೆ. ಸೇನೆಯಿಂದ ನಿವೃತ್ತಿಯ ನಂತರ ರೈತಾಪಿಗಳಾಗಿರುವ ಸಾವಿರಾರು ಮಾಜಿ ಯೋಧರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

PC : Singhstation

ಖಾಲಿಸ್ತಾನಿಗಳ ವಿರುದ್ಧ ಹೋರಾಡಿ ಹುತಾತ್ಮರಾದ ದೇಶಪ್ರೇಮಿಗಳ ರೈತ ಕೂಲಿ ಸಂಘಟನೆ ಇದೆ. ಅದರ ಹೆಸರು ಕೀರ್ತಿ ಕಿಸಾನ್ ಯೂನಿಯನ್. ಖಾಲಿಸ್ತಾನಿಗಳ ಭಯೋತ್ಪಾದನೆಯನ್ನು ಮಾತ್ರವಲ್ಲ, ಅಮಾಯಕರನ್ನು ಭಯೋತ್ಪಾದರೆಂದು ಘೋಷಿಸಿ ಕೊಂದ ಪ್ರಭುತ್ವದ ಭಯೋತ್ಪಾದನೆ, ಸಿಖ್ ಧರ್ಮದ ಸಂಪ್ರದಾಯವಾದವನ್ನೂ ವಿರೋಧಿಸಿದ ಸಂಘಟನೆಯಿದು. ’ಅತಿ ಅಪಾಯಕಾರಿ ವಾರ್ತೆಯೆಂದರೆ ನಮ್ಮ ಕನಸುಗಳು ಕೊನೆಯುಸಿರೆಳೆವುದು…’ ಎಂಬ ಪಂಜಾಬಿನ ಕ್ರಾಂತಿಕಾರಿ ಕವಿ ಅವತಾರ್ ಸಿಂಗ್ ಪಾಶ್ ಅವರ ಕವಿತೆ ಜನಜನಿತ. ಖಾಲಿಸ್ತಾನಿಗಳನ್ನು ವಿರೋಧಿಸಿದ ಅವರು ಅವರಿಂದಲೇ ಹತರಾಗುತ್ತಾರೆ. ಅವರ ಜಮೀನನ್ನು ಯಾರೂ ಉಳುಮೆ ಮಾಡಕೂಡದೆಂದು ಖಾಲಿಸ್ತಾನಿಗಳು ಬೆದರಿಕೆ ಹಾಕಿರುತ್ತಾರೆ. ಆದರೆ ಈ ಬೆದರಿಕೆಗೆ ಬಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಪಾಶ್ ಅವರ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳೆಯಿತು ಕೀರ್ತಿ ಕಿಸಾನ್ ಯೂನಿಯನ್ ಸಂಘಟನೆ. ಈ ಸಂಘಟನೆಯ ಹದಿಮೂರು ಮಂದಿ ಕಾರ್ಯಕರ್ತರು ಮತ್ತು ಮೂವರು ಅಧ್ಯಕ್ಷರನ್ನು ಕೊಂದು ಹಾಕಿದ್ದರು ಖಾಲಿಸ್ತಾನಿಗಳು. ಈ ಸಂಘಟನೆಯ ಅಧ್ಯಕ್ಷ ರಾಜೇಂದ್ರಸಿಂಗ್ ದೀಪ್ ಸಿಂಗ್ ವಾಲಾ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ರೈತ ನಿಯೋಗದ ಅತ್ಯಂತ ಕಿರಿಯ ವಯಸ್ಸಿನ ಸದಸ್ಯ. ಹತ್ತೆಕರೆಗೂ ಕಮ್ಮಿ ಹೊಲಗದ್ದೆಗಳ ರೈತರು ಮತ್ತು ಕೂಲಿಕಾರರ ಕೊರಳ ದನಿಯಾಗಿರುವ ಸಂಘಟನೆಯಿದು. ಅಪಪ್ರಚಾರಕ್ಕೆಂದೇ ನೇಮಕಗೊಂಡಿರುವ ಸೇನೆಯ ಕುರುಡು ಕಣ್ಣುಗಳಿಗೆ ಈ ಸತ್ಯ ಕಾಣುವುದಾದರೂ ಎಂತು?

ಪ್ರತಿಭಟನೆಯನ್ನು ಸೇರಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಊಟ ತಿಂಡಿ ಮುಂತಾದ ಅನುಕೂಲಗಳು ಹೇರಳ. ಆದರೆ ಸ್ನಾನ ಶೌಚದ ಸಮಸ್ಯೆ ಬಿಗಡಾಯಿಸಿದೆ. ರೈತ ಮಹಿಳೆಯರ ಪಾಡು ಹೇಳತೀರದು. ಹರಿಯಾಣ ಮತ್ತು ಉತ್ತರಪ್ರದೇಶ ಸರ್ಕಾರಗಳು ಮಾಡಿರುವ ಸಂಚಾರಿ ಶೌಚಾಲಯಗಳ ಸಂಖ್ಯೆ ಸಾಲದೇ ಸಾಲದು. ಈ ಶೌಚಾಲಯಗಳು ಕೂಡ ಬಳಸಲಾರದಷ್ಟು ಕೊಳಕಾಗಿವೆ. ಸಮೀಪದ ಹೊಲಗದ್ದೆಗಳು, ಕಾಲುದಾರಿಗಳೇ ಗತಿ. ಹೋಟೆಲುಗಳನ್ನು ಹುಡುಕಿಕೊಂಡು ಹೋಗಬೇಕೆಂದರೆ ಹತ್ತು ಕಿ.ಮೀ.ದೂರ ಕ್ರಮಿಸಬೇಕು. ಉತ್ತರಪ್ರದೇಶ-ದೆಹಲಿಯ ಘಾಜೀಪುರ ಗಡಿಯಲ್ಲಿ ಮುಗಿಲೆತ್ತರ ನಿಂತ ಕಸದ ಹೊಲಸಿನ ಬೆಟ್ಟವೇ ಪ್ರತಿಭಟನಾ ನಿರತ ರೈತರ ನೆರೆಹೊರೆ. ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಕಾಟ. ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯು ಸೊಳ್ಳೆ ನಿರೋಧಕ ಬತ್ತಿ- ಮುಲಾಮುಗಳು, ಟೂತ್ ಪೇಸ್ಟ್, ಬ್ರಶ್, ಸೋಪು ಹಾಗೂ ಶಾಂಪೂ ಹೊಂದಿದ ಸಾವಿರಾರು ’ಕಿಟ್’ ಗಳನ್ನು ರೈತರಿಗೆ ಹಂಚತೊಡಗಿದೆ. ಕಳೆದ ಎರಡು ವಾರಗಳಲ್ಲಿ ವಿಪರೀತ ಚಳಿಯ ವಾತಾವರಣ ಮತ್ತು ಅಪಘಾತಗಳ ಕಾರಣ ಒಟ್ಟು 14 ಮಂದಿ ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ. ಥರಗುಟ್ಟಿಸುವ ಥಂಡಿ ಕೊರೆದು ಕಾಡುವ ಬಯಲಿನಲ್ಲಿ ವಾರಗಟ್ಟಲೆ ಬದುಕುವುದು ಸುಲಭವಲ್ಲ. ಸಾವು ನೋವುಗಳಿಗೆ ನೀಡುವ ಆಹ್ವಾನವದು.

ಏನನ್ನು ಬೇಕಾದರೂ ಜಗಿದು ನುಂಗಿ ಅರಗಿಸಿಕೊಂಡೇವು ಎನ್ನುವ ಪ್ರಚಂಡ ಜೋಡಿಗೆ ಎದುರಾದಂತಿದೆ ಕಬ್ಬಿಣದ ಕಡಲೆ.


ಇದನ್ನೂ ಓದಿ: ರೈತ ಹೋರಾಟ ರಾಷ್ಟ್ರೀಯ ಸಮಸ್ಯೆಯಾಗುವ ಮುನ್ನ ಬಗೆಹರಿಸಿ: ಕೇಂದ್ರಕ್ಕೆ ಸುಪ್ರೀಂ ಸಲಹೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2025ಕ್ಕೆ ಬಿಜೆಪಿ ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲಿದೆ: ರೇವಂತ್ ರೆಡ್ಡಿ

0
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ...