Homeಅಂಕಣಗಳುಬಹುತ್ವದ ದೇಶದಲ್ಲಿ ಸಂಧಾನ-ಚೌಕಾಶಿಗೆ ಕದ ಮುಚ್ಚುತ್ತಿರುವ ಪ್ರಭುತ್ವಗಳು

ಬಹುತ್ವದ ದೇಶದಲ್ಲಿ ಸಂಧಾನ-ಚೌಕಾಶಿಗೆ ಕದ ಮುಚ್ಚುತ್ತಿರುವ ಪ್ರಭುತ್ವಗಳು

ಗೋಹತ್ಯೆ ನಿಷೇಧ ವಿಧೇಯಕ ಮತ್ತು ರೈತರ ಹೋರಾಟದ ಕುರಿತು ಗುರುಪ್ರಸಾದ್ ಡಿ.ಎನ್ ರವರ ಲೇಖನ ಓದಿ.

- Advertisement -
- Advertisement -

ಯಾವುದೇ ಬಹು ಸಂಸ್ಕೃತಿಯ ಪ್ರಜಾಪ್ರಭುತ್ವ ದೇಶದಲ್ಲಿ ನಂಬಿಕೆ ಆಚರಣೆಗಳ ವಿಚಾರಕ್ಕೆ ಬಂದಾಗ, ಹಲವು ವರ್ಗಗಳ ಹಿತಾಸಕ್ತಿಗಳ ವಿಷಯಕ್ಕೆ ಬಂದಾಗ ವಿವಿಧ ಸಮುದಾಯಗಳ ನಡುವೆ ಸಂಧಾನಕ್ಕೆ, ಚೌಕಾಶಿಗೆ ಅವಕಾಶ ಇರಬೇಕು. ಅದಕ್ಕೆ ಪ್ರಭುತ್ವಗಳು-ಆಡಳಿತ ವ್ಯವಸ್ಥೆಗಳು ಸಹಾಯ ಮಾಡಬೇಕು. ಯಾವುದೋ ಒಂದು ಬಲಿಷ್ಟ ಸಂಸ್ಕೃತಿಯು ಮತ್ತೊಂದು ಸಂಸ್ಕೃತಿಯ ಮೇಲೆ ದಬ್ಬಾಳಿಕೆ ಮಾಡುವುದಕ್ಕೆ ಸಹಕರಿಸುವುದನ್ನಾಗಲೀ, ಸಾಂವಿಧಾನಿಕ ತತ್ವಗಳನ್ನು ಗಾಳಿಗೆ ತೂರಿ ಯಾವದೇ ಒಂದು ವರ್ಗದ-ಸಮುದಾಯದ ಹಿತಾಸಕ್ತಿಗೆ ಮಣೆ ಹಾಕಿ ಸಾಮಾನ್ಯ ಹಿತವನ್ನು, ಜನಸಾಮಾನ್ಯರ ಒಟ್ಟಾರೆ ಹಿತಾಸಕ್ತಿಯನ್ನು ಕಡೆಗಣಿಸುವುದನ್ನಾಗಲೀ ಸರ್ಕಾರಗಳು ಮಾಡಲೇಬಾರದು.

ಸ್ವಾತಂತ್ರ್ಯಪೂರ್ವದಿಂದಲೂ ಗೋಹತ್ಯೆ ಈ ದೇಶದಲ್ಲಿ ವಿವಾದಾಸ್ಪದ ಸಂಗತಿಯೇ. ಒಂದು ಸಣ್ಣ ಸಮುದಾಯದ ನಂಬಿಕೆಯಾಗಿ ಯಾವುದೋ ಒಂದು ಕಾಲಘಟ್ಟದಲ್ಲಿ ಹಸುಗಳ ಬಗ್ಗೆ ಪೂಜ್ಯ ಭಾವನೆ ಬೆಳೆದಿರಬಹುದು. ಈ ದೇಶದಲ್ಲಿ ಹಲವು ಸಮುದಾಯಗಳು ತಮ್ಮ ಮಾಂಸಾಹಾರದ ಜೊತೆಗೆ ಗೋಮಾಂಸ ತಿನ್ನುವುದೂ ಕೂಡ ವಾಸ್ತವ. ಹಸುಗಳನ್ನು ಪೂಜಿಸುವ ಆದರೆ ತಮ್ಮ ಮಾಂಸಾಹಾರದಲ್ಲಿ ಗೋವನ್ನು ಹೊಂದಿರದ ಮತ್ತು ಗೋಮಾಂಸ ತಿನ್ನುವವರ ಬಗ್ಗೆ ಯಾವುದೇ ಅಸಹನೆ ತೋರದ ಸಮುದಾಯಗಳೂ ಇವೆ. ಮೊದಲನೆಯ ಸಮುದಾಯದ ಅವೈಚಾರಿಕತೆಯನ್ನು ಮತ್ತು ಗೋಮಾಂಸ ತಿನ್ನುವ ಸಮುದಾಯಗಳ ಅಗತ್ಯಗಳು-ಕಾರಣಗಳನ್ನು ಸದ್ಯಕ್ಕೆ ಬದಿಗಿಟ್ಟರೂ, ಯಾವುದೇ ಆಡಳಿತ ವ್ಯವಸ್ಥೆಯ ಕೆಲಸ ಎರಡೂ ಸಮುದಾಯಗಳ ನಡುವಿನ ಸಂಘರ್ಷಕ್ಕೆ ವೈಚಾರಿಕ ತಳಹದಿಯಲ್ಲಿ, ಸಂವಿಧಾನದ ಆಶಯಗಳಲ್ಲಿ ಸಂಧಾನಕ್ಕೆ ಪ್ರಯತ್ನಿಸಿ, ಪರಿಹಾರಗಳನ್ನು ಸೂಚಿಸುವುದು. ಅಂದರೆ ಅಂತಹ ಚೌಕಾಶಿಗೆ ಇರುವ ಸ್ಪೇಸ್‌ಅನ್ನು ಉಳಿಸಿಕೊಳ್ಳಬೇಕು. ಇಂತಹ ಸಂದರ್ಭವನ್ನು ಊಹಿಸಿಯೇ, ಸಂವಿಧಾನ ರಚನೆಯಲ್ಲಿ, ಗೋರಕ್ಷಣೆಯನ್ನು ರಾಜ್ಯ ನಿರ್ದೇಶಕ ತತ್ವಗಳನ್ನಾಗಿಸಿ, ಆಯಾ ನಾಡಿನ ಸಾಂಸ್ಕೃತಿಕ-ಸಾಮಾಜಿಕ ಸಂದರ್ಭಕ್ಕೆ, ಎಲ್ಲ ಸಮುದಾಯಗಳ ಬೇಡಿಕೆಗಳಿಗೂ ಜಾಗ ನೀಡುವ ಕಾನೂನನ್ನು ರಚಿಸಲು ಸಾಧ್ಯವಾಗುವಂತೆ ಅವಕಾಶ ಒದಗಿಸಿತ್ತು.

ಹಲವು ರಾಜ್ಯ ಸರ್ಕಾರಗಳು ಇಂತಹ ಸಮತೋಲನದ ಕಾನೂನುಗಳನ್ನು ರಚಿಸಿದ್ದವು ಕೂಡ. ಗೋವುಗಳನ್ನು ವಧೆ ಮಾಡದಂತೆ, ಉಳಿದ ಜಾನುವಾರುಗಳ ಭಕ್ಷಣೆಗೆ ಅವಕಾಶ ಮಾಡಿಕೊಡುವ ಕಾನೂನುಗಳು ಬಹುಸಂಸ್ಕೃತಿಯ ಪ್ರಜಾಸತ್ತೆಯಲ್ಲಿ ಚೌಕಾಶಿ ಮಾಡುವ ಪ್ರಕ್ರಿಯೆಯನ್ನು ಎತ್ತಿ ಹಿಡಿದಿತ್ತು. ಆದರೆ, ಈಗ ಹಲವು ರಾಜ್ಯಗಳ ಬಿಜೆಪಿ ಸರ್ಕಾರಗಳು ಹೊಸ ಜಾನುವಾರು ಹತ್ಯೆ ಕಾನೂನುಗಳನ್ನು ರಚಿಸಿ ಅದರಲ್ಲಿ, ಹಸುಗಳು, ಎತ್ತುಗಳು, ಗೊಡ್ಡು ದನಗಳು ಎಲ್ಲವನ್ನು ಹತ್ಯೆ ಮಾಡದಂತೆ ತಡೆದಿವೆ. ಕರ್ನಾಟಕ ಸರ್ಕಾರವೂ ಇಂತಹ ಕರಾಳ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಕೇವಲ ಒಂದು ಸಮುದಾಯದ ಹಿತಾಸಕ್ತಿಯನ್ನು ಕಾಯುವ, ಉಳಿದ ಸಮುದಾಯಗಳ ಸಂಧಾನಕ್ಕೆ ಕದ ಮುಚ್ಚಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನತತ್ವಕ್ಕೆ ಬದ್ಧವಾಗಿಲ್ಲ. (ವೈಚಾರಿಕವಾಗಿ, ಕಾನೂನಿನ ಅನುಷ್ಠಾನದ ದೃಷ್ಟಿಯಿಂದಲೂ ಈ ಹೊಸ ಕಾಯ್ದೆ ಸರಿಯಲ್ಲ ಎನ್ನುವ ಚರ್ಚೆಯನ್ನು ಹೊರತುಪಡಿಸಿದರೂ)

ಇದೇ ರೀತಿಯಲ್ಲಿ ಕೇಂದ್ರ ಸರ್ಕಾರ ಕಾರ್ಪೊರೆಟ್ ಹಿತಾಸಕ್ತಿಯನ್ನು ಮಾತ್ರ ಕಾಪಾಡಲು, ರೈತರ ಜೊತೆಗೆ, ರಾಜ್ಯ ಸರ್ಕಾರಗಳ ಜೊತೆಗೆ ಯಾವುದೇ ಸಂಧಾನ-ಚೌಕಾಶಿ ನಡೆಸದೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕಾನೂನುಗಳು ಈಗ ತನ್ನ ಕೊರಳಿಗೇ ಸುತ್ತಿಕೊಳ್ಳುತ್ತಿವೆ. ಕಾನೂನು ಜಾರಿ ಮಾಡುವಾಗ ಯಾವುದೇ ಮಾತುಕತೆ ನಡೆಸದೆ, ಈಗ ದೊಡ್ಡ ಮಟ್ಟದ ಪ್ರತಿರೋಧ ಬರುತ್ತಿರುವ ಹೊತ್ತಿನಲ್ಲಿ ರೈತರ ಜೊತೆಗೆ ಚೌಕಾಶಿಗೆ ಇಳಿದಿದೆ. ಆದರೆ ಅಲ್ಲೂ ಪ್ರಾಮಾಣಿಕತೆಯಿಲ್ಲ. ಕಾರ್ಪೊರೆಟ್ ಶಕ್ತಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬಹುತೇಕ ಬೆದರಿಕೆ ರೀತಿಯಲ್ಲಿಯೇ ರೈತರನ್ನು ಮಣಿಸಲು ಪ್ರಯತ್ನ ಮಾಡುತ್ತಿರುವುದು ಇಲ್ಲಿಯವರೆಗೂ ಫಲ ಕೊಟ್ಟಿಲ್ಲ.

ಯಾವುದೇ ಕಾನೂನು-ಕಾಯ್ದೆ ಜಾರಿಗೊಳಿಸುವಾಗ ಹಲವು ಸಮುದಾಯಗಳ ಹಿತಾಸಕ್ತಿಯನ್ನು ಪರಿಗಣಿಸಿ ಜನ ಸಾಮಾನ್ಯರೆಲ್ಲರ ಹಿತವನ್ನು ಕಾಯುವುದನ್ನು ಸರ್ಕಾರಗಳು ಮನಗಾಣಬೇಕಲ್ಲವೇ?


ಇದನ್ನೂ ಓದಿ: ಹರಿಯಾಣ ಸಿಎಂಗೆ ಕಪ್ಪು ಬಾವುಟ ಪ್ರದರ್ಶಿಸಿದ ರೈತರ ಮೇಲೆ ದಾಖಲಾಯ್ತು ಗಲಭೆ, ಕೊಲೆಯತ್ನದ ಕೇಸ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...