ತಾವಾಡುವ ಭಾಷೆ ಪ್ರಾಚೀನವಾದದ್ದು ಎಂದೋ, ತಾವಾಡುವ ಭಾಷೆ ಹೆಚ್ಚು ಕಾವ್ಯಾತ್ಮಕ ಎಂದೋ, ತಮ್ಮ ಭಾಷೆಯಲ್ಲಿ ಹೆಚ್ಚು ಜನ ಓದಿರುವ ಕಾವ್ಯ, ಸಾಹಿತ್ಯ ಅಡಗಿದೆ ಎಂದೋ, ಕೊನೆಗೆ ತಮ್ಮ ಭಾಷೆಗೆ ಯಾವುದೋ ಒಂದು ನಿರ್ಧಿಷ್ಟ ಪ್ರಶಸ್ತಿ ಅತಿ ಹೆಚ್ಚು ಬಾರಿ ಒಲಿದು ಬಂದಿದೆ ಎಂದೋ ಹೆಮ್ಮೆ ಪಟ್ಟುಕೊಳ್ಳುವುದು ನಮ್ಮ ಸುತ್ತಲೂ ಸರ್ವೇ ಸಾಮಾನ್ಯವಾಗಿರುವ ಸಂಗತಿ. ಇವುಗಳಲ್ಲಿ ಕನ್ನಡಿಗರಿಗೂ ಹೆಮ್ಮೆ ಪಟ್ಟುಕೊಳ್ಳಲಿಕ್ಕೆ ಹಲವು ಸಂಗತಿಗಳು ಇವೆ ಕೂಡ. ಈ ಹೆಮ್ಮೆ ಮತ್ತೊಂದು ಭಾಷೆಯ ಜೊತೆಗೆ ಸ್ಪರ್ಧಾತ್ಮಕವಾಗದೆ ಉಳಿದರೆ, ಅದು ಕನ್ನಡ ಮತ್ತು ಕರ್ನಾಟಕ ಸಮುದಾಯದ ವಿವೇಕವಾಗಿ ಎಲ್ಲರ ಒಳಿತಿಗಾಗಿ ಇನ್ನಷ್ಟು ಹೆಚ್ಚು ತಿಳಿವಳಿಕೆಯನ್ನು ತನ್ನದಾಗಿಸಿಕೊಂಡು ಬೆಳೆಯಬಹದು.

ಬಹುಷಃ ಯಾವುದೇ ವಲಯದಲ್ಲಿ ಭಾಷೆಯೊಂದು ತಿಳಿವಳಿಕೆಯನ್ನು, ಜ್ಞಾನವನ್ನು ಗಳಿಸಿಕೊಂಡು ಅಭಿವೃದ್ಧಿಗೊಳ್ಳಲು ತನ್ನ ಪ್ರಾಚೀನತೆಯ ಬಗ್ಗೆ ಇರುವ ಅತೀವ ಹೆಮ್ಮೆಯ ಹಳಹಳಿಕೆಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಿಕೊಂಡು ಮುಂದುವರಿಯುವುದು ಅಗತ್ಯವಿದೆ. ಈ ದೇಶದಲ್ಲಿ ಹಲವು ಸಂದರ್ಭಗಳಲ್ಲಿ ಮುಂದಾಗುವ ಚರ್ಚೆಯೊಂದನ್ನು ಗಮನಿಸಬಹುದು. ಅದು ವಿಜ್ಞಾನ ಆಗಲಿ, ಸಮಾಜ ವಿಜ್ಞಾನ ಆಗಲಿ, ಮಾನವಶಾಸ್ತ್ರ ಆಗಲಿ ಎಲ್ಲವೂ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇತ್ತು, ಎಲ್ಲವೂ ಸಂಸ್ಕೃತ ಗ್ರಂಥಗಳಲ್ಲಿ ಅಡಗಿ ಕುಳಿತಿದೆ ಎಂಬ ಪುನರಾವರ್ತಿತ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಇಂತಹ ಹಳಹಳಿಕೆಯ ಹೊರತು ಸಂಸ್ಕೃತದ ಬಳಕೆ ಇವತ್ತಿಗೆ ಏನಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ.

ಈ ನಿಟ್ಟಿನಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕು ಎಂಬುದರ ಕೂಗಿನ ಜೊತೆಗೆ ಜಗತ್ತಿನ ಎಲ್ಲಾ ತಿಳಿವಳಿಕೆ ಮತ್ತು ಜ್ಞಾನವನ್ನು ಹೊಂದಿರುವ ಭಾಷೆಯಾಗಬೇಕು ಎನ್ನುವ ಹಸಿವು ಎಲ್ಲರಿಗೂ ಹೆಚ್ಚಬೇಕಿದೆ. 2014ರಿಂದೀಚೆಗೆ ನ್ಯಾಶನಲಿಸಂ, ನೇಶನ್ ಸ್ಟೇಟ್, ಫೆಡರಲಿಸಂ ಇತ್ಯಾದಿ ಚರ್ಚೆಗಳು ಹೆಚ್ಚಾಗಿವೆ. ಇಂತಹ ಚರ್ಚೆಗಳನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಪರಿಭಾಷೆಯನ್ನು ಕನ್ನಡದಲ್ಲಿ ಕಟ್ಟಿ ಮತ್ತು ಅವುಗಳ ವ್ಯಾಖ್ಯಾನವನ್ನು ಜನಪ್ರಿಯಗೊಳಿಸಲು ನಮಗಿನ್ನೂ ಸಾಧ್ಯವಾಗಿಲ್ಲ. ಮಾನವಿಕ ವಿಜ್ಞಾನಗಳ ಕಥೆ ಇದಾದರೆ, ಬೇಸಿಕ್ ಸೈನ್ಸಸ್ ಎಂದು ಕರೆಯಲಾಗುವ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮುಂತಾದ ವಿಭಾಗಗಳು ನಮ್ಮ ಪ್ರೀತಿಯ ಕನ್ನಡದ ಒಳಗೆ ಇಳಿದಿವೆಯೇ ಎಂಬ ಪ್ರಶ್ನೆಗೆ ಅಘಾತಕಾರಿ ಉತ್ತರ ಸಿಗಬಲ್ಲದು. ಈ ವರ್ಷ ‘ಬ್ಲಾಕ್ ಹೋಲ್ಸ್’ ಬಗೆಗಿನ ಸಂಶೋಧನೆಗಾಗಿ ರೋಜರ್ ಪೆನ್ರೋಸ್, ರೀಹಾರ್ಡ್ ಗೆನ್ಸಲ್ ಮತ್ತು ಆ್ಯಂಡ್ರಿಯಾ ಘೆಜ್ ಅವರುಗಳಿಗೆ 2020ರ ನೊಬೆಲ್ ಪ್ರಶಸ್ತಿ ದೊರಕಿತು. ಇದರಲ್ಲಿ ರೋಜರ್ ಪೆನ್ರೋಸ್ ಅವರು ಬರೆದಿರುವ ಹಲವು ಇಂಗ್ಲಿಷ್ ಪುಸ್ತಕಗಳು ಸಾಮಾನ್ಯ ಜನರ ನಡುವೆಯೂ ಜನಪ್ರಿಯವಾಗಿವೆ. ಕನ್ನಡದಲ್ಲಿ ಹೀಗೆ ವಿಜ್ಞಾನವನ್ನು ಸಾಮಾನ್ಯರಿಗೆ ವಿವರಿಸಬಲ್ಲ ಎಷ್ಟು ಪುಸ್ತಕಗಳಿವೆ? ನೊಬೆಲ್ ಪ್ರಶಸ್ತಿಯ ಸಂಶೋಧನೆ ಬಗ್ಗೆ ಒಂದು ವಲಯದ ಇಂಗಿಷ್ ಮಾಧ್ಯಮಗಳಲ್ಲಿಯಾದರೂ ಸಾಕಷ್ಟು ಚರ್ಚೆ ಆಯಿತು. ಆದರೆ ಕನ್ನಡ ದಿನಪತ್ರಿಕೆಗಳಲ್ಲಿ, ಮ್ಯಾಗಜಿನ್‍ಗಳಲ್ಲಿ ಕಂಡ ಲೇಖನಗಳೇಷ್ಟು?

ಇಂಗ್ಲಿಷ್ ಭಾಷೆಯಲ್ಲಿ ಹಲವು ಜ್ಞಾನಶಾಖೆಗಳ ತಿಳಿವಳಿಕೆ ಜನಪ್ರಿಯವಾಗಿ ಚರ್ಚೆಯಾಗಿರುವುದರಿಂದ ಮತ್ತು ಸಾಮಾನ್ಯ ಜನರಿಗೆ ಗ್ರಹಿಸುವಂತೆ ಅವುಗಳ ಬಗ್ಗೆ ಸಾಹಿತ್ಯ ಲಭ್ಯ ಇರುವುದರಿಂದ, ಇಂಗ್ಲಿಷ್ ಭಾಷೆಯ ಜನಪ್ರಿಯ ಮಾಧ್ಯಮಗಳ ಒಂದು ವಲಯದಲ್ಲಿ ಆದರೂ ಪ್ರಗತಿಪರ ಮತ್ತು ವಿಚಾರಪರ ಚಿಂತನೆಗಳು, ಈ ದೇಶದ ಹಲವು ನೆಲದ ಭಾಷೆಗಳ ಮಾಧ್ಯಮಗಳಿಗೆ ಹೋಲಿಸಿದರೆ ಸಮೃದ್ಧವಾಗಿವೆ ಮತ್ತು ಚಾಲ್ತಿಯಲ್ಲಿವೆ. ಉದಾಹರಣೆಯಾಗಿ ಗಮನಿಸುವುದಾದರೆ ಇಂದು ಪ್ರಭುತ್ವ ಸೃಷ್ಟಿಸಿರುವ ಬಿಕ್ಕಟ್ಟುಗಳನ್ನು ವೈಚಾರಿಕವಾಗಿ ಚರ್ಚಿಸುವ ಇಂಗ್ಲಿಷ್ ಮಾಧ್ಯಮಗಳು ಕನ್ನಡದವೋ, ತೆಲುಗಿನವೋ ಅಥವಾದ ಹಿಂದಿ ಮಾಧ್ಯಮಗಳಿಗೆ ಹೋಲಿಸಿದರೆ ಹೆಚ್ಚಿಲ್ಲವೇ? ಇಂಗ್ಲಿಷ್ ಭಾಷೆಯಲ್ಲಿ ಇಂತಹ ವಿಷಯಗಳನ್ನು ಕನ್ಸ್ಯೂಮ್ ಮಾಡುವವರು ಹೆಚ್ಚು ಜನ ಇದ್ದಾರೆ, ಅದಕ್ಕಾಗಿ ಈ ಪರಿಸ್ಥಿತಿ ಇದೆ ಎಂಬ ಉತ್ತರ ಮೂಡಬಹುದಾದರೂ ಅದು ಅರ್ಧಸತ್ಯ. ನೆಲ ಭಾಷೆಗಳನ್ನಾಡುವ ಜನರೇ ಹೆಚ್ಚು ಇರುವಾಗ ಆ ಶಕ್ತಿಯನ್ನು ಇನ್ನು ಅನ್ವೇಷಿಸಲಾಗಿಲ್ಲ.

ಆದುದರಿಂದ ಹಲವು ಜ್ಞಾನಶಾಖೆಗಳ ತಿಳಿವಳಿಕೆಯನ್ನು ಈ ನಾಡಿನ ಭಾಷೆಗಳಲ್ಲಿ ಸಿಕ್ಕುವಂತೆ ನೋಡಿಕೊಳ್ಳುವ ಕೆಲಸ ಹೆಚ್ಚಬೇಕಿದೆ. ಆದರೆ ಇಂಗ್ಲಿಷ್ ಭಾಷೆಯ ಜೊತೆಗೆ ಅಂಟಿಕೊಂಡಿರುವ ಎಲೈಟಿಸಂಅನ್ನು ಕಳೆದುಕೊಂಡು ಆ ಕೆಲಸ ಆಗಬೇಕಿದೆ. ಆದರೆ ಈ ನಾಡಿನ ಭಾಷೆಗಳು ಮತ್ತು ಸಾಮಾನ್ಯ ಜನರಿಗೆ ಇರುವ ಸಂಬಂಧ ಮತ್ತು ಸಂಪರ್ಕದ ಸ್ವಭಾವದಿಂದಲೇ ಈ ಎಲೈಟಿಸಂ ಸ್ವಾಭಾವಿಕವಾಗಿ ತಿಳಿವಳಿಕೆಯ ಜೊತೆಗೆ ಸೇರಿಕೊಳ್ಳದೆ ಕಳೆದುಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.

ಎಲೈಟಿಸ್ಟ್ ವಲಯದ ಜನರ ನಡುವೆ ನಡೆಯುವ ಒಂದು ಕಥೆ ಈಗ ಆರು ಭಾಗಗಳ ಧಾರಾವಾಹಿಯಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಇಂಗ್ಲಿಷ್ ಭಾಷೆಯ ಬರಹಗಾರ ವಿಕ್ರಂ ಸೇಥ್ ಅವರ ‘ಎ ಸ್ಯೂಟೆಬಲ್ ಬಾಯ್’ ಕಾದಂಬರಿ ಆಧಾರಿತ ಅದೇ ಹೆಸರಿನ ಸಿನೆಮಾ ಇದಾಗಿದ್ದು, ಆಗ ತಾನೆ ಸ್ವಾತಂತ್ರ್ಯ ಗಳಿಸಿದ್ದ ಭಾರತದ ಮೇಲ್ವರ್ಗದಲ್ಲಿ ಇದ್ದ ಸಣ್ಣತನಗಳು, ಮತಾಂಧತೆ, ಸಾಂಪ್ರದಾಯಿಕ ಮನೋಧೋರಣೆ ಇವುಗಳ ನಡುವೆ ಪ್ರೀತಿಗಾಗಿ ಹಂಬಲಿಸುವ ಕೆಲವು ಯುವ ಪಾತ್ರಗಳ ಜೊತೆಗೆ ಜಾತ್ಯಾತೀತ ಕಥೆಯನ್ನು ಹೇಳುವ ಈ ಕಿರು ಧಾರಾವಾಹಿ ಇವತ್ತಿನ ಬಿಕ್ಕಟ್ಟಿಗೂ ಸ್ಪಂದಿಸುತ್ತಿದೆ. ಸಂಭಾಷಣೆಯೆಲ್ಲವೂ ಇಂಗ್ಲಿಷ್ ಭಾಷೆಯಲ್ಲಿದ್ದು ತುಸು ಅಸಹಜ ಎನಿಸಿದರೂ ಆಗ ತಾನೆ ಸಿಕ್ಕಿದ್ದ ಸ್ವಾತಂತ್ರ್ಯದ ಸಮಯದಲ್ಲಿ, ದೇಶವಿಭಜನೆಯ ಕರಾಳ ದಿನಗಳಲ್ಲಿ ಅಗತ್ಯವಿದ್ದ ಮತಧರ್ಮ ಸಾಮರಸ್ಯದ, ಮನುಷ್ಯ ಪ್ರೀತಿಯ ಕಥೆ ಹೇಳುವ ಈ ಸಿನೆಮಾ ಇಂದಿನ ಯುವಕರಿಗೆ ಪ್ರೀತಿಯ ಪಾಠ ಹೇಳಿಕೊಡುವುದರಲ್ಲಿ ಸ್ವಲ್ಪವಾದರೂ ಸಹಕರಿಸೀತು.

ಆಧುನಿಕ ಜನಗತ್ತಿನ ಬಿಕ್ಕಟ್ಟುಗಳಿಗೆ, ಹೊಸ ಸನ್ನಿವೇಶಗಳಿಗೆ ಸ್ಪಂದಿಸುವ ಕಥೆ, ಕವನ ಮತ್ತು ಚಲನಚಿತ್ರಗಳು ಕನ್ನಡ ಭಾಷೆಯಲ್ಲಿ ಹೆಚ್ಚೆಚ್ಚು ಮೂಡಿ, ಹೊಸ ಜಗತ್ತಿಗೆ ಬೇಕಾದ ಪ್ರಗತಿಪರ ತಿಳಿವಳಿಕೆಯನ್ನು ಅದು ಒಳಗೊಂಡು ಮುನ್ನಡೆಯಬೇಕಿದೆ ಎಂಬ ಆಶಯವನ್ನು 2020ರ ಕನ್ನಡ ರಾಜ್ಯೋತ್ಸವಕ್ಕೆ ವ್ಯಕ್ತಪಡಿಸುವುದು ಇಂದಿನ ಅಗತ್ಯವಾಗಿದೆ. ಯಾರನ್ನೂ ದ್ವೇಷಿಸದ, ಕಲ್ಪಿತ ಶತ್ರುವನ್ನು ಸೃಷ್ಟಿಸಿಕೊಳ್ಳದ, ಪ್ರೀತಿ ಮತ್ತು ಮಾನವೀಯತೆಯನ್ನು ಕರ್ನಾಟಕದ ಜನತೆಯ ಆಡುಮಾತನ್ನಾಗಿಸುವ ಭಾಷೆಯಾಗಿ ಕನ್ನಡ ರೂಪುಗೊಂಡು ಬೆಳೆಯಬೇಕಿದೆ.


ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ. ಎನ್
+ posts

LEAVE A REPLY

Please enter your comment!
Please enter your name here