ಭಾಷೆ ಎಂದರೆ ಕೇವಲ ಮಾತಲ್ಲ. ಅದರೊಳಗೆ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ಆಚಾರ-ವಿಚಾರ, ತಾತ್ವಿಕತೆ, ಊಟ-ಉಡುಗೆ ಎಲ್ಲವೂ ಅಡಕವಾಗಿವೆ. ಹಾಗಾಗಿ ಒಂದು ಭಾಷೆ ಅಳಿಯುವುದೆಂದರೆ ಒಂದು ಸಂಸ್ಕೃತಿಯೇ ಅಳಿದಂತೆ. ಪ್ರಬಲ ಭಾಷೆಗಳ ಹೇರಿಕೆಯಿಂದಾಗಿ ಇಂದಿಗೂ ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಕುರುಹಿಲ್ಲದಂತಾಗಿವೆ. ಇದಕ್ಕೆ ಭಾಷಾ ರಾಜಕಾರಣವೂ ತಳುಕುಹಾಕಿಕೊಂಡಿದೆ.

ಈಗ ಭಾರತದಲ್ಲಿ ಆಗುತ್ತಿರುವುದೂ ಇದೇ. ಒಂದು ಕಡೆಯಿಂದ ಹಿಂದಿ ಹೇರಿಕೆಯಾಗುತ್ತಿದ್ದರೆ, ಇನ್ನೊಂದು ಕಡೆಯಿಂದ ಇಂಗ್ಲಿಷ್ ತಣ್ಣಗಿನ ಅಲುಗಿನಂತೆ ಇರಿಯುತ್ತಿದೆ. ಈ ಭಾಷಾ ಹೇರಿಕೆ ಹುನ್ನಾರ ವಸಾಹತುಶಾಹಿ ಕಾಲದಿಂದಲೂ ನಡೆದು ಬಂದಿದೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರದಲ್ಲಿಯೂ ಸರ್ಕಾರಗಳು ಇಂಗ್ಲಿಷಿಗೆ ಹೆಚ್ಚಿನ ಮಹತ್ವ ನೀಡಿದ ಪರಿಣಾಮ, ನಂತರ ಜಾಗತೀಕರಣದ ಕರಿನೆರಳು ಎಲ್ಲಾ ಕಡೆ ಬೀಳುತ್ತಿದ್ದಂತೆ, ಇಂಗ್ಲಿಷ್ ವ್ಯವಹಾರಿಕ ಭಾಷೆಯಾಗಿ ಮಾರ್ಪಟ್ಟಿತು. ಇಂಗ್ಲಿಷ್ ಯಜಮಾನ ಭಾಷೆಯಾಗಿ ಬದಲಾಗಿ, ಇಂಗ್ಲಿಷ್ ಕಲಿತವರು ಮತ್ತು ಇಂಗ್ಲಿಷ್ ಬರದವರು ಎಂಬ ಕಂದಕವೂ ಏರ್ಪಟ್ಟಿದೆ. ಇಂಗ್ಲಿಷ್ ಜೊತೆಗೆ ಎಲೈಟಿಸಂ ಕೂಡ ಬೆರೆತು ಈ ಕಂದಕವನ್ನು ಇನ್ನಷ್ಟು ಆಳವಾಗಿಸಿದೆ. ಹಾಗಾಗಿ ಎಷ್ಟೋ ಪೋಷಕರಿಗೆ ಕಲಿಕೆಯ ವಿವಿಧ ಬಗೆಗಳು, ಇಂಗ್ಲಿಷ್ ಮಾಧ್ಯಮದ ಸಾಧಕ ಬಾಧಕಗಳ ಬಗ್ಗೆ ತಿಳುವಳಿಕೆ ಇಲ್ಲದೆ ಇದ್ದರೂ, ತಮ್ಮ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿತು ಮಾತನಾಡಬೇಕು ಎಂದು, ಆರ್ಥಿಕವಾಗಿ ಶಕ್ತರಲ್ಲದಿದ್ದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಹೇಳಿಕೊಡುವ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ.

ಗಾಂಧಿ-ಅಂಬೇಡ್ಕರ್, ಠಾಗೂರ್-ವಿವೇಕಾನಂದರೆಲ್ಲರೂ ಶಿಕ್ಷಣದ ಬಗ್ಗೆ ಹೇಳುವ ಮೊದಲ ತತ್ವವೆಂದರೆ, ಮಗು ತನ್ನ ಮಾತೃಭಾಷೆಯಲ್ಲಿಯೇ ಕಲಿಯಬೇಕು ಎನ್ನುವುದು. ಹಲವು ಮನೋವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರ ನಡುವೆಯೂ ಇದರ ಬಗ್ಗೆ ಸಹಮತ ಇದೆ.

ಇನ್ನು ಎಷ್ಟೋ ವಿದ್ಯಾರ್ಥಿಗಳು ಭಾಷೆಯ ಕಾರಣಕ್ಕೆ ಉನ್ನತ ವ್ಯಾಸಂಗವನ್ನು ಅರ್ಧದಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಎಸ್‍ಎಸ್‍ಎಲ್‍ಸಿ ಮುಗಿದ ನಂತರ ವಿಜ್ಞಾನದ ಮೇಲೆ ಆಸಕ್ತಿಯಿದ್ದರೂ ಸಹ ಬೋಧನಾ ಮಾಧ್ಯಮ ಇಂಗ್ಲಿಷ್‌ನಲ್ಲಿರುತ್ತದೆ ಎಂಬ ಕಾರಣಕ್ಕೆ ಎಷ್ಟೋ ಜನ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ನಿಜ ಗ್ರಾಮೀಣ ಭಾರತದ ಸತ್ಯ.

ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬುದಕ್ಕೆ ವಿರುದ್ಧವಾದ ವಾದವೂ ಇದೆ: ‘ಇದುವರೆಗೂ ನಮ್ಮನ್ನು ಶಿಕ್ಷಣದಿಂದ ವಂಚಿಸಲಾಗುತ್ತಿತ್ತು. ಆದರೆ ಈಗ ಇಂಗ್ಲಿಷ್ ಶಿಕ್ಷಣದಿಂದಲೂ ನಮ್ಮನ್ನು ವಂಚಿತರನ್ನಾಗಿಸಿ, ತಳಸಮುದಾಯದವರು ಮೇಲೆ ಬಾರದಂತೆ ತಡೆಯುವ ಮನುವಾದಿಗಳ ಹುನ್ನಾರ ಇದು’ ಎಂಬುದು. ಆದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಈಗಾಗಲೇ ಹೆಚ್ಚಾಗಿದೆ. ಇನ್ನು ಇಂಗ್ಲಿಷ್ ಶಿಕ್ಷಣ ಪದ್ದತಿ ಜಾರಿಗೆ ಬಂದರೆ ವಿಭಿನ್ನ ಭಾಷಾ ಹೇರಿಕೆಯಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ತೀರಾ ಹೆಚ್ಚಳವಾಗುವುದರಲ್ಲಿ ಸಂದೇಹವಿಲ್ಲ. ಇದು ತಳಸಮುದಾಯದವರನ್ನು ಇನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ಕಡೆ ಕನ್ನಡವೂ ಇಲ್ಲದೇ, ಇಂಗ್ಲಿಷನ್ನೂ ಕಲಿಯಲಾಗದೇ ತ್ರಿಶಂಕು ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಎಂಬುದು ಪ್ರತಿವಾದ.

ಈ ವಾದ ಪ್ರತಿವಾದಗಳನ್ನು ಗುರುತಿಸುವಿಕೆಯ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು ಎಂಬ ನಂಬಿಕೆ ಮತ್ತು ಪ್ರತಿಪಾದನೆಯೊಂದಿಗೆ, ಅದಕ್ಕಾಗಿ ತಮ್ಮದೇ ರೀತಿಯಲ್ಲಿ ಪ್ರಚಾರ, ವೈಯಕ್ತಿಕವಾಗಿ ಭಾಗವಹಿಸುವಿಕೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡವರ ಜೊತೆಗೆ ನಾನುಗೌರಿ.ಕಾಂ ಮಾತಾಡಿತು.

ಪ.ಮಲ್ಲೇಶ್ ಅವರು ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಮುಖಂಡರು. ಅವರು ನೃಪತುಂಗ ಕನ್ನಡ ಶಾಲೆಯನ್ನು ನಡೆಸುತ್ತಿದ್ದು, ಆ ಶಾಲೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಲಾಗುತ್ತಿದೆ. ಜೊತೆಗೆ ಕನ್ನಡ ವಿಕಾಸ ವಿದ್ಯಾ ಸಂಸ್ಥೆ ಎಂಬ ಮತ್ತೊಂದು ಹೊಸ ಶಿಕ್ಷಣ ಸಂಸ್ಥೆಯನ್ನು ಅವರು ಆರಂಭಿಸಿದ್ದು, ಇಲ್ಲಿ ಪಿಯುಸಿ ಹಂತದ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್‍ಗಳನ್ನು ಸಂಪೂರ್ಣ ಕನ್ನಡದಲ್ಲಿಯೇ ಬೋಧಿಸಲಾಗುತ್ತಿದೆ. ಕಳೆದ ವರ್ಷದಿಂದ ಆರಂಭವಾಗಿರುವ ಈ ಸಂಸ್ಥೆಗೆ ಮೊದಲ ವರ್ಷವೇ ಹಲವು ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈ ವರ್ಷ ಕೊರೊನಾ ಕಾರಣದಿಂದ ಇನ್ನೂ ಯಾರೂ ದಾಖಲಾಗಿಲ್ಲ ಎನ್ನುತ್ತಾರೆ.

ಹಿರಿಯ ಹೋರಾಟಗಾರರಾದ ಪ.ಮಲ್ಲೇಶ್ ಅವರ ಪ್ರಕಾರ, “ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಬೇಕು ಎಂದು ಕೇಳುತ್ತಿರುವುದು ಕೇವಲ ಒಂದು ಭಾಷೆಯ ಉಳಿವಿಗಾಗಿ ಅಲ್ಲ. ಭಾರತದ ಪ್ರತಿಯೊಂದು ರಾಜ್ಯದ ಸ್ಥಳೀಯ ಭಾಷೆಗಳ ಮೇಲೆ ಆಗುತ್ತಿರುವ ಪರಭಾಷಾ ಆಕ್ರಮಣವನ್ನು ತಡೆಯುವ ಸಲುವಾಗಿ ಇಂದಿನ ಪರಿಸ್ಥಿತಿಯಲ್ಲಿ ಇದು ಅತ್ಯಂತ ತುರ್ತಾಗಿದೆ. ಆದರೆ ಇಂದಿನ ಈ ಪರಿಸ್ಥಿತಿಗೆ ನಮ್ಮನ್ನಾಳಿದ ಮತ್ತು ಆಳುತ್ತಿರುವ ಸರ್ಕಾರಗಳೇ ಕಾರಣ. ಭಾರತದ ಸಂವಿಧಾನದಲ್ಲಿ ಇಂಗ್ಲಿಷ್ ಕೇವಲ ಸಂಪರ್ಕ ಭಾಷೆ ಎಂದು ಹೇಳಲಾಗಿದೆ. ಇನ್ನು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಉಲ್ಲೇಖಿಸಿಲ್ಲ. ಅದರೂ ಇಂದು ಹಿಂದಿ-ಇಂಗ್ಲಿಷ್ ಎರಡೂ ಭಾಷೆಗಳು ಹೇರಿಕೆಯಾಗುತ್ತಿವೆ” ಎನ್ನುತ್ತಾರೆ.

ಪ ಮಲ್ಲೇಶ್

“ಗಾಂಧೀಜಿಯವರೇ ಒಂದು ಸಂದರ್ಭದಲ್ಲಿ, ‘ನಾನು ಒಂದು ಶೈಕ್ಷಣಿಕ ಪದವಿಯನ್ನು ಪಡೆಯಲು 2 ವರ್ಷ ಓದಬೇಕಾಯಿತು. ಆದರೆ ಈ ಪದವಿ ಶಿಕ್ಷಣ ನನ್ನ ಮಾತೃಭಾಷೆಯಲ್ಲಿದ್ದಿದ್ದರೆ ಅದನ್ನು ಕೇವಲ 6 ತಿಂಗಳಿನಲ್ಲಿ ಓದಿ ಮುಗಿಸುತ್ತಿದ್ದೆ’ ಎಂದು ಹೇಳಿದ್ದರು. ಅಂದರೆ ಇದು ಮಾತೃಭಾಷೆಯ ಶಿಕ್ಷಣದ ಮಹತ್ವವನ್ನು ನಮಗೆ ಹೇಳುತ್ತದೆ. ಆದರೆ ನಮ್ಮ ದೇಶದ ಘನತೆಯ ಸಂಸ್ಥೆ ಸುಪ್ರೀಂಕೋರ್ಟಿಗೂ ಕೂಡ ಇದು ತಿಳಿದಿಲ್ಲವಾದ್ದರಿಂದ, ‘ಪೋಷಕರು ಇಚ್ಚಿಸಿದ ಭಾಷೆಯಲ್ಲಿ ಶಿಕ್ಷಣ ಕೊಡಿಸಬಹುದು’ ಎಂದು ಹೇಳಿದೆ. ಇಂತಹ ದುಸ್ಥಿತಿ ನಮ್ಮ ದೇಶಕ್ಕೆ ಬರಬಾರದಿತ್ತು. ಇಂದು ಮಹಿಷಿ ವರದಿ ಜಾರಿಯಾಗಿದ್ದರೆ ಕನ್ನಡ ನಮಗೆ ಅನ್ನದ ಭಾಷೆಯಾಗಿರುತ್ತಿತ್ತು. ಆದರೆ ಅದನ್ನು ಜಾರಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಈ ಸರ್ಕಾರಗಳೇ. ಕನ್ನಡ ಕಲಿತರೆ ನಮಗೆ ದುಡಿಮೆ ಸಿಗುವುದಿಲ್ಲ ಎಂದು ಕನ್ನಡ ಮಾಧ್ಯಮವನ್ನು ಬಹುತೇಕ ಪೋಷಕರು ಬೇಡ ಎನ್ನುತ್ತಿರುವುದು ಇದೇ ಕಾರಣಕ್ಕಾಗಿ. ಹಾಗಾಗಿ ಸರ್ಕಾರವೂ ದಿಟ್ಟ ಕ್ರಮ ಕೈಗೊಂಡು ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಹಾಗೆಯೇ ಸಾರ್ವಜನಿಕರೂ ಸಹ ಇದನ್ನು ಅರಿವಿಗೆ ತೆಗೆದುಕೊಂಡು ವೈಜ್ಞಾನಿಕ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡುವಲ್ಲಿ ಮಹತ್ವದ ಪಾತ್ರವಹಿಸಬೇಕು. ಜೊತೆಗೆ ನಮ್ಮಂತಹ ಸಾಮಾಜಿಕ ಕಾಳಜಿಯಿರುವವರು ಕನ್ನಡ ಶಾಲೆಗಳಿಗೆ ಬೆಂಬಲ ನೀಡುವ ಮೂಲಕವೂ ಈ ಭಾಷಾ ಸಮಸ್ಯೆಯನ್ನು ದೂರವಾಗಿಸಬೆಕು” ಎನ್ನುತ್ತಾರೆ.

ಪಿಯು ಕಾಲೇಜಿನ ಉಪನ್ಯಾಸಕರಾದ ಕೆ.ಎಂ.ವಾಸು ಪ್ರಗತಿಪರ ಚಿಂತನೆಯುಳ್ಳವರು ಮತ್ತು ಕನ್ನಡಪರ ಆಸ್ಥೆಯುಳ್ಳವರಾಗಿದ್ದು, ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಶಾಲೆಯೊಂದರ ಉಸ್ತುವಾರಿಯನ್ನು ತೆಗೆದುಕೊಂಡು ಅದನ್ನು ಮಾದರಿ ಶಾಲೆಯನ್ನಾಗಿಸಿ ಕೇವಲ 130 ಮಕ್ಕಳು ದಾಖಲಾಗುತ್ತಿದ್ದ ಶಾಲೆಗೆ ಇಂದು ಸುಮಾರು 700ಕ್ಕೂ ಹೆಚ್ಚು ಮಕ್ಕಳು ದಾಖಲಾಗುವಂತೆ ಶಾಲೆಯನ್ನು ಅಭಿವೃದ್ಧಿಪಡಿಸಿ ‘ಶತಮಾನದ ಶಾಲೆ’ ಎಂದೇ ಪ್ರಸಿದ್ಧಿ ಪಡೆಯುವಂತೆ ಮಾಡಿದ್ದಾರೆ. ಈ ಕನ್ನಡ ಶಾಲೆಯಲ್ಲೇ ತಮ್ಮ ಮಗುವನ್ನೂ ಓದಿಸುತ್ತಿದ್ದು, ಅದೇ ಶಾಲೆಯ ಎಸ್‍ಡಿಎಂಸಿ (ಸ್ಕೂಲ್ ಡೆವಲಪ್‍ಮೆಂಟ್ ಮಾನಿಟರಿಂಗ್ ಕಮಿಟಿ) ಅಧ್ಯಕ್ಷರೂ ಆಗಿದ್ದರು.

ಕೆ ಎಂ ವಾಸು

“ನಾವು ಮೊದಲಿನಿಂದಲೂ ಹೋರಾಟ ಮಾಡುತ್ತಿರುವುದು ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಎಂಬುದಕ್ಕೆ. ಏಕೆಂದರೆ ಮಗು ತನ್ನ ಸ್ಥಳೀಯ ಭಾಷೆಯಲ್ಲಿ ಕಲಿಯುವಷ್ಟು ವಿಚಾರಗಳನ್ನು ಅನ್ಯ ಭಾಷೆಯಿಂದ ಕಲಿಯಲು ಸಾಧ್ಯವಿಲ್ಲ. ವಿಜ್ಞಾನವನ್ನು ಎಲ್ಲಿಯವರೆಗೆ ಮಾತೃಭಾಷೆಯಲ್ಲಿ ಬೋಧಿಸುವುದಿಲ್ಲವೋ, ಅಲ್ಲಿಯವರೆಗೆ ಮತ್ತೊಬ್ಬ ಗೆಲಿಲಿಯೋ-ನ್ಯೂಟನ್ ಹುಟ್ಟುವುದಿಲ್ಲ. ಈಗ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಸರಳವಾಗಿ ರಾಗಿಮುದ್ದೆ ಮತ್ತು ಫ್ರೈಡ್‍ರೈಸ್‍ಗೆ ಹೋಲಿಸಿಕೊಳ್ಳೋಣ. ನಮ್ಮ ಆರೋಗ್ಯಕ್ಕೆ ರಾಗಿಮುದ್ದೆ ತುಂಬಾ ಒಳ್ಳೆಯದು. ಆದರೆ ಫ್ರೈಡ್‍ರೈಸ್ ನಾಲಗೆಗೆ ರುಚಿ ಕೊಟ್ಟು ದೇಹಕ್ಕೆ ರೋಗವನ್ನೂ ತಂದೊಡ್ಡುತ್ತದೆ. ಹಾಗೆಯೇ ಇಂಗ್ಲಿಷ್ ಶಿಕ್ಷಣವೂ ಕೂಡ ಮೊದಲಿಗೆ ರುಚಿ ತೋರಿಸಿ ನಂತರ ಇಡೀ ಸಮಾಜವನ್ನು ನುಂಗುತ್ತದೆ. ಆದರೆ ಇದನ್ನು ತಿಳಿಯದ ಅನೇಕರು ಇಂದು ಫ್ರೈಡ್‍ರೈಸ್‍ನಂತಿರುವ ಇಂಗ್ಲಿಷ್ ಬೇಕು ಎಂದು ಹಠ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಂಗ್ಲಿಷ್‌ನಿಂದ ಕೆಲಸ ಸಿಗುತ್ತದೆಂಬ ಭಾವನೆ. ಆದರೆ ಇದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವುದು ನಮ್ಮ ಸರ್ಕಾರದ ಕೈಯಲ್ಲಿದೆ” ಎನ್ನುತ್ತಾರೆ ವಾಸು.

ಕನ್ನಡಪರ ಹೋರಾಟಗಾರರಾದ ವಸಂತ್ ಶೆಟ್ಟಿ, ‘ಮುನ್ನೋಟ’ ಎನ್ನುವ ಟ್ರಸ್ಟ್ ಆರಂಭಿಸಿ ಕರ್ನಾಟಕ ಕೇಂದ್ರಿತ ಚಿಂತನೆಗಳೊಂದಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಜೊತೆಗೆ ತಮ್ಮ ಮಗುವನ್ನು ಕನ್ನಡ ಶಾಲೆಯಲ್ಲಿಯೇ ಓದಿಸುತ್ತಿದ್ದಾರೆ.

ವಸಂತ ಶೆಟ್ಟಿ

“ಮಕ್ಕಳು ಶಿಕ್ಷಣ ವ್ಯವಸ್ಥೆಗೆ ಕಾಲಿಡುವುದಕ್ಕೆ ಮೊದಲು 3 ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆಯದು ಮನೆಯ ಹಂತ, ಎರಡನೆಯದು ಅಂಗಳದ ಹಂತ; ಅಂದರೆ ತನ್ನ ಪರಿಸರದ ಹಂತ, ಇನ್ನು ಮೂರನೆಯದು ಶಾಲೆಯ ಹಂತ. ಈ ಮೊದಲೆರಡು ಹಂತಗಳಲ್ಲಿ ಬಹುತೇಕ ತಾಯ್ನುಡಿಯೇ ಇರುತ್ತದೆ. ಶಾಲೆಗೆ ಬಂದ ನಂತರ ಇಂಗ್ಲಿಷ್ ಎನ್ನುವ ಹೊಸ ಭಾಷೆ ಜೋತುಬೀಳುತ್ತದೆ. ಇದರಿಂದ ಮಗು ತನ್ನ ಪರಿಸರದಲ್ಲಿ ಇದುವರೆಗೂ ಕಲಿತ ಭಾಷೆಯನ್ನು ಬಿಟ್ಟು ಹೊಸ ಭಾಷೆಯಲ್ಲಿ ಕಲಿಯತೊಡಗುತ್ತದೆ. ಕನ್ನಡದ ಮಗುವಿಗೆ 1 ಅಥವಾ 2ನೇ ತರಗತಿಯಲ್ಲಿ 1+1 ಬಾಳೆಹಣ್ಣು ಸೇರಿದರೆ ಎಷ್ಟು ಎಂದು ಕೇಳಿದರೆ, ಅದಕ್ಕೆ ಬಾಳೆಹಣ್ಣು ಪರಿಚಯವಿರುವುದರಿಂದ ಬೇಗನೇ 2 ಎಂದು ಹೇಳುತ್ತದೆ. ಆದರೆ 1+1 ಸ್ಟ್ರಾಬೆರ್ರಿ ಎಷ್ಟು ಎಂದು ಕೇಳಿದರೆ, ಅದು ಲೆಕ್ಕ ಹಾಕುವ ಬದಲಿಗೆ ಸ್ಟ್ರಾಬೆರ್ರಿ ಎಂದರೇನು ಎಂಬುದರ ಚಿಂತೆಗೆ ಬೀಳುತ್ತದೆ.

ಇಲ್ಲಿ ತಾರ್ಕಿಕ ಶಿಕ್ಷಣಕ್ಕೆ ಹಿನ್ನಡೆಯಾಗುತ್ತದೆ. ಹಾಗಾಗಿ ಮಗು ತನ್ನ ಮನೆಯಲ್ಲಿ ಅಥವಾ ತನ್ನ ಪರಿಸರದಲ್ಲಿ ಬಹುತೇಕ ಮಾತನಾಡುವ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು” ಎನ್ನುತ್ತಾರೆ ವಸಂತ್ ಶೆಟ್ಟಿ.

ಕನ್ನಡ ಭಾಷೆ ಕುರಿತಾದ ಕಾಳಜಿ ಮತ್ತು ಸವಾಲುಗಳ ಕುರಿತು ಚರ್ಚಿಸುತ್ತಾ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಸ್ಥರು ಸೇರಿ ‘ಬನವಾಸಿ ಬಳಗ’ ಎನ್ನುವ ತಂಡವೊಂದನ್ನು ಕಟ್ಟಿಕೊಂಡಿದ್ದು, ಇದರಲ್ಲಿ ಅರುಣ್ ಜಾವಗಲ್ ಕೂಡ ಪ್ರಮುಖರಾಗಿದ್ದಾರೆ. ಇವರೂ ಕೂಡ ತಮ್ಮ ಮಗುವನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಓದಿಸುತ್ತಿದ್ದಾರೆ.

ಅರುಣ್ ಜಾವಗಲ್

ಕನ್ನಡ ಪರ ಹೋರಾಟಗಾರರಾದ ಅರುಣ್ ಜಾವಗಲ್ ಅವರ ಪ್ರಕಾರ, “ಇಂದಿನ ಜಾಗತಿಕ ಯುಗದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬೇಕಾದರೆ ಇಂಗ್ಲಿಷ್ ಅಗತ್ಯ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಪ್ರಸ್ತುತ ಜಗತ್ತಿನ ಮುಂದುವರಿದ 10 ರಾಷ್ಟ್ರಗಳನ್ನು ಪಟ್ಟಿ ಮಾಡಿದರೆ, ಅವುಗಳಲ್ಲಿ ಎಲ್ಲವೂ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಿವೆ. ಜೊತೆಗೆ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಅಲ್ಲಿನ ಜನ ಪ್ರಬಲ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಹಾಗಾಗಿ ಇಂಗ್ಲಿಷ್‌ನಲ್ಲಿ ಕಲಿತರೆ ಮಾತ್ರ ನಾವು ಉದ್ಧಾರ ಆಗುತ್ತೇವೆ ಎಂಬುದು ಶುದ್ಧ ಸುಳ್ಳು. ಜೊತೆಗೆ ಜಾಗತಿಕ ಮಟ್ಟದಲ್ಲಿ ಕೇಳುವುದು ಭಾಷೆಯನ್ನಲ್ಲ, ಕಲಿಕೆಯ ಗುಣಮಟ್ಟವನ್ನು ಮತ್ತು ಗುಣಮಟ್ಟದ ಕೆಲಸವನ್ನು. ಹಾಗಾಗಿ ನಾವು ನಮ್ಮದೇ ಭಾಷೆಯಲ್ಲಿ ಚೆನ್ನಾಗಿ ಕಲಿತರೂ ಜಾಗತಿಕವಾಗಿ ಸ್ಪರ್ಧೆಗೆ ಇಳಿದು ಸಾಧನೆ ಮಾಡಬಹುದು. ಇದಕ್ಕೆ ನಮ್ಮ ನಡುವೆಯೇ ಇನ್ಫೋಸಿಸ್ ನಾರಾಯಣಮೂರ್ತಿಯಿಂದ ಹಿಡಿದು ವಿಜ್ಞಾನಿ ಸಿಎನ್‍ಆರ್ ರಾವ್‍ವರೆಗೆ ನೂರಾರು ಉದಾಹರಣೆಗಳನ್ನು ನೋಡಬಹುದು. ಹಾಗಾಗಿ ಮಾತೃಭಾಷಾ ಶಿಕ್ಷಣದಿಂದ ನಮ್ಮ ಮಕ್ಕಳ ಸೃಜನಶೀಲತೆಯೊಂದಿಗೆ ನಮ್ಮ ಸಂಸ್ಕೃತಿ ಪರಂಪರೆ ಸಾಹಿತ್ಯವೂ ಉಳಿಯುತ್ತದೆ” ಎನ್ನುತ್ತಾರೆ.

ನುಡಿಯ ಬಗ್ಗೆ ಹಲವು ಲೇಖನಗಳನ್ನು ಬರೆದಿರುವ, ಉಪನ್ಯಾಸಗಳನ್ನು ನೀಡಿರುವ, ತಮ್ಮದೇ ಚಿಂತನೆಗಳನ್ನು ಪ್ರಸ್ತುತಪಡಿಸಿರುವ ಮತ್ತು ಚಿಂತಕ ಚಾಮ್‍ಸ್ಕಿಯವರ ಭಾಷಾ ಚಿಂತನೆಗಳನ್ನು ಕನ್ನಡದಲ್ಲಿ ಪರಿಚಯಿಸಿರುವ ಬಾಷಾತಜ್ಞ ಮತ್ತು ವಿಮರ್ಶಕರಾದ ಪ್ರೊ. ಕೆ.ವಿ.ನಾರಾಯಣ್ ಅವರ ಪ್ರಕಾರ, “ಮಕ್ಕಳಿಗೆ ಕಲಿಕೆ ಮುಖ್ಯವಾಗಬೇಕೇ ಹೊರತು ಭಾಷೆ ಮುಖ್ಯವಲ್ಲ. ನೀವು ಯಾವ ಭಾಷೆಯಲ್ಲಾದರೂ ಕಲಿಸಿ, ಆದರೆ ಕಲಿಸಿ ಅಷ್ಟೆ. ನನ್ನ ಪ್ರಕಾರ ಕನ್ನಡ ಮಾಧ್ಯಮ ಅಥವಾ ಇಂಗ್ಲಿಷ್ ಮಾಧ್ಯಮ ಎಂದು ಬೇರ್ಪಡಿಸುವದೇ ಸರಿಯಲ್ಲ. ಇದರಿಂದ ಶ್ರೇಷ್ಠ-ಕನಿಷ್ಠ ಎನ್ನುವುದು ಸೃಷ್ಟಿಯಾಗುತ್ತದೆ. ಹಾಗಾಗಿ ಬೋಧನಾ ಮಾಧ್ಯಮ ಎನ್ನುವುದನ್ನು ಗೌಣ ಮಾಡಿ ಕಲಿಕೆಯನ್ನು ಮುನ್ನಲೆಗೆ ತರಬೇಕು. ಆದರೆ ಇದನ್ನು ಇಂದು ಬಹುತೇಕರು ಒಪ್ಪ್ಪುವುದಿಲ್ಲ. ಇನ್ನೊಂದು ವಿಷಯ, ಮಗು ಬೇರೊಂದು ಭಾಷೆಯನ್ನು ಕಲಿಯುವುದರಿಂದ ತನ್ನ ಮಾತೃಭಾಷೆಗೆ ತೊಡಕುಂಟಾಗುತ್ತದೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ. ಅದೂ ಅಲ್ಲದೇ ಬೆಂಗಳೂರಿನಲ್ಲಿರುವ ಕೆಲವು ಮಕ್ಕಳು ಶಾಲೆಗೆ ಹೋಗದೆಯೇ 3-4 ಭಾಷೆಗಳನ್ನು ಮಾತನಾಡುತ್ತಾರೆ. ಹಾಗಾಗಿ 2-3 ಭಾಷೆಗಳಲ್ಲಿ ಮಕ್ಕಳಿಗೆ ಬೋಧಿಸುವುದರಿಂದ ತೊಂದರೆಯಿಲ್ಲ” ಎನ್ನುತ್ತಾರೆ.

ಕೆ ವಿ ನಾರಾಯಣ

ಸಂಪೂರ್ಣ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವುದಕ್ಕೆ ಸಾಕಷ್ಟು ಸವಾಲುಗಳೂ ಇರುವುದರಿಂದ ಅವುಗಳನ್ನು ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಿ ಕೆಲಸ ಮಾಡಬೇಕಿದೆ. ಸಾಮಾನ್ಯ ಜನರಲ್ಲಿ ಮನೆಮಾಡಿರುವ ‘ಕನ್ನಡ ಕಲಿತರೆ ಕೆಲಸ ಸಿಗುವುದಿಲ್ಲ’ ಎಂಬ ಆತಂಕವನ್ನು ಸರ್ಕಾರ ನೀಗಿಸಬೇಕಿದೆ. ಭಾಷಾತಜ್ಞರು, ಶಿಕ್ಷಣತಜ್ಞರನ್ನು ಒಳಗೊಂಡು ಅವರ ಚಿಂತನೆಗಳನ್ನು ಮಂಥಿಸಿ, ವಿಶ್ವದಾದ್ಯಂತ ಯಶಸ್ವಿ ಶಿಕ್ಷಣ ಮಾದರಿಗಳನ್ನು ಅಧ್ಯಯನ ಮಾಡಿ, ಎಲ್ಲರಿಗೂ ಸಮಾನವಾದ ಅವಕಾಶ ನೀಡುವ ಶಿಕ್ಷಣ ನೀತಿಯನ್ನು ಆಯಾ ರಾಜ್ಯ ಸರ್ಕಾರಗಳು ರೂಪಿಸಿಕೊಳ್ಳುವ ಅಗತ್ಯ ಇಂದು ನಮ್ಮ ಮುಂದಿದೆ.

ಕನ್ನಡ ಮಾಧ್ಯಮ ಕಲಿಕೆಯ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಎಷ್ಟೋ ಯಶಸ್ವೀ ಕನ್ನಡ ಶಾಲೆಗಳು ನಮ್ಮ ಸುತ್ತಮುತ್ತಲೇ ಇವೆ. ಬೆಂಗಳೂರಿನ ವಿಜಯ ಶಾಲೆ, ಪದ್ಮನಾಭನಗರದ ಕಾರ್ಮಲ್ ಶಾಲೆ, ಧಾರವಾಡದ ಬಾಲಬಳಗ ಶಾಲೆ, ಮೈಸೂರಿನ ನೃಪತುಂಗ ಮತ್ತು ಅರಿವು ಶಾಲೆ, ಶಿರಸಿಯ ಚಂದನ ಶಾಲೆ, ಪಾಂಚಜನ್ಯ, ಮಹಿಳಾಮಂಡಳಿ ಎನ್ನುವ ನೂರಾರು ಶಾಲೆಗಳು, ರಾಜ್ಯಾದ್ಯಂತ ಇರುವ ಸರ್ಕಾರಿ ಕನ್ನಡ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುತ್ತಿವೆ.


ಇದನ್ನೂ ಓದಿ: ಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

LEAVE A REPLY

Please enter your comment!
Please enter your name here