Homeಅಂಕಣಗಳುಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಸರಳ ಭಾಷೆಯೊಳಗ ಮಾಹಿತಿ ಪಡೆಯೋದು ನಮ್ಮ ಹಕ್ಕು: ಅದಕ್ಕಾಗಿ ಹೋರಾಡಬೇಕು

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು.

- Advertisement -
- Advertisement -

ನೀವು ಯಾವಾಗರ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋಗಿರತೀರಿ ಅಂತ ತಿಳಕೋರಿ. ವಾಪಸ್ ಬರುವಾಗ ಯಾರರ ಕೇಳಿದರ, ನಾನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರನ್ನು ಭೇಟಿ ಆದೆ ಅಂತ ಹೇಳ್ತೀರಾ?

ನಿಮ್ಮ ಜೀವನದಾಗ ಒಂದು ಸತಿ ಆದರೂ `ಪೊಲೀಸ್ ಠಾಣೆಯಲ್ಲಿ ಆರಕ್ಷಕ ನಿರೀಕ್ಷಕರಿಗೆ ಅರ್ಜಿ ಕೊಟ್ಟೆ’ ಅಂತ ಯಾರಿಗರ ಹೇಳೀರಾ? ನಾವು ಯಾರು ಬಳಸದೆ ಇರೋ ಶಬ್ದಗಳನ್ನ ಸರಕಾರ ಭಾಷಾಂತರದ ನೆಪದಲ್ಲಿ ಯಾಕ್ ಉಪಯೋಗ ಮಾಡತದ?

ಅದರ ನೀವು ತಮಿಳು ನಾಡಿನಾಗ ಇದ್ದರ ನಾನು ಕಾವಲು ನಿಲಯಂಗೆ ಹೋಗಿದ್ದೆ. ಕಾವಲು ರಚಕನ ಅವರನ್ನು ಭೇಟಿ ಅಗಿದ್ದೇ ಅಂತ ಹೇಳ್ತಾ ಇದ್ದೀರಿ. ಅಲ್ಲಿಯ ಹಂಗ ಜನಸ್ನೇಹಿ ಭಾಷಾಂತರ ನಮ್ಮಲ್ಲಿ ಯಾಕ್ ಸಾಧ್ಯ ಆಗೋದಿಲ್ಲ?

ಈ ಪದ್ಧತಿ ನಮ್ಮ ಕಾನೂನು ಮಾಡುವರಲ್ಲೂ ಐತಿ. ಈ ಉದಾಹರಣೆ ನೋಡ್ರಿ.

“ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲು ಈ ಕಾಯಿದೆ ರೂಪಿಸಲಾಗಿದೆ. ಅದರಂತೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಎಂದು ಘೋಷಿಸಲಾಗುತ್ತಿದೆ’’- ಈ ಮೇಲಿನ ಅತ್ಯಂತ ಪ್ರಮುಖ ಘೋಷಣೆ ಪ್ರಾದೇಶಿಕ ಅಪರಾಧ ಪ್ರಯೋಗಾಲಯ ಕಾಯಿದೆ ಒಳಗ ಐತಿ.

ಭವ್ಯ ಭಾರತದ ಘನ ಸರ್ಕಾರಗಳು ಸ್ವಾತಂತ್ರ್ಯ ಪೂರ್ವದಿಂದಲೂ ಪಾಸು ಮಾಡಿಕೊಂಡು ಬರುತ್ತಿರುವ ಅನೇಕ ಅರ್ಥಹೀನ-ಅನುಪಯುಕ್ತ ಕಾಯಿದೆ ಒಳಗ ಇದೂ ಒಂದು.

ಇವು ಯಾಕ್ ಹಿಂಗ ಅರ್ಥಹೀನ – ಗೈರು ಉಪಯೋಗಿ ಅದಾವು ಅಂತ ನಿಮಗ ಗೊತ್ತದ ಏನು? ಯಾಕ್ ಅಂದ್ರ ನಾವು ಮಾಡುವ ಯಾವ ಕಾನೂನು ಯಾರಿಗೂ ಅರ್ಥ ಆಗಬಾರದು ಅಂತ ಆಳುವ ನಾಯಕರಿಗೆ ಅನಸ್ತದ, ಅದಕ್ಕ. ಅದು ಅಷ್ಟ ಸರಳ. ಅದರ ಹಿಂದ ಏನು ಭಾರಿ ರಹಸ್ಯ ಇಲ್ಲ.

ನಮ್ಮಿಂದ ವೋಟು ತೊಗೊಂಡು ಹೋದವರು ನಮಗೆ ತಿಳಿಯೋ ಹಂಗ ಕಾನೂನು ಮಾಡಬೇಕು ಅನ್ನುವ ಕನಿಷ್ಟ ಆಸೆ ನಮಗ ಇರಬೇಕೋ ಬ್ಯಾಡೋ? ಇರಬೇಕು. ಅದು ಬೇಕು ಅಂತನ ಜಗತ್ತಿನ ಬ್ಯಾರೆ ಬ್ಯಾರೆ ದೇಶದಾಗ ಅದರ ಸಲುವಾಗಿ ಹೋರಾಟ ನಡದೆತಿ. ಅದು ಮಾಹಿತಿ ಹಕ್ಕಿನ ಒಂದು ಭಾಗ.

ಮಾಹಿತಿ ಹಕ್ಕು ಅಂದ ಕೂಡಲೇ – ಬರೆ ಒಂದು ಅರ್ಜಿ ಕೊಡೋದು, ಅದಕ್ಕ ಹತ್ತು ರೂಪಾಯಿ ಫೀ ಕಟ್ಟೋದು, ಅಮ್ಯಾಲೆ ಸರ್ಕಾರಿ ಅಧಿಕಾರಿಯಿಂದ ಒಂದು ಎರಡು ತಿಂಗಳ ನಂತರ ಒಂದು ಉತ್ತರ ಬರೋದು, ಅದನ್ನ ನೋಡಿದರ ನಿಮ್ಮ ಪ್ರಶ್ನೆಗೆ, ಅಲ್ಲಿನ ಉತ್ತರಕ್ಕ ಸಂಬಂಧನ ಇಲ್ಲದ ಹಂಗ ಇರೋದು, ಇಷ್ಟ ಅಲ್ಲ. ಅಥವಾ ಉತ್ತರ ಬರಲಾರದ, ಅದು ಮಾಹಿತಿ ಇಲ್ಲದ ಹಕ್ಕು ಅಂತನೂ ಆಗಿ ಬಿಡತದ, ಒಂದೊಂದು ಸತೆ.

ಮಾಹಿತಿ ಹಕ್ಕು ಅಂದ್ರ ಸರ್ಕಾರದ ನೀತಿ, ನಿಯಮ, ಕಾನೂನು-ಕಾಯಿದೆ ಗಳ ಬಗ್ಗೆ ಶ್ರೀ ಸಾಮಾನ್ಯ ತಿಳಕೋಬೇಕು ಅನ್ನೋ ಹಕ್ಕು, ಅದು ತನ್ನ ಮಾತೃಭಾಷೆ ಒಳಗ ಭಾಷಾಂತರ ಆಗಬೇಕು ಅನ್ನುವ ಹಕ್ಕು, ಮತ್ತು ಹಂಗ ಭಾಷಾಂತರ ಆಗಿದ್ದು ಸರಳ ಭಾಷೆ ಒಳಗ ಇರಬೇಕು. ಇಲ್ಲ ಅಂದ್ರ ಇಂಗ್ಲೀಷುದಾಗ ಇದ್ದರ ಛಲೋ ಇತ್ತು ಅನ್ನೋ ಹಂಗ ಆದೀತು.

ಒಟ್ಟಿನಾಗ ಜನರಿಗೆ ಎಲ್ಲ ವಿಷಯ ತಿಳಿಬೇಕು, ಯಾವುದು ಕತ್ತಲಿನಾಗ ನಡಿಯಬಾರದು, ಸರಕಾರ ಪಾರದರ್ಶಕವಾಗಿ ಇರಬೇಕು. ಇದು ಅದರ ಉದ್ದೇಶ.

ಕಾನೂನಿಗೆ ಒಂದಕ್ಕಿಂತ ಹೆಚ್ಚು ಅರ್ಥ ಇರೋ ಕಾರಣದಿಂದನೇ ವಕೀಲರಿಗೆ ಬೇಡಿಕೆ ಅದ. ಇಬ್ಬರು ವಕೀಲರು ಒಂದೇ ರೀತಿ ವಿಚಾರ ಮಾಡೋದಿಲ್ಲ ಅನ್ನುವ ಕಾರಣದಿಂದ ಕೋರ್ಟಿನಾಗ ವಾದ-ವಿವಾದ ನಡಿತದ. ನ್ಯಾಯ ಮೂರ್ತಿಗಳು ಮೂರನೇ ಅಭಿಪ್ರಾಯ ಹೊಂದಿರತಾರ ಅನ್ನುವುದಕ್ಕ ಒಂದರಿಂದ ಇನ್ನೊಂದು ನ್ಯಾಯಾಲಯಕ್ಕ ಕೆಳಗಿನ ಜನ ಮೇಲು ಮನವಿ ಹೋಗತಾರ. ಶಾಸನ ಸಭೆ ಮಾಡಿದ ಕಾನೂನು ಜನರಿಗೆ ಹೋಗಲಿ, ಸರ್ಕಾರದ ಅಧಿಕಾರಿಗಳಿಗೇ ತಿಳಿದಿರೋದಿಲ್ಲ.

ಭಾರತದಾಗ ಮೊದಲ ಬಾರಿಗೆ ಶಾಸನ ಸಭೆಯೊಳಗ ಮಾಹಿತಿ ಹಕ್ಕಿನ ಬೇಡಿಕೆ ಇಟ್ಟವರು ಅಂದ್ರ ಕರ್ನಾಟಕದ ವಿಧಾನ ಪರಿಷತ್ ಸದಸ್ಯ ರಾಗಿದ್ದ ಪ್ರೊ. ಲಕ್ಷ್ಮಿ ಸಾಗರ ಅವರು. ಅವರು 80 ರ ದಶಕದೊಳಗ ಬೇಡಿಕೆ ಇಟ್ಟರು. ಆದರ ನಮ್ಮಲ್ಲಿ ಜಾರಿಗೆ ಬಂದಿದ್ದು 2015 ರ ಒಳಗ. ಸ್ವೀಡನ್ ಹಾಗೂ ಕೆಲ ಚಳಿ ಪ್ರದೇಶ ರಾಜ್ಯಗಳ ಒಳಗ ಈ ಕಾಯಿದೆ ಬಂದು 250 ವರ್ಷ ಆತು. ಅಲ್ಲಿ ಮತ್ತು ಅಮೆರಿಕ ಯೂರೋಪಿನಾಗ ಈಗ ಬರೆ ಮಾಹಿತಿ ಹಕ್ಕು ಇದ್ದರೆ ಸಾಲದು, ಅದು ಜನರಿಗೆ ಅರ್ಥವಾಗೋ ಹಂಗ ಸರಳ ಭಾಷೆಯೊಳಗ ಇರಬೇಕು ಅನ್ನೋ ಆಂದೋಲನ ಶುರು ಆಗೇದ.

ಮೂರು ವರ್ಷದ ಹಿಂದೆ ಅಮೆರಿಕಾದಾಗ ಸರಳ ಭಾಷಾ ಕರಡು ನಿಯಮ ಕಾಯಿದೆ ಅಂತ ಜಾರಿಗೆ ಬಂದದ. ಬ್ರಿಟಿಷ್ ಸರ್ಕಾರದವರು ಸರಳ ಭಾಷಾ ಆಯೋಗ ಅಂತ ಸ್ಥಾಪನೆ ಮಾಡಿದ್ದಾರ. ಸರ್ಕಾರದ ಎಲ್ಲಾ ಕಾನೂನುಗಳು ಸರಳ ಅದಾವ ಇಲ್ಲ ಅಂತ ನೋಡೋದು ಇವರ ಕೆಲಸ.

ಯುರೋಪಿಯನ್ ಯೂನಿಯನ್‍ನವರು ಒಂದು ಹೊಸ ಕಾನೂನು ಮಾಡ್ತಾ ಇದ್ದಾರ. ಅದರ ಪ್ರಕಾರ ಜನರು ಖರೀದಿ ಮಾಡುವ ಎಲ್ಲ ಸಾಮಾನುಗಳ ಮೇಲಿನ ಲೇಬಲ್‍ಗಳು ಸರಳ ಭಾಷೆಯೊಳಗ ಇರಬೇಕು. ಅದು 2021ರಲ್ಲಿ ಜಾರಿಗೆ ಬರ್ತದ.

ಈ ಜನ ಆಂದೋಲನ ಯೂರೋಪಿನಲ್ಲಿ 60-70ರ ದಶಕದೊಳಗ ಶುರು ಆತು. ಡೇವಿಡ್ ಮಾಲೀನಕಾಫ, ರಿಚರ್ಡ್ ವಿಡಿಕ, ಮಾರ್ಟಿನ್ ಕಟ್ಸ್, ಕ್ರಸಿ ಮೇಹರ ಮುಂತಾದ ಭಾಷಾತಜ್ಞ, ಹೋರಾಟಗಾರರು ಜನಜಾಗೃತಿ ಮೂಡಿಸಿ, ಸರಕಾರಗಳನ್ನು ಒಪ್ಪಿಸಿ ಜನಪರ ಭಾಷೆ ಬಳಕೆ ಜನಪ್ರಿಯ ಆಗೋ ಹಂಗ ನೋಡಿಕೊಂಡಾರ.

ಆದರ ನಾವು ಇನ್ನೂ ಅವರ ಬಗ್ಗೆ ಸುದ್ದಿ ಓದೋದರಾಗ ಇದ್ದೇವಿ. ಇರುವ ಒಂದು ಮಾಹಿತಿ ಹಕ್ಕು ಕಾಯಿದೆಯ ಮೂಲ ಸ್ವರೂಪ ಉಳಿಸಿಕೊಳ್ಳಲಿಕ್ಕೆ ನಮಗ ಆಗವಲ್ಲತು.

ಆಳುವ ಪಕ್ಷಗಳು ತಾವು ಮಾಡುವ ಎಲ್ಲ ಕೆಲಸಗಳಿಗೂ ನಮ್ಮಿಂದ ಪೂರ್ವ ಅನುಮತಿ ತೊಗೊಂಡಬಿಟ್ಟವರ ಗತೆ ಮಾಡಲಿಕ್ಕೆ ಹತ್ತಿದಾರು. ಅವರಿಗೆ ಯಾವ ಜವಾಬ್ದಾರಿನೂ ಇಲ್ಲ. ನಿಮಗ ಜವಾಬ್ದಾರಿ ಇಲ್ಲ ಅಂತ ಹೇಳೋ ಧೈರ್ಯ ಯಾರಿಗೂ ಇಲ್ಲ.

ಆದರ ನಮ್ಮ ಸಾಂಸ್ಕೃತಿಕ ಇತಿಹಾಸ ನೋಡಿದರ ನಮಗ ಸರಳ ಭಾಷೆಯ ಬಗ್ಗೆ ಹೊರಗಿನವರು ಹೇಳಿಕೊಡಬೇಕಾಗಿಲ್ಲ ಅಂತ ಅನ್ನಿಸತದ.

ಉದಾಹರಣೆಗೆ ಸಂಸ್ಕೃತದ ಮಹಾ ಕಾವ್ಯಗಳನ್ನ ಕನ್ನಡಕ್ಕೆ ತಂದ ಪಂಪ – ಕುಮಾರವ್ಯಾಸನಂತವರು, ಭಕ್ತಿ ಪಂಥದ ಸಂತರು, `ಓಣಿಯ ಭಾಷೆಯಲ್ಲಿ’ ಅಸಂಖ್ಯ ಪದ ಹಾಡಿದ ಹರಿದಾಸರು, ಮತ್ತು ವಚನ ರಚನೆ ಮಾಡಿದ ಶರಣರು ಸರಳ ಭಾಷೆಯ ಬಗ್ಗೆ ಮಾತು ಆಡದೆ ಮಾಡಿ ತೋರಿಸಿದವರು.

`ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಅನ್ನುವ ಮಾತಿನ ಸರಳತೆ ಕೋಡ್ ಆಫ್ ಹಮ್ಮುರಬಿಯಿಂದ ಹಿಡಕೊಂಡು ಭಾರತೀಯ ಸಂವಿಧಾನದ ವರೆಗೂ ಧ್ವನಿಸುತ್ತದ.

ಕೆಲವು ವಚನಕಾರರು ಅರ್ಥ ಆಗಲಾರದ ವಚನ ಬರೆದರು, ಇನ್ನೂ ಕೆಲವರು ಬೆಡಗಿನ ವಚನ ಬರೆದರು ಅನ್ನುವುದ ಖರೆ.

ಹನ್ನೆರಡನೇ ಶತಮಾನದೊಳಗ ಸಾಧ್ಯ ಆಗಿದ್ದು 20ನೇ ಶತಮಾನದೊಳಗ ಯಾಕ್ ಸಾಧ್ಯ ಆಗತಾ ಇಲ್ಲ? ಇದಕ್ಕ ಉತ್ತರ ಸರಳ ಇಲ್ಲ.

ಇಲ್ಲ ಅನ್ನುವದಕ್ಕ ಅಪವಾದವಾಗಿ ಕೆಲವರು ಪ್ರಯತ್ನ ಮಾಡಿದರು. ಅದರಲ್ಲಿ ಮುಖ್ಯವಾದವರು ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಜ್ಯೋತಿ ಸನ್ಯಾಲ್ ಅವರು. ಅವರು ಪ್ಲೇನ್ ಇಂಗ್ಲೀಷ್ ಇಂಡಿಯಾ ಅಂತ ಒಂದು ಸಂಸ್ಥೆ ಶುರು ಮಾಡಿದರು. ಇಂಗ್ಲೀಷ್ ಮಾತು ಆಡುವ ಪ್ರತಿಯೊಬ್ಬ ಭಾರತೀಯ ಓದಲೇಬೇಕಾದ ಪುಸ್ತಕ ಅಂತ ಅನ್ನಿಸಿಕೊಳ್ಳುವ `ಇಂಡ್ಲಿಷ’ ಅನ್ನುವ ಮಜವಾದ ಹೆಸರಿನ ಪುಸ್ತಕ ಬರೆದರು.

ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ಪ್ರಥಮ ಅನ್ನುವ ದಿ ಸ್ಟೇಟ್ಸ್‌ಮನ್ ಪತ್ರಿಕೆ ಭಾಷಾ ಬಳಕೆ ಕೈಪಿಡಿ ಪುಸ್ತಕ ಬರೆದರು.

ಕಲ್ಕತ್ತಾದ ಹತ್ತಿರ ಹಳ್ಳಿಯಲ್ಲಿ ಬೆಳೆದ ಅವರು ಜಾಧವಪುರ ವಿಶ್ವವಿದ್ಯಾಲಯದೊಳಗ ಸಾಹಿತ್ಯ ಪದವಿ ಪಡೆದು ಕಲ್ಕತಾ-ಬೆಂಗಳೂರುಗಳಲ್ಲಿ ಕೆಲಸ ಮಾಡಿದರು. ವಿಶ್ವದ ಅತಿ ಶ್ರೇಷ್ಟ ಪತ್ರಿಕೆಗಳನ್ನು ಓದಿ – ಮನನ ಮಾಡಿ – ಸರಳ ಭಾಷೆಯ ಅಗತ್ಯವನ್ನು ಮನದಟ್ಟುಮಾಡಿಕೊಂಡರು.

ತಮ್ಮ ನಿವೃತ್ತಿ ನಂತರ ಲಂಡನ್ನಿನ ಮಾರ್ಟಿನ್ ಕಟ್ಸ್ ಅವರ ಸಹಯೋಗದಲ್ಲಿ ಸರಳ ಭಾಷೆ ಆಂದೋಲನ ಶುರು ಮಾಡಿದರು. ಐಸಿಐಸಿಐ ಬ್ಯಾಂಕ್‍ನಂತಹ ಕೆಲವು ಕಂಪನಿಗಳ ನೀತಿ- ನಿಯಮಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತಿದ್ದಿ ಬರೆದರು.

ಭಾರತೀಯ ಕಾನೂನುಗಳು ಇನ್ನೂ ಬ್ರಿಟಿಷರ ನೆರಳಿನಲ್ಲಿ ಇವೆ. ಇವು ಬದಲು ಆಗದೆ ಇದ್ದರೆ ಅಳುವವರು ಎಷ್ಟು ಬದಲು ಆದರೂ ಕೂಡ ಬ್ರಿಟೀಷ್ ಆಡಳಿತವೇ ಮುಂದುವರೆಯುತ್ತದೆ ಅಂತ ಅವರು ಹೇಳುತ್ತಾ ಇದ್ದರು.

ಪತ್ರಿಕೆಗಳು ಸರಳವಾದ ಭಾಷೆ ಬಳಸಬೇಕು. ಇಲ್ಲದೆ ಹೋದಲ್ಲಿ ಇನ್ನೂ ಅನೇಕ ಶತಮಾನಗಳು ಹೋದರೂ ಕೂಡ ಓದುಗರಿಗೆ ಬಜೆಟ್ ಮರುದಿನದ ಪತ್ರಿಕೆಯಲ್ಲಿ ಅರ್ಥವಾಗೋದಿಲ್ಲ. ಯಾವ ಮುಖ್ಯ ಕಾಯ್ದೆ, ತಿದ್ದುಪಡಿ, ನೀತಿ ನಿಯಮ ಯಾವುದೂ ಓದುಗರನ್ನು ಮುಟ್ಟುವುದಿಲ್ಲ, ಅಂತ ಅವರು ಪ್ರತಿಪಾದನೆ ಮಾಡುತ್ತಿದ್ದರು.

ಅವರು ಹೋದ ಮೇಲೆ ಕೆಲವು ಬದಲಾವಣೆಗಳು ಅಗಿದಾವ. ರೋಹಿಣಿ ನಿಲೇಕಣಿ ಅವರು ನಡೆಸುವ `ನ್ಯಾಯ’ ಅನ್ನುವ ಸಂಸ್ಥೆ ವಿವಿಧ ಜನೋಪಯೋಗಿ ಕಾಯಿದೆಗಳ ಸರಳ ರೂಪಗಳನ್ನು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟ ಮಾಡತದ.

ಸುಭಾಷ್ ವಿಜಯರಣ ಅನ್ನುವ ವಕೀಲರು ಸುಪ್ರೀಂ ಕೋರ್ಟ್‍ದೊಳಗ ಎಲ್ಲ ಕಾಯಿದೆಗಳು ಸರಳ ಭಾಷೆ ಒಳಗ ಇರಬೇಕು ಅನ್ನುವ ಅರ್ಜಿ ದಾಖಲು ಮಾಡಿದ್ದಾರ. ಯುವ ವಕೀಲರಿಗೆ ಸರಳ ಭಾಷೆಯಲ್ಲಿ ಕಾಯಿದೆ ಕರಡು ತಯಾರಿ ಮಾಡುವ ತರಬೇತಿ ಕೊಡಬೇಕು ಅಂತ ಅದರೊಳಗ ಬೇಡಿಕೆ ಇಟ್ಟಾರ. ಮಹೇಶ್ ಶಾರದ ಅನ್ನುವ ನಿವೃತ ನ್ಯಾಯಾಧೀಶರು ನ್ಯಾಯಾಲಯಗಳಲ್ಲಿ ಸರಳ ಭಾಷೆಯ ಅವಶ್ಯಕತೆಗೆ ಬೆಂಬಲ ಸೂಚಿಸಿದ್ದಾರ.

ಆದರ ಅದು ನಮ್ಮ ಜನರಿಗೆ ಇನ್ನೂ ಅವಶ್ಯಕ ಅನ್ನಿಸಿಲ್ಲ. ಹಂಗಾರ ಇದು ನಮಗ ಬ್ಯಾಡ್ ಏನು? ಪೀಜಾ, ಬರ್ಗರ್ – ಕೋಲ್ಡ್ ಕಾಫಿ ಎಲ್ಲ ಬೇರೆ ದೇಶದವರನ್ನು ನೋಡಿ ನಾವು ಕಾಪಿ ಮಾಡತೆವಿ, ಆದರ ಇಂಥಾ ಒಳ್ಳೆ ವಿಚಾರ ಯಾಕ ನಾವು ಪಾಲಿಸೋದಿಲ್ಲ?

ಯಾಕ್ ಅಂದ್ರ ನಾವು ಸರಕಾರ ನಡಸಲಿಕ್ಕೆ ಕೆಲವು ಜನರಿಗೆ ಹೊರಗುತ್ತಿಗೆ ಕೊಟ್ಟಿರತೇವು. ಆದರ ಬ್ಯಾರೆ ವಿಷಯ ಎಲ್ಲ ನಾವು ಸ್ವಂತ ಪಾಲನೆ ಮಾಡ್ತೇವಿ. ಅಷ್ಟ.


ಇದನ್ನೂ ಓದಿ: ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕನ್ನಡದ ಮಟ್ಟಿಗಂತೂ, ಸಂಸ್ಕೃತ ಪದಗಳನ್ನು ಕನ್ನಡ ಬರವಣಿಗೆಗೆ ನುಸುಳಿಸಿರುವುದರಿಂದ ಕನ್ನಡ ಕಗ್ಗಂಟಾಗಿದೆ.
    ವಿಜಾತಿಯ ಒತ್ತಕ್ಷರಗಳಿಂದ,ಮಹಾಪ್ರಾಣ ಅಕ್ಕರಗಳನ್ನೊಳಗೊಂಡ ಪದಗಳು ಕನ್ನಡಬೇರಿನ ಪದಗಳಲ್ಲ ಎಂಬ ಕನ್ನಡನುಡಿಯರಿಗರ ಮಾತನ್ನು ಲೆಕ್ಕಕ್ಕೆ ತೆಗೆದುಕೊಂಡು ಮುನ್ನಡೆಯದಿದ್ದರೆ ಕನ್ನಡ ಮತ್ತಷ್ಟು ಕಗ್ಗಂಟಾಗಲಿದೆ.
    ಉದಾ:-ಪ್ರಥಮ…ಮೊದಲ
    ದ್ವಿತೀಯ… ಎರಡನೆಯ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...