ಪ್ರಸ್ತಾವನೆ

ಬಸವಾದಿ ಶರಣರು ಕಟ್ಟಿದ ಕಾಯಕ ಮೀಮಾಂಸೆ ಏನಿದೆ – ಸಿದ್ಧಾಂತ ಏನಿದೆ ಇದು ಜಾಗತಿಕ ಆಯಾಮವುಳ್ಳ, ಸಿವಿಲೈಸೇಶನಲ್ ಡೈಮೆಂಷನ್‍ನ್ನಿನ ಒಂದು ಸಿದ್ಧಾಂತ. ಜಗತ್ತಿನ ನಾಗರಿಕತೆಗೆ ವಚನ ಸಂಸ್ಕೃತಿಯು ನೀಡಿದ ಕೊಡುಗೆ ಕಾಯಕ ಸಿದ್ಧಾಂತ. ಜಗತ್ತಿನ ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಸಲ್ಲಬಹುದಾದ ಸಿದ್ಧಾಂತ ಇದು. ಇದು ಸೀಮಿತ ಅರ್ಥದ ಧಾರ್ಮಿಕ ಚೌಕಟ್ಟನ್ನು ಮೀರಿದ ಒಂದು ಸಿದ್ಧಾಂತ. ಕಾಯಕವು ಒಂದು ನೈತಿಕ ಪ್ರಣಾಳಿಕೆ – ಒಂದು ನೈತಿಕ ಜವಾಬ್ದಾರಿ. ಇದು ಧಾರ್ಮಿಕ ಜವಾಬ್ದಾರಿಯಲ್ಲ.

ಕಾಯಕವು ಒಂದು ರಿಚುವಲ್ ಅಲ್ಲ. ಇದು ಧಾರ್ಮಿಕಾಚರಣೆಯಲ್ಲ. ದಕ್ಷಿಣೆ, ಹರಕೆಗಳ ಸಂಗತಿಯಲ್ಲ. ಕಾಯಕ ಎಂದರೆ ಶರೀರಶ್ರಮ(ಬ್ರೆಡ್ ಲೇಬರ್). ಕಾಯಕ ಎಂದರೆ ದುಡಿಮೆ. ಕಾಯಕ ಎಂದರೆ ಕೆಲಸ. ವಚನಕಾರರು ಇದನ್ನು ‘ಕ್ರೀ’ ಎಂದೂ ಕರೆದಿದ್ದಾರೆ. ಕಾಯಕ-ಕ್ರೀ ಎಂಬುದಕ್ಕೆ ಲೇಬರ್, ಆಕ್ಷನ್, ಜಾಬ್, ವೃತ್ತಿ, ಕಸುಬು ಮುಂತಾದ ಅರ್ಥಗಳಿವೆ. ಕಾಯಕ ಎನ್ನುವುದು ಬದುಕು. ದುಡಿಮೆ ಎಂಬುದಕ್ಕೆ ‘ಬದುಕಿಗೋಗಿದ್ದಾರೆ’ ಎನ್ನವ ಪರಿಭಾಷೆಯ ಬಳಕೆ ನಮ್ಮ ಗ್ರಾಮೀಣ ಭಾಗದಲ್ಲಿದೆ. ಕಾಯಕ ಎಂದರೆ ಜೀವನ. ವಚನ ಸಂಸ್ಕೃತಿಯಲ್ಲಿ ಬದುಕೇ ದುಡಿಮೆ; ದುಡಿಮೆಯೇ ಬದುಕು. ದುಡಿಮೆ ಮತ್ತು ಬದುಕು ಬೇರೆ ಬೇರೆಯಲ್ಲ. ಕಾಯಕ ಸಿದ್ಧಾಂತವು ಹೇಗೆ ಅಭಿವೃದ್ಧಿಯ ಒಂದು ಕಾರ್ಯತಂತ್ರ ಎಂಬುದನ್ನು ಕುರಿತಂತೆ ಇಲ್ಲಿ ಕೆಲವು ವಿಚಾರಗಳನ್ನು ಚರ್ಚಿಸಲಾಗಿದೆ. ರವೀಂದ್ರನಾಥ್ ಟಾಗೂರ್ ಅವರು ತಮ್ಮ ಒಂದು ಕವಿತೆಯಲ್ಲಿ ‘ಕಾಯಕವೇ ದೇವರು’ ಎಂಬುದರ ಬಗ್ಗೆ ಚರ್ಚೆ ಮಾಡುತ್ತಾ “HE (GOD) is there where tiller is tilling the hard ground, and where the path maker is breaking the stones, HE is with them in sun and in shower, and his garment is covered with dust—” ಎನ್ನುತ್ತಾರೆ. ಜಿ. ಎಸ್. ಶಿವರುದ್ರಪ್ಪ ಅವರ ಒಂದು ಕವನದಲ್ಲಿ ಶಿವನನ್ನು ಕುರಿತು ‘ಉಡುಗಣವೇಷ್ಟಿತ ದಿವ್ಯ ಸುಶೋಭಿತ ದಿವ್ಯಾಂಬರ ಸಂಚಾರಿ, ಕಣ್ಣ ನೀರಿನಲಿ ಮಣ್ಣ ಧೂಳಿನಲಿ ಹೊರಳುತ್ತಿರುವ ಸಂಚಾರಿ’. ಈ ಕವನ ಹೀಗೆ ಕೊನೆಯಾಗುತ್ತದೆ ‘ದೀನ ಅನಾಥರ ದುಃಖಿ ದರಿದ್ರರ ಮುರುಕು ಗುಡಿಸಿನಲಿ ಉಪವಾಸಿ’. ಇಲ್ಲಿ ದೇವರು ಎಲ್ಲಿರುತ್ತಾನೆ ಅಥವಾ ಯಾರ ಜೊತೆಯಲ್ಲಿರುತ್ತಾನೆ ಎಂಬುದನ್ನು ಕವಿ ಹೇಳುವಂತಿದೆ.

ಕಾಯಕವೇ ದೇವರು, ಕಾಯಕವೇ ಆಧ್ಯಾತ್ಮ, ಕಾಯಕವೇ ಬದುಕು. ಇದನ್ನು ಜಗತ್ತಿನ ಚಿಂತಕರೆಲ್ಲರೂ ಒಪ್ಪಿದ್ದಾರೆ. ಗಾಂಧೀಜಿ, ಟಾಲ್‍ಸ್ಟಾಯ್, ರಸ್ಕಿನ್, ಶೂಮ್ಯಾಕರ್ – ಹೀಗೆ ಅನೇಕ ತತ್ವಜ್ಞಾನಿಗಳು ದುಡಿಮೆಯ ಬಗ್ಗೆ ಮಾತನಾಡಿದ್ದಾರೆ.

ಕರ್ಮ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವಂತೆ ಕಾಯಕವು ದೈವ ನಿಯಾಮಕವಲ್ಲ. ವೈದಿಕದಲ್ಲಿ ದೇವರು ದುಡಿಮೆಯ ಒಂದು ಸಂಗತಿ. ಇದಕ್ಕಾಗಿಯೇ ಅದು ದಾನ, ದತ್ತಿ, ದಕ್ಷಿಣೆ, ಉಂಬಳಿ ಮುಂತಾದ ಪರಾವಲಂಬಿತನದ ಕ್ರಮಗಳನ್ನು ರೂಪಿಸಿತ್ತು. ಕಾಯಕವು ದೈವಿಕವಲ್ಲ. ಇದೊಂದು ಸಾಮಾಜಿಕ ವ್ಯವಸ್ಥೆ. ಕಾಯಕದ ಫಲವೇ ಉತ್ಪಾದನೆ. ಈ ಹಿನ್ನೆಲೆಯಲ್ಲಿ ಕಾಯಕ ಮೀಮಾಂಸೆಯನ್ನು ಅಭಿವೃದ್ಧಿ ಪ್ರಣಾಳಿಕೆ ಎಂದು ಕರೆಯಲಾಗಿದೆ. ಕಾಯಕ ಸಿದ್ಧಾಂತಕ್ಕೆ ವರ್ತಮಾನ ಸ್ಪಂದಿ ಗುಣವಿದೆ. ವಚನ ಸಂಸ್ಕೃತಿಯ ಕಾಯಕ ಸಿದ್ಧಾಂತದ ಮಹತ್ವ ಎಲ್ಲಿದೆ ಎಂದರೆ ಸಮಕಾಲೀನ ಸಮಸ್ಯೆಗಳನ್ನು ಅರ್ಥ ಮಾಡಿಸುವ ಅದರ ಗುಣದಲ್ಲಿದೆ. ನಾವು ಇಂದು ಏನೆಲ್ಲ ಮಾತನಾಡುತ್ತಿದೇವೆಯೋ ಅಂದರೆ ಬಡತನ, ಹಸಿವು, ದುಡಿಮೆ, ಒಡಲು, ಕೂಲಿ, ಉದ್ಯೋಗ, ಸಮಾನತೆ, ಅಸ್ಪೃಶ್ಯತೆ, ತಾರತಮ್ಯ, ಲಿಂಗ ಸಮಾನತೆ, ಶ್ರೇಣೀಕರಣ ಮುಂತಾದ ಸಂಗತಿಗಳ ಬಗ್ಗೆ ವಚನಕಾರರು ಚರ್ಚೆ ಮಾಡಿದ್ದಾರೆ. ಈ ಕಾರಣಕ್ಕೆ 12ನೆಯ ಶತಮಾನದ ಕಾಯಕ ಸಿದ್ಧಾಂತವು ನಮಗೆ 21ನೆಯ ಶತಮಾನದಲ್ಲಿಯೂ ಅರ್ಥಪೂರ್ಣ, ಪ್ರಸ್ತುತ ಮತ್ತು ಉಪಯುಕ್ತ.

ಕಾಯಕವು ಒಂದು ಹಕ್ಕು. ಇದು ಹಂಗಿನ ಸಂಗತಿಯಲ್ಲ. ವೈದಿಕದಂತೆ ಇದು ಕರ್ತವ್ಯದ, ಸೇವೆಯ ಸಂಗತಿಯಲ್ಲ. ಕಾಯಕವನ್ನು ‘ಹಕ್ಕುಗಳನ್ನೊಳಗೊಂಡ ಕರ್ತವ್ಯ’ ಎಂದು ಕರೆಯಬಹುದು. ವೈದಿಕಕ್ಕೆ ಕರ್ತವ್ಯ ಪ್ರಧಾನವಾದರೆ ಬಸವ ಸಂವಿಧಾನದಲ್ಲಿ ಹಕ್ಕು ಮುಖ್ಯ. ವೈದಿಕದಲ್ಲಿರುವುದು ‘ಕರ್ತವ್ಯವನ್ನೊಳಗೊಂಡ ಹಕ್ಕು’. ಅಲ್ಲಿ ಕರ್ತವ್ಯ ಮಾಡುವುದೊಂದು ಹಕ್ಕು. ಅಲ್ಲಿ ಇದು ಹಂಗಿನ ಸಂಗತಿ.

ಅನೇಕ ಸಂದರ್ಭದಲ್ಲಿ ನಾವು ವಚನ ಸಂಸಂಸ್ಕೃತಿಯನ್ನು, ಕಾಯಕ ಸಿದ್ಧಾಂತವನ್ನು ವೇದಾಗಮ ಪ್ರಣೀತ ಸಿದ್ಧಾಂತಕ್ಕೆ ಪರ್ಯಾಯವಾದುದು ಎಂದು ಹೇಳುತ್ತಿರುತ್ತೇವೆ. ಇದು ಒಂದು ಹಂತದವರೆಗೆ ಸರಿ. ಆದರೆ ಇದು ಪೂರ್ಣ ಸತ್ಯವಲ್ಲ. ಏಕೆಂದರೆ ಕಾಯಕ ಸಿದ್ಧಾಂತವು ಒಂದು ಸರ್ವತಂತ್ರಸ್ವತಂತ್ರ ಪ್ರಣಾಳಿಕೆ. ಅದು ಒಂದು ಸ್ವತಂತ್ರ ಸಿದ್ಧಾಂತವಾಗಿ ನಿಲ್ಲಬಲ್ಲದು. ಇದೊಂದು ಸಮಾನತೆಯನ್ನು ಅಂತರ್ಗತ ಮಾಡಿಕೊಮಡು ಸಿದ್ಧಾಂತ. ಆದರೆ ಕರ್ಮ ಸಿದ್ಧಾಂತವನ್ನು ಬೋಧಿಸುವ ವೈದಿಕವು ಮೂಲದಲ್ಲಿಯೇ ಅಸಮಾನತೆಯ, ತಾರತಮ್ಯದ ಸಿದ್ಧಾಂತವಾಗಿದೆ. ಸಮಾಜವನ್ನು ಒಡೆಯುವುದೇ ಅದರ ಮೂಲ ಗುಣ. ಚಾತುರ್ವರ್ಣವು ಮೂಲದಲ್ಲಿಯೇ ಅಸಮಾನತೆಯ ಒಂದು ವ್ಯವಸ್ಥೆ. ಇದರಲ್ಲಿ ತ್ರೈವರ್ಣೀಕರಿದ್ದಾರೆ. ಶೂದ್ರರಿದ್ದಾರೆ. ಈ ನಾಲ್ಕು ವರ್ಣಗಳಿಗೆ ಹೊರತಾದ ದಲಿತರು ಮತ್ತು ಆದಿವಾಸಿಗಳಿದ್ದಾರೆ. ಮೇಲಾಗಿ ಎಲ್ಲ ವರ್ಣಗಳ ಮಹಿಳೆಯರು ಶೂದ್ರರು! ಅಸಮಾನತೆಯು ಚಾತುರ್ವರ್ಣದ ಅಂತರ್ಗತ ಗುಣ. ಈ ಬಗೆಯ ಅಸಮಾನತೆಯು ಕಾಯಕ ಸಿದ್ಧಾಂತದಲ್ಲಿಲ್ಲ. ವೈದಿಕ-ಚಾತುರ್ವರ್ಣವು ಅಸಮಾನತೆಯಿಂದ ಕೂಡಿರುವುದರಿಂದ ಅಲ್ಲಿ ಎಲ್ಲರ ಅಭಿವೃದ್ಧಿ ಎನ್ನುವುದು ಸಾಧ್ಯವಿಲ್ಲ ಮತ್ತು ಅದಕ್ಕೆ ‘ಎಲ್ಲರನ್ನು ಒಳಗೊಳ್ಳುವ’ ಗುಣವಿಲ್ಲ.

ದೇವರೇ ದುಡಿಮೆ: ದುಡಿಮೆಯೇ ದೇವರು

ಚಾತುರ್ವರ್ಣ ವ್ಯವಸ್ಥೆಯು ದೇವರನ್ನು ದುಡಿಮೆಯ ಸಾಧನವನ್ನಾಗಿ ಮಾಡಿಕೊಂಡಿರುವುದನ್ನು ವಿವರಿಸುವ ಅಗತ್ಯವಿಲ್ಲ. ಅಲ್ಲಿ ದೇವರೇ ದುಡಿಮೆ. ಇದಕ್ಕೆ ಅದು ದೇವಾಲಯಗಳನ್ನು ಅಡಿಪಾಯವನ್ನಾಗಿ ಮಾಡಿಕೊಂಡಿದೆ. ದೇವಾಲಯಗಳಿಲ್ಲದೆ ಕರ್ಮ ಸಿದ್ಧಾಂತಕ್ಕೆ ಅಥವಾ ಚಾತುರ್ವರ್ಣಕ್ಕೆ ಅಸ್ತಿತ್ವವೇ ಇಲ್ಲ. ಇಂದಿಗೂ ಇದನ್ನು ಚಾತುರ್ವರ್ಣವು ಊರ್ಜಿತಗೊಳಿಸಿಕೊಂಡು ಬಂದಿದೆ. ಕೆಲವು ದೇವಾಲಯಗಳು ಅಪಾರ ಸಂಪತ್ತಿನ ಭಂಡಾರಗಳಾಗಿವೆ. ಇದಕ್ಕೆ ಉದಾಹರಣೆಗಳ ಅಗತ್ಯವಿಲ್ಲ. ದೇವಾಲಯಗಳನ್ನು ಸಂಪತ್ತಿನ ಆಗರವನ್ನಾಗಿ ಮಾಡಿಕೊಳ್ಳಲು ವೈದಿಕರು ದಾನ(ಗೋದಾನ, ಭೂದಾನ, ವಸ್ತ್ರ ದಾನ, ಬಂಗಾರ ದಾನ ಮುಂತಾದವು), ದಕ್ಷಿಣೆ, ಮುಡಿಪು, ವ್ರತಗಳು, ಉಪವಾಸ, ಸಂಕಲ್ಪಗಳು, ಯಜ್ಞ, ಯಾಗಗಳು ಮುಂತಾದವುಗಳ ಮೂಲಕ ಹಣ ಸಂಪಾದಿಸುವುದೇ ದೇವಾಲಯಗಳ ಕೆಲಸವಾಗಿದೆ. ಈ ಎಲ್ಲ ದೇವಾಲಯಗಳ ಸಂಪತ್ತಿನ ಮೂಲ ಶೂದ್ರರು-ಅತಿಶೂದ್ರರ ದುಡಿಮೆಯಾಗಿದೆ. ಪಾಪ-ಪುಣ್ಯ, ಸ್ವರ್ಗ-ನರಕಗಳನ್ನು ಸೃಷ್ಟಿ ಮಾಡಿ, ಸಾಮಾನ್ಯ ಜನರ ಶೋಷಣೆಗೆ ಅದು ವ್ಯವಸ್ಥಿತ ಕ್ರಮಗಳನ್ನು ರೂಪಿಸಿತ್ತು. ಇಲ್ಲಿ ದೇವರೇ ದುಡಿಮೆ.

ಇದಕ್ಕೆ ಬದಲಾಗಿ ಬಸವಾದಿ ಶರಣರು ರೂಪಿಸಿದ್ದು ದೇವಾಲಯ-ಮುಕ್ತ ದಾಸೋಹ ಪ್ರಣೀತ, ವ್ಯಕ್ತಿ ಕೇಂದ್ರಿತ ಪ್ರಣಾಳಿಕೆ. ಇಲ್ಲಿ ಪ್ರತಿಯೊಬ್ಬರೂ ದುಡಿಯಬೇಕು; ದುಡಿಮೆಯಲ್ಲಿ ಒಂದು ಭಾಗವನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕು. ಕಾಯಕ-ದಾಸೋಹ ಜೋಡಿ ಸಿದ್ಧಾಂತಗಳು. ದಾನ ಮಾಡುವುದು, ಬಡವರಿಗೆ ನೆರವು ನೀಡುವುದು, ಸಮಾಜ ಸೇವೆ ಮುಂತಾದ ಸಂಗತಿಗಳು ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಇವೆ. ಮೊಹರಮ್ ಆಚರಣೆಯಲ್ಲಿ ಆಹಾರ ನೀಡುವುದು ಇಸ್ಲಾಮಿನಲ್ಲಿರುವ ಆಚರಣೆಯಾದರೆ (ಜಕಾತ್-ಶುದ್ಧೀಕರಣ), ಕ್ರಿಶ್ಚಿಯನ್ನಿನಲ್ಲಿ ಆಮ್ಸಗಿವಿಂಗ್ ಒಂದು ಆಚರಣೆಯಾಗಿದೆ.

ಸಿಖ್ ಧರ್ಮದಲ್ಲಿ, ಜೈನ ಧರ್ಮದಲ್ಲಿಯೂ ಇಂತಹ ಆಚರಣೆಗಳಿವೆ. ಆದರೆ ಇವೆಲ್ಲವೂ ಪುಣ್ಯ ಸಂಪಾದನೆ, ಪಾಪ ಕಳೆದುಕೊಳ್ಳುವ ಆಚರಣೆಗಳಾಗಿವೆ. ಇಲ್ಲಿ ಇವೆಲ್ಲ ಉಳ್ಳವರಿಗೆ ಸಂಬಂಧಿಸಿದ ಸಂಗತಿಗಳಾಗಿವೆ. ಆದರೆ ದಾಸೋಹವು ಪ್ರತಿಯೊಬ್ಬರೂ ಆಚರಿಸಬೇಕಾದ ಒಂದು ನಡೆ. ಇದು ಪುಣ್ಯ ಸಂಪಾದನೆಯ ಅಥವಾ ಪಾಪ ಕಳೆದುಕೊಳ್ಳುವ ಕ್ರಿಯೆಯಲ್ಲ.

ಚಾತುರ್ವರ್ಣ ಪ್ರಣೀತ ಕರ್ಮ ಸಿದ್ಧಾಂತಕ್ಕೂ ಮತ್ತು ಬಸವ ಪ್ರಣೀತ ಕಾಯಕ ಸಿದ್ಧಾಂತಕ್ಕೂ ನಡುವಿನ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕರ್ಮ ಸಿದ್ಧಾಂತದಲ್ಲಿ ಕರ್ಮ ಮಾಡುವುದು ಮನುಷ್ಯನ ಧರ್ಮ. ಅದರ ಫಲಗಳ ಬಗ್ಗೆ ನಿರೀಕ್ಷೆ ಮಾಡುವುದು ತಪ್ಪು ಹೀಗೆ ಹೇಳಿದ ತಕ್ಷಣ ಇಹ-ಪರ ಲೋಕಗಳ ಸಂಗತಿ ಬಂದು ಬಿಡುತ್ತದೆ. ಇಹ ಲೋಕದ ಕರ್ಮವು ಪರಲೋಕದಲ್ಲಿ ಸ್ಥಾನ ಪಡೆಯವ ಉದ್ದೇಶ ಹೊಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಘಟ್ಟಿವಾಳಯ್ಯನ ‘ಇಹವೂ ಇಲ್ಲ, ಪರವೂ ಇಲ್ಲ, ಪರಾತ್ಪರವೂ ಇಲ್ಲ’ ಎಂಬ ಮಾತು ಬಹಳ ಮುಖ್ಯ. ಇಲ್ಲಿ ಕರ್ಮ ಮಾಡುವ ಉದ್ದೇಶ ಜೀವನ ಸಂತೋಷವಲ್ಲ. ಕರ್ಮ ಮಾಡುವುದು ಕರ್ತವ್ಯ. ಭಗವಾನ್ ಕೃಷ್ಣನ ಪ್ರಕಾರ ಫಲಗಳ ಉದ್ದೇಶದಿಂದ ಕರ್ಮ ಮಾಡುವುದು ಸ್ವಾರ್ಥ. ಆದರೆ ಕಾಯಕ ಸಿದ್ಧಾಂತದ ಮೂಲ ಪ್ರಮೇಯವು ಇದಕ್ಕೆ ತದ್ವಿರುದ್ಧವಾದುದಾಗಿದೆ. ಕಾಯಕದ ಉದ್ದೇಶ ಸ್ವಾರ್ಥವಲ್ಲ. ಅದರ ಗುರಿ ದಾಸೋಹ. ಕರ್ಮ ಸಿದ್ಧಾಂತದಲ್ಲಿ ದಾನ ಮಾಡುವುದು ಪುಣ್ಯ ಸಂಪಾದನೆಗಾಗಿ ಅಥವಾ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ. ಕರ್ಮಕ್ಕೆ ಫಲಾಪೇಕ್ಷೆ ಇರಬಾರದು ಎಂದು ಒಂದು ಕಡೆ ಹೇಳುವ ವೈದಿಕವು ಮತ್ತೊಂದು ಕಡೆ ದಾನವ ವಿಷಯ ಬಂದಾಗ ಅದು ಫಲಗಳ ಬಗ್ಗೆ ಮಾತನಾಡುತ್ತದೆ. ದಾನದಲ್ಲಿ ಸ್ವಾರ್ಥವು ಪರಮೋಚ್ಛ ಗುರಿ. ಕಾಯಕದ ಉದ್ದೇಶ ದಾಸೋಹ, ದಾಸೋಹವು ಎಲ್ಲರೂ – ಬಡವ-ಬಲ್ಲಿದ – ಭಿನ್ನವಿಲ್ಲದೆ ಮಾಡಬೇಕಾದ ಕಾರ್ಯ. ಕಾಯಕವೂ ಎಲ್ಲರಿಗೂ ಅನ್ವಯವಾಗುವ ಸಂಗತಿ. ಆಯ್ದಕ್ಕಿ ಮಾರಯ್ಯ ಗುರು ಲಿಂಗ ಜಂಗಮಗಳಿಗಿಂತ ಕಾಯಕ ಆದ್ಯತೆಯ ಸಂಗತಿ ಎಂದರೆ ನುಲಿಯ ಚಂದಯ್ಯ ಅವರು ಗುರುಲಿಂಗ ಜಂಗಮಗಳಿಗೂ ಕಾಯಕದಿಂದ ವಿನಾಯತಿಯಿಲ್ಲ ಎನ್ನುತ್ತಾರೆ.

ಕಾಯಕದಲ್ಲಿ ಲಿಂಗ ಬೇಧ ಮತ್ತು ಜಾತಿ ಬೇಧಗಳಿಲ್ಲ. ಅಲ್ಲಿ ಪವಿತ್ರ-ಅಪವಿತ್ರ ಎಂಬ ಭಿನ್ನತೆಗಳಿಲ್ಲ. ‘ಶಿವಾಲಯ ಮತ್ತು ಹೊಲಗೇರಿ’ಗಳು ನಿಂತಿರುವ ಭೂಮಿ ಒಂದೆ ಎನ್ನುತ್ತಾರೆ ಬಸವಣ್ಣ. ಆದರೆ ಕರ್ಮ ಸಿದ್ಧಾಂತದಲ್ಲಿ ಬೇಧವು ಅಂತರ್ಗತವಾಗಿದೆ. ಕರ್ಮವು ಪುರುಷರಿಗೆ ಸೀಮಿತವಾದ ಒಂದು ಸಂಗತಿ. ಏಕೆಂದರೆ ಮಹಿಳೆಯರಿಗೆ ಇಲ್ಲಿ ಮೋಕ್ಷವಿಲ್ಲ. ಆಕೆ ದ್ವಿಜಳಲ್ಲ. ಆದರೆ ಕಾಯಕ ಸಿದ್ಧಾಂತವನ್ನು ರೂಪಿಸಿದವರು, ಅದನ್ನು ಬದುಕಿದವರು ಮಹಿಳೆಯರು ಎಂಬುದನ್ನು ನಾವು ಮರೆಯಬಾರದು. ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಿಯಮ್ಮ, ಸತ್ಯಕ್ಕ, ಅಕ್ಕಮ್ಮ ಮುಂತಾದವರು ಕಾಯಕವನ್ನು ಬದುಕಿದವರು. ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡ ಅನುಭವ ಮಂಟಪದಲ್ಲಿ ಕಾಯಕವನ್ನು ಮರೆತು ವಾದ-ಸಂವಾದದಲ್ಲಿ ಮುಳುಗಿದ್ದಾಗ ‘ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ’ ಎಂದು ‘ತಿಪ್ಪೆಯ ತಪ್ಪಲ ಅಕ್ಕಿಯ ತಂದು’ ಕಾಯಕ ಮಾಡಬೇಕು ಎಂದು ಎಚ್ಚರಿಸುತ್ತಾಳೆ. ಮಾದಾರ ಧೂಳಯ್ಯನವರು ‘ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ’ ಪರಮೇಶ್ವರನನ್ನು ಕಾಣುತ್ತಾರೆ.

ಅಭಿವೃದ್ಧಿ ಪ್ರಣಾಳಿಕೆ

ದುಡಿಮೆ ಬಗ್ಗೆ, ಬೆವರಿನ ಬಗ್ಗೆ, ಅಸಹ್ಯಕರವಾದ, ಸೂತಕ ಎಂಬ ಮೈಲಿಗೆ ಭಾವನೆಯನ್ನು ಬೆಳೆಸಿದ್ದ ವೈದಿಕಕ್ಕೆ ಪ್ರತಿಯಾಗಿ ಬಸವಾದಿ ಶರಣರು ರೂಪಿಸಿದ್ದು ದುಡಿಮೆಯೇ ಕೈಲಾಸ ಎಂಬ ಸೂತ್ರ. ‘ದುಡಿಮೆಯ ಗೌರವ’ ಎಂಬುದನ್ನು ಆತ್ಯಂತಿಕ ರೀತಿಯಲ್ಲಿ ಪ್ರತಿಪಾದಿಸಿದ ಸಿದ್ಧಾಂತ ವಚನ ಸಿದ್ಧಾಂತ. ದುಡಿಮೆಯ ಮೂಲದಲ್ಲಿ ಲಿಂಗ ಸಮಾನತೆಯನ್ನು, ದುಡಿಮೆಯೇ ಬದುಕು ಎಂಬ ಸೂತ್ರಗಳನ್ನು ರೂಪಿಸಿದ್ದ ವಚನ ಸಂಸ್ಕೃತಿಯೇನಿದೆ ಇದು ಮೂಲತಃ ಅಭಿವೃದ್ಧಿ ಪ್ರಣಾಳಿಕೆಯಾಗಿದೆ. ವೈದಿಕದಲ್ಲಿ ಜ್ಞಾನ ಶ್ರೇಷ್ಠ, ದುಡಿಮೆ ಕನಿಷ್ಟ. ಇಲ್ಲಿ ದುಡಿಮೆಯು ಮೈಲಿಗೆ. ಚಾತುರ್ವರ್ಣದ ಈ ಸಿದ್ಧಾಂತವನ್ನು ಶರಣರು ಪ್ರಶ್ನೆ ಮಾಡಿದರು. ‘ಜ್ಞಾನದಲರಿದಡೇನಯ್ಯಾ, ಕ್ರಿಯನ್ನಾಚರಿಸದನ್ನಕ್ಕ’ ಎನ್ನುತ್ತಾನೆ ಅಮುಗೆ ದೇವಯ್ಯ, ‘ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ’ ಎನ್ನುತ್ತಾಳೆ ಆಯ್ದಕ್ಕಿ ಲಕ್ಕಮ್ಮ.

ಆಯ್ದಕ್ಕಿ ಲಕ್ಕಮ್ಮನು ‘ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು’ ಎಂದು ಕಾಯಕ ಮತ್ತು ಉತ್ಪಾದನೆಯ ಸಂಬಂಧವನ್ನು ಹೇಳುತ್ತಾಳೆ. ವಚನ ಸಂವಿಧಾನದಲ್ಲಿ ಸುಖ ಎನ್ನುವುದು ಕಾಯಕದಿಂದ ಬರುತ್ತದೆ. ‘ಸುಖವು ದೈವವೆನಲಾಗಿ ‘ಕ್ರಿ’ಯಲ್ಲಿರಯಬಂದಿತ್ತು’ ಎನ್ನುತ್ತಾರೆ ಸಿದ್ದರಾಮಣ್ಣಗಳು. ಕಾಯಕದಲ್ಲಿ ಶುದ್ಧ-ಅಶುದ್ಧಗಳಿಲ್ಲ. ಮೇಲು-ಕೀಳುಗಳಿಲ್ಲ. ‘ತಟ್ಟುವ ಮುಟ್ಟುವ ಬೇಧಗಳುನ್ನಬರ ಶರಣನಲ್ಲ’ ಎನ್ನುತ್ತಾರೆ ಸಿದ್ದರಾಮಣ್ಣಗಳು. ‘ದೇವ ಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ’ ಎನ್ನುತ್ತಾನೆ ಬಸವಣ್ಣ. ಶೂದ್ರರು, ಅತಿಶೂದ್ರರು, ಮಹಿಳೆಯರು — ಹೀಗೆ ಎಲ್ಲರೂ ಕಾಯಕದಲ್ಲಿ ನಿರತರಾದರೆ ಅಂತಹ ಸಮಾಜದಲ್ಲಿ ಸಮೃದ್ಧತೆ ತನ್ನಷ್ಟಕ್ಕೆ ತಾನೆ ಉಂಟಾಗುತ್ತದೆ.

ಕಾಯಕ ಮತ್ತು ದಾಸೋಹಗಳನ್ನು ಇಂದಿನ ಅರ್ಥಶಾಸ್ತ್ರದ ಉತ್ಪಾದನೆ – ವಿತರಣೆಗಳಿಗೆ ಸಂವಾದಿಯಾಗಿ ಬಳಸಬಹುದು. ವಚನ ಸಂವಿಧಾನದಲ್ಲಿ ಇವೆರಡೂ ಏಕಕಾಲದಲ್ಲಿ ನಡೆಯಬೇಕಾದ ಪ್ರಕ್ರಿಯೆಯಗಳು. ಉತ್ಪಾದನೆ ಮಾಡಿದವರಿಗೆ ಉತ್ಪನ್ನದಲ್ಲಿ ಪಾಲು ದೊರೆಯಬೇಕು. ಆದರೆ ಇಂದು ನಮ್ಮಲ್ಲಿ ‘ಉತ್ಪಾದನೆ ಮೊದಲು; ನಂತರ ವಿತರಣೆ’ ಎನ್ನುವ ನೀತಿಯನ್ನು ಪಾಲಿಸಲಾಗುತ್ತಿದೆ. ವರಮಾನ ಉತ್ಪಾದನೆ, ಬಂಡವಾಳಗಳೇ ಅಭಿವೃದ್ಧಿಯಾಗಿಬಿಟ್ಟಿವೆ. ಜನರು ಇಲ್ಲಿ ಗೈರಾಗಿದ್ದಾರೆ. ಇದು ಅಭಿವೃದ್ಧಿಗೂ ಮಾರಕ, ದುಡಿಮೆಗಾರರಿಗೂ ಮಾರಕ. ವಚನ ಸಂವಿಧಾನದ ಸೂತ್ರಗಳಿಂದ ಇಂದು ನಾವು ಅನೇಕ ಪಾಠ ಕಲಿಯಬಹುದಾಗಿದೆ. ಇಲ್ಲಿ ಕುಳಿತುಣ್ಣುವವರಿಗೆ ಸ್ಥಾನವಿಲ್ಲ. ದುಡಿದುಣ್ಣುವವರಿಗೆ ಸ್ಥಾನವಿದೆ. ದುಡಿಮೆಯನ್ನು ತಿರಸ್ಕರಿಸಿದ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ವಚನ ಸಂವಿಧಾನದ ಕಾಯಕ ಸಿದ್ಧಾಂತವೂ ಮೂಲತಃ ಅಭಿವೃದ್ಧಿ ಪ್ರಣಾಳಿಕೆಯಾಗಿದೆ. ‘ಕಾಯಕ’ ಎನ್ನುವ ನುಡಿಯೇ ಅಭಿವೃದ್ಧಿಯನ್ನು ಸೂಸುವ ಒಂದು ಪ್ರಕ್ರಿಯೆಯಾಗಿದೆ. ಅದರಲ್ಲೂ ಇದು ‘ಎಲ್ಲರನ್ನೂ ಒಳಗೊಳ್ಳುವ’ ಪ್ರಕ್ರಿಯೆ ಆಗಿರುವುದರಿಂದ ಕಾಯಕ ಸಿದ್ಧಾಂತವು ಅಭಿವೃದ್ಧಿ ಪ್ರಣಾಳಿಕೆಯಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

(ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ – ಸಂಸ್ಕೃತಿಗಳ ಬಗ್ಗೆಯೂ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸುವ ಪ್ರೊ. ಟಿ.ಆರ್.ಸಿ ಅವರು ಇತ್ತೀಚೆಗೆ ‘ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ – ಒಂದು ಅಧ್ಯಯನ’ ಎಂಬ ಪುಸ್ತಕವನ್ನು ರಚಿಸಿದ್ದಾರೆ.)


ಇದನ್ನೂ ಓದಿ: ವಚನ ಚಳುವಳಿಯನ್ನು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವುದು ತರವಲ್ಲ/ಆಹಾರ ಸಂಸ್ಕೃತಿ ಮತ್ತು ವಚನ ಚಳವಳಿ

LEAVE A REPLY

Please enter your comment!
Please enter your name here