ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪದ ಮೇಲೆ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಸಿನೇಶ್ ಕಲ್ಲಹಳ್ಳಿ ಸೋಮವಾರ ದೂರು ಸಲ್ಲಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಇಂಜಿನಿಯರ್ ಬಿ.ಆರ್.ವೀರಭದ್ರಯ್ಯ ಅವರ ‘ಭ್ರಷ್ಟಾಚಾರ’ಕ್ಕೆ ನೆರವು ನೀಡುವ ಮೂಲಕ ಸಚಿವ ಪಾಟೀಲ್ ವ್ಯಾಪಕ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮನವಿ ಮಾಡುತ್ತೇನೆ ಎಂದು ದಿನೇಶ್ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಧಾರವಾಡ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಮುದ್ದೇನಹಳ್ಳಿ, ಹರಳೂರು ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೆಐಎಡಿಬಿ ಕರೆದ ಟೆಂಡರ್ ಹಾಗೂ ಇತರೆ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದಿನೇಶ್ ಆರೋಪಿಸಿದ್ದಾರೆ.
ನಕಲಿ ಬಿಲ್ ಸೃಷ್ಟಿಸಿ, ಟೆಂಡರ್ ಇಲ್ಲದೇ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಈ ಎಲ್ಲದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು.
“ಕಿಕ್‌ಬ್ಯಾಕ್ ಮತ್ತು ಕಮಿಷನ್‌ಗಾಗಿ ಆಪಾದಿತ ಕಾಯ್ದೆಗಳನ್ನು ಉಲ್ಲಂಘಿಸಿ ಇ-ಪೋರ್ಟಲ್‌ಗಳಲ್ಲಿ ತರಾತುರಿಯಲ್ಲಿ ಟೆಂಡರ್‌ಗಳನ್ನು ಕರೆಯಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆಗಳನ್ನು ಕಡೆಗಣಿಸಲಾಗಿದೆ” ಎಂದು ಅವರು ಆರೋಪಿಸಿದರು.
ಪಾರದರ್ಶಕ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆ ನಡೆಸದೆ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿದ್ದು, ಬಿಡ್ಡಿಂಗ್ ನಲ್ಲಿ ಭಾಗವಹಿಸಿದ್ದ ಏಜೆನ್ಸಿಗಳು ಅರ್ಹತೆ ಪಡೆದಿಲ್ಲ ಎಂದರು.
ಅಧಿಕಾರಿಗಳು ಬಿಡ್‌ದಾರರೊಂದಿಗೆ ಶಾಮೀಲಾಗಿ ಹಿನ್ನೆಲೆ ಪರಿಶೀಲನೆಗಳನ್ನು ಖಾತ್ರಿಪಡಿಸಿಕೊಳ್ಳದೆ ಯೋಜನೆಗಳನ್ನು ಅನುಮೋದಿಸಿದ್ದಾರೆ. ಉಲ್ಲೇಖಿಸಿದ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಟೆಂಡರ್‌ಗಳನ್ನು ಅನುಮೋದಿಸಿದ್ದಾರೆ ಎಂದು ಅವರು ಆರೋಪಿಸಿದರು.
ಗುತ್ತಿಗೆದಾರರು ಮತ್ತು ಏಜೆನ್ಸಿಗಳು ನೀಡುವ ಭದ್ರತಾ ಠೇವಣಿಗಳ ಬಗ್ಗೆ “ಕಳಪೆ ನಿರ್ವಹಣೆ” ಇದೆ. ಈ ಬಗ್ಗೆ ಕೆಐಎಡಿಬಿ ಮಾಹಿತಿ ಮರೆಮಾಚುತ್ತಿದೆ ಎಂದರು.
ಟೆಂಡರ್‌ಗಳನ್ನು ಹಿರಿಯ ಅಧಿಕಾರಿ ಬಿ.ಆರ್ ವೀರಭದ್ರಯ್ಯ ಅವರ ಪಾಲುದಾರರು ನಡೆಸುತ್ತಿರುವ ಏಜೆನ್ಸಿಗಳಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.
“ಈ ವಿಷಯದ ಬಗ್ಗೆ ತನಿಖೆ ನಡೆಸಲು ಮತ್ತು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ನಾನು ಪ್ರಾರ್ಥಿಸುತ್ತೇನೆ. ಈ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಮುಡಾ ಪ್ರಕರಣ: ‘ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ’ ಎಂದು ದೂರಿದ ಅರ್ಜಿದಾರ


