ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹಿಂದುತ್ವ ಗುಂಪು ಕಿರುಕುಳ ನೀಡಿದ್ದರಿಂದ ಜೋಡಿಯೊಂದು ಪಿಜ್ಜಾ ಔಟ್‌ಲೆಟ್‌ನ ಎರಡನೇ ಮಹಡಿಯಿಂದ ಜಿಗಿದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಶನಿವಾರ (ಜ.24) ಘಟನೆ ನಡೆದಿದ್ದು, ಈ ಸಂಬಂಧ ಮೂವರು ಹೆಸರಿಸಲಾದ ವ್ಯಕ್ತಿಗಳು ಮತ್ತು ಐವರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ವರದಿ ಹೇಳಿದೆ.
ಪೊಲೀಸರ ಪ್ರಕಾರ, ಶಹಜಹಾನ್‌ಪುರದ ಕಾಂತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬರೇಲಿ ಕ್ರಾಸ್ ಬಳಿಯ ಪಿಜ್ಜಾ ಔಟ್‌ಲೆಟ್‌ನಲ್ಲಿ ಜೋಡಿ ಕುಳಿತಿದ್ದಾಗ, ಹಿಂದುತ್ವ ಸಂಘಟನೆಗೆ ಸೇರಿದ ಏಳರಿಂದ ಎಂಟು ಮಂದಿ ಪುರುಷರು ಅಲ್ಲಿಗೆ ತೆರಳಿ ಜೋಡಿಯ ಗುರುತಿನ ಚೀಟಿಗಳನ್ನು ಕೇಳಲು ಪ್ರಾರಂಭಿಸಿದ್ದರು. ಅಲ್ಲದೆ, ವಿಡಿಯೋ ಮಾಡಿಕೊಂಡು ಬೆದರಿಸಿದ್ದರು. ಇದರಿಂದ ಭಯಭೀತರಾದ ಮಹಿಳೆ ಎರಡನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಅವರನ್ನು ರಕ್ಷಿಸಲು ಜೊತೆಗಿದ್ದ ವಿಶಾಲ್ ಎಂಬ ವ್ಯಕ್ತಿಯೂ ಜಿಗಿದಿದ್ದಾರೆ. ಇದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೋಡಿ ನೀಡಿದ ದೂರಿನ ಮೇರೆಗೆ ಪ್ರವೇಶ್, ಸೋನು ಮತ್ತು ಹರ್ಷಿತ್ ಎಂಬ ಮೂವರು ಮತ್ತು ಐವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಎಲ್ಲಾ ಪಿಜ್ಜಾ ಅಂಗಡಿಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗುವುದು. ಕ್ಯಾಬಿನ್‌ಗಳನ್ನು ತೆಗೆದುಹಾಕಲು, ಪರದೆಗಳನ್ನು ಬಳಸುವುದನ್ನು ತಪ್ಪಿಸಲು ಮತ್ತು ಪಾರದರ್ಶಕ ಗಾಜಿನ ಫಲಕಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಎಸ್ಪಿ ರಾಜೇಶ್ ದ್ವಿವೇದಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.


