ಕೊಯಮತ್ತೂರಿನ ಬಿಜೆಪಿ ಕಚೇರಿಗೆ ಗೋಮಾಂಸ ಎಸೆಯಲು ಯತ್ನಿಸಿದ ಆರೋಪದ ಮೇಲೆ ದಲಿತಪರ ಸಂಘಟನೆಯಾದ ‘ಆದ್ಮಿ ತಮಿಳರ್ ಪೆರವೈ’ ಸದಸ್ಯರನ್ನು ಸೋಮವಾರ ಬಂಧಿಸಲಾಗಿದೆ.
ಗೋಮಾಂಸ ಅಂಗಡಿ ನಡೆಸುತ್ತಿದ್ದ ದಂಪತಿಗಳಿಗೆ ಕಿರುಕುಳ ನೀಡುತ್ತಿರುವ ಬಿಜೆಪಿ ನಾಯಕ ಸುಬ್ರಮಣಿಯಂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ಘಟನೆಗೆ ಕಾರಣವಾಗಿದೆ. ಗ್ರಾಮದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸುಬ್ರಮಣಿಯಂ ಅಂಗಡಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕೋಳಿ ಮತ್ತು ಮೀನು ಮಾರಾಟ ಮಾಡುವ ಅಂಗಡಿಗಳು ಅದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ ಮಹಿಳೆ, ತನ್ನ ಅಂಗಡಿ ಸ್ಥಳಾಂತರಿಸಲು ನಿರಾಕರಿಸಿದರು.
ಅವರ ವಾದ ಮತ್ತು ಘರ್ಷಣೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರಗೊಂಡಿತು, ಇದು ಸುಬ್ರಮಣಿಯಂ ಅವರ ಕ್ರಮಗಳ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಯಿತು. ತಮಿಳುನಾಡು ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ನಂತರ, ಪೊಲೀಸರ ಕ್ರಮವನ್ನು ವಿರೋಧಿಸಿ ಗ್ರಾಮದ ಸುಮಾರು 200 ಜನರು ಮಣಿಯಕರಂಪಾಲಯಕ್ಕೆ ಹೋಗುವ ರಸ್ತೆಯನ್ನು ತಡೆದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಹಲವಾರು ಸಂಘಟನೆಗಳು ಮಹಿಳೆಯನ್ನು ಬೆಂಬಲಿಸಿ ರ‍್ಯಾಲಿ ನಡೆಸಿದವು. ಆದ್ಮಿ ತಮಿಳರ್ ಪೆರವೈ ಸದಸ್ಯರು ಬಿಜೆಪಿ ಕಚೇರಿಗೆ ಗೋಮಾಂಸ ಎಸೆದು ಪ್ರತಿಭಟನೆ ನಡೆಸಲು ಯೋಜಿಸಿದ್ದರು. ಆದರೆ, ಕಚೇರಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಪ್ರತಿಭಟನಾ ಸ್ಥಳದ ದೃಶ್ಯಗಳಲ್ಲಿ, ಪ್ರತಿಭಟನಾಕಾರರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳಿರುವ ಪೋಸ್ಟರ್‌ಗಳನ್ನು ತುಳಿದು ಹಾಕುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ; ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ತಮಿಳುನಾಡು ಬಿಜೆಪಿ ನಾಯಕನ ಬಂಧನ


