ಅಕ್ಟೋಬರ್ 15, 2016ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರೊಂದಿಗಿನ ವಾಗ್ವಾದದ ನಂತರ ನಾಪತ್ತೆಯಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸೋಮವಾರ (ಜೂನ್.30) ಸ್ವೀಕರಿಸಿದೆ.
ಸಿಬಿಐ 2018ರಲ್ಲಿ ತನ್ನ ಮುಕ್ತಾಯ ವರದಿಯನ್ನು ಸಲ್ಲಿಸಿತ್ತು. ಆದರೆ, ನಜೀಬ್ ಅವರ ತಾಯಿ ಪ್ರತಿಭಟನಾ ಅರ್ಜಿಯೊಂದಿಗೆ ಅದನ್ನು ಪ್ರಶ್ನಿಸಿದ್ದರು. ಈ ವಿಷಯವನ್ನು ವಿಲೇವಾರಿ ಮಾಡುವಾಗ, ನಜೀಬ್ ಇರುವಿಕೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ದೊರೆತರೆ ತನಿಖೆಯನ್ನು ಪುನರಾರಂಭಿಸಲು ಸಿಬಿಐಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ ಮತ್ತು ಅದಕ್ಕೆ ಅನುಗುಣವಾಗಿ ನ್ಯಾಯಾಲಯಕ್ಕೆ ತಿಳಿಸಲು ಸಂಸ್ಥೆಗೆ ನಿರ್ದೇಶನ ನೀಡಿದೆ.
“ಸಿಬಿಐ ಎಲ್ಲಾ ಸಂಭಾವ್ಯ ಮಾರ್ಗಗಳನ್ನು ಅನ್ವೇಷಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದೆ ಎಂಬುವುದು ಸ್ಪಷ್ಟ. ಆದರೂ, ನಜೀಬ್ ಇರುವ ಸ್ಥಳದ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಪ್ರಸ್ತುತ ಪ್ರಕರಣದ ವಿಚಾರಣೆಯು ಈ ಮುಕ್ತಾಯ ವರದಿಯೊಂದಿಗೆ ಕೊನೆಗೊಂಡರೂ, ನಜೀಬ್ ಅವರ ತಾಯಿ ಮತ್ತು ಇತರ ಪ್ರೀತಿಪಾತ್ರರ ನಿರೀಕ್ಷೆ ಬಗ್ಗೆ ನಮಗೆ ಇನ್ನೂ ಅರ್ಥವಾಗಿಲ್ಲ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿದೆ. ಈ ಮೂಲಕ ನಜೀಬ್ ಅವರ ಕುಟುಂಬ ಹೊಂದಿರುವ ಭಾವನಾತ್ಮಕ ನೋವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ತನಿಖಾ ಯಂತ್ರದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ನಡೆಸಿದ ತನಿಖೆಯು ಅದರ ತಾರ್ಕಿಕ ತೀರ್ಮಾನವನ್ನು ಸಾಧಿಸಲು ಸಾಧ್ಯವಾಗದ ಪ್ರಕರಣಗಳಿವೆ” ಎಂದು ಹೇಳಿದೆ.
ಅಕ್ಟೋಬರ್ 14, 2016ರ ರಾತ್ರಿ ನಜೀಬ್ ವಿರುದ್ಧ ದೈಹಿಕ ಹಲ್ಲೆ ಮತ್ತು ಮೌಖಿಕ ಬೆದರಿಕೆ ಆರೋಪಗಳನ್ನು ಸಾಕ್ಷಿ, ಸಾಕ್ಷ್ಯಗಳು ಬೆಂಬಲಿಸುತ್ತದೆಯಾದರೂ, ಆ ಘಟನೆಗಳು ಮತ್ತು ಮರುದಿನ ಅವರ ಕಣ್ಮರೆಗೆ ಯಾವುದೇ ನೇರ ಅಥವಾ ಸಾಂದರ್ಭಿಕ ಪುರಾವೆಗಳು ಸಂಬಂಧವನ್ನು ಸ್ಥಾಪಿಸುವುದಿಲ್ಲ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಸಿಬಿಐ ತನಿಖೆಯಲ್ಲಿನ ಲೋಪಗಳ ಕುರಿತು ನಜೀಬ್ ಅವರ ತಾಯಿ ಎತ್ತಿದ ಎಲ್ಲಾ ಪ್ರಶ್ನೆಗಳನ್ನು ನ್ಯಾಯಾಲಯವು ಪರಿಶೀಲಿಸಿ ತಿರಸ್ಕರಿಸಿದೆ. ಸಂಸ್ಥೆಯು ಸಮಗ್ರ ತನಿಖೆಯನ್ನು ಕೈಗೊಂಡಿದೆ ಮತ್ತು ಎಲ್ಲಾ ತನಿಖಾ ಆಯ್ಕೆಗಳನ್ನು ಬಳಸಿಕೊಂಡಿದೆ ಎಂದಿದೆ.
ನ್ಯಾಯಾಲಯದ ಇತರ ಅವಲೋಕನಗಳು:
- ನಜೀಬ್ ತನ್ನ ಹಾಸ್ಟೆಲ್ ಕೊಠಡಿಯಿಂದ ಹೊರಬಂದಾಗ, ತನ್ನ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಬಿಟ್ಟು ಹೋಗಿದ್ದರು.
- ಅವರು ಎಲ್ಲಿದ್ದಾರೆಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಯಾವುದೇ ಸುಳಿವು ಅಥವಾ ಮಾಹಿತಿ ಹೊರಬಂದಿಲ್ಲ.
- ನಜೀಬ್ ಅವರ ತಾಯಿ ಮತ್ತು ಅವರ ವೈದ್ಯರ ಹೇಳಿಕೆಗಳು ಅವರು ಪುನರಾವರ್ತಿತ ಖಿನ್ನತೆ ಮತ್ತು ಚಿಂತೆಯಿಂದ ಬಳಲುತ್ತಿದ್ದಾರೆ ಎಂದು ದೃಢಪಡಿಸಿವೆ.
- ಸಫ್ದರ್ಜಂಗ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ನಜೀಬ್ ಹಾಸ್ಟೆಲ್‌ಗೆ ಹಿಂತಿರುಗಲು ನಿರಾಕರಿಸಿದ್ದರು ಎಂಬ ಹೇಳಿಕೆಯು ಊಹಾಪೋಹವಾಗಿಯೇ ಉಳಿದಿದೆ. ಅವರು ಸ್ವಯಂ ಪ್ರೇರಣೆಯಿಂದ ಹಾಸ್ಟೆಲ್ ತೊರೆದಿರಬಹುದು ಎಂಬ ಸಾಧ್ಯತೆಯನ್ನು ಸೂಚಿಸುತ್ತದೆ.
- ನಜೀಬ್ ಕಣ್ಮರೆಯಾಗುವ ಹಿಂದಿನ ರಾತ್ರಿ ‘ಆತಂಕಕಾರಿ ಘಟನೆ’ ನಡೆದಿದ್ದರೂ, ಶಂಕಿತರು ಅವರ ಕಣ್ಮರೆಯೊಂದಿಗೆ ಯಾವುದೇ ಪಾತ್ರ ಹೊಂದಿದ್ದಾರೆಂದು ತೀರ್ಮಾನಿಸಲು ಸಾಧ್ಯವಾಗಿಲ್ಲ.
- ಜೆಎನ್‌ಯುನಂತಹ ಕ್ಯಾಂಪಸ್‌ಗಳ ಚುನಾವಣೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಜಗಳಲು ಸಾಮಾನ್ಯ. ಆದರೆ, ಅದು ವಿದ್ಯಾರ್ಥಿಗಳು ಇನ್ನೊಬ್ಬ ವಿದ್ಯಾರ್ಥಿಯ ಕಣ್ಮರೆಗೆ ಕಾರಣವಾಗುವ ಮಟ್ಟಿಗೆ ಹೋಗುತ್ತಾರೆ ಎಂದು ತೀರ್ಮಾನಿಸಲು ಆ ಜಗಳಲು ಸರಿಯಾದ ಆಧಾರವಲ್ಲ, ವಿಶೇಷವಾಗಿ ದಾಖಲೆಗಳಲ್ಲಿ ಅದೇ ರೀತಿ ಸೂಚಿಸಲು ಯಾವುದೇ ಪುರಾವೆಗಳಿಲ್ಲದಿದ್ದಾಗ ಎಂದು ನ್ಯಾಯಾಲಯ ಹೇಳಿದೆ.
- ಕೊನೆಯದಾಗಿ, ನಜೀಬ್ ಅಹ್ಮದ್ ಅವರನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂಬ ಆಶಾ ಭಾವನೆಯನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
27 ವರ್ಷದ ಎಂಎಸ್ಸಿ ಬಯೋಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಅಹ್ಮದ್, ಎಬಿವಿಪಿ ಸದಸ್ಯರೊಂದಿಗಿನ ವಾಗ್ವಾದದ ನಂತರ ನಾಪತ್ತೆಯಾಗಿದ್ದಾರೆ. ಆರಂಭದಲ್ಲಿ ದೆಹಲಿ ಪೊಲೀಸರು, ನಂತರ ಸಿಬಿಐ ತನಿಖೆ ನಡೆಸಿದರೂ, ಇಂದಿಗೂ ಅವರು ಎಲ್ಲಿ ಹೋದರೂ ಎಂಬುವುದನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ನವ ವಿವಾಹಿತೆ ಆತ್ಮಹತ್ಯೆ: 800 ಗ್ರಾಂ. ಚಿನ್ನ, ವೋಲ್ವೋ ಕಾರು ಕೊಟ್ಟರೂ ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ಆರೋಪ


