ಮಹಾತ್ಮ ಗಾಂಧಿ ಹತ್ಯೆಯ ಆರೋಪಿ, ಹಿಂದುತ್ವವಾದದ ಪಿತಾಮಹಾ ವಿ.ಡಿ. ಸಾವರ್ಕರ್ ಬಗ್ಗೆ ನೀಡಿದ್ದ ಹೇಳಿಕೆಗೆ ಆಧಾರವಾಗಿ ನ್ಯಾಯಾಲಯದಲ್ಲಿ ಐತಿಹಾಸಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ಸಿದ್ಧ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದು, ಆದರೆ ಇದಕ್ಕೆ ಸಾವರ್ಕರ್ ಅವರ ಸಂಬಂಧಿ ಹಾಗೂ ಪ್ರಕರಣದ ದೂರುದಾರ ಸಾತ್ಯಕಿ ಅಶೋಕ್ ಸಾವರ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ರಾಹುಲ್ v/s ಸಾವರ್ಕರ್
ಸಾವರ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಏಪ್ರಿಲ್ 2023 ರಲ್ಲಿ ಸಾತ್ಯಕಿ ಸಾವರ್ಕರ್ ಅವರು ದೂರು ಸಲ್ಲಿಸಿದ್ದರು. ರಾಹುಲ್ ಅವರು ಸಾವರ್ಕರ್ ಬಗ್ಗೆ ಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಸಾವರ್ಕರ್ ಅವರ ಖ್ಯಾತಿಗೆ ಹಾನಿ ಮಾಡುವ ಮತ್ತು ಉಪನಾಮಕ್ಕೆ ಕಳಂಕ ತರುವ ನಿರ್ದಿಷ್ಟ ಉದ್ದೇಶದಿಂದ ರಾಹುಲ್ ಗಾಂಧಿಯವರು ಹೇಳಿದ ಆರೋಪಗಳು ಸುಳ್ಳು ಎಂದು ಸಂಪೂರ್ಣವಾಗಿ ತಿಳಿದಿದ್ದರೂ ಸಹ… ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಾತ್ಯಕಿ ಸಾವರ್ಕರ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಫೆಬ್ರವರಿ 18 ರಂದು, ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಯಾಗಿ ಪರಿವರ್ತಿಸಲು ರಾಹುಲ್ ಗಾಂಧಿಯವರು ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
“ಸಮನ್ಸ್ ವಿಚಾರಣೆ”ಯು ವಿವರವಾದ ಪಾಟಿ ಸವಾಲುಗಳನ್ನು ಒಳಗೊಂಡಿರುತ್ತದೆ ಮತ್ತು “ಸಾರಾಂಶ ವಿಚಾರಣೆ”ಗೆ ಹೋಲಿಸಿದರೆ ಇದು ದೀರ್ಘ ಕಾನೂನು ಪ್ರಕ್ರಿಯೆಯಾಗಿದೆ.
ಅದಾಗ್ಯೂ, ರಾಹುಲ್ ಗಾಂಧಿಯವರ ಮನವಿಯನ್ನು ಆಕ್ಷೇಪಿಸಿದ ಸಾತ್ಯಕಿ ಸಾವರ್ಕರ್ ಅವರು, ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾವರ್ಕರ್ ಅವರ ಕೊಡುಗೆಗಳ ಬಗ್ಗೆ ಅಪ್ರಸ್ತುತ ವಾದಗಳನ್ನು ಮಾಡುವ ಮೂಲಕ ರಾಹುಲ್ ಗಾಂಧಿ ಅವರು ವಿಷಯವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಂಗಳವಾರ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರಿಗೆ ಹೇಳಿದ್ದಾರೆ.
“ಆರೋಪಿ ರಾಹುಲ್ ಗಾಂಧಿ ಈ ಪ್ರಕರಣದ ಮೂಲ ವಿಷಯಕ್ಕೆ ಅಪ್ರಸ್ತುತವಾದ ಕೆಲವು ಐತಿಹಾಸಿಕ ಸಂಗತಿಗಳ ಬಗ್ಗೆ ತಮ್ಮ ಸಮಸ್ಯೆಗಳನ್ನು ಎತ್ತಿದ್ದಾರೆ” ಎಂದು ಸತ್ಯಕಿ ಸಾವರ್ಕರ್ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
“ಮುಖ್ಯ ವಿವಾದವು ಆರೋಪಿ ರಾಹುಲ್ ಗಾಂಧಿ ಉಲ್ಲೇಖಿಸಿರುವ ಆಪಾದಿತ ಪುಸ್ತಕಗಳ ಬಗ್ಗೆಯಾಗಿದೆ, ಆದರೆ ಅವರು ತಮ್ಮ ಪ್ರತಿಪಾದನೆಯನ್ನು ನಿರೂಪಿಸಲು ಯಾವುದೇ ಗಣನೀಯ ಪುರಾವೆಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಾಗಿ, ಅವರು ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಮೂಲಕ ಅನಗತ್ಯ ವಿಳಂಬದಲ್ಲಿ ತೊಡಗಿದ್ದಾರೆ” ಎಂದು ಸಾತ್ಯಕಿ ಸಾವರ್ಕರ್ ಹೇಳಿದ್ದಾರೆ.
ನ್ಯಾಯಾಲಯವು ಮಾರ್ಚ್ 19 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ. ಜನವರಿ 10 ರಂದು, ಪುಣೆ ನ್ಯಾಯಾಲಯವು ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ 25,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ನೀಡಿತು. ಫೆಬ್ರವರಿ 18 ರಂದು ಪ್ರಕರಣದಲ್ಲಿ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಲಾಯಿತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ದಲಿತ ಸಹೋದರಿಯರ ಮೇಲೆ ದಾಳಿ-ಮದುವೆ ರದ್ದು ಪ್ರಕರಣ; ವಾರದ ಬಳಿಕ ಕುಟುಂಬವನ್ನು ಭೇಟಿಯಾದ ಸಚಿವರು
ದಲಿತ ಸಹೋದರಿಯರ ಮೇಲೆ ದಾಳಿ-ಮದುವೆ ರದ್ದು ಪ್ರಕರಣ; ವಾರದ ಬಳಿಕ ಕುಟುಂಬವನ್ನು ಭೇಟಿಯಾದ ಸಚಿವರು

